November 23, 2024

Newsnap Kannada

The World at your finger tips!

yoga

ಅಮೃತಾ ಚೇತನಾನಂದದ ಹಾದಿ

Spread the love

ಮನುಷ್ಯನ ಮನಸ್ಸೆಂಬುದು ಸದಾಕಾಲ ಆನಂದವಾಗಿಯೇ ಇರಬೇಕು ಎಂದು ಬಯಸುತ್ತದೆ. ಹಾಗಾಗಿ ಅದು ಆನಂದದ ಹೊಸ ಹೊಸ ಹಾದಿಯ ಪ್ರಯತ್ನಗಳಲ್ಲಿ ತೊಡಗಿರುತ್ತದೆ. ಆನಂದವೆಂಬುದು ಕೆಲವರಿಗೆ ತಿನ್ನುವುದರಲ್ಲಿ, ಸುಂದರವಾದದ್ದನ್ನು ನೋಡುವುದರಲ್ಲಿ, ಕೆಲವರಿಗೆ ಉಡುಗೆ ತೊಡುಗೆಗೆಳಲ್ಲಿ, ಶೃಂಗಾರದಲ್ಲಿ, ಕೆಲವರಿಗೆ ಸಂಪತ್ತು ಸಂಗ್ರಹಿಸಿಡುವುದರಲ್ಲಿ, ಸಾಹಿತ್ಯ ಸಂಗೀತ ನೃತ್ಯ ನಾಟಕಾದಿ ಲಲಿತ ಕಲೆಗಳನ್ನು ಆಸ್ವಾದಿಸುವುದರಲ್ಲಿ, ಮತ್ತೆ ಕೆಲವರಿಗೆ ಪರೋಪಕಾರದಲ್ಲಿ, ತ್ಯಾಗದಲ್ಲಿ ದೊರೆಯುತ್ತದೆ. ಇನ್ನೂ ಹಲವರು ಬೋಧನೆಯಲ್ಲಿ, ಸಾಧನೆಯಲ್ಲಿ, ಕರ್ತವ್ಯದಲ್ಲಿ ಆನಂದವನ್ನು ಹೊಂದಲು ಯತ್ನಿಸುತ್ತಾರೆ.

ಆನಂದ ಎಂಬುದು ಒಂದು ಭಾವ, ಹಿತಾನುಭವ ನೀಡುವ ಮನಸ್ಥಿತಿ. ನಮ್ಮೊಳಗಿರುವ ಚೇತನ ಸದಾ ಉತ್ಸಾಹದ ಚಿಲುಮೆಯಾಗಿರಬೇಕೆಂದರೆ ಅದು ಆನಂದಮಯವಾಗಿರಬೇಕು. ತನಗೆ ಹಿತವಾದದ್ದು, ಬೇಕಾದದ್ದು ದೊರೆತಾಗ ಆನಂದವಾಗಿರುವ ಮನ ಅದು ಕೈಯಿಂದ ಜಾರಿದಾಗ ದುಃಖಾವಸ್ಥೆಗೆ ಬೀಳುತ್ತದೆ. ಮಗು ತಾಯಿಗಾಗಿ ಹಂಬಲಿಸುವಂತೆ ಮನಸ್ಸು ಮತ್ತೆ ಮತ್ತೆ ಆನಂದಕ್ಕಾಗಿ ಹಂಬಲಿಸುತ್ತದೆ-ಹಾತೊರೆಯುತ್ತದೆ ಮತ್ತು ಅದಕ್ಕಾಗಿ ಹುಡುಕಾಡತೊಡಗುತ್ತದೆ.

ಹಾಗಾದರೆ ಆನಂದ ಎಂಬುದು ಒಂದು ಬಾರಿ ದೊರಕಿದರೆ ಅದನ್ನು ಶಾಶ್ವತವಾಗಿ ನಮ್ಮ ಬಳಿಯಲ್ಲಿಯೇ ಇರಿಸಿಕೊಳ್ಳಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವುದುಂಟು. ಸದಾ ಆನಂದದಿಂದಲೇ ಇರಬೇಕೆನ್ನುವ ಉತ್ಕಟಾಕಾಂಕ್ಷೆಯಿಂದ ತಮಗೆ ಯಾವುದರಿಂದ ಆನಂದ ದೊರೆಯುತ್ತದೆನಿಸುತ್ತದೋ ಆ ವಸ್ತುಗಳ, ವ್ಯಕ್ತಿಗಳ ಹಿಂದೆ ಓಡುತ್ತಾನೆ. ಕೆಲವರು ಮಾದಕವ್ಯಸನಗಳಿಗೆ ಬಲಿಯಾಗಿ, ಆಗ ದೊರೆಯುವ ಮತ್ತನ್ನೇ ಶಾಶ್ವತ ಆನಂದ ಎಂದು ಭ್ರಮಿಸಿ ಸದಾ ಅದಕ್ಕಾಗಿಯೇ ಹಾತೊರೆಯುತ್ತಾ ತಮ್ಮ ಜೀವನವನ್ನೇ ಬಲಿಕೊಡುತ್ತಾರೆ. ಇನ್ನೂ ಕೆಲವರು ಹೊನ್ನಿನ, ಹೆಣ್ಣಿನ, ಮಣ್ಣಿನ, ಅಧಿಕಾರದ, ಕೀರ್ತಿಯ, ಸಾಧನೆಯ ದಾಸರಾಗಿ ಭ್ರಮನಿರಸನಕ್ಕೊಳಗಾದಾಗ ಸದಾ ಆನಂದವು ಅಸಾಧ್ಯವೆಂಬ ಸತ್ಯದ ಅರಿವಾಗುತ್ತದೆ. ಅಂತಿಮವಾಗಿ ಶಾಶ್ವತ ಆನಂದದ ಹುಡುಕಾಟದಲ್ಲಿ ತೊಡಗಿದ ಮಾನವನಿಗೆ ಕಂಡ ಸನ್ಮಾರ್ಗವೇ ಭಕ್ತಿಮಾರ್ಗ.

ಭಕ್ತಿಯಿಂದ ದೊರೆಯುವ ಅಲೌಕಿಕಾನಂದವು ಎಲ್ಲ ಮಾನಸಿಕ ನೋವುಗಳ ಉಪಶಮನಕಾರಿ ಮತ್ತು ಬೇರೆಲ್ಲ ಬಗೆಗಳಿಗಿಂತ ಹೆಚ್ಚು ಕಾಲ ನಿಲ್ಲುವಂತಹುದು ಮತ್ತು ಅದು ಯಾವುದನ್ನೂ, ಯಾರನ್ನೂ ಅವಲಂಬಿಸಿಲ್ಲದ್ದು ಎನ್ನುವುದು ಬಲ್ಲವರ ಅನುಭವ ಜನ್ಯ ಅಭಿಪ್ರಾಯ.
ಭಕ್ತಿಯ ಆವಾಹನೆಗೆ ಒಂದು ನಿರ್ಮಲವಾದ, ಪವಿತ್ರ ಭಾವ ಮೂಡುವಂತಹ ಶಕ್ತಿಸ್ಥಳದ ಅಗತ್ಯತೆ ಇದ್ದಾಗ ಮಾನವ ನಿರ್ಮಿಸಿದ್ದೇನೆ ದೇಗುಲಗಳು. ಆ ದೇಗುಲದಲ್ಲಿ ಮಾನವನ ಮನಸ್ಸು ಏಕಾಂತದಲ್ಲಿ ಭಕ್ತಿಭಾವಕ್ಕೆ ಶರಣಾಗಬೇಕಾದರೆ ತನಗಿಂತಲೂ ಅತೀತವಾದ ಸೃಷ್ಟಿ ಶಕ್ತಿಗೆ ಮೂರ್ತಿರೂಪವನ್ನು ನೀಡಿ ವಂದಿಸಲಾರಂಭಿಸಿದ. ದೇಗುಲದ ಪ್ರಶಾಂತ ವಾತಾವರಣ, ದೇವರ ವಿಗ್ರಹ ದರ್ಶನದಿಂದ ಹೊರಹೊಮ್ಮುವ ಭಾವ, ಪೂಜೆ, ಭಜನೆ, ಸತ್ಸಂಗಗಳೇ ಮೊದಲಾದ ಬಾಹ್ಯ ಪ್ರಚೋದನೆಗಳು ಉಂಟುಮಾಡುವ ಭಕ್ತಿ ಒಂದೆಡೆಯಾದರೆ ಮತ್ತೊಂದೆಡೆ ಪಂಡಿತರ, ಸಾಧು ಸಂತರ ಪ್ರವಚನ ಕೇಳಿದಾಗಲೋ, ಭಕ್ತಿಗೀತೆ ಆಲಿಸಿದಾಗಲೋ, ಭಕ್ತಿ ಪ್ರಧಾನ ನಾಟಕ, ಚಲನಚಿತ್ರಗಳನ್ನು ನೋಡಿದಾಗಲೋ ಆ ಕ್ಷಣದಲ್ಲಿ ಮೂಡುವ ಭಕ್ತಿಭಾವ ಅಲ್ಪಾವಧಿಯದ್ದಾಗಿರುತ್ತದೆ. ಇನ್ನು ಕೆಲವರಿಗೆ ಹುಟ್ಟಿನಿಂದ ಬಂದ ಸಂಸ್ಕಾರಫಲದಿಂದ ಅಥವಾ ಹಿರಿಯರು ನಡೆದುಕೊಳ್ಳುವ ಸಂಪ್ರದಾಯಬದ್ಧ ರೀತಿ ನೀತಿಗಳಿಂದ ಭಕ್ತಿ ಎನ್ನುವುದು ರಕ್ತಗತವಾಗಿರುತ್ತದೆ.
ಭಕ್ತಿಮಾರ್ಗದ ಆರಂಭದ ಹಂತದಲ್ಲಿ ದ್ವೆವತ್ವ ಸಿದ್ಧಾಂತಕ್ಕೇ ಶರಣಾಗಬೇಕಾಗುತ್ತದೆ. ಇಲ್ಲಿ ನಾನು ಬೇರೆ ಭಗವಂತ ಬೇರೆ ಎಂಬ ಭಾವವಿರುತ್ತದೆ. ಹಾಗಾಗಿ ಭಕ್ತರು ಭಗವಂತನನ್ನು ವಿಗ್ರಹ ರೂಪದಲ್ಲಿ ಆರಾಧಿಸುತ್ತಾರೆ. ಇಲ್ಲಿ ಭಕ್ತಿ ಎಂಬುದು ಒಂದು ದೇಗುಲವನ್ನೋ, ಒಂದು ದಿವ್ಯ ಮೂರ್ತಿಯನ್ನೋ, ಒಂದು ವ್ರತ ಕಥೆಗಳನ್ನೋ ಅವಲಂಬಿಸಿರುತ್ತದೆ. ಸಗುಣ ಸಾಕಾರ ರೂಪಿ ಭಗವಂತನನ್ನು ಕಣ್ಣಮುಂದಿರಿಸಿಕೊಂಡೋ ಅಥ ಕಣ್ಣ ಮುಂದೆ ತಂದುಕೊಂಡೋ ಪೂಜಿಸುವುದು, ಪ್ರಾರ್ಥಿಸುವುದು, ಧ್ಯಾನಿಸುವುದೇ ಮೊದಲಾದವುಗಳಿಂದ ಚಿತ್ತವನ್ನು ದೇವರತ್ತ ತಿರುಗಿಸುವುದಕ್ಕೆ ದೇಗುಲಗಳು, ಧಾರ್ಮಿಕ ವಿಧಿವಿಧಾನಗಳು ಸಹಕಾರಿಯಾಗುತ್ತವೆ: “ಪ್ರಾರ್ಥಿಸುವುದಕ್ಕೆ, ಪೂಜಿಸುವುದಕ್ಕೆ ಆರಾಧಿಸುವುದಕ್ಕೆ, ಉಪಾಸಿಸುವುದಕ್ಕೆ ನಮಗೊಂದು ಪವಿತ್ರತಮವಾದ ಸ್ಥಾನಬೇಕು. ಪ್ರತಿಯೊಬ್ಬನ ಹೃದಯ ಮಂದಿರದಲ್ಲಿ ಭಗವಂತನಿದ್ದರೂ ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧನೆಬೇಕು. ಆ ಸಾಧನೆಗೆ ದೇವಸ್ಥಾನಗಳು ಪ್ರಥಮ ಸೋಪಾನವಾಗಿವೆ.” (ನಮ್ಮ ದೇವಾಲಯಗಳು-ಪುಟ-ಮುನ್ನುಡಿ) ಎನ್ನುವ ಹಿರಿಯರ ಅಭಿಪ್ರಾಯ ಮಾನ್ಯ.

ಭಕ್ತಿಗೂ ದೇಗುಲಕ್ಕೂ ಅವಿನಾಭಾವ ಸಂಬAಧವಿರುತ್ತದೆ. ಹಾಗೆಯೇ ಆನಂದಕ್ಕೂ ದೇಗುಲಕ್ಕೂ ಒಂದು ರೀತಿಯ ನಂಟಿದೆ. ಆನಂದಕ್ಕೆ ದೇಗುಲ ಸೌಂದರ್ಯ ಮತ್ತು ಭಕ್ತಿಗಳು ಪ್ರೇರಕ ಶಕ್ತಿಯಾಗುತ್ತದೆ. ದೇಗುಲವು ಮುಕ್ತಿಮಾರ್ಗದ ಸೋಪಾನ ಎಂಬುದು ನಮ್ಮ ಹಿರಿಯರ ಬಲು ದೊಡ್ಡ ನಂಬಿಕೆಯಾಗಿತ್ತು. ಹಾಗಾಗಿಯೇ ಅವರಿಗೆ ದೇಗುಲದೊಳಗಿನ ಮೂರ್ತಿಯೇ ಸಾಕ್ಷಾತ್ ಭಗವಂತ ಎಂಬ ಭಾವನೆಯಿತ್ತು. ಉದ್ಭಟಕಾವ್ಯದಲ್ಲಿ ಇಂಥದ್ದೇ ಮಾತಿದೆ: “ನಾಲ್ಕು ದಿಕ್ಕುಗಳಲ್ಲಿ ಸುತ್ತಾಡಿ ಬರಲು ಬ್ರಹ್ಮಾಂಡನಾಯಕಿಯ ಆಲಯವು ಕಾಣಿಸಿತು. ಅದು ಹೇಗೆಂದರೆ, ಎಲೆ ಚಂದ್ರಮುಖಿ ಆ ಪರಶಕ್ತಿಯ ಮಣಿಭವನವು ಭಕ್ತಿಯ ಬಲಗೈ, ಅತಿ ವಿರಕ್ತಿಯ ಮನೆ, ಪರಿಶುದ್ದಾಂತಕರಣದ ತೋಟ, ಶ್ರೇಷ್ಠವಾದ ಮುಕ್ತಿಯ ಆಶ್ರಯಸ್ಥಾನ ಎನ್ನಿಸಿ ಶೋಭಿಸಿತು.”
ಹಾಗಾಗಿಯೇ ದೇಗುಲಗಳಿಗೆ ರಾಜಾಶ್ರಯ, ಪ್ರಜಾಶ್ರಯವಿದ್ದಿತು. ಲೌಕಿಕ ವ್ಯಾಪಾರದಿಂದ ಹೊರಬಂದು ಭಗವಂತನ ಕಡೆಗೆ ಮುಖ ಮಾಡಿದವರಿಗೆ ದೇಗುಲದ, ಅದರ ಪರಿಸರದ ಎಲ್ಲ ವ್ಯಾಪಾರವೂ ಅಲೌಕಿಕವಾಗಿಯೇ ಕಾಣುತ್ತಿದ್ದವು ಎಂಬುದನ್ನು ಕನ್ನಡ ಸಾಹಿತ್ಯದಲ್ಲಿ ಹಲವು ಕಡೆಗಳಲ್ಲಿ ಕಾಣುತ್ತೇವೆ. ರಾಜತರಂಗಿಣಿ ಎನ್ನುವ ಕಾವ್ಯದಲ್ಲಿ “ಶಮಪ್ರಯನಾದ ರಾಜನಿಗೆ ಶೃಂಗಾರ-ಹಿತ-ವಿಭ್ರಮಗಳುಳ್ಳ ನಿತಂಬವತಿಯರು ಮನೋಹಾರಿಣಿಯರಾಗಿರಲಿಲ್ಲ. ಪಕ್ಷಿಗಳ ಕಲರವದಿಂದ ತುಂಬಿದ ನಿತಂಬ ಭೂಮಿಗಳುಳ್ಳ ವನಭೂಮಿಗಳು ಅವನಿಗೆ ಪ್ರಿಯವಾಗಿದ್ದವು. ಕರ್ಪೂರಧೂಪದಿಂದ ಸುರಭಿಯಾದ ರಾಜನು ವನಸುಮಗಳ ಪುಣ್ಯಗಂಧವುಳ್ಳ ತಪಸ್ವಿಗಳ ಕೈಗಳಿಂದ ಸ್ಪರ್ಶಗೊಂಡು ಸಂತಸಪಡುತ್ತಿದ್ದನು. ಭೂತೇಶ, ವರ್ಧಮಾನೇಶ, ವಿಜಯೇಶ ದೇವಸ್ಥಾನಗಳಿಗೆ ಹೋಗಿ ದೇವರನ್ನು ನೋಡಿ ಉಳಿದ ಸಮಯದಲ್ಲಿ ರಾಜಕಾರ್ಯಗಳನ್ನು ತಪ್ಪದೆ ಮಾಡುತ್ತಿದ್ದುನು. ಹರ ಮಂದಿರದ ಸೋಪಾನಗಳನ್ನು ತೊಳೆಯುವ ನೀರ ಕಣದಿಂದ ಒದ್ದೆಯಾದ ಗಾಲಿ ಸೋಂಕಿದಾಗ ಅವನು ಆನಂದತುಂದಿಲನಾಗುತ್ತಿದ್ದನು. ಪೂಜಾಲಂಕಾರ ಮುಗಿದ ಮೇಲೆ ಅದನ್ನೆಲ್ಲಾ ಕಿತ್ತುಹಾಕಿ ಅಭಿಷೇಕ ಮಾಡಿದ ವಿಜಯೇಶ್ವರನ ನಿರಾಡಂಬರ-ಸುಂದರ ಮೂರ್ತಿಯನ್ನು ನೋಡಲು ಅವನು ತವಕಪಡುತ್ತಿದ್ದನು. ವೀಣಾದಿವಾದ್ಯನಾದವನ್ನು ಕೇಳಿಲಿಚ್ಚಿಸದ ಅವನಿಗೆ ಶಿವಲಿಂಗ ಪೀಠದ ಮೇಲೆ ಸುರಿಯುವ ಜಲಧಾರೆಯ ಮಧುರ ಧ್ವನಿ ಸುಖನಿದ್ರೆಯನ್ನು ತರುತ್ತಿತ್ತು. ಅವನ ರಾಜಸಭೆ, ಭಸ್ಮ, ರುದ್ರಾಕ್ಷ, ಜಟಾ ಜೂಟಧಾರಿಗಳಾದ ತಪಸ್ವಿಗಳಿಂದ ಮಹೇಶ್ವರನ ಸನ್ನಿಧಿಯಂತೆ ಶೋಭಿಸುತ್ತಿತ್ತು. ದಿನವೊಂದರ ಒಂದು ಸಾವಿರ ಶಿವಲಿಂಗಗಳನ್ನು ಪ್ರತಿಷ್ಠೆಮಾಡಿ ಪೂಜಿಸುವ ಅವನ ಪ್ರತಿಜ್ಞೆ ಒಂದು ದಿನವೂ ತಪ್ಪಲಿಲ್ಲ. ಪ್ರಮಾದವಶಾತ್ ಶಿವಲಿಂಗವು ಸ್ಥಾಪಿತವಾಗದಿದ್ದರೆ, ಒಂದು ದೊಡ್ಡ ಶಿಲೆಯಲ್ಲಿ ಒಂದು ಸಾವಿರ ಶಿವಲಿಂಗಗಳನ್ನು ಶಿಲ್ಪಿಗಳು ತಯಾರಿಸಿಕೊಡುತ್ತಿದ್ದರು. ಆ ಶಿಲೆ ಇಂದಿಗೂ ಕಂಡುಬರುತ್ತಿದೆ. ಮಠ, ಶಿವಲಿಂಗ-ಪ್ರತಿಮೆಗಳನ್ನೆಲ್ಲಾ ಸ್ಥಾಪಿಸಿ, ಹರ್ಮ್ಯಗಳನ್ನು ಕಟ್ಟಿಸಿ ದೇಶದ ಗೌರವವನ್ನು ಹೆಚ್ಚಿಸಿದನು. ಮಾಡಿಕೊಂಡು, ಪುಷ್ಪಗಳಿಂದ ಲಿಂಗಗಳನ್ನು ಅರ್ಚಿಸುತ್ತ, ವನಭೂಮಿಯಲ್ಲಿ ರಾಜನು ವಸಂತ ಮಾಸವನ್ನು ಕಳೆಯುತ್ತಿದ್ದನು.” ಎಂಬ ಸಾಲುಗಳಿವೆ.
ದೇಗುಲ, ದೇವತಾಮೂರ್ತಿಪೂಜೆಯ ನಂತರದ ಹೆಜ್ಜೆ ಅದ್ವೈತ ಸಿದ್ಧಾಂತದ ಕಡೆಗೆ ಸಾಗುವುದು. ‘ಅಹಂ ಬ್ರಹ್ಮಾಸಿ’ ಎಂದರೆ ನಾನೇ ಬ್ರಹ್ಮ. ಬ್ರಹ್ಮನೇ ನಾನು ಎಂದು. ನಾ ಬೇರೆಯಲ್ಲ, ಭಗವಂತ ಬೇರೆಯಲ್ಲ ಎಂಬ ಈ ತತ್ವದಲ್ಲಿ ಭಗವಂತ ಎಲ್ಲ ಜೀವಿಗಳಲ್ಲೂ ಇದ್ದಾನೆಂದೇ ಅರ್ಥ. ಅವ ಸರ್ವಾಂತರ್ಯಾಮಿ, ಸರ್ವವ್ಯಾಪಿ. ನಾನೇ ಬ್ರಹ್ಮನಾದ ಮೇಲೆ, ನನ್ನೊಳಗೇ ಭಗವಂತ ಇದ್ದಾನೆಂದ ಮೇಲೆ ದೇಹವೇ ದೇಗುಲವಾಗುತ್ತದೆ. ಆತ್ಮಲಿಂಗವನ್ನು ರಕ್ಷಿಸುವ ದೇಹದೇಗುಲವನ್ನು ಕಾಪಾಡಿಕೊಳ್ಳುವುದು, ಶುಚಿಯಾಗಿಟ್ಟುಕೊಳ್ಳುವುದು ಬಹುಮುಖ್ಯವಾಗುತ್ತದೆ. ಸನ್ನಡತೆ, ಸಚ್ಚಾರಿತ್ರ÷್ಯದಿಂದ ನಮ್ಮೊಳಗನ್ನೂ, ನಮ್ಮೊಳಗಿರುವ ಭಗವಂತನನ್ನೂ ಕಂಡುಕೊAಡು ನಮ್ಮೊಳಗಿನ ಶಕ್ತಿಯನ್ನು ಉದ್ದೀಪನಗೊಳಿಸಿಕೊಳ್ಳಬೇಕಾಗುತ್ತದೆ.
ಡಿ.ವಿ.ಜಿ ಅವರು ತಮ್ಮ ಜೀವನ ಸೌಂದರ್ಯ ಮತ್ತು ಸಾಹಿತ್ಯ ಕೃತಿಯಲ್ಲಿ “ದೇಹವಿಲ್ಲದೆ ಜೀವವಿಲ್ಲ. ಜೀವವನ್ನು ಒಳ್ಳೆಯ ಗತಿಗೆ ತರಬೇಕಾದರೆ ದೇಹವನ್ನು ಒಳ್ಳೆಯ ಗತಿಗೆ ತರಬೇಕು. ದೇಹವು ತುಚ್ಛವಲ್ಲ, ಅದೂ ನಮ್ಮ ಗಮನವನ್ನೂ ಸೇವೆಯನ್ನೂ ಪಡೆಯಲರ್ಹವಾದುದು, ‘ಶರೀರಮಾದ್ಯಂ ಖಲು ಧರ್ಮ ಸಾಧನಂ’- ಹೀಗೆಂದು ವೇದಮಹರ್ಷಿಗಳು ತಿಳಿದಿದ್ದರು. ಅವರು ‘ಮನುಜ ಶರೀರವಿದೇನು ಸುಖ?’ ಎಂದು ಬೇಸತ್ತಿರಲಿಲ್ಲ. ವೇದದ ಬಹುಭಾಗವೆಲ್ಲ ಇಂದ್ರ, ವರುಣ, ಅಗ್ನಿ ಮೊದಲಾದ ದೇವತೆಗಳನ್ನು ಬಲ, ವರ್ಚಸ್ಸು, ವೀರ್ಯ, ಶತ್ರುಸಂಹಾರ ಶಕ್ತಿ ಇವುಗಳಿಗಾಗಿ ಪ್ರಾರ್ಥಿಸತಕ್ಕದ್ದಾಗಿದೆ. ವೇದರ್ಷಿಗಳು ಮನಸ್ಸನ್ನೊಣಗಿಸಿ ಮೈಯನ್ನು ಹೆಣವಾಗಿಸಿದವರಲ್ಲ. ಅವರು ಪೌರುಷದಿಂದ ವಿಜೃಂಭಿಸಿ, ಹಗೆಗಳೊಡನೆ ಕಾದಾಡಿ, ಸುಖಸಾಧನಗಳನ್ನು ಗಳಿಸಿ, ಭೋಗಿಸಿ ಆನಂದಿಸಿದವರು. ಅವರು ಜೀವನದಲ್ಲಿ ಬೇಸತ್ತವರಲ್ಲ; ಐಹಿಕಾನಂದವೇ ಸರ್ವಸ್ವವೆಂದೇನೂ ಅವರು ನಂಬಿರಲಿಲ್ಲ; ಆದರೆ ಐಹಿಕಾನಂದವನ್ನೂ ಅವರು ಬೇಡವೆನ್ನಲಿಲ್ಲ. ಐಹಿಕಾನಂದಕ್ಕಾಗಿಯೂ ಅವರು ಉತ್ಸಾಹದಿಂದ ಉದ್ಯಮಿಸಿದರು, ಸಾಹಸ ಮಾಡಿದರು. ಅವರು ಹಾಗೆ ಮಾಡದೆ ‘ಸಾಕುಮಾಡೋ, ಜನ್ಮ ಸಾಕುಮಾಡೋ’ ಎಂದು ಗೋಳಿಡುವವರಾಗಿದ್ದಿದ್ದರೆ ನಮ್ಮಲ್ಲಿ ಕಾವ್ಯ, ನಾಟಕ, ಶಿಲ್ಪ, ಸಂಗೀತ, ಚಿತ್ರಕಲೆ ಮೊದಲಾದ ದೇಹಭೋಗಸಾಧನಗಳಾದ ಅರುವತ್ತುನಾಲ್ಕು ವಿದ್ಯೆಗಳು ಹೇಗೆ ಬೆಳೆಯಲಾಗುತ್ತಿತ್ತು? ಇಹಲೋಕದಲ್ಲಿಯೂ ಭಗವದಂಶವಿದೆ. ಐಹಿಕ ಸೌಂದರ್ಯಗಳೂ ಭಗವದ್ವಿಲಾಸಗಳೇ. ಈ ಸೌಂದರ್ಯಗಳೇ- ಈ ರೂಪಸೌಂದರ್ಯ ಭಾವಸೌಂದರ್ಯಗಳೇ- ವಿಶ್ವಸತ್ಯದ ಗುಡಿಯ ಗೋಪುರದಿಂದ ದೂರಕ್ಕೆ ಕಾಣಬರುವ ಬೆಳಕಿನ ಕಿರಣಗಳು. ಈ ಮಿತ ಸೌಂದರ್ಯಗಳನ್ನು ºಡಿದೇ ಮನುಷ್ಯನು ಅಮಿತಸೌಂದರ್ಯದ ದಾರಿಯನ್ನು ತಿಳಿಯಬೇಕಾಗಿದೆ. ಹುಟ್ಟಿದ್ದಕ್ಕೆ ಬಾಳಬೇಕು, ಬಾಳನ್ನು ಚೆನ್ನಾಗಿಸಬೇಕು; ಚೆನ್ನಾಗಿಸುವುದಕ್ಕೆ ಬುದ್ಧಿಯಿಂದಲೂ ಬಾಹುದಂಡದಿAದಲೂ ಪ್ರಯತ್ನಿಸಬೇಕು; ಪ್ರಯತ್ನದಲ್ಲಿ ಉತ್ಸಾಹ, ಧೈರ್ಯ, ಶ್ರದ್ಧೆಗಳಿರಬೇಕು; ಈ ಜೀವನೋಲ್ಲಾಸ, ಈ ಪ್ರಯತ್ನೋತ್ಸಾಹ, ಈ ಸೌಂದರ್ಯಸಂತೋಷ- ಇವು ಮನುಷ್ಯನ ನಿರಂತರ ಧರ್ಮದ ಮೂಲಾಂಶಗಳು. ಇಹಲೋಕದ ಯೋಗಕ್ಷೇಮಗಳೂ ಪರಮಮೋಕ್ಷಸಾಧನೆಯೂ ಅನ್ಯೋನ್ಯ ಸಂಬದ್ಧಗಳಾಗಿರುತ್ತವೆ. ನಮ್ಮ ಬಹಿರಂಗಜೀವನದಲ್ಲಿ ಶಾಂತಿಸಮಾಧಾನಗಳು ಇದ್ದಲ್ಲದೆ ನಮ್ಮ ಅಂತರAಗ ಜೀವನವು ನಿರುಪಾಧಿಕವಾಗಿ ನಡೆಯದು. ಹೊರಗಡೆ ದುಃಖದುರಿತಗಳ ಅಲೆಗಳು ಒಂದರ ಮೇಲೊಂದು ಬಂದು ಹೊಡೆಯುತ್ತಿದ್ದರೆ, ಒಳಗಡೆ ಆತ್ಮನನ್ನು ನಿಶ್ಚಲ ಸಮಾಧಿಯಲ್ಲಿರಿಸುವುದು ಸಾಮಾನ್ಯ ಜನರಿಗೆ ಸಾಧ್ಯವಲ್ಲ” ಎಂದು ಅಭಿಪ್ರಾಯಪಡುತ್ತಾರೆ
“ಪೌರಾಣಿಕ-ತಾಂತ್ರಿಕ ಧರ್ಮವು ಎಲ್ಲರಲ್ಲೂ ಆತ್ಮಜಾಗೃತಿಯನ್ನು ಮೂಡಿಸಿ, ಉನ್ನತವಾದ ಆಧ್ಯಾತ್ಮಿಕ ಸತ್ಯವನ್ನು ಪಡೆಯುವ ದಿಕ್ಕಿನಲ್ಲಿ ಮುನ್ನಡೆಸಿತು. ಪೌರಾಣಿಕ ತಾಂತ್ರಿಕ ಧರ್ಮವು ಜನಸಾಮಾನ್ಯರನ್ನು ಆತ್ಮದೇಗುಲದ ಹೊರ ಅಂಕಣದ ರಂಗಸಾಲೆಯಲ್ಲೆ ಉಳಿಯಲು ಬಿಡದೆ, ಅವರನ್ನು ದೇವಾಲಯದ ಗರ್ಭಗೃಹಕ್ಕೆ ಕೈ ಹಿಡಿದು ಕರೆದೊಯ್ಯಲು ಪ್ರಯತ್ನಿಸಿತು. ವೈದಿಕ ಕಾಲದಲ್ಲಿದ್ದ ಹೊರಾಂಗಣದ ಸಂಕೇತಗಳು, ದೇವಾಲಯಾರಾಧನೆಯ ಚಿತ್ರವತ್ತಾದ ಭಿತ್ತಿಗಳಾಗಿ ರೂಪಾಂತರ ಪಡೆದವು. ಇದಕ್ಕಾಗಿ ಹಲವಾರು ವಿಧಿ-ವಿಧಾನಗಳು ಮತ್ತು ಭೌತಿಕವಾದ ಪ್ರತಿಮೆಗಳನ್ನು ಬಳಸಲಾಯಿತು. ಈ ಪ್ರಯತ್ನಗಳಿಗೊಂದು ಮಾನಸಿಕ, ಭಾವುಕ ದಿಕ್ಕು ದಿಸೆ ದೊರೆತು, ಈ ಧರ್ಮವು ಜನಸಾಮಾನ್ಯರ ಹೃದಯಕ್ಕೆ ಅವರ ಕಲ್ಪನೆಗಳಿಗೆ ಅನುಗುಣವಾಯಿತು.” (ವೇದ-ತಂತ್ರ-ಸಂಸ್ಕೃತಿ – ಪುಟ-೫೧)
‘ಅನನ್ಯಾಶ್ಚಿಂತಯಂತೋ ಮಾಂ ಏ ಜನಾಃ ಪರ್ಯುಪಾಸತೇ; ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ’ ಎನ್ನುವ ಶ್ರೀಕೃಷ್ಣನ ಅಭಯದ ಮಾತುಗಳು ನಾವು ಭಗವಂತನಲ್ಲಿ ಅನನ್ಯ ಶ್ರದ್ಧೆ ನಂಬಿಕೆಗಳನ್ನಿಡಲು ಆಧಾರವಾಗಿವೆ.
ದೇಗುಲ ಮತ್ತು ದೇಹದೇಗುಲಗಳೆರೆಡನ್ನೂ ಮೀರಿ ಇಡೀ ವಿಶ್ವವೇ ಭಗವಂತನ ಪ್ರತಿರೂಪ ಎಂಬ ಬೃಹತ್ ಕಲ್ಪನೆ ಮೂಡಬೇಕಾದರೆ ಮಾನವ ಮತ್ತೂ ಒಂದು ಹೆಜ್ಜೆಯನ್ನು ಮುಂದಿಡಬೇಕು.
ಅಪ್ರಾಕೃತಿಕವಾದವುಗಳಾವುವೂ ಶಾಶ್ವತ ಆನಂದವನ್ನು ನೀಡಲು ಸಾಧ್ಯವಿಲ್ಲ ಎಂಬುದು ಬಲ್ಲವರ ಅನುಭವ. ಲೌಕಿಕ ಬದುಕು ಬೇರೆ ಅಲೌಕಿಕ ಬದುಕು ಬೇರೆ. ಅಲೌಕಿಕ ಭಾವವನ್ನು ಮನದಲ್ಲಿ ಸ್ಥಿರವಾಗಿಟ್ಟುಕೊಳ್ಳಲು ಪ್ರಕೃತಿಯೊಂದಿಗೆ ಅನನ್ಯವಾಗಿ ಒಡನಾಟವನ್ನಿಟ್ಟುಕೊಳ್ಳಬೇಕು.
ಅಲೌಕಿಕದ ಹಾದಿಯಲ್ಲಿ ಮೊದಲ ಹೆಜ್ಜೆಯಿಂದರೆ ಪೂಜೆ, ಪ್ರಾರ್ಥನೆಗಳೆ ಮೊದಲಾದ ಭಕ್ತಿಮಾರ್ಗ. ನಂತರದ ಹೆಜ್ಜೆ ಧ್ಯಾನಮಾರ್ಗ. ಧ್ಯಾನವೆಂದರೆ ಒಂದು ಸದ್ಭಾವದಲ್ಲಿ ಲೀನವಾಗುವುದು. ಏಕಾಗ್ರಚಿತ್ತದ ಕರ್ಮಗಳಿಂದ, ಆಹಾರಕ್ರಮದಿಂದ, ಉಪವಾಸ ದೀಕ್ಷೆಗಳಿಂದ ದೇಹವನ್ನು ದಂಡಿಸಿದಾಗ ಮತ್ತು ಅರಿಷಡ್ವರ್ಗಗಳನ್ನು ಗೆಲ್ಲುವ ಮೂಲಕ ಮನಸ್ಸನ್ನು ದಂಡಿಸಿದಾಗ ಮಾತ್ರ ಮನಸ್ಸು ನಿಯಂತ್ರಣಕ್ಕೆ ಬರುವುದು. ಧ್ಯಾನಸ್ಥ ಸ್ಥಿತಿಗೆ ಬರುವುದೆಂದರೆ ಎಲ್ಲ ಲೌಕಿಕ ಜವಾಬ್ದಾರಿಯಿಂದ, ಕರ್ತವ್ಯದಿಂದ ನಿವೃತ್ತಿ ಹೊಂದುವುದು ಮತ್ತು ಅನಾಗರಿಕ ಸಂಸ್ಕಾರಗಳ ನಾಶವಾಗುವುದು. ಧ್ಯಾನಸ್ಥ ಸ್ಥಿತಿಯಲ್ಲಿ ನವರಸಗಳಲ್ಲಿ ರತ್ಯಾದಿ ಮೊದಲೆಂಟು ರಸಗಳನ್ನು ನಿಗ್ರಹಿಸುವ ಪ್ರಯತ್ನ ಮಾಡಬಹುದು. ಎಲ್ಲ ದುರಾಸೆಗಳನ್ನು ಮೀರಿ ನಿಂತಾಗ ಮನಸ್ಸು ಶಾಂತವಾಗುತ್ತದೆ. ತಪಸ್ಸಿನ ಮಾರ್ಗದಲ್ಲಿ ಸಾಧನೆ ಮಾಡಿದರೆ ಮೋಕ್ಷ ಸಾಧನೆ ಸಾಧ್ಯ. ಮೋಕ್ಷ ಎಂದರೆ ಎಲ್ಲ ಭವಬಂಧನಗಳಿಂದ ಮುಕ್ತವಾಗುವುದು. ತಪಸ್ಸೆಂದರೆ ಶಾಂತವಾಗುವುದು, ಇನ್ನಿಲ್ಲದ ಶಾಶ್ವತ ಆನಂದವನ್ನು ಹೊಂದುವುದು.
ಆನಂದಾನುನುಭವ ವೈಯಕ್ತಿಕ. ಪ್ರತಿ ಮನುಷ್ಯನಿಗೂ ಅವನ ಮನೋಧರ್ಮ ಮತ್ತು ಸಂಸ್ಕಾರಗಳಿಗೆ ಅನುಗುಣವಾಗಿ ಆನಂದಾನುಭವವುಂಟಾಗುತ್ತದೆ. ಆದರೆ ಮನುಷ್ಯನ ಚೇತನಕ್ಕೆ ಅಮೃತ (ಸಾವಿಲ್ಲದ) ಆನಂದ ದೊರೆಯುವುದು ಅಲೌಕಿಕ ಮಾರ್ಗದ ಧ್ಯಾನ, ತಪಸ್ಸುಗಳಿಂದ.

IMG 20180306 WA0008 1 edited
-ಡಾ. ಶುಭಶ್ರೀ ಪ್ರಸಾದ್, ಮಂಡ್ಯ [email protected]>
Copyright © All rights reserved Newsnap | Newsever by AF themes.
error: Content is protected !!