ಸಂಕೋಚ ನಾಚಿಕೆಗೆ ಲಿಂಗದ ಹಂಗೇನು? (ಬ್ಯಾಂಕರ್ಸ್ ಡೈರಿ)

Team Newsnap
3 Min Read
IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್ ಮಂಡ್ಯ

ಹಿಂದೆ ಹೇಳಿದ್ದೆನೆನಿಸುತ್ತದೆ – ಬ್ಯಾಂಕಿನಲ್ಲಿ ನಾನು ಸಹಿಯನ್ನು
ಪರಿಶೀಲಿಸುವಾಗ ಕಂಪ್ಯೂಟರಿನಲ್ಲಿರುವ ವ್ಯಕ್ತಿಯ ಚಿತ್ರವನ್ನೂ,
ಎದುರಿಗಿರುವ ವ್ಯಕ್ತಿಯ ಮುಖವನ್ನೂ ಒಮ್ಮೆಯೋ ಇಮ್ಮೆಯೋ
ನೋಡೇ ನೋಡುತ್ತೇನೆ. ಸಹಿ ತುಸು ವ್ಯತ್ಯಾಸವಾದರೂ ಚಿತ್ರ
ಹೊಂದಿದರೆ ನನಗೆಷ್ಟೋ ಸಮಾಧಾನ. ಅದೂ ಮುನ್ನೆಚ್ಚರಿಕೆಯ
ಕ್ರಮವೇ. ಬಹುಶಃ ನನ್ನದು ಆಗ ಪೋಲಿಸ್ ಕಳ್ಳರನ್ನು
ನೋಡುವ ನೋಟದಂತಿರುತ್ತದೆ ಎಂಬುದು ನನ್ನ ಅನಿಸಿಕೆ. ಅಂಥಾ
ಸಮಯದಲ್ಲಿ ಅನೇಕ ಪುರುಷರು ತಲೆತಗ್ಗಿಸಿದ್ದೂ ಇದೆ. ಆಗೆಲ್ಲ
ನನಗನಿಸುತ್ತದೆ – ನಾಚಿಕೆ ಸಂಕೋಚಗಳು ಲಿಂಗದ
ಎಲ್ಲೆಯನ್ನು ಮೀರಿದ್ದು. ಸಾಮಾನ್ಯವಾಗಿ ನಾವು ಹೆಣ್ಣುಮಕ್ಕಳಿಗೇ
ಹೆಚ್ಚು ನಾಚಿಕೆ ಸಂಕೋಚ ಎಂದುಕೊಳ್ಳುತ್ತಿರುತ್ತೇವೆ. ಕಾಲ
ಬದಲಾಗಿದೆ. ಇತ್ತೀಚೆಗೆ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳೇ
ಅವುಗಳನ್ನು ಧರಿಸುತ್ತಿರುತ್ತಾರೆ ಎಂದರೆ ಯಾರೂ
ಸಿಟ್ಟಾಗಬಾರದು.

ಈ ವಿಷಯ ಈಗ ಯಾಕೆ ಬಂತೆಂದರೆ ಈಗೆರಡು ತಿಂಗಳ ಹಿಂದೆ
ಸುಮಾರು ಮುವ್ವತ್ತರ ವಯಸ್ಸಿನ ನಮ್ಮ ಬ್ಯಾಂಕಿನ ಗ್ರಾಹಕ
ಸುಮೇಶ (ಹೆಸರು ಬದಲಿಸಲಾಗಿದೆ) ಬ್ಯಾಂಕಿಗೆ ಬಂದಾಗ ನನ್ನ ಕೌಂಟರಿನ
ಮುಂದೆ ನಿಂತಿದ್ದ ಹುಡುಗಿ ಹೋಗುವ ತನಕ ಸರದಿಯಲ್ಲಿ ಅವಳ
ಹಿಂದೆಯೂ ನಿಲ್ಲದೆ ತುಂಬ ದೂರದಲ್ಲಿ ನಿಂತಿದ್ದ. ಅವನ ಸರದಿ ಬಂದಾಗ
‘ಯಾಕೆ ಸುಮೇಶ್ ಅಷ್ಟು ದೂರ ನಿಂತಿದ್ರಿ? ಆ ಹುಡುಗಿ ಹೊರಡೋ
ಮುಂಚೆ ಬೇರೆ ಯಾರಾದ್ರೂ ನನ್ನ ಕೌಂಟರಿಗೆ ಬಂದಿದ್ರೆ ನಿಮ್ಮ ಸರದಿ
ಹೋಗ್ತಿತ್ತಲ್ವಾ?’ ಎಂದು ಕೇಳಿದೆ. ಅದಕ್ಕೆ ಅವನು ‘ಸದ್ಯ ಈ
ಹುಡುಗೀರ ಸಾವಾಸಾನೇ ಸಾಕು ಮ್ಯಾಮ್, ಕೈ ಮುಗೀತೀನಿ ಅವ್ರ

ತಂಟೆ ತಕರಾರು ನಂಗೆ ಬೇಡ್ವೇ ಬೇಡ’ ಎಂದ. ನನಗೋ
ಆಶ್ಚರ್ಯ. ‘ಏನಾಯ್ತು ಸುಮೇಶ?’ ಎಂದು ಪ್ರಶ್ನಿಸಿದೆ.
‘ನೋಡೀ ಮೇಡಂ ಅವತ್ತು ಬಸ್ಸಿನಲ್ಲಿ ಮೈಸೂರಿಗೆ
ಪ್ರಯಾಣಿಸುತ್ತಿದ್ನಾ?. ನಾನು ಮತ್ತು ಇನ್ನೊಬ್ಬ ಹುಡುಗ ತ್ರೀ
ಸೀಟರಿನಲ್ಲಿ ಕೂತಿದ್ವಾ? ಮುಂದಿನ ತ್ರೀಸೀಟರಿನಲ್ಲೂ ಇಬ್ಬರು ಹೆಂಗಸರು
ಕೂತಿದ್ರು. ಒಂದು ಹುಡುಗಿ ಬಂದು ನನ್ನ ಪಕ್ಕ ಕೂತಳು.
ಅವಳೇನೋ ಬಿಂದಾಸ್ ಆಗಿ ಕೂತಳು. ನಾನು ಸಂಕೋಚದಿಂದ
ಇನ್ನೊಬ್ಬ ಹುಡುಗನ ಪಕ್ಕಕ್ಕೆ ಜರುಗಿ ಮುದುರಿ ಕೂತೆ.
ಎಷ್ಟೋತ್ತು ಹಾಗೇ ಕೂತ್ಕೊಳಕ್ಕೆ ಆಗತ್ತೆ. ಅವಳಿಗೂ ಹಿಂಸೆ
ಆಗಬಹುದೇನೋ ಅಂತ ‘ನೋಡೀ ಮೇಡಂ ನಿಮಗೆ
ಅನುಕೂಲವಾಗುವ ಹಾಗಿದ್ರೆ ಮುಂದಿನ ಸೀಟಿಗೆ ಹೋಗಿ ಕೂತ್ಕೊಳಿ’
ಅಂದೆ. ಅಷ್ಟು ಅಂದಿದ್ದಕ್ಕೇ ಆವಮ್ಮ ನನ್ ಮೇಲೆ ಕೂಗಾಡಿದ್ಲು.
ನಿಮ್ಗೆ ಕೆಟ್ಟ ಭಾವನೆ ಇರಬೇಕು ಅದಕ್ಕೆ ಹೀಗೆ ಮಾತಾಡ್ತೀರ ಅಂತ
ಜೋರು ಮಾಡಿದ್ಲು. ನಾನು ಹಾಗಲ್ಲಮ್ಮಾ ಎಂದೆ ಅಷ್ಟಕ್ಕೇ ಅವ್ಳು
ಭಾವನೆ ಮನಸ್ಸಿನಲ್ಲಿರೋದು ನಿಮ್ ಭಾವನೇನೇ ಸರೀ ಇಲ್ಲ. ಅದ್ಕೆ ನಾ
ಕೂತ್ಕೊಂಡ್ರೆ ನಿಮ್ಗೆ ಮುಜುಗರ ಆಗುತ್ತೆ. ಮುಂದಕ್ಕೆ ಹೋಗಿ
ಅಂತೀರ ಅಂತ ಇಡೀ ಬಸ್ಸಿಗೆ ಕೇಳುವ ಹಾಗೆ ಕೂಗಾಡಿ ಗಲಾಟೆ
ಮಾಡಿದ್ಲು. ಕೊನೆಗೆ ಕಂಡಕ್ಟರ್ ಬಂದು ಸುಮ್ನೆ ಕೂತ್ಕೋಮ್ಮಾ
ಯಾಕಿಷ್ಟು ಗಂಟಲು ಮಾಡ್ತೀಯಾ ಅಂದರು. ಹಾಗಂದಿದ್ದಕ್ಕೆ ಅವರ
ಮೇಲೂ ಎಗರಾಡಿದ್ಲು. ಯಾಕೋ ಈಚೆಗೆ ಹೆಣ್ಣು ಮಕ್ಕಳು ತೀರಾ
ಬದಲಾಗ್ತಿದಾರೆ. ನಂಗೆ ಈ ಗಲಾಟೆ ಗದ್ದಲ ಎಲ್ಲ ಬೇಡ. ಸಾಕಪ್ಪಾ
ಸಾಕು ಇವರ ಸಹವಾಸ’ ಎಂದ.
ನನಗೇಕೋ ಇದು ತೀರಾ ವಿಭಿನ್ನ ಅನುಭವವೇನೂ ಅಲ್ಲ ಅನಿಸಿತು.
ಏಕೆಂದರೆ ಬ್ಯಾಂಕಿನಲ್ಲಿ ನಾ ಕಂಡ ಹಾಗೆ ಇಂಥದ್ದೇ ಒಂದೆರೆಡು
ಪ್ರಕರಣಗಳಾಗಿವೆ.

ಈಗ್ಗೆ ಒಂದಾರು ವರ್ಷಗಳ ಕೆಳಗೆ ಒಂದು ಹುಡುಗ (ಹೆಸರು
ಬೇಡ) ಬ್ಯಾಂಕಿನಲ್ಲಿ ನಗದು ಕೌಂಟರಿನ ಮುಂದೆ ದೊಡ್ಡ ಕ್ಯೂ ಇತ್ತು.
ಆಗೆಲ್ಲ ನಮ್ಮ ಬ್ಯಾಂಕಿನಲ್ಲಿ ಟೋಕನ್ ಸಿಸ್ಟಂ ಇರಲಿಲ್ಲ. ಕ್ಯೂ
ಪದ್ಧತಿಯೇ ಚಾಲ್ತಿಯಲ್ಲಿತ್ತು. ತನ್ನ ಮುಂದೆ ನಿಂತಿದ್ದ
ಹುಡುಗನ ಮೈಮೇಲೇ ಬಿದ್ದವಳ ಥರ ಒಂದು ಕೈಯ್ಯನ್ನು
ಅವನ ಹೆಗಲಿನ ಮೇಲಿಂದಲೇ ಚಾಚಿ ಕೌಂಟರಿಗೆ ತನ್ನ ಚಲನ್ನು ಮತ್ತು
ನಗದನ್ನು ಕೊಡಲು ಯತ್ನಿಸಿದಳು. ಮುಂದೆ ನಿಂತಿದ್ದ ಹುಡುಗ
ತೀರಾ ಮುಜುಗರದಿಂದ ತುಸು ಮೆಲ್ಲ ಸರಿದು ಭುಜವನ್ನು
ಕಿರಿದಾಗಿಸಿಕೊಂಡು ‘ಮೇಡಂ ಇರಿ ನಾನು ಹೋದ ಮೇಲೆ ಕಟ್ಟಿ. ಇಲ್ಲಾ
ಅಷ್ಟು ಅರ್ಜೆಂಟ್ ಇದ್ರೆ ಹೇಳಿ ಜಾಗ ಬಿಡ್ತೀನಿ ಕಟ್ಟೋರಂತೆ. ಸ್ವಲ್ಪ
ದೂರ ನಿಲ್ಲಿ’ ಎಂದ. ಆ ಹುಡುಗಿ ಅವನ ಮೇಲೆ ಜಗಳಕ್ಕೇ
ಹೋದಳು. ‘ಏನ್ರೀ ಹೀಗಂತೀರಾ? ನಾನೇನು ನಿಮ್ ಮೈಮೇಲೆ
ಬಿದ್ದಿದ್ದೀನಾ ಹೀಗನ್ನೋಕೆ? ನೀವು ಸರಿ ಇದ್ರೆ ಹೀಗನ್ಸುತ್ತೆ ಅಷ್ಟೇ.
ನಿಮ್ಮನ್ನು ನೀವು ತಿದ್ಗೊಳ್ರೀ’ ಎಂದು ರೋಪು ಹಾಕಿದಳು.
ಕೊನೆಗೆ ಸಾಲಿನಲ್ಲಿ ನಿಂತಿದ್ದವರೆಲ್ಲಾ ಆ ಹುಡುಗನ ಬೆಂಬಲಕ್ಕೆ ನಿಂತು
ಮೊದಲು ಅವಳ ಹಣ ಕಟ್ಟಿಸಿ ಬ್ಯಾಂಕಿನಿಂದ ಆಕೆ ಹೋದರೆ ಸಾಕು
ಎನ್ನುವಂತೆ ಮುಖ ಮಾಡಿ, ಆಕೆ ಹೋದ ನಂತರ ನಿಟ್ಟುಸಿರು ಬಿಟ್ಟಳು.
ಸಂಕೋಚ, ನಾಚಿಕೆ, ಮುಜುಗರ ಅನ್ನುವುದು ಯಾವುದೇ ಒಂದು
ಲಿಂಗದ ಸ್ವತ್ತಲ್ಲ. ಹೆಣ್ಣು ಮಕ್ಕಳಲ್ಲೂ ತೀರಾ
ಮುದುಡಿಕೊಳ್ಳುವವರಿರುತ್ತಾರೆ; ಗಂಡು ಮಕ್ಕಳಲ್ಲೂ.
ಹಾಗೆಯೇ ಘಟವಾಣಿಯರಂಥವರೂ ಇರುತ್ತಾರೆ, ಒರಟು
ಗಂಡಸರೂ. ಯಾವುದೇ ಭಾವ ತೀರಾ ವೈಯಕ್ತಿಕವಾದದ್ದು.
ಇಂಥ ಅನೇಕ ಘಟನೆಗಳಿಗೆ ಬ್ಯಾಂಕ್ ಉದ್ಯೋಗಿಗಳಾದ ನಾವು
ಸಾಕ್ಷಿಯಾಗುತ್ತೇವೆ ಜೊತೆಗೇ ಸಾಕ್ಷಿ ಹೇಳಲಾಗದ ನಮ್ಮ
ಮೇಜು ಕುರ್ಚಿಗಳೂ.

Share This Article
Leave a comment