ಸಂಪೂರ್ಣವಾಗಿ ಗಾಂಧಿ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ: ಸಿದ್ದರಾಮಯ್ಯ

Team Newsnap
1 Min Read

ಸಂಪೂರ್ಣವಾಗಿ ಗಾಂಧಿ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.


ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಮಹಾತ್ಮ ಗಾಂಧೀಜಿ ಜಯಂತಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಜನ್ಮದಿನ ಸಮಾರಂಭದಲ್ಲಿ ಅವರು ಮಾತನಾಡಿದರು. ಕುಡಿಯುವುದು ಬೇಡ ಎಂದು ಗಾಂಧೀಜಿ ಹೇಳಿದ್ದರು. ಬಿಟ್ಟಿದ್ದೇವಾ ಎಂದು ಪ್ರಶ್ನಿಸಿದರು. ಸತ್ಯ ಒಪ್ಪಿಕೊಳ್ಳಬೇಕು. ಆದಷ್ಟು ಅವರ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡೋಣ ಎಂದು ತಿಳಿಸಿದರು.


ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸುವುದನ್ನು ಸಿದ್ದರಾಮಯ್ಯ ಇಂದೂ ಬಿಡಲಿಲ್ಲ. ಮೋದಿ ಬರೀ ಸುಳ್ಳು ಹೇಳುತ್ತಾರೆ. ಅವರನ್ನು ಉಳಿಯಲು ಬಿಟ್ಟರೆ ಜನ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.


ದೇಶದಲ್ಲಿ ಪ್ರಜಾಪ್ರಭುತ್ವ ನಾಶವಾಗುತ್ತಿದೆ. ಸಂವಿಧಾನಕ್ಕೆ ಗೌರವವಿಲ್ಲದಂತಾಗಿದೆ. ಸಂವಿಧಾನ ಉಳಿಸುತ್ತೇವೆ. ಇಂತಹ ಸರ್ಕಾರ ಕಿತ್ತು ಹಾಕುತ್ತೇವೆಂದು ಇಂದು ಪ್ರತಿಜ್ಞೆ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ ನೀಡಿದರು.


ನಮ್ಮದು ಶ್ರೇಷ್ಠ ಸಂವಿಧಾನ ಎಂದು ಡಾ. ಅಂಬೇಡ್ಕರ್ ಹೇಳಿದ್ದರು. ಆದರೆ ಶ್ರೇಷ್ಠತೆ ಆಳ್ವಿಕೆ ಮಾಡುವವರ ಕೈಯಲ್ಲಿ ಇರುತ್ತೆ. ಈಗ ಕೆಟ್ಟವರ ಕೈಯಲ್ಲಿ ಸಂವಿಧಾನ ಸಿಕ್ಕಿದೆ. ಇದನ್ನು ರಕ್ಷಣೆ ಮಾಡುವ ಜವಾಬ್ದಾರಿ ಕಾಂಗ್ರೆಸ್ ನಾಯಕರ ಮೇಲಿದೆ. ಈ ಪಕ್ಷಕ್ಕೆ ಮಾತ್ರ ಈ ಬದ್ಧತೆ ಇರುವುದು ಎಂದರು.


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ, ಮಾಜಿ ಕೇಂದ್ರ ಸಚಿವ ಎಚ್.ಮುನಿಯಪ್ಪ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Share This Article
Leave a comment