ವಿಶ್ವ ಆಹಾರ ದಿನ: ನಮ್ಮ ಕಾರ್ಯವೇ ನಮ್ಮ ಭವಿಷ್ಯ

Team Newsnap
5 Min Read

‘ಒಟ್ಟಿಗೆ ಬೆಳೆಯಿರಿ, ಪೋಷಿಸಿ, ಉಳಿಸಿಕೊಳ್ಳಿ, ನಮ್ಮ ಕಾರ್ಯಗಳು ನಮ್ಮ ಭವಿಷ್ಯ’ ಎಂಬ ಘೋಷಣೆಯೊಂದಿಗೆ ಈ ವರ್ಷದ ವಿಶ್ವ ಆಹಾರ ದಿನ ಬಂದಿದೆ. ಪ್ರತಿ ವರ್ಷ ಅಕ್ಟೋಬರ್ 16ರಂದು ನಾವು ವಿಶ್ವ ಆರೋಗ್ಯ ಆಹಾರ ದಿನವನ್ನು ಆಚರಿಸುತ್ತೇವೆ. ಆಹಾರ ದಿನವನ್ನು ಖುಷಿಯಾಗಿ ಆಚರಣೆ ಮಾಡುವ ಬದಲು, ದುಃಖದಿಂದ ಆಚರಿಸುವ ಪರಿಸ್ಥಿತಿ ಬರುತ್ತಿದೆ. ಬಂದಿದೆ. ಬರುತ್ತಲೇ ಇರುತ್ತದೆ. ಈ ವರ್ಷ ಕೋವಿಡ್ ಕಾರಣದಿಂದಂತೂ ಆಹಾರದ ಅಭಾವ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಆದರೆ ಅನೇಕ ವರ್ಷಗಳಿಂದ ಹಲವು ಕೋಟಿ ಜನರು ಆಹಾರದ ಅಭಾವವನ್ನು ಎದುರಿಸುತ್ತ, ಕನಿಷ್ಠ ಪ್ರಮಾಣದ ಪೌಷ್ಠಿಕತೆಯ ಆಹಾರವನ್ನು ಪಡೆಯಲು ವಿಫಲರಾಗುತ್ತಿದ್ದಾರೆ. ಆದರೆ ಪ್ರತಿ ವರ್ಷವೂ ನಾವು ಆಹಾರದ ದಿನವನ್ನು ಆಚರಿಸುತ್ತಲೇ ಬರುತ್ತಿದ್ದೇವೆ-ಸಫಲರಾಗಿದ್ದೇವೆ ಎಂಬಂತೆ,ಆಹಾರ ಕೊರತೆಯ ಸಮಸ್ಯೆಯನ್ನು ಕೇವಲ ನಕಾರಾತ್ಮಕ ದೃಷ್ಠಿಕೋನದಿಂದ ನೋಡುವುದು ಮಾತ್ರವಲ್ಲ. ಕೊರತೆಗೆ ಕಾರಣಗಳೇನು? ಸರ್ಕಾರಗಳು ಕ್ರಮಗಳನ್ನು ಕೈಗೊಂಡರೂ ಸಹ ಆಹಾರದ ಸಮಸ್ಯೆ, ಕೊರತೆ ನಮ್ಮ ದೇಶ ಮಾತ್ರವಲ್ಲದೇ ಇಡೀ ಪ್ರಪಂಚವನ್ನೇ ಕಾಡುತ್ತಿದೆಯೆಂದರೆ, ಮಧ್ಯದಲ್ಲೇನೋ ತಪ್ಪು ನಡೆಯುತ್ತಿದೆ ಎನ್ನುವದಂತೂ ಖಚಿತ ಸಂಗತಿ. ಆದರೆ ಅದೇನು ಎಂಬುದು ಸರ್ಕಾರಕ್ಕೆ ಗೊತ್ತೋ? ಗೊತ್ತಿಲ್ಲವೋ? ಅದು ನಮಗೆ ಗೊತ್ತಿಲ್ಲದ ಸಂಗತಿ,ಆಹಾರದ ಕೊರತೆಗೆ ಅನೇಕ ಕಾರಣಗಳಿವೆ. ಆ ಕೊರೆತೆಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದೆಲ್ಲವೂ ಮಾನವ ನಿರ್ಮಿತವೇ ಎಂಬುದು ‘ಆಶ್ಚರ್ಯವಲ್ಲದ’ ಸಂಗತಿ. ಆಹಾರದ ಕೊರತೆಗೆ ಕೆಲವು ಪ್ರಮುಖ ಕಾರಣಗಳನ್ನು ನಾವು ಕೆಳಗಿನ ಅಂಶಗಳ ಮೂಲಕ ಗಮನಿಸಬಹುದಾಗಿದೆ.

  1. ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದಾಗಿ ಆಹಾರದ ಕೊರತೆ ಉಧ್ಭವಿಸುತ್ತದೆ.
  2. ದೇಶ ದೇಶಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ ಸಮರ್ಪಕವಾದ ಕೊರತೆ ಇರುವದರಿಂದ ಆಹಾರದ ಸಮಸ್ಯೆ ಉಧ್ಭವಿಸುತ್ತದೆ.
  3. ಕೆಲವು ಬಾರಿ ಒಂದೇ ಬೆಳೆಯನ್ನು ಏಕಕಾಲದಲ್ಲಿ ಬೆಳೆಯುವದರಿಂದ ಬೇರೆ ಬೆಳೆಗಳ ಕೊರತೆ ಕಂಡುಬರುತ್ತದೆ.
  4. ಪ್ರಸ್ತುತ ಜಾಗತಿಕ ಪ್ರಪಂಚದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಏರುತ್ತಿದ್ದು, ಕಡುಬಡವರಿಗೆ ಸರ್ಕಾರ ಕೊಡಮಾಡುವ ಪಡಿತರ ಬಿಟ್ಟರೆ, ಬೇರೆ ಪಡಿತರ ಮೂಲವಿರುವದಿಲ್ಲ. ಹಾಗಾಗಿ ಹೆಚ್ಚಾಗಿ ಬಡಕುಟುಂಬಗಳಲ್ಲಿ ಆಹಾರದ ಕೊರತೆ ಹಾಗೂ ಪೌಷ್ಠಿಕ ಆಹಾರದ ಕೊರತೆ ಎದ್ದು ಕಂಡುಬರುತ್ತದೆ.
  5. ಎಲ್ಲಕ್ಕಿಂತಲೂ ಮುಖ್ಯವಾದ ಕಾರಣವೆಂದರೆ, ವಾಣಿಜ್ಯ ಬೆಳೆಗಳನ್ನು ವ್ಯಾಪಕ ಪ್ರಮಾಣದಲ್ಲಿ ಬೆಳೆಯುತ್ತಿರುವುದು. ಅಂದರೆ, ಸಾಮಾನ್ಯ ಮಾನವನಿಗೆ ಬೇಕಾದ ಮೂಲಭೂತ ಬೆಳೆಗಳನ್ನು ಬಿಟ್ಟು, ಕಾಫಿ, ಚಹಾ, ಸೆಣಬು, ಕೋಲಾ, ಗೋಧಿ, ಕಬ್ಬು, ಗೋಡಂಬಿ, ಹತ್ತಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿರುವದರಿಂದ ನಾವು ಸೇವಿಸುವ ಮೂಲಭೂತ ಆಹಾರದಲ್ಲಿ ವ್ಯತ್ಯಯ ಹಾಗೂ ಪೌಷ್ಠಿಕತೆಯ ಕೊರತೆ ಕಂಡುಬರುತ್ತದೆ.
  6. ರೈತರು ಬೆಳೆದ ಬೆಳೆಗಳನ್ನು ಸರಿಯಾಗಿ ದಾಸ್ತಾನು ಮಾಡಲು ಸರಿಯಾದ, ನೂತನ ತಂತ್ರಜ್ಞಾನಗಳನ್ನು ಬಳಸಿ ರಚನೆ ಮಾಡಿದ ಗೊದಾಮುಗಳ ಅಭಾವ.
  7. ವಾಣಿಜ್ಯಿಕ ಉದ್ದೇಶಗಳಿಗಾಗಿ ಇರುವ ಕಾಡನ್ನು ಸವರುತ್ತಿರುವದರಿಂದ ಮಳೆಯ ಅಭಾವ ಉಂಟಾಗುತ್ತದೆ. ಮಳೆಯ ಅಭಾವದಿಂದ ಆಹಾರದ ಅಭಾವ ತಲೆದೋರುತ್ತದೆ.
  8. ಕೃಷಿಭೂಮಿಯನ್ನು ವಾಣಿಜ್ಯಿಕ ಉದ್ದೇಶಗಳನ್ನು ಬಳಸುತ್ತಿರುವುದೂ ಸಹ ಒಂದು ಮುಖ್ಯ ಕಾರಣ.

ಮೇಲೆ ವಿವರಿಸಿರುವ ಕಾರಣಗಳಿಗೆ ಉತ್ತರ ಕಂಡುಕೊಳ್ಳಲು, ವಿಶ್ವ ಆಹಾರ ದಿನವನ್ನು (ಡಬ್ಲ್ಯುಎಫ್‌ಡಿ) ನವೆಂಬರ್ 1979 ರಲ್ಲಿ ಸಂಘಟನೆಯ 20 ನೇ ಸಾಮಾನ್ಯ ಸಮ್ಮೇಳನದಲ್ಲಿ ಎಫ್‌ಎಒ ಸದಸ್ಯ ರಾಷ್ಟ್ರಗಳು ಸ್ಥಾಪಿಸಿದವು. ಹಂಗೇರಿಯನ್ ನಿಯೋಗವು ಮಾಜಿ ಹಂಗೇರಿಯನ್ ಕೃಷಿ ಮತ್ತು ಆಹಾರ ಸಚಿವ ಡಾ. ಪಾಲ್ ರೋಮನಿ ನೇತೃತ್ವದಲ್ಲಿ 20 ನೇ ಅಧಿವೇಶನದಲ್ಲಿ ಸಕ್ರಿಯ ಪಾತ್ರ ವಹಿಸಿತು. FAO ಸಮ್ಮೇಳನ ಮತ್ತು WFD ಯನ್ನು ವಿಶ್ವಾದ್ಯಂತ ಆಚರಿಸುವ ಕಲ್ಪನೆಯನ್ನು ಸೂಚಿಸಿತು. ಅಂದಿನಿಂದ ಪ್ರತಿವರ್ಷ 150 ಕ್ಕೂ ಹೆಚ್ಚು ದೇಶಗಳಲ್ಲಿ ಇದನ್ನು ಗಮನಿಸಲಾಗಿದ್ದು, ಬಡತನ ಮತ್ತು ಹಸಿವಿನ ಹಿಂದಿನ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

ವಿಶ್ವದಲ್ಲಿ ಅನೇಕ ಜನರು ಆಹಾರದ ಕೊರಎಯಿಂದ ಬಳಲುತ್ತಿರುವುದು ಸರ್ವವಿದಿತವಾದ ಸಂಗತಿ. ವಿಶ್ವ ಆಹಾರ ಯೊಜನೆಯ 2019ರ ಸಮೀಕ್ಷೆಯ ಪ್ರಕಾರ, ವಿಶ್ವದಲ್ಲಿ 821 ಮಿಲಿಯನ್ ಜನರು ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಅಂದರೆ ಪ್ರತಿ ಒಂಭತ್ತು ಜನಕ್ಕೆ ಒಬ್ಬರು ಆಹಾರದ ಕೊರತೆಯನ್ನು ಅನುಭವಿಸಿದ್ದಾರೆ. ಪ್ರತೀ ದೇಶದ ಆಹಾರದ ಕೊರತೆಯನ್ನು ಈ ಕೆಳಗಿನಂತೆ ನೋಡಬಹುದು.

ಅಂಕಿ ಅಂಶಗಳು
ವಿಶ್ವ ಆಹಾರ ಯೋಜನೆಯ 2019ರ ಸಮೀಕ್ಷೆಯ ಪ್ರಕಾರ ಆಹಾರ ಕೊರತೆಯನ್ನು ಅನುಭವಿಸುತ್ತಿರುವ ದೇಶಗಳನ್ನು ನೀಲಿ, ಹಸಿರು, ಹಳದಿ, ಕೇಸರಿ, ಕೆಂಪು, ಕಡುಗೆಂಪು ವಲಯಗಳಾಗಿ ಗುರುತಿಸಿದೆ.

ನೀಲಿ ವಲಯದಲ್ಲಿ ಅಮೇರಿಕಾ, ಬ್ರೆಜಿಲ್, ರಷ್ಯನ್ ದೇಶಗಳು, ಯುರೋಪ್ ಖಂಡದ ದೇಶಗಳು, ಆಸ್ಟ್ರೇಲಿಯ ಖಂಡದ ದೇಶಗಳು ಸೇರಿವೆ. ಇಲ್ಲಿನ ಆಹಾರದ ಕೊರತೆಯ ಪ್ರಮಾಣ ಶೇ. 2.5% ಕ್ಕಿಂತಲೂ ಕಡಿಮೆ ಇದೆ.
ಹಸಿರು ವಲಯದಲ್ಲಿನ ಅರ್ಜಂಟೈನಾ, ಕೊಲಂಬಿಯ, ಇರಾನ್, ಅಲ್ಜೀರಿಯ, ಈಜಿಪ್ಟ್, ಉಕ್ರೇನ್, ಮೊರಾಕ್ಕೋ, ಇರಾನ್, ಎಸ್ತೋನಿಯ ಮುಂತಾದ ದೇಶಗಳ ಆಹಾರ ಕೊರತೆಯ ಪ್ರಮಾಣ ಶೇ. 5% ಕ್ಕಿಂತಲೂ ಕಡಿಮೆ ಇದೆ.
ಹಳದಿ ವಲಯದಲ್ಲಿ ಭಾರತ, ಪಾಕಿಸ್ತಾನ, ಚೈನಾ, ಮಂಗೋಲಿಯಾ, ಸೌದಿ ಅರೇಬಿಯ, ಮಯನ್ಮಾರ್, ಥೈಲ್ಯಾಂಡ್, ಬಾಂಗ್ಲಾ, ಶ್ರೀಲಂಕಾ, ಭೂತಾನ್, ನೇಪಾಳ, ಇಂಡೋನೇಷಿಯಾ, ನೈಜೀರಿಯ, ಅಂಡಮಾನ್ ನಿಕೋಬಾರ್ ಮುಂತಾದವುಗಳು ಸೇರಿವೆ. ಈ ದೇಶಗಳ ಆಹಾರದ ಕೊರತೆಯ ಪ್ರಮಾಣ ಶೇ. 5 ರಿಂದ 14.9%.
ಕೇಸರಿ ವಲಯವನ್ನು, ಪಾಕಿಸ್ತಾನ, ಸುಡಾನ್, ಇಥಿಯೋಪಿಯಾ, ನಿಗರ್, ಕಾಂಬೋಡಿಯಾ, ಜಿನೀವಾ ದೇಶಗಳು ಹಂಚಿಕೊಂಡಿವೆ. ಈ ದೇಶಗಳ ಆಹಾರದ ಕೊರತೆಯು ಶೇ. 15 ರಿಂದ 24.9%ನಷ್ಟಿದೆ.
ಕೆಂಪು ವಲಯದಲ್ಲಿ ಅಫಘಾನಿಸ್ತಾನ್, ಇರಾಕ್, ಅಂಗೋಲ, ನಮೀಬಿಯಾ, ಕೀನ್ಯಾ, ಬೋಟ್ಸ್‌ವಾನಾ, ಬುರುಂಡಿ ದೇಶಗಳು ಬಂದಿವೆ. ಈ ದೇಶದ ಶೇ. 25 ರಿಂದ 34.9% ರಷ್ಟು ಜನರು ಆಹಾರದ ಅಭಾವ ಎದುರಿಸುತ್ತಿದ್ದಾರೆ.
ಕಡುಗೆಂಪು ವಲಯದಲ್ಲಿ ಜಾಂಬಿಯಾ, ಮಡಗಾಸ್ಕರ್, ಉಗಾಂಡ, ಚಾಡ್, ಯೆಮನ್ ಮುಂತಾದ ದೇಶಗಳು ಸೇರ್ಪದೆಗೊಂಡಿವೆ. ಈ ದೇಶಗಳ ಒಟ್ಟು ಜನರಲ್ಲಿ ಶೇ. 35%ಕ್ಕಿಂತಲೂ ಹೆಚ್ಚಿನ ಜನರು ಆಹಾರದ ಕೊರತೆಯನ್ನು ಕಾಣುತ್ತಿದ್ದಾರೆ.
ಮೇಲಿನ ಅಂಕಿ ಅಂಶಗಳಿಂದ ನಮಗೆ ತಿಳಿದುಬರುವದೆಂದರೆ, ನಮ್ಮ ದೇಶದಲ್ಲೇ ಆಗಲಿ, ನಮ್ಮ ಪ್ರಪಂಚದಲ್ಲಾಗಲೀ ಎಷ್ಟೊಂದು ಆಹಾರದ ಕೊರತೆ ಇದೆ ಎಂಬುದು ಎದ್ದು ಕಾಣುತ್ತದೆ. ಈಗಾಗಲೇ ಪ್ರಪಂಚದಲ್ಲಿ ಕೃಷಿಕರ ಪ್ರಮಾಣ, ಕೃಷಿ ವಲಯದ ಪ್ರಮಾಣ ತೀರಾ ಕೆಳಗಿಳಿಯುತ್ತಿದೆ. ಭಾರತದಲ್ಲೇ ಸುಮಾರು 10% ರಿಂದ 15% ನಷ್ಟು ಕಾಡನ್ನ ಅಭಿವೃದ್ಧಿ ಯೊಜನೆಗಳಿಗೋಸ್ಕರ ನಾಶ ಮಾಡೀದ್ದೇವೆ. ನಮ್ಮ ದೇಶದ ಕೃಷಿ ವಲಯವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವದಾದರೆ 1955ರಲ್ಲಿ ಶೇ. 60% ಕ್ಕಿಂತಲೂ ಜಾಸ್ತಿ ಜನ ಕೃಷಿ ಮಾಡುತ್ತಿದ್ದರೆ, 2015ರ ಹೊತ್ತಿಗೆ ಕೃಷಿ ವಲಯದ ಪ್ರಮಾಣ ಸುಮಾರು ಶೇ. 50%ಕ್ಕೆ ಬಂದು ನಿಂತಿದೆ. ಎಷ್ಟೋ ಕೃಷಿ ಭೂಮಿಗಳನ್ನು ನಾಶ ಮಾಡಿ ಕೈಗಾರಿಕೆ, ಸಾಫ್ಟ್‌ವೇರ್ ಕಂಪನಿಗಳನ್ನು, ಟೆಕ್‌ಪಾರ್ಕ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಆಹಾರದಲ್ಲಿ ಕಲಬೆರೆಕೆಯ ಹಗರಣ್ ಅವ್ಯಾಹತವಾಗಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಅಡುಗೆ ಎಣ್ಣೆಯಲ್ಲಿ ಕಲಬೆರೆಕೆ ವಿಚಾರ ಬೆಳಕಿಗೆ ಬಂದು ದೊಡ್ಡ ಸುದ್ದಿಯಾಗಿತ್ತು. ಇದು ಕೇವಲ ಅಡುಗೆ ಎಣ್ಣೆಗೆ ಸೀಮಿತವಾಗಿಲ್ಲ. ಹೆಚ್ಚು ಕಡಿಮೆ ಎಲ್ಲ ಆಹಾರ ಧಾನ್ಯಗಳಲ್ಲೂ ಇದೇ ರೀತಿ ಕಲಬೆರೆಕೆ ನಡೆಯುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆ ಆಹಾರಕ್ಕೆ ಪರದಾಡುವದಂತೂ ಸತ್ಯ. ಹಾಗಾಗಿ ಕೃಷಿಕರನ್ನು, ಕೃಷಿ ವಲಯವನ್ನು ಉಳಿಸಿ, ಬೆಳಸಿ, ಪೋಷಿಸಬೇಕಾದುದು ನಮ್ಮ ಯುವಪೀಳಿಗೆಯ ಆದ್ಯ ಕರ್ತವ್ಯವಾಗಿದೆ.

- ಓಂಕಾರೇಶ್
ಸಂವಹನ ವಿದ್ಯಾರ್ಥಿ
ಬೆಂಗಳೂರು ವಿಶ್ವವಿದ್ಯಾಲಯ
ಜ್ಞಾನ ಭಾರತಿ ಆವರಣಓಂಕಾರೇಶ್
Share This Article
Leave a comment