ನಮಗೆ ಯಾರು‌ ಆದರ್ಶರು….

Team Newsnap
1 Min Read

ಪ್ರೀತಿಸಿ ಮದುವೆಯಾಗುವ ಬೇರೆ ಬೇರೆ ಜಾತಿಯ ಪ್ರೇಮಿಗಳನ್ನು ಕೊಂದು ಜ್ಯೆಲಿಗೆ ಹೋಗುವ ರಕ್ತ ಸಂಬಂದಿಗಳೇ ಧೀರರು, ಗೌರವಸ್ತರು, ಮರ್ಯಾದಸ್ತರು.

ಮದುವೆ ಮಂಟಪದಲ್ಲಿ ದುಬಾರಿ ಕಾರನ್ನು ಬಹಿರಂಗವಾಗಿಯೇ ಪ್ರದರ್ಶಿಸಿ ವರದಕ್ಷಿಣೆಯನ್ನು
ಕೊಡುವವರು ತಮ್ಮ ಮನೆತನದ ಹೆಚ್ಚುಗಾರಿಕೆ, ಗೌರವ ಕಾಪಾಡುವ ಮಾನಸ್ತರು.

ಹಣ, ಹೆಂಡ ಹಂಚಿ, ತಲೆಹಿಡಿದು ಟಿಕೆಟ್ ಗಿಟ್ಟಿಸಿ, ಚುನಾವಣೆಯಲ್ಲಿ ಗೆದ್ದು, ರಾಜಕೀಯ ಸ್ಥಾನಮಾನ ಪಡೆಯುವವರು ನಮಗೆಲ್ಲ ಆದರ್ಶ ವ್ಯಕ್ತಿಗಳು.

ಮೂರು ಬಿಟ್ಟು, ಅತ್ತೆ ಮನೆಗೆ ಹೋಗಿ ಬಂದಂತೆ ಜ್ಯೆಲಿಗೆ ಹೋಗಿಬಂದರು ಏನೂ ಆಗಿಲ್ಲದಂತೆ,
ಛಲ ಬಿಡದೆ ಮತ್ತೆ ಅಧಿಕಾರ ಸ್ಥಾಪಿಸುವ ರೌಡಿಗಳು, ಭ್ರಷ್ಟರು ನಮಗೆ ಪ್ರೇರಣೆ.

ಏನಾದರೂ ಮಾಡು, ಹೇಗಾದರೂ ಮಾಡು,ಒಟ್ಟಿನಲ್ಲಿ ಹಣ ಮಾಡು ಎಂದು ಬೋಧಿಸಿ, ಅದೇ ರೀತಿ ದುಡ್ಡು, ದೌಲತ್ತು ಪ್ರದರ್ಶಿಸುವವರು ನಮಗೆ ಮಾದರಿ.

ಧರ್ಮಾಧಿಕಾರಿಯಾಗು, ಜಾತಿನಾಯಕನಾಗು,
ಭ್ರಷ್ಟ ಅಧಿಕಾರಿಯಾಗು ಏನಾದರೂ ಆಗು,
ಮೊದಲು ಹಣ ಮಾಡುವ ಜನಪ್ರಿಯ ನಾಯಕನಾಗು ಎನ್ನುವವರೇ ನಮಗೆ ಸ್ಪೂರ್ತಿ.

ತಲೆ ಹಿಡಿದರೂ ಪರವಾಗಿಲ್ಲ, ತಲೆ ಒಡೆದರೂ ಪರವಾಗಿಲ್ಲ, ಕಾಲಿಡಿದರೂ ಪರವಾಗಿಲ್ಲ, ಜುಟ್ಟಿಡಿದರೂ ಪರವಾಗಿಲ್ಲ,
ಕ್ಕೆ ಮುಗಿದರೂ ಪರವಾಗಿಲ್ಲ, ಕಾಲ್ ಮುರಿದರೂ ಪರವಾಗಿಲ್ಲ, ಒಟ್ಟಿನಲ್ಲಿ ದೊಡ್ಡ ನಾಯಕನಾಗು ನೀನೇ ನಮಗೆ ಆದರ್ಶ.

ಸುಳ್ಳಾದರೂ ಹೇಳು, ಅಸಹ್ಯವನ್ನಾದರೂ ತೋರಿಸು,
ರಕ್ತವನ್ನಾದರೂ ಪ್ರದರ್ಶಿಸು, ಮೌಡ್ಯವನ್ನಾದರೂ ವಿಜೃಂಭಿಸು, ಅನೈತಿಕವಾದರೂ ಆಗಿರಲಿ, ಅಸಭ್ಯವಾದರೂ ಆಗಿರಲಿ,
ಒಟ್ಟಿನಲ್ಲಿ ನೀನೇ ನಂಬರ್‌ ಒನ್ ಚಾನಲ್ ಆಗಿರು.

ಎಚ್ಚೆತ್ತುಕೊಳ್ಳೋಣ,

ನಾವು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ನಮ್ಮ ಮಕ್ಕಳಿಗಾಗಿ,
ಒಂದು ಉತ್ತಮ ವಾತಾವರಣ ನಿರ್ಮಿಸಿ ಕೊಡೋಣ,

ಪಾಪ ಮಕ್ಕಳು ಈಗಿರುವ ವ್ಯವಸ್ಥೆಯಲ್ಲಿ ನರಕಯಾತನೆ ಅನುಭವಿಸುವುದು ಬೇಡ……….

  • ವಿವೇಕಾನಂದ. ಹೆಚ್.ಕೆ.
Share This Article
Leave a comment