ಆರೋಗ್ಯವರ್ಧಕ,ಡ್ರ್ಯಾಗನ್‌ ಫ್ರೂಟ್ ರೈತರ ಆರ್ಥಿಕ ಬಲವರ್ಧನೆಗೆ ನೆರವು

Team Newsnap
4 Min Read

ಬದುಕಿನ ಸ್ವಾವಲಂಬನೆಗಾಗಿ‌ ಕೃಷಿ‌ ರೈತರನ್ನು ಯಾವತ್ತೂ ಕೈ ಬಿಟ್ಟಿಲ್ಲ.‌ ಅದರಲ್ಲೂ‌ ತೋಟಗಾರಿಕೆ ಬೆಳೆಗಳಂತೂ ದೊಡ್ಡ ಆದಾಯ , ಆಶ್ರಯದ ಜೊತೆಗೆ ಸ್ವಾವಲಂಬನೆ ಬದುಕಿಗೆ ಭದ್ರ‌ ಬುನಾದಿ ಹಾಕುತ್ತವೆ.

ಮಳೆ ಆಶ್ರಿತ ಒಣ ಭೂಮಿ, ಕಲ್ಲು ಮಿಶ್ರಿತ ನೆಲದಲ್ಲಿ ತೋಟಗಾರಿಕೆ ಬೆಳೆಗಳು ಕೃಷಿಕರ ಬದುಕು ನೆಮ್ಮದಿಯಾಗುವಂತೆ ಮಾಡುವ ಉದಾಹರಣೆಗಳೇ ಹೆಚ್ಚಿವೆ.

ಇದು ತೋಟಗಾರಿಕೆ ಬೆಳೆಯಲ್ಲಿ ಸಾಧನೆ ಮಾಡಿದ ಮೇಡಂ‌ ಮಾದರಿಯಾಗಿದ್ದಾರೆ.‌ ಹೆಸರು‌ ಯಮುನಾ. ವಿದೇಶದಲ್ಲಿ ಅನೇಕ ವರ್ಷಗಳು ನೆಲಸಿ ಅಲ್ಲಿಗೆ ಒಗ್ಗಿ ಹೋಗಿದ್ದರೂ, ಮಾತೃ ಭೂಮಿಯ ಮೇಲಿನ ಪ್ರೀತಿ ವಾತ್ಸಲ್ಯ, ಅಭಿಮಾನ ಹಾಗೂ ಕೃಷಿಯ ಮೇಲಿನ ಆಸಕ್ತಿ ಹಾಗೂ ಉತ್ಸಾಹದಿಂದ ಕನ್ನಡ ನೆಲಕ್ಕೆ ಮರಳಿ ಬರುವಂತೆ ಮಾಡಿದೆ.

ಕೃಷಿಯಲ್ಲಿ ವಿನೂತನ ಪ್ರಯೋಗದ ಮೂಲಕ ತೋಟಗಾರಿಕೆ ಬೆಳೆಯಾದ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆದ ಶ್ರೀಮತಿ ಯಮುನಾ ಸೂರ್ಯನಾರಾಯಣ ಮೈಸೂರು ಜಿಲ್ಲೆಯ ಕೃಷಿಕರಿಗೆ ಸ್ಪೂರ್ತಿ ಯಾಗಿದ್ದಾರೆ.

13MYS 1

ಅರವತ್ತರ ಇಳಿ ವಯೋಮಾನದಲ್ಲಿ ಸಾಧನೆ ಮಾಡಬೇಕೆನ್ನುವ ಹಂಬಲ,ಉತ್ಸಾಹ, ನಿರಂತರ ಪರಿಶ್ರಮ ಇತರ ಕೃಷಿ ಮಹಿಳೆಯರಿಗೆ ಯಮುನಾ ಉದಾಹರಣೆ ಯಾಗಿದ್ದಾರೆ.

ಮೈಸೂರು ತಾಲ್ಲೂಕು ವರುಣ ಹೋಬಳಿಯ ಹಾರೋಹಳ್ಳಿ ಮೆಲ್ಲಹಳ್ಳಿಯ ಸಮೀಪ ನೀರನಹಳ್ಳಿ ಸುಮಾರು ಒಂದು ಹೆಕ್ಟರ್ ಪ್ರದೇಶದಲ್ಲಿ ವೈದ್ಯಲೋಕಕ್ಕೆ ಇಂದು ಅತಿ ಬೇಡಿಕೆಯಾದ ಡ್ರ್ಯಾಗನ್ ಫ್ರೂಟ್ ತೋಟಗಾರಿಕೆ ಬೆಳೆ ಈಗ ಎಲ್ಲರ ಗಮನ ಸೆಳೆದಿದೆ.

ಬಂಗಾರದ ಮನುಷ್ಯನ ಚಲನ ಚಿತ್ರದ ಪ್ರಭಾವದಿಂದ ಕಲ್ಲಿನ ಬೊರೆಯ ನೆಲವನ್ನು ಹಸನಗೊಳಿಸಿ ಕೃಷಿಯಲ್ಲಿ ವಿಶಿಷ್ಠವಾಗಿ ಸಾಧನೆ ಮಾಡಬೇಕೆನ್ನುವ ಹಂಬಲ ಹಾಗೂ ಹಠಕ್ಕೆ ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಾಥ್ ನೀಡಿದರು.

ಕೃಷಿಯಲ್ಲಿ ಏನಾದರೂ ಹೊಸ ಪ್ರಯೋಗ ಮಾಡಬೇಕೆಂದು ಎರಡು ವರ್ಷದ ಹಿಂದೆ ಪುಣೆ ಯಿಂದ ಡ್ರ್ಯಾಗನ್ ಫ್ರೂಟ್ ಸಸಿಯನ್ನು ತಂದು ನಾಲ್ಕು ಸಾವಿರ ಗಿಡಗಳನ್ನು ಹಾಕಲಾಗಿದೆ. ಹೆಚ್ಚಾಗಿ ನೀರು ಕಡಿಮೆ ಹಾಗೂ ಮರಭೂಮಿಯಲ್ಲಿ ಬೆಳೆಯುವ ಇದರ ಮೂಲ ಮೆಕ್ಸಿಕೊ ಹಾಗೂ ಅಮೇರಿಕಾ ಎಂದು ಗುರುತಿಸಲಾಗಿದೆ.

ಕಳ್ಳಿಯ ಜಾತಿಯ ಈ ಗಿಡಕ್ಕೆ ಮಣ್ಣು ಹೆಚ್ಚು ಉತ್ತೃಷ್ಠವಾಗಿರಬೇಕಿಲ್ಲ. ನೀರು ಹೆಚ್ಚು ಅಗತ್ಯವಿಲ್ಲ. ರಸಗೊಬ್ಬರ ಹಾಗೂ ಕ್ರಿಮಿನಾಶಕ ಸಿಂಪಡಿಸುವ ಅಗತ್ಯವಿಲ್ಲ. ಈ ಬೆಳೆಗೆ ಸಿಮೆಂಟ್ ಕಂಬಗಳ ಅಗತ್ಯ ಕಂಡು ಒಂದು ಕಂಬಕ್ಕೆ 800 ರು ಖರ್ಚಿನಂತೆ ಗಾರೆಯವರ ಸಹಾಯದಿಂದ ಉತ್ಪಾದಿಸಿದ್ದಾರೆ. ಅಲ್ಲದೆ ಕೊಟ್ಟಿಗೆ ಗೊಬ್ಬರದ ಮೂಲಕ ಬೆಳೆದರೆ ಹೆಚ್ಚು ರುಚಿಯಾಗಿರುತ್ತದೆ ಎನ್ನುತ್ತಾರೆ ಯಮುನಾ ಸೂರ್ಯನಾರಾಯಣ.

13MYS 3

30 ವರ್ಷಗಳ ಫಸಲು :

ಡ್ರ್ಯಾಗನ್ ಫ್ರೂಟ್ ಬೆಳೆಯ ಒಂದು ಬಾರಿ ನೆಟ್ಟರೆ ಸುಮಾರು ಮೂವತ್ತ ವರ್ಷಗಳ ಕಾಲ ಇದು ಫಸಲು ನೀಡುತ್ತದೆ. ಪ್ರತಿ ವರ್ಷ ಮೇ ತಿಂಗಳಿಂದ ಡಿಸೆಂಬರ್ ತಿಂಗಳ ವರೆಗೆ ಈ  ಬೆಳೆ ಬರುತ್ತದೆ. ಸದ್ಯ ಎರಡನೇಯ ವರ್ಷದಲ್ಲಿ ಪ್ರತಿ ವಾರಕ್ಕೆ 40 ರಿಂದ 50 ಕೆಜಿ ಮಾತ್ರ ಬರುತ್ತದೆ. ನಂತರ ಮುಂದಿನ ವರ್ಷದಿಂದ ಸೀಜನ್ ನಲ್ಲಿ ಒಂದರಿಂದ ಎರಡು ಕ್ವಿಂಟಲ್ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ದಂಪತಿಗಳು.

ಒಂದು ಕೆ.ಜಿ ಸುಮಾರು 200 ರಿಂದ 300 ರು ಆಸು ಪಾಸಿನ ಬೆಲೆ ಸಿಗುವ ನಿರೀಕ್ಷೆ , ಲೆಕ್ಕಾಚಾರ ಮಾಡಿದ್ದಾರೆ.‌

ಡ್ರ್ಯಾಗನ್ ಫ್ರೂಟ್ ಬೆಳೆಯಲ್ಲಿ ಬಿಳಿ, ಕೆಂಪು ಹಾಗೂ ನೇರಳೆ  ಮೂರು ತೆರನಾಗಿ ಬೆಳೆಯಬಹುದು.ಮುಂಬೈ ನಗರ,ಬೆಂಗಳೂರು ಸುತ್ತ ಈ ಡ್ರ್ಯಾಗನ್ ಫ್ರೂಟ್ ಹಣ್ಣಿಗೆ ತುಂಬಾ ಬೇಡಿಕೆ ಇದೆ ಎನ್ನುತ್ತಾರೆ ಯಮುನಾ ಸೂರ್ಯನಾರಾಯಣ.

ಆರಂಭದಿಂದ ಮಧ್ಯಮ ವರ್ಗದ ಕೃಷಿ ಕುಟುಂಬ ವ್ಯಕ್ತಿಯಾಗಿದ್ದ ಯುಮುನಾರವರು ಲೇಖಕಿಯೂ ಹೌದು. ವಿಶ್ವ ಮತ್ತು ಅದರಾಚೆ ಎಂಬ ಪುಸ್ತಕವನ್ನು ಮೈಸೂರು ವಿಶ್ವ ವಿದ್ಯಾಲಯ ಪ್ರಟಿಸಿದೆ.‌

ಡ್ರ್ಯಾಗನ್ ಫ್ರೂಟ್ ಹಣ್ಣಿನಿಂದಾಗುವ ಲಾಭಗಳು :

ಡ್ರ್ಯಾಗನ್ ಫ್ರೂಟ್ ಹಣ್ಣಿನಿಂದ ಆರೋಗ್ಯಕ್ಕೆ ತುಂಬಾ ಉಪಯೋಗವಿದೆ. ಆಂಟಿ ಆಕ್ಸಿಡೆಂಟ್,ಇಮ್ಯನಿಟಿ ಪವರ್ ಹೆಚ್ಚಾಗುತ್ತದೆ, ಮಧುಮೇಹ ನಿಯಂತ್ರಣ,ಕ್ಯಾನ್ಸರ್, ಸ್ಕೀನ್ ಗ್ಲೋ ಹೀಗೆ ಇನ್ನಿತರ ಲಾಭಗಳು ದೊರಯುತ್ತವೆ ಎನ್ನುತ್ತಾರೆ ಪುತ್ರಿ ಶಿಲ್ಪಾ.

ಮೈಸೂರು ಜಿಲ್ಲೆ ಹಾಗೂ ನೆರೆ ಜಿಲ್ಲೆಯಲ್ಲಿ ಈ ಹಣ್ಣಿನ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆ ಸಿಗುವ ನಿರೀಕ್ಷೆಯಲ್ಲಿದ್ದೇವೆ.ಒಂದು ವೇಳೆ ಸಿಗದಿದ್ದರೆ ಮುಂಬೈ ಹಾಗೂ ಬೆಂಗಳೂರು ನಗರಕ್ಕೆ ಸರಬರಾಜು ಮಾಡುವ ಯೋಚನೆ ಇದೆ ಎನ್ನುತ್ತಾರೆ ಕೃಷಿ ದಂಪತಿಗಳು.

ಮಕ್ಕಳಿಬ್ಬರೂ ಇಂಗ್ಲೆಂಡ್ ದೇಶದಲ್ಲಿ ನೆಲಸಿದ್ದಾರೆ.ಈಗ ಹಿರಿಯ ಮಗಳು ಶಿಲ್ಪಾ ಭಾರತಕ್ಕೆ ಬಂದಿದ್ದು ವೆಬ್ ಲಿಂಕ್ ಮೂಲಕ ಇದಕ್ಕೆ ಸೂಕ್ತವಾದ ಮಾರುಕಟ್ಟೆ ಒದಗಿಸಲು ಸಜ್ಜಾಗಿದ್ದಾರೆ.

ತೋಟಗಾರಿಕೆ ಇಲಾಖೆಯ ನೆರವು :

ಮಾರುಕಟ್ಟೆ ಹಾಗೂ ಕೆಲವು ಸಹಾಯ ಧನ ನೀಡಲು ತೋಟಗಾರಿಕೆ ಮುಂದಾಗಿದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ವಿದ್ಯಾಸಾಗರ್ ಹೇಳುತ್ತಾರೆ.

ಹರಿಯಾನ್ ಮೂಲದ ಸುಮಾರು ಹತ್ತು ಸಾಹಿವಾಲ್ ಎಂಬ ದೇಶಿ ಹಸಗಳನ್ನು ಕೂಡ ಸಾಕಿದ್ದಾರೆ.ಅದರ ಹಾಲು,ಬೆಣ್ಣೆ,ತುಪ್ಪ ಹೀಗೆ ಅನೇಕ ಉತ್ಪನ್ನಗಳನ್ನು ಕೂಡ ಮೈಸೂರಿಗೆ ಪೂರೈಕೆಯಾಗುತ್ತಿದೆ.ಒಂದು ಕೆಜಿ ತುಪ್ಪ ತಯಾರಿಸಲು ಸುಮಾರು 32 ಲೀಟರ್ ಹಾಲ ಅಗತ್ಯವಾಗಿದೆ.ಒಂದು ಕೆಜಿ ತುಪ್ಪದ ಬೆಲೆ ಸುಮಾರು 2000 ರು ಆಗುತ್ತದೆ ಆದರೆ ಕೆಲವೆ ಜನರು ಇದರ ಮಹತ್ವ ತಿಳಿಸಿದ್ದಾರೆ ಎನ್ನುತ್ತಾರೆ ಯಮುನಾ.

ಸುಮಾರು ಏಳು ಎಕರೆ ಪ್ರದೇಶದಲ್ಲಿ ಹಸು ಸಾಕಾಣಿಕೆ, ತರಕಾರಿಗಳು, ನುಗ್ಗೆ,ಪಪ್ಪಾಯ,ನೆಲ್ಲಿಕಾಯಿ,ಮಾವು,ಅಗಸೆ,ನೇರಳ ಹೀಗೆ ವಿವಿಧ ಬೆಳೆ ಹಾಗೂ ಮರಗಳನ್ನು ಹಾಕಿದ್ದಾರೆ. ಲಕ್ಷಾಂತರ ಹಣ ಇದರ ಮೇಲೆ ಹಾಕಿದ್ದು ಇಲ್ಲಿಯ ವರೆಗೆ ಆದಾಯ ಮಾತ್ರ ಸಿಕ್ಕಿಲ್ಲ ಎನ್ನುತ್ತಾರೆ.

10 ಲಕ್ಷ ರು ವೆಚ್ಚ – ಹಣ್ಣಿಗೆ ಭಾರಿ ಬೇಡಿಕೆ :

ಒಂದು ಹೇಕ್ಟರ್ ಪ್ರದೇಶದಲ್ಲಿ ಬೆಳೆ ಬೆಳೆಯಲು ಸುಮಾರು 10 ರು ಲಕ್ಷಕ್ಕೂ ಹೆಚ್ಚು ಖರ್ಚ ಮಾಡಲಾಗಿದೆ. ಹಣ್ಣಿನ ವಿಭಾಗದಲ್ಲಿ ಸೇಬು ಹಣ್ಣಿಗಿಂತ ಡ್ರ್ಯಾಗನ್ ಫ್ರೂಟ್ ಹಣ್ಣಿಗೆ ತುಂಬಾ ಬೇಡಿಕೆ ಇದೆ.ತೋಟಗಾರಿಕೆ ಇಲಾಖೆಯಲ್ಲಿ ಅರ್ಗಾನಿಕ್ ಡ್ರ್ಯಾಗನ್ ಫ್ರೂಟ್ ಹಣ್ಣಿಗೆ ಬೇಡಿಕೆ ಬೆಳೆಗೆ ಉತ್ತಮ ಬೆಲೆ ಸಿಗಲು ಚೆರ್ಚಿಸಲಾಗಿದೆ ಎನ್ನುತ್ತಾರೆ ವಿದ್ಯಾಸಾಗರ್.
ತೋಟಗಾರಿಕೆ ಸಹಾಯಕ ಅಧಿಕಾರಿ.

ಕೃಷಿಯನ್ನು ಹವ್ಯಾಸವಾಗಿ ಸ್ವೀಕರಿಸಿ ಈ ಬೆಳೆ ಬೆಳದು ಸಾಧನೆ ಮಾಡಬೇಕೆಂಬ ಹಂಬಲ ಫಲ ನೀಡಿದೆ ಆದಾಯಕ್ಕಾಗಿ ಕಾದು ನೋಡಬೇಕು ಎನ್ನುತ್ತಾರೆ ಯುಮುನಾ ಸೂರ್ಯನಾರಾಯಣ
ಹಣ್ಣಿನ ಮಾರುಕಟ್ಟೆ ಹಾಗೂ ಅಭಿನಂದನೆಗಾಗಿ 9900725564 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.‌

  • ಜಿ. ಕೆ. ಮೈಸೂರು
Share This Article
Leave a comment