ಬೆಚ್ಚಿದ ಆಡಳಿತ: ದೇಗುಲಗಳ ತೆರವು ಕಾರ್ಯ ಸ್ಥಗಿತ-೧೬ರಂದು ಮೈಸೂರಿಗೆ ಕಾರಂತ್ ಭೇಟಿ

Team Newsnap
1 Min Read

ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹಿಂದೂ ದೇವಾಲಯಗಳ ತೆರವು ಸೂಚನೆ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಸಮಯದಲ್ಲೇ ಸಾರ್ವಜನಿಕರ ಪ್ರತಿಭಟನೆಗೆ ಬೆಚ್ಚಿರುವ ಸ್ಥಳೀಯ ಆಡಳಿತವು ತೆರವು ಕಾರ್ಯಾಚರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ.
ಈ ಮಧ್ಯೆ ಹಿಂದೂಗಳನ್ನು ಜಾಗೃತಗೊಳಿಸುವ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಭಾರತದ ಕ್ಷೇತ್ರ ಸಂಚಾಲಕ ಜಗದೀಶ್ ಕಾರಂತ್ ಸೆಪ್ಟೆಂಬರ್ ೧೬ರಂದು ಮೈಸೂರಿಗೆ ಭೇಟಿ ನೀಡಲಿದ್ದಾರೆ.


ಮೇಲಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ, ಮುಂದಿನ ಆದೇಶದವರೆಗೆ ಪಾಲಿಕೆ ಅಧಿಕಾರಿಗಳು ದೇಗುಲಗಳ ತೆರವು ಕಾರ್ಯವನ್ನು ನಿಲ್ಲಿಸಿದ್ದಾರೆ. ಇದರಿಂದ ತೆರವು ಪಟ್ಟಿಯಲ್ಲಿರುವ ೯೩ ಹಿಂದೂ ಧಾರ್ಮಿಕ ಕೇಂದ್ರಗಳ ಪ್ರಮುಖರು ನಿಟ್ಟುಸಿರುಬಿಡುವಂತಾಗಿದೆ. ದೇವಾಲಯಗಳ ಉಳಿವಿಗಾಗಿ ಹಿಂದೂ ಸಂಘಟನೆಗಳು ಜಾಗೃತಗೊಂಡಿವೆ.


ಜಿಲ್ಲಾಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲು ಹಿಂದೂ ಜಾಗರಣ ವೇದಿಕೆ ಸಿದ್ಧತೆ ನಡೆಸಿದೆ. ಮೈಸೂರಿನ ಅರಮನೆ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲೇ ಜಗದೀಶ್ ಕಾರಂತ್ ೧೬ರಂದು ನಗರಕ್ಕೆ ಬಂದು ಹಿಂದೂಗಳನ್ನುದ್ದೇಶಿಸಿ ಭಾಷಣ ಮಾಡುವರೆಂದು ಆಯೋಜಕರು ತಿಳಿಸಿದ್ದಾರೆ.

TAGGED:
Share This Article
Leave a comment