September 21, 2021

Newsnap Kannada

The World at your finger tips!

Picture Credits: MihirAkash

ವಿಶ್ವ ಸಂಸ್ಥೆ, ವಿಶ್ವ ಶಾಂತಿಯ ಹೊಣೆ ನಿರ್ವಹಿಸುವಲ್ಲಿ ವಿಫಲ ‌

Spread the love

ತಾಲಿಬಾನ್……

ಡೊನಾಲ್ಡ್ ಟ್ರಂಪ್ ಎಂಬ ಅಮೆರಿಕ ಮಾಜಿ ಅಧ್ಯಕ್ಷನ ಅನೇಕ ಎಡವಟ್ಟುಗಳಲ್ಲಿ ಆತನ ವಿದೇಶಾಂಗ ನೀತಿಯ ಒಂದು ದುಷ್ಪರಿಣಾಮ 20 ವರ್ಷಗಳ ನಂತರ ತಾಲಿಬಾನಿಗಳು ಬೆಟ್ಟ ಗುಡ್ಡ ಗಿರಿ ಶಿಖರಗಳ ಸುಂದರ ನಾಡು ಆಫ್ಘನಿಸ್ತಾನ ಮತ್ತೆ ಮಧ್ಯಕಾಲೀನ ಚಿಂತನೆಯ ತಾಲಿಬಾನಿಗಳ ಕೈವಶವಾಗಿದೆ.

ಅಮೆರಿಕ ರಷ್ಯಾದ ಶೀತಲ ಸಮರದ ಅವಧಿಯಲ್ಲಿ ಅಮೆರಿಕ ಇದೇ ತಾಲಿಬಾನಿಗಳನ್ನು ಬೆಳೆಸಿ ಆಗಿನ ರಷ್ಯಾ ಬೆಂಬಲಿತ ಅಧ್ಯಕ್ಷ ನಜೀಬುಲ್ಲಾ ಎಂಬಾತನನ್ನು ರಸ್ತೆಯಲ್ಲಿ ಅಟ್ಟಾಡಿಸಿ ವಿದ್ಯುತ್‌ ಕಂಬಕ್ಕೆ ನೇಣು ಹಾಕಲಾಯಿತು.

ಮುಂದೆ ಇದೇ ತಾಲಿಬಾನಿಗಳು ಅಲ್ಲಿನ ಅತ್ಯಂತ ದೊಡ್ಡ ಮತ್ತು ಸುಂದರ ಬುದ್ದನ ವಿಗ್ರಹವನ್ನು ದ್ವೇಷದಿಂದ ನಾಶ ಮಾಡಿದರು.

ನಂತರ ಅಮೆರಿಕದ ಮೇಲೆ ನಡೆದ ದಾಳಿಯ ಪರಿಣಾಮ ಅದರ ಬೇರುಗಳು ಆಫ್ಘನಿಸ್ತಾನ್ ತಾಲಿಬಾನಿಗಳ ಆಡಳಿತದಲ್ಲಿ ಇದೆ ಎಂದು ಪರಿಗಣಿಸಿದ ಅಮೆರಿಕ ತನ್ನ ಸೈನ್ಯ ಕಳುಹಿಸಿ ತಾಲಿಬಾನಿಗಳನ್ನು ಓಡಿಸಿ ಮತ್ತೆ ಆಫ್ಘನಿಸ್ತಾನದಲ್ಲಿ ತನ್ನ ಕೈಗೊಂಬೆ ಸರ್ಕಾರವನ್ನು ನೇಮಿಸಿತು.

ಹಾಗೆಯೇ ಯಾವುದೋ ಒಪ್ಪಂದದ ಪ್ರಕಾರ ನಿಧಾನವಾಗಿ ತನ್ನ ಸೈನಿಕರನ್ನು ಕಡಿಮೆ ಮಾಡುತ್ತಾ ಬಂದ‌ ಪರಿಣಾಮ ಹಾಗು 20 ವರ್ಷಗಳಲ್ಲಿ ಒಂದು ಉತ್ತಮ ಸೈನ್ಯ ಕಟ್ಡಲು ವಿಫಲವಾದ ಆಫ್ಘನ್ ಸರ್ಕಾರದ ಕಾರಣದಿಂದಾಗಿ ಇಂದು ಮತ್ತೆ ಅರಾಜಕತೆ ಸೃಷ್ಟಿಯಾಗಿದೆ.

ಮೂಲಭೂತವಾದ ಮತ್ತು ‌ಧರ್ಮದ ಅಮಲುಗಳು ಹೇಗೆ ಒಂದು ದೇಶವನ್ನು ನಿರಂತರವಾಗಿ ಕಾಡುತ್ತವೆ ಎಂಬುದಕ್ಕೆ ಹಲವಾರು ನಿದರ್ಶನಗಳು ಸಿಗುತ್ತದೆ. ಅದರಲ್ಲಿ ಇತ್ತೀಚಿನದು ಆಫ್ಘನಿಸ್ತಾನ.

ಆಧುನಿಕ ಭಾರತದ ಯುವಕ ಯುವತಿಯರೇ,….

ಇನ್ನಾದರು ಭಾರತ ಬಹುತ್ವದ ಮಹತ್ವ ಅರಿಯಿರಿ. ಯಾವುದೇ ಧಾರ್ಮಿಕ ಅಂಧ ಶ್ರದ್ಧೆ ಅಪಾಯಕಾರಿ.

ಭಾರತದ ನಿಜವಾದ ‌ಆತ್ಮಶಕ್ತಿ ಅಡಗಿರುವುದೇ ಮಹಾತ್ಮ ಗಾಂಧಿಯವರ ನೈತಿಕ ಪ್ರಜ್ಞೆ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಸಾಮಾಜಿಕ ಪ್ರಜ್ಞೆಯ ಆಳದಲ್ಲಿ. ಅದನ್ನು ಮರೆಯದಿರೋಣ…..

ಹಾಗೆಯೇ ವಿಶ್ವ ಶಾಂತಿಯ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲವಾದ ವಿಶ್ವಸಂಸ್ಥೆ ಇಲ್ಲಿ ನೆನಪಾಗುತ್ತಿದೆ………

ವಿಶ್ವಸಂಸ್ಥೆ……….

ಎರಡನೇ ಮಹಾಯುದ್ಧ ಮುಗಿದ ಮೇಲೆ ಅದರ ಭೀಕರತೆಗೆ ನಡುಗಿದ ವಿಶ್ವ, ಅದರಲ್ಲೂ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಮೆರಿಕ ಹಾಕಿದ ಅಣು ಬಾಂಬ್ ಉಂಟುಮಾಡಿದ ಪರಿಣಾಮ, ಜರ್ಮನಿ – ಇಟಲಿಯ ಹಿಟ್ಲರ್ ಮತ್ತು ಮುಸಲೋನಿಯಂತ ಸರ್ವಾಧಿಕಾರಿಗಳ ಹುಚ್ಚು ವರ್ತನೆಯಿಂದ ರೋಸಿ ಹೋದ ವಿಶ್ವ ನಾಯಕರು
” ವಿಶ್ವ ಸಂಸ್ಥೆ ” ಎಂಬ ವಿಶ್ವದ ಎಲ್ಲಾ ರಾಷ್ಟ್ರಗಳ ಒಕ್ಕೂಟ ರಚಿಸಿತು.

ದೇಶ ದೇಶಗಳ ನಡುವಿನ ವಿವಾದ ಬಗೆಹರಿಸಿ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಇದರ ಮುಖ್ಯ ಧ್ಯೇಯೋದ್ದೇಶ.

ಅಲ್ಲಿಂದ ಇಲ್ಲಿಯವರೆಗೂ ವಿವಿಧ ದೇಶಗಳ ನಡುವೆ ಸಾಕಷ್ಟು ಯುದ್ದಗಳು ನಡೆದಿವೆ. ಅವುಗಳನ್ನು ತಡೆಯಲು ವಿಶ್ವಸಂಸ್ಥೆ ವಿಫಲವಾಗಿದೆ. ಆದರೆ ಮೂರನೇ ಮಹಾಯುದ್ಧ ಇಲ್ಲಿಯವರೆಗೂ ನಡೆಯದಂತೆ ತಡೆಯಲು ಸಫಲವಾಗಿದೆ.

ಅಮೆರಿಕ ರಷ್ಯಾ ಇಂಗ್ಲೆಂಡ್ ಫ್ರಾನ್ಸ್ ಚೀನಾ ಈ ೫ ದೇಶಗಳು ಇದರ ಖಾಯಂ ಸದಸ್ಯರು ಮತ್ತು ವಿಶ್ವದ ಎಲ್ಲಾ ದೇಶಗಳು ಇದರ ತಾತ್ಕಾಲಿಕ ಸದಸ್ಯರು ಮತ್ತು ವಿವಿಧ ಸಮಿತಿಗಳ ಮುಖ್ಯಸ್ಥರು.

ವಿಶ್ವ ಸಂಸ್ಥೆ ತನ್ನ ಕಾರ್ಯದಲ್ಲಿ ಹೆಚ್ಚು ಯಶಸ್ವಿಯಾಗದಿರಲು ಮುಖ್ಯ ಕಾರಣ
ಈ ೫ ಶಾಶ್ವತ ಸದಸ್ಯರಿಗೆ ಇರುವ ವಿಟೋ ಅಧಿಕಾರ. ಈ ವಿಟೋ ಅಧಿಕಾರದ ಪ್ರಕಾರ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಯಾವುದೇ ನಿರ್ಣಯವನ್ನು ಸಹ ಈ ಯಾವ ಒಂದು ದೇಶ ಬೇಕಾದರೂ ವಿರುದ್ಧ ಮತ ಚಲಾಯಿಸಿ ಅದನ್ನು ವಿಫಲಗೊಳಿಸಬಹುದು. ಅದನ್ನೇ ದುರುಪಯೋಪಡಿಸಿಕೊಂಡು ಮುಖ್ಯವಾಗಿ ಅಮೆರಿಕ ಚೀನಾ ರಷ್ಯಾ ತಮ್ಮ ಸ್ವಾ ಹಿತಾಸಕ್ತಿಗಾಗಿ ವಿಶ್ವವನ್ನೇ ಅಸಹನೆ ಕೂಪಕ್ಕೆ ತಳ್ಳುತ್ತಿವೆ.

ಬಲವೇ ನ್ಯಾಯ ಎಂಬ ಮಾತು ಇಲ್ಲಿಯೂ ನಿಜವಾಗುತ್ತಿದೆ. ಬಲಿಷ್ಠರು ದುರ್ಬಲರ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಅದರಿಂದ ಶೋಷಣೆಗೆ ಒಳಗಾದವರು ಅವಕಾಶ ಸಿಕ್ಕಾಗ ಇವರ ವಿರುದ್ಧ ಹೋರಾಡುತ್ತಾರೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದೆ.

ನಾಗರಿಕತೆ ಇದಕ್ಕೆ ಉತ್ತರವಾಗಬೇಕಿತ್ತು. ಕೆಲವೇ ಕೆಲವು ದೇಶಗಳಲ್ಲಿ ಇದು ಸಾಧ್ಯವಾಗಿದೆ. ಬಹುತೇಕ ಎಲ್ಲಾ ದೇಶಗಳಲ್ಲಿ ಇದು ವಿಫಲವಾಗಿದೆ.

ವಿಶ್ವಸಂಸ್ಥೆ ಮೇಲ್ನೋಟಕ್ಕೆ ಸ್ವತಂತ್ರ ಸಂಸ್ಥೆ ಆದರೆ ಬಹುತೇಕ ಅಮೆರಿಕ ದೇಶವೇ ಇದನ್ನು ಮುನ್ನಡೆಸುತ್ತಿದೆ. ಇದೀಗ ಚೈನಾ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ.

ಕೆಲವು ಆಫ್ರಿಕನ್ ದೇಶಗಳ ಅರಾಜಕತೆ, ಇರಾಕ್, ಸಿರಿಯಾ, ಆಫ್ಘನಿಸ್ತಾನ, ಪಾಕಿಸ್ತಾನ ಮುಂತಾದ ದೇಶಗಳ ಭಯೋತ್ಪಾದನೆ, ಮೆಕ್ಸಿಕೊ ವೆನಿಜುಲಾ ಸೇರಿ ಅಮೆರಿಕ ಖಂಡದ ಕೆಲವು ದೇಶಗಳ ಅಂತರರಾಷ್ಟ್ರೀಯ ಮಾದಕದ್ರವ್ಯ ಸಾಗಣೆ, ಕೊರಿಯನ್ನರ ದ್ವೇಷ ಮುಂತಾದ ‌ವಿಷಯಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ.

ಬದಲಾದ ಕಾಲಮಾನದಲ್ಲಿ ವಿಶ್ವದ ಭೂಪಟ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಭಾರತ ಬ್ರೆಜಿಲ್ ದಕ್ಷಿಣ ಆಫ್ರಿಕಾ ಜರ್ಮನಿ ಮುಂತಾದ ಕೆಲವು ರಾಷ್ಟ್ರಗಳು ಆರ್ಥಿಕ ಮತ್ತು ಸೈನಿಕ ಬಲದ ದೃಷ್ಟಿಯಿಂದ ಪ್ರಬಲವಾಗಿ ಬೆಳೆದಿವೆ. ಅವುಗಳಿಗೆ ಖಾಯಂ ಸದಸ್ಯತ್ವ ನೀಡಿ, ಹಳೆಯ ಕಾಲದ ವಿಟೋ ಅಧಿಕಾರವನ್ನು ಹಿಂಪಡೆದು ಬಹುಮತದ ಆಧಾರದ ಪ್ರಜಾಪ್ರಭುತ್ವ ರೀತಿಯಲ್ಲಿ ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.

ಇಲ್ಲದಿದ್ದರೆ ನಾಮಕಾವಸ್ತೆಯಾಗಿ ಉಳಿದು ಮುಂದೆ ಮೂರನೇ ಮಹಾಯುದ್ಧದ ಸಾಧ್ಯತೆಯನ್ನು ತಡೆಯುವುದು ಕಷ್ಟವಾಗಬಹುದು.

ಅಂತರರಾಷ್ಟ್ರೀಯವಾಗಿ ವಿಶ್ವದ ಅನೇಕ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆ ಮತ್ತು ಶಾಂತಿಗಾಗಿ ವಿಶ್ವಸಂಸ್ಥೆಯ ಅಧಿಕಾರ ಮತ್ತು ವ್ಯಾಪ್ತಿ ಹೆಚ್ಚಿಸಬೇಕಿದೆ.

ನಮ್ಮ ದೇಶ ವಿಶ್ವಸಂಸ್ಥೆಯ ಶಾಶ್ವತ ಸದಸ್ಯತ್ವಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಪ್ರಯತ್ನಿಸುತ್ತಿದೆ. ನಮ್ಮ ನೆರೆಯ ಚೀನಾ ದೇಶದ ವಿರೋಧ ಮತ್ತು ಅಸೂಯೆಯಿಂದ ಇದು ಸಾಧ್ಯವಾಗುತ್ತಿಲ್ಲ.
ವಿಶ್ವದಲ್ಲಿ ಶಾಂತಿ ಕಾಪಾಡಲು
ಭಾರತಕ್ಕೆ ಆದಷ್ಟು ಬೇಗ ಖಾಯಂ ಸದಸ್ಯತ್ವ ಸಿಗಲಿ ಎಂದು ಆಶಿಸುತ್ತಾ……

  • ವಿವೇಕಾನಂದ. ಹೆಚ್.ಕೆ.
error: Content is protected !!