ಸಾಹಿತ್ಯವೆಂಬುದು ಸಾಮಾಜಿಕ ಬದುಕನ್ನು ಆಧರಿಸಿ ಹುಟ್ಟುವ ಸೃಜನಶೀಲ ಕ್ರಿಯೆ ಅಷ್ಟೇ ಅಲ್ಲ ಕಲೆಯೂ ಆಗಿದೆ. ಸಾಹಿತ್ಯವು ಒಳಮನಸ್ಸಿನ ಮೌಲ್ಯಗಳ ಹೊರ ನಿರೂಪಣೆಯು ಹೌದು. ಸಾಹಿತ್ಯವು ಸೃಜನಶೀಲ ವ್ಯಕ್ತಿಯ ಹೂ ಮನಸಿನಿಂದ ಹೊರಬರುವ ಸುವಾಸನೆಯ ಘಮವೂ ದಿಟ. ಹೂವು ಬಳ್ಳಿಯ ಭಾಗವಾಗಿರಬಹುದು ಆ ಹೂವಿನ ಘಮವು ಮಾತ್ರ ಸರ್ವ ಸ್ವತಂತ್ರ. ಅದು ಎಲ್ಲೆಡೆ ಹರಡಿ ಕಂಪನ್ನು ಸೂಸಿ ಬಹುದೂರ ಕ್ರಮಿಸುವಂತೆ, ಕವಿ ಮನದ ಕವಿತೆಗಳು, ಕೃತಿಗಳು, ಸಾಹಿತ್ಯದ ಹರಿವು ಅವನ ಸ್ವಂತದ್ದಾದರೂ ಆ ಸಾಹಿತ್ಯದ ಘಮವು ಸಮಾಜದ ಸಾಹಿತ್ಯದ ಓದುಗ ಮನಸುಗಳಿಗೆ ತಲುಪದೇ ಇರಲಾರದು, ತಲುಪಿ ಅದಮ್ಯ ಅಪರಿಮಿತ ಆನಂದವನ್ನು ತರದೇ ಇರದು. ಸಾಮಾಜಿಕ ಬದಲಾವಣೆಯ ಸಾಕ್ಷಾತ್ಕಾರಕ್ಕೆ ಸಾರಥಿಯಂತೆ ಈ ಸಾಹಿತ್ಯ. ವ್ಯಕ್ತಿಗತ ಬದುಕಿನ ಬದಲಾವಣೆಗೆ ಭರವಸೆಯಂತೆ ಈ ಸಾಹಿತ್ಯ.
ಒಂದು ಕೃತಿ, ಒಂದು ಕವನ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣಿನ ಮೂಲಕ ಅಥವಾ ಕಿವಿಯ ಮೂಲಕ ಅವನ ಹೃದಯಕ್ಕೆ ತಲುಪಿ ತಲ್ಲಣಗೊಳಿಸುವ ತಾಕತ್ತನ್ನು ಹೊಂದಿದೆ. ಹಾಗಾದ್ರೆ ಇದು ಹೇಗೆ ಅಂತೀರಾ! ಈ ಕೆಳಗಿನ ಸಾಲುಗಳನ್ನು ಒಮ್ಮೆ ನೋಡಿ..
“ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ
………
ತಾನು ಬಿಸಿಲಲ್ಲಿ ನಿಂತು ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳಕೊಟ್ಟು
ಹೇಗೆ ಗೆಲುವಾಗುವದೋ ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೇ ಪ್ರೀತಿ ಇಟ್ಟು
ತಾನು ಕೆಸರಲ್ಲಿ ಕುಸಿಯುತ್ತಿದ್ದರೂ ತಾವರೆಯು
ಮರಿ ದುಂಬಿಗಳ ಪೊರೆವ ತೊಟ್ಟಿಲಾಗಿ
ಹೇಗೆ ತಾಯ್ತನವನು ಪ್ರೀತಿಯಲ್ಲಿ ಮೆರೆಯುವುದು
ಹಾಗೆ ಬಾಳಿಸು ಗುರುವೇ ಕರುಣೆಯಿಟ್ಟು…’
ಈ ಮೇಲಿನ ಭಾವಗೀತೆ ಯಾರಿಗೆ ಗೊತ್ತಿಲ್ಲ ಹೇಳಿ. ಆ ಸಾಲುಗಳನ್ನು ಕೇಳುತ್ತಿದ್ದಂತೆ ಅದೇನೋ ಹೆಪ್ಪುಗಟ್ಟಿದ ದುಃಖ ದುಮ್ಮಾನಗಳನ್ನು ಮನಸಿಂದ ಮಳೆಯಾಗಿಸಿ ಹಗುರವಾಗಿ ಬಿಡೋಣ ಎಂದೆನಿಸದೆ ಇರದು. ಈ ಪ್ರೇರಣಾತ್ಮಕ ಭಾವಪೂರ್ಣ ಸಾಲುಗಳು ಯಾರು ಬರೆದದ್ದು ಎಂದು ನಾನು ನಿಮಗೆ ಹೇಳಬೇಕಾಗಿಲ್ಲ. ಚಿಂತೆಯಲ್ಲಿರುವ ವ್ಯಕ್ತಿಯ ಮನಸಿಗೆ ಸಾಂತ್ವನದ ರೀತಿಯಂತೆ, ಬದುಕಿನ ಗಮ್ಯದ ದಾರಿಯಲ್ಲಿ ಬದುಕುವ ರೀತಿಯನ್ನು ಕಲಿಸುವ ನೀತಿ ಪಾಠದಂತಿರುವ ಈ ಸಾಲುಗಳನ್ನು ಬರೆದದ್ದು ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಸಾಹಿತಿ, ಕವಿ, ಸಹೃದಯಿ ಡಾ. ಎಚ್ಎಸ್ ವೆಂಕಟೇಶ್ ಮೂರ್ತಿಯವರು.
“ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ||
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ ||
ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರೆಯಿತೇನು ನೀಲಿಬಾನಿಗೆ ||
ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ ||”
ನಾವು ಅದೆಷ್ಟು ಹತ್ತಿರದಲ್ಲಿ ಇದ್ದರೂ ಒಬ್ಬರನ್ನೊಬ್ಬರು ಅರಿಯಲಾರದೆ ಮುಂದೆ ಸಾಗುತ್ತಿರುವೆವು ಎನ್ನುವ ಮಾರ್ಮಿಕ ವ್ಯಕ್ತಿಗತ ಸಂಬಂಧಗಳ ಬಗ್ಗೆ ಬರೆದ ಇವರ ಮೇಲಿನ ಸಾಲುಗಳು ಓದುಗನ ಹೃದಯಕ್ಕೆ ತಾಕದೆ ಇರಲಾರವು.
ಹೀಗೆ ತನ್ನ ಅಕ್ಷರಗಳ ಮೂಲಕ ಕನ್ನಡಿಗರ ಮನೆ ಮನಗಳನ್ನು ತಲುಪಿದ ಈ ಅಕ್ಷರ ಮಾಂತ್ರಿಕ ಡಾ. ಎಚ್ಎಸ್ ವೆಂಕಟೇಶ್ ಮೂರ್ತಿಯವರು ಬರೆದ ಸಾಹಿತ್ಯ ಮಜಲುಗಳು ಅನೇಕ ಮತ್ತು ಅನನ್ಯ.
ತಾಪಿ, ಅಮಾನುಷರು, ಕದಿರಿನ ಕೋಟೆ, ಅಗ್ನಿ ಮುಖಿಯಂತ ಕಾದಂಬರಿಗಳು. ಬಾಣಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರಗಳೆಂಬ ಸಂಕಲನಗಳು. ಕೀರ್ತನಕಾರರು ಎಂಬ ಸಾಹಿತ್ಯ ಚರಿತ್ರೆ. ನೂರು ಮರ ನೂರು ಸ್ವರ, ಮೇಘದೂತ, ಕಥನಕವನ, ಆಕಾಶದ ಹಕ್ಕುಗಳೆಂಬ ಸಾಹಿತ್ಯ ವಿಮರ್ಶೆ. ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಸ್ವಯಂವರ, ಮೇಘ ಮಾನಸದಂತಹ ನಾಟಕಗಳು. ಹೂವಿನ ಶಾಲೆ, ಸೋನಿ ಪದ್ಯಗಳು, ಹೋಮಿ ಜಹಾಂಗೀರ್ ಬಾಬಾ, ಸೋದರಿ ನಿವೇದಿತಾ, ಬಾಹುಬಲಿ, ಅಳಿಲು ರಾಮಾಯಣ, ಚಿನ್ನಾರಿ ಮುತ್ತದಂತಹ ಮಕ್ಕಳ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ಶ್ರೀ ಎಚ್ಎಸ್ ವೆಂಕಟೇಶ್ ಮೂರ್ತಿ ರವರು ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮ ವರ್ಗದ ಕುಟುಂಬ ಒಂದರಲ್ಲಿ 23/06/1944 ರಲ್ಲಿ ಜನಿಸಿದರು. ಇಂತಹ ಸಾಹಿತ್ಯ ಶ್ರೀಮಂತ ಸಹೃದಯಿ ಸಾಹಿತಿಯ ಜನ್ಮದಿನವಿಂದು.
30 ವರ್ಷಗಳ ಗ್ರಾಮ್ಯ ಜೀವನದಿಂದ ಬೆಂಗಳೂರಿನ ನಗರ ಜೀವನಕ್ಕೆ 1973 ರಲ್ಲಿ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾಲಿಡುತ್ತಾರೆ. ಕನ್ನಡ, ಸಂಸ್ಕೃತ, ಇಂಗ್ಲೀಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ನಿರಂತರವಾದ ಅನುಸಂಧಾನವು ಇವರ ಭಾವ ಕೋಶ ಮತ್ತು ಕಾವ್ಯ ವ್ಯಕ್ತಿತ್ವವನ್ನು ನಿರ್ಮಿಸಲು ಕಾರಣವಾದವು. ಹೀಗಾಗಿ ಇವರ ಬರವಣಿಗೆಯಲ್ಲಿ ಆಧುನಿಕತೆಯು ಪರಂಪರೆಯೊಂದಿಗೆ ಬೆರೆತು ಭರವಸೆ ಕೊಡುವ ಸಾಹಿತ್ಯವಾಗಿ ಹೊರಹೊಮ್ಮಿದೆ.
ಸಾಮಾನ್ಯ ಮನುಷ್ಯನಿಗೆ ಹತ್ತಿರವಾಗಿ ಇಷ್ಟವಾಗುವಂತೆ ‘ಚಿನ್ನಾರಿ ಮುತ್ತ’ದಂತಹ ಸೊಗಸಾದ ಹಾಡುಗಳು, ‘ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು’ ಎಂಬ ಅದ್ಭುತ ಭಾವಗೀತೆಯನ್ನೂ, ‘ಕೊಟ್ರೇಶಿ ಕನಸು’ ಚಲನಚಿತ್ರದ ಎಲ್ಲಾ ಹಾಡುಗಳನ್ನು, ಅಮೇರಿಕಾ ಅಮೇರಿಕಾ ಚಿತ್ರದ ‘ಬಾನಲ್ಲಿ ತೇಲೋ ಮೋಡ’ ಎಂಬ ಜನಪ್ರಿಯ ಹಾಡನ್ನು, ಇತ್ತೀಚೆಗೆ ಬಂದ ಕಿರಿಕ್ ಪಾರ್ಟಿ ಚಿತ್ರದ ‘ತೂಗು ಮಂಚದಲ್ಲಿ ಕೂತು’ ಎಂಬ ಸೊಗಸಾದ ಹಾಡನ್ನು ಇವರೇ ಬರೆದದ್ದು.
ಅಷ್ಟೇ ಅಲ್ಲದೆ ‘ಮುಕ್ತ’ ಮತ್ತು ‘ಮಹಾಪರ್ವ’ ಧಾರಾವಾಹಿಗಳ ಟೈಟಲ್ ಸಾಂಗ್ ಗಳನ್ನು ಬರೆದದ್ದು ಬೇರಾರು ಅಲ್ಲ, ಇದೇ ಡಾ.ಎಚ್ ಎಸ್ ವೆಂಕಟೇಶ್ ಮೂರ್ತಿ ರವರು.
‘ಋತುವಿಲಾಸ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಇವರ ‘ಕುಮಾರವ್ಯಾಸ ಕತಾಂತರ’ ಕೃತಿಗೆ ವಿ. ಎಮ್ ಇನಾಮ್ದಾರ್ ಮೆಮೋರಿಯಲ್ ಅವಾರ್ಡ್ ದೊರಕಿದ್ದು, ಅವರ ‘ಹಸಿರು ರಿಬ್ಬನ್’ ಕೃತಿಗೆ 66ನೆಯ ಫಿಲಂ ಫೇರ್ ಸೌತ್ ಅವಾರ್ಡ್ ಮತ್ತು
ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರಿಗೆ ಒಲಿದು ಬಂದಿವೆ.
ಅಷ್ಟೇ ಅಲ್ಲದೆ 85 ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಕೂಡ ಇವರಾಗಿದ್ದರು.ವಿಎಯಿಂದಲೇ 40 ಸಾವಿರ ರು ಲಂಚ ಸ್ವೀಕಾರ : ಪಾಂಡವಪುರ ತಹಶೀಲ್ದಾರ್ ಲೋಕಾ ಬಲೆಗೆ
ಹೀಗೆ ಅದ್ಭುತ ಕನ್ನಡ ಸಾಹಿತ್ಯ ಸೇವೆಯನ್ನು ಸಲ್ಲಿಸುತ್ತಾ ಕನ್ನಡದ ಕಂಪನ್ನು ಎಲ್ಲೆಡೆ ಹರಡಲು ಕಾರಣರಾದ ಕನ್ನಡ ಸಾಹಿತ್ಯ ಸರಸ್ವತಿಯ ಈ ಕವಿ ಪುತ್ರನಿಗೆ ನಾವು ನೀವೆಲ್ಲ ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ, ಕನ್ನಡ ಓದುಗ ಮನಗಳ ಗೌರವವನ್ನು ಶ್ರೀಯುತರಿಗೆ ಅರ್ಪಿಸೋಣ.
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
- ಮುಡಾ ಹಗರಣ: ಬದಲಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ, ತನಿಖಾ ವರದಿ ಆಧರಿಸಿ ಸರ್ಕಾರದ ಕ್ರಮ
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ