September 26, 2021

Newsnap Kannada

The World at your finger tips!

Picture Credits: MihirAkash

ಒಂದಷ್ಟು ಹೋಲಿಕೆಗಳು….ಸತ್ಯ – ಜ್ಞಾನ – ನದಿ……..

Spread the love

ಸತ್ಯಕ್ಕೆ ಸಾವಿಲ್ಲ, ನಿಜ.
ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದೆ.
ಕೋಪಕ್ಕೆ ತುತ್ತಾಗುತ್ತದೆ. ಅಸೂಯೆಗೆ ಮಣಿಯುತ್ತದೆ. ಸ್ವಾರ್ಥಕ್ಕೆ ಸೆರೆಯಾಗುತ್ತದೆ.

ವಿಷಯ ಏನೇ ಇರಲಿ, ಕಾಲದ ಪಯಣದಲ್ಲಿ ಇರಬಹುದಾದ ಸಾರ್ವಕಾಲಿಕ ಸತ್ಯ, ತತ್‌ಕ್ಷಣದ ಸತ್ಯ, ಸಾಂಧರ್ಬಿಕ ಸತ್ಯ, ಘಟನೆಯ ಸತ್ಯ, ಊಹಾತ್ಮಕ ಸತ್ಯ, ಯಾರಿಗೂ ಎಂದಿಗೂ ಸ್ಪಷ್ಟವಾಗದ ಸತ್ಯ ಹೀಗೆ ಸತ್ಯದ ನಾನಾ ಮುಖಗಳು ಅಗ್ನಿ ಪರೀಕ್ಷೆಗೆ ಒಳಗಾಗುತ್ತಾ ತನ್ನ ಅಸ್ತಿತ್ವಕ್ಕಾಗಿ ಸದಾ ಹೋರಾಡುತ್ತಲೇ ಇರುತ್ತದೆ.

ಬಹುಶಃ ಸತ್ಯದೊಂದಿಗೆ ಹೋಲಿಸಬಹುದಾದ ಮತ್ತೊಂದು ವಿಷಯ ಜ್ಞಾನ. ಇದೂ ಸಹ ಬಹುತೇಕ ಸತ್ಯದ ಆಯಾಮಗಳನ್ನೇ ಹೊಂದಿದೆ.
ವಿವಿಧ ರೂಪಗಳಲ್ಲಿ, ವಿವಿಧ ಸಂದರ್ಭಗಳಲ್ಲಿ ಭಿನ್ನ ಭಿನ್ನ ಅರ್ಥಗಳಿಗೆ ಅವಕಾಶ ಮಾಡಿಕೊಡುತ್ತದೆ.

ಸತ್ಯ ಮತ್ತು ಜ್ಞಾನವನ್ನು ಹರಿಯುವ ಬೃಹತ್ ನದಿಗೆ ಸಮೀಕರಿಸಬಹುದು.

ಸಾಮಾನ್ಯವಾಗಿ ಬೆಟ್ಟದ ತಪ್ಪಲಿನಲ್ಲಿ ಹುಟ್ಟುವ ನದಿಗಳು ಹರಿಯುತ್ತಾ ಹರಿಯುತ್ತಾ ಸಾಗರ ಸೇರುವವರೆಗೆ ಸಾವಿರಾರು ಮೈಲಿಗಳನ್ನು ಕ್ರಮಿಸುತ್ತವೆ.
ಆ ಪಯಣದಲ್ಲಿ ಕೆಲವೊಮ್ಮೆ ಪ್ರಶಾಂತವಾಗಿ, ಇನ್ನೊಮ್ಮೆ ಭೋರ್ಗರೆಯುತ್ತಾ, ಮತ್ತೊಮ್ಮೆ ಧುಮುಕುತ್ತಾ, ಮಗದೊಮ್ಮೆ ಕೊರಕಲಿನಂತ ಇಕ್ಕಟ್ಟಾದ ಪ್ರದೇಶದಲ್ಲಿ ಚಲಿಸುತ್ತಾ, ಹಲವೊಮ್ಮೆ ವಿಶಾಲ ಪ್ರದೇಶಗಳಲ್ಲಿ ಮುನ್ನಡೆಯುತ್ತಾ ಸಾಗುತ್ತಿರುತ್ತದೆ‌.

ಸತ್ಯ ಮತ್ತು ಜ್ಞಾನಗಳ ಅರ್ಥ, ಅರ್ಥೈಸುವಿಕೆ, ಅರ್ಥಮಾಡಿಕೊಳ್ಳುವುದು ಎಲ್ಲವೂ ಬಹಳಷ್ಟು ನದಿಯ ಗುಣಲಕ್ಷಣಗಳನ್ನೇ ಹೊಂದಿದೆ.

ನದಿ ಹರಿಯುತ್ತಾ ಹರಿಯುತ್ತಾ ಸಾಗಿದಂತೆ, ಮನಸ್ಸುಗಳಲ್ಲಿ ಸತ್ಯ ಮತ್ತು ಜ್ಞಾನ ಅರಿಯುತ್ತಾ ಅರಿಯುತ್ತಾ ಬೆಳೆಯುತ್ತಿರುತ್ತದೆ. ವಯಸ್ಸು, ಪರಿಸರ, ಅನುಭವ ಬದಲಾದಂತೆ ಗ್ರಹಿಕೆಗಳು ವಿವಿಧ ಮುಖಗಳನ್ನು ತೆರೆದುಕೊಳ್ಳುತ್ತಾ ಸಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ರೂಪಕಗಳು ಕಾಣತೊಡಗುತ್ತದೆ.

ಏನೇ ಆದರೂ ಮೇಲ್ನೋಟಕ್ಕೆ ಗಮನಿಸಿದರೆ ಒಟ್ಟು ಸೃಷ್ಟಿಯ ನಿಯಂತ್ರಣದ ದೃಷ್ಟಿಯಿಂದ ಜೀವಿಗಳಲ್ಲಿ ಮನುಷ್ಯನೇ ಅತ್ಯಂತ ಬುದ್ದಿವಂತ ಪ್ರಾಣಿ ಎಂದೆನಿಸುತ್ತದೆ. ಅದರಿಂದಾಗಿ ಆತ ಸತ್ಯ ಮತ್ತು ಜ್ಞಾನವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸುವ ಚಾಕಚಕ್ಯತೆ ಬೆಳೆಸಿಕೊಂಡಿದ್ದಾನೆ. ಅದಕ್ಕೆ ಸರಿಯಾಗಿ ಜನಸಂಖ್ಯೆಯೂ ಅಭಿವೃದ್ಧಿ ಹೊಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವೂ ಕೆಲವು ಕಡೆ ಅಸ್ತಿತ್ವದಲ್ಲಿದೆ.

ಆದ್ದರಿಂದ ಸತ್ಯ ಮತ್ತು ಜ್ಞಾನ ತನ್ನ ಮೂಲ ಸ್ವರೂಪವನ್ನು ಜನರ ಭಾವನೆಗಳ ದೃಷ್ಟಿಕೋನದಿಂದ ಕಳೆದುಕೊಳ್ಳುತ್ತಿದೆ.
ಹೇಗೆ ನದಿಗಳು ಜನರ ಒತ್ತಡದಿಂದ ಮಲಿನವಾಗತೊಡಗಿವೆಯೋ ಹಾಗೆ.

ಸತ್ಯ ಜ್ಞಾನ ನದಿಗೆ ಯಾವುದೇ ಜಾತಿ ಭಾಷೆ ಧರ್ಮ ದೇವರು ಪ್ರದೇಶ ಲಿಂಗ ವಯಸ್ಸು ಆಕಾರ ಇಲ್ಲವೇ ಇಲ್ಲ. ಅದೊಂದು ಎಲ್ಲವನ್ನೂ ಮೀರಿದ ಸ್ಥಿತಿ. ಈಗ ಅದಕ್ಕೂ ಮುಖವಾಡ ತೊಡಿಸಲಾಗಿದೆ.

ಭಾರತದ ಮಟ್ಟಿಗೆ ಇದರ ಅತ್ಯುತ್ತಮ ಉದಾಹರಣೆ…..

ಸರ್ಕಾರ ಮತ್ತು ಅದರ ನೇತೃತ್ವ ವಹಿಸುವ ಪಕ್ಷಗಳು ಬದಲಾದಂತೆ ಇತಿಹಾಸವೂ ಹೊಸ ಅರ್ಥದೊಂದಿಗೆ ಬದಲಾಗುತ್ತಿದೆ‌.
ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಎಡ ಬಲ ಪಂಥಗಳು, ವಿವಿಧ ರಾಜಕೀಯ ನಾಯಕರು ತಮಗೆ ಇಷ್ಟಬಂದಂತೆ ಸತ್ಯ ಮತ್ತು ಜ್ಞಾನದ ಆಧಾರದಲ್ಲಿ ತಿರುಚುವಿಕೆಯನ್ನು ಗಮನಿಸಿದಾಗ ನೆನಪಾದದ್ದು
” ಸತ್ಯ – ಜ್ಞಾನ – ನದಿಗಳ ” ಸಮೀಕರಣ.

ನೀವು ಸಹ ಬದುಕಿನ – ಸಮಾಜದ ಅನೇಕ ಘಟನೆಗಳನ್ನು ಅನುಭವದೊಂದಿಗೆ ಬೆರೆಸಿ
ಸತ್ಯ ಮತ್ತು ಜ್ಞಾನದ ಬೆಳಕಿನಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ. ಆಗ ಇವುಗಳ ಚಲಿಸುವಿಕೆ, ಬದಲಾದ ಅರ್ಥಗಳು, ಪರಿಣಾಮಗಳು, ಭಾವನೆಗಳು ಎಲ್ಲವೂ ಪದರಗಳಂತೆ ತೆರೆದುಕೊಳ್ಳುತ್ತದೆ.

ಜ್ಞಾನದ ಬೆಳಕಿನಲ್ಲಿ,
ನದಿಯ ಹರಿವಿನಲ್ಲಿ,
ಸತ್ಯದ ದಾರಿಯಲ್ಲಿ,

ಬದುಕಿನ ಮಾರ್ಗದ ಹುಡುಕಾಟದ ಒಂದು ಸಣ್ಣ ಪ್ರಯತ್ನ……….
ಆತ್ಮವಿಮರ್ಶೆಗಾಗಿ…….

ವಿವೇಕಾನಂದ. ಹೆಚ್.ಕೆ.

error: Content is protected !!