March 31, 2023

Newsnap Kannada

The World at your finger tips!

thulasi

ತುಳಸಿ ಹಬ್ಬ ಆಚರಣೆಯ ಮಹತ್ವ (Thulsi Habba)

Spread the love

ಕಾರ್ತಿಕ ಮಾಸದ ಶುದ್ಧ ದ್ವಾದಶಿಯಂದು ಆಚರಿಸುವ ಹಬ್ಬವೇ ತುಳಸಿ ವಿವಾಹ. ಇದನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯುವರು. ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ದ್ವಾದಶಿಯಂದು ವಿಷ್ಣು ಸ್ವರೂಪಿ ನೆಲ್ಲಿಕಾಯಿ ಗಿಡದೊಂದಿಗೆ ತುಳಸಿಯ ವಿವಾಹವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು.

ತುಳಸಿ ವಿವಾಹ

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ | ಯದಗ್ರೇ ಸರ್ವ ವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್||

ಉತ್ಥಾನ ದ್ವಾದಶಿಯಂದು ತುಳಸಿ ಕಟ್ಟೆಯನ್ನು ತೊಳೆದು ಅದಕ್ಕೆ ರಂಗೋಲಿ, ಹೂವು, ಮಾವಿನ ಎಲೆಗಳಿಂದ ಅಲಂಕರಿಸಿ ವಿಷ್ಣುವಿನ ಅವತಾರ ಕೃಷ್ಣನ ಮೂರ್ತಿಯನ್ನಿರಿಸಿ ಪೂಜಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಇದ್ದಷ್ಟೇ ಸಂಭ್ರಮ ಈ ತುಳಸಿ ವಿವಾಹ ಆಚರಣೆಯಲ್ಲೂ ಇರುತ್ತದೆ.

ಹೆಂಗಳೆಯರು ತುಳಸಿ ಗಿಡವನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಾರೆ. ವಿಷ್ಣುವಿನ ಅಥವಾ ಅವನ ಅವತಾರವಾದ ಕೃಷ್ಣ, ಇಲ್ಲವೇ ಸಾಲಿಗ್ರಾಮ ಕಲ್ಲು, ಇಲ್ಲವೇ ನೆಲ್ಲಿಕಾಯಿ ಗಿಡವನ್ನು ತುಳಸಿ ಗಿಡದ ಪಕ್ಕ ಇಟ್ಟು ಅಲಂಕರಿಸುತ್ತಾರೆ. ವಿಷ್ಣುವಿನ ಭಾವಚಿತ್ರ ಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ಮದುವೆಯ ಶಾಸ್ತ್ರ ಮಾಡಲಾಗುತ್ತದೆ. ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಯುವ ಆಚರಣೆಯಂತೆಯೇ ವಿಷ್ಣು-ತುಳಸಿ ವಿವಾಹವನ್ನು ಆಚರಿಸುತ್ತಾರೆ.

thulasi 1

ತುಳಸಿ ವಿವಾಹ ಆಚರಣೆಯ ಹಿಂದಿರುವ ಪೌರಾಣಿಕ ಕಥೆ

ಪುರಾಣದ ಪ್ರಕಾರ ವೃಂದಾ ಎಂಬ ಹೆಸರಿನ ಯುವತಿಯೇ ತುಳಸಿಗಿಡವಾಗಿ ಪರಿವರ್ತನೆಯಾಗಿರುತ್ತಾಳೆ. ಈಕೆ ಜಲಂಧರನೆಂಬ ಲೋಕಕಂಟಕ ರಾಜನ ಪತ್ನಿಯಾಗಿರುತ್ತಾಳೆ. ಆಕೆ ಮಹಾವಿಷ್ಣುವಿನ ಪರಮ ಭಕ್ತೆ. ಈಕೆಯ ಪಾತಿವ್ರತ್ಯದ ಫಲವಾಗಿ ಯಾರೂ ಸೋಲಿಸಲು ಸಾಧ್ಯವಾಗದ ಮಟ್ಟಕ್ಕೆ ಬೆಳೆಯುತ್ತಾನೆ. ತನ್ನ ಯಾರೂ ಸೋಲಿಸಲಾರರು ಎಂಬ ಅಹಂನಿಂದ ದೇವತೆಗಳಿಗೆ ಉಪಟಳ ಕೊಡಲು ಪ್ರಾರಂಭಿಸುತ್ತಾನೆ.

ಈತನ ಉಪಟಳ ಎಲ್ಲೆ ಮೀರಿದಾಗ ದೇವತೆಗಳು ಶಿವನ ಮೊರೆ ಹೋಗುತ್ತಾರೆ, ಆಗ ಶಿವನು ವಿಷ್ಣುವಿನ ಬಳಿ ಹೋಗಿ ಸಮಸ್ಯೆಯನ್ನು ನೀಗಿಸುವಂತೆ ಹೇಳುತ್ತಾನೆ. ಆಗ ವಿಷ್ಣುವು ಜಲಂಧರನ ರೂಪ ತಾಳಿ ವೃಂದಾಳ ಬಳಿಗೆ ಬಂದು ಮೋಹಿಸಿ ಆಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತಾನೆ. ಈ ಸಂದರ್ಭದಲ್ಲಿ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ.

ಇತ್ತ ತನ್ನ ಚಾರಿತ್ರ್ಯಕ್ಕೆ ಧಕ್ಕೆ ಅಗಿದ್ದು ಗೊತ್ತಾಗಿ ವೃಂಧಾ ವಿಷ್ಣುವಿಗೆ ಕಪ್ಪು ಕಲ್ಲಾಗಿ ಹೋಗು ಹಾಗೂ ನಿನಗೆ ಪತ್ನಿಯ ವಿರಹವುಂಟಾಗಲಿ ಎಂದು ಶಾಪ ನೀಡಿ ತನ್ನ ಪತಿಯ ಚಿತೆಗೆ ಹಾರಿ ದೇಹ ತ್ಯಾಗ ಮಾಡುತ್ತಾಳೆ. ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಭೋದಿನಿ ಏಕಾದಶಿಯ ದಿನ ತುಳಸಿಯನ್ನು ಮದುವೆಯಾಗುತ್ತಾನೆ ಎಂಬ ಕಥೆಯಿದೆ. ಇದರ ಸಂಕೇತವೇ ವಿಷ್ಣು-ತುಳಸಿ ವಿವಾಹ.

ಇನ್ನೊಂದು ಪುರಾಣದ ಪ್ರಕಾರ ದೇವತೆಗಳು ಹಾಗೂ ದಾನವರ ನಡುವೆ ಸಮುದ್ರ ಮಂಥನ ನಡೆದಾಗ ಕೊನೆಯಲ್ಲಿ ಅಮೃತ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಳಸಿಯೆಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ಕೂಡ ತನ್ನ ಪತ್ನಿಯಾಗಿಸುತ್ತಾನೆ ಎಂಬ ಕಥೆಯಿದೆ.

ತುಳಸಿ ಪ್ರದಕ್ಷಿಣೆ :

ಅಶ್ವತ್ಥ ವೃಕ್ಷದಂತೆ ತುಳಸಿಯಿಂದಲೂ ಮಾನವನಿಗೆ ಹೇರಳವಾಗಿ ಪ್ರಾಣಶಕ್ತಿ (ಆಮ್ಲಜನಕವು) ದೊರೆಯುವುದರಿಂದ ತುಳಸಿಗೆ ಪ್ರದಕ್ಷಿಣೆ ಹಾಕುವುದು ಉಪಯುಕ್ತವಾಗಿದೆ.

ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:

ತುಳಸಿ ವನ ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸ ಮಾಡುತ್ತಾನೆ. 

ತುಳಸಿಯಿಂದಾಗುವ ಆಧ್ಯಾತ್ಮಿಕ ಮತ್ತು ಶಾರೀರಿಕ ಪ್ರಯೋಜನಗಳು:

ತುಳಸಿ ನೀರಿನ ಪ್ರೋಕ್ಷಣೆ ಅಥವಾ ಸಿಂಪಡಿಸುವುದರ ಮೂಲಕ ಮನೆಯನ್ನು, ವಸ್ತುಗಳನ್ನು ಹಾಗೂ ವ್ಯಕ್ತಿಯನ್ನು ಶುದ್ಧಗೊಳಿಸಲಾಗುವುದು. ಒಂದು ಹನಿ ತುಳಸಿಯ ನೀರು ಅತ್ಯಂತ ಪವಿತ್ರ ಶಕ್ತಿಯನ್ನು ಒಳಗೊಂಡಿರುತ್ತದೆ. ವಿವಿಧ ಅನಾರೋಗ್ಯಗಳನ್ನು ಬಹುಬೇಗ ನಿವಾರಿಸುವ ಶಕ್ತಿಯನ್ನು ತುಳಸಿ ಎಲೆಗಳು ಒಳಗೊಂಡಿವೆ.

ತುಳಸಿಯಲ್ಲಿ ರಾಮ ತುಳಸಿ, ಕೃಷ್ಣ ತುಳಸಿ ಹಾಗೂ ರಾಜ ತುಳಸಿ ಎಂಬ ಅನೇಕ ಪ್ರಭೇದಗಳಿವೆ. ರಾಮ ತುಳಸಿಯ ಬಣ್ಣವು ಬಿಳಿ, ಕೃಷ್ಣ ತುಳಸಿಯು ಸ್ವಲ್ಪ ಕಪ್ಪು. ರಾಮ ತುಳಸಿಯಿಂದ ಶ್ರೀರಾಮನ ತಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. ಕೃಷ್ಣ ತುಳಸಿಯಿಂದ ಅನಿಷ್ಟ ಶಕ್ತಿಗಳ ನಾಶಕ್ಕೆ ಪೂರಕವಾದ ಶ್ರೀಕೃಷ್ಣನ ಮಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ.

ತುಳಸಿ ಕಷಾಯವು ಕೆಮ್ಮು, ನೆಗಡಿ, ಶೀತ, ಶ್ಲೇಷ್ಮಾದಿಗಳ ನಿವಾರಕವಾಗಿದೆ. ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯಿಂದ ಕೂಡಿರುವ ತುಳಸಿ ದಳವನ್ನು ಬಳಸದೆ ದೇವತಾ ಪೂಜಾ ಕಾರ್ಯಗಳು ಸಂಪನ್ನವಾಗುವುದಿಲ್ಲ. 

ವಾಸ್ತು ಪ್ರಕಾರವೂ ತುಳಸಿ ಮಹತ್ವ ಪಡೆದುಕೊಂಡಿದ್ದು, ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಉತ್ತಮ ಫಲಗಳು ದೊರೆಯುತ್ತದೆ, ಋಣಾತ್ಮಕ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಕೊನೆಯದಾಗಿ ಎಲ್ಲರಿಗೂ ತಿಳಿದಿರುವಂತೆ ದಿನ ಬೆಳಿಗ್ಗೆ 2-3 ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

error: Content is protected !!