ಕ್ರಾಂತಿಕಾರಿ ಭಗತ್ ಸಿಂಗ್

Team Newsnap
3 Min Read

ಕೆಚ್ಚೆದೆಯ ಸ್ವಾತಂತ್ರ್ಯ ವೀರರಾದ ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜ್‌ಗುರು ಹುತಾತ್ಮರಾದ ದಿನವಿಂದು.

raj guru

ಭಗತ್ ಸಿಂಗ್ ಮಾಹಿತಿ

ಪೂರ್ಣ ಹೆಸರು – ಭಗತ್ ಸಿಂಗ್ ಸಂಧು

ಭಗತ್ ಸಿಂಗ್ ಜನ್ಮದಿನ – ಸೆಪ್ಟೆಂಬರ್ 27, 1907

ಭಗತ್ ಸಿಂಗ್ ಸಾವಿನ ದಿನಾಂಕ/ಭಗತ್ ಸಿಂಗ್ ಗಲ್ಲು ಶಿಕ್ಷೆಯ ದಿನಾಂಕ – ಮಾರ್ಚ್ 23, 1931

ವಯಸ್ಸು (ಸಾವಿನ ಸಮಯದಲ್ಲಿ) – 23 ವರ್ಷಗಳು

ಸೆಪ್ಟಂಬರ್ 27, 1907ರಂದು ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ (ಈಗ ಪಾಕಿಸ್ತಾನದಲ್ಲಿದೆ ) ಭಗತ್ ಸಿಂಗ್ ರವರ ಜನನವಾಯಿತು.ಇವರ ತಾಯಿ ವಿದ್ಯಾವತಿ, ತಂದೆ ಕಿಶನ್ ಸಿಂಗ್ .

ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಸಿಂಗ್ ಯುವ ಜನತೆಗೆ ಪ್ರೇರಣೆಯಾಗಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಭಗತ್ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರ ಚಿಕ್ಕಪ್ಪ ಅಜಿತ್ ಸಿಂಗ್.

ಬ್ರಿಟಿಷ್ ಆಡಳಿತದ ವಿರುದ್ಧ ಭಾರತದಲ್ಲಿ ಹೋರಾಟ ತೀವ್ರಗೊಂಡಿದ್ದ ಸಂದರ್ಭ. ಎಲ್ಲರೂ ಭಾರತ ಮಾತೆಯನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಪಣತೊಟ್ಟಿದ್ದರು. ಅದರಲ್ಲಿ ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜ್‌ಗುರು ಅವರೂ ಮುಂಚೂಣಿಯಲ್ಲಿದ್ದರು.

ಅವರು ನನ್ನನ್ನು ಕೊಲ್ಲಬಹುದು. ಆದರೆ, ನನ್ನ ಚಿಂತನೆಗಳನ್ನು ಕೊಲ್ಲಲು ಸಾಧ್ಯವಿಲ್ಲ ,ಕ್ರಾಂತಿಯ ಖಡ್ಗವು ಪ್ರಖರ ವಿಚಾರಧಾರೆಗಳಿಂದ ಹರಿತಗೊಂಡಿದೆ.ವಿಮರ್ಶೆ ಮತ್ತು ಸ್ವತಂತ್ರ ಚಿಂತನೆಯು ಕ್ರಾಂತಿಕಾರಿಗಳಿಗೆ ಇರಬೇಕಾದ ಎರಡು ಅನಿವಾರ್ಯ ಗುಣಗಳಾಗಿವೆ,

ಹೀಗೆ ತನ್ನ ಜೀವನವನ್ನೇ ಈ ದೇಶಕ್ಕೆ ಮುಡಿಪಾಗಿಟ್ಟವರು ಈ ಮೂವರು. ಚಿಕ್ಕವಯಸ್ಸಿನಲ್ಲೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ ಇವರು ದೇಶ ದಾಸ್ಯದ ಸಂಕೋಲೆಯಿಂದ ಬಂಧ ಮುಕ್ತವಾಗಬೇಕೆಂದು ಪಣತೊಟ್ಟಿದ್ದರು.

ತಮ್ಮ ಸ್ವಂತ ಜೀವನವನ್ನು ಮರೆತು ಅನುಕ್ಷಣವೂ ಇವರು ದೇಶದ ಒಳಿತಿಗಾಗಿಯೇ ಚಿಂತನೆ ನಡೆಸುತ್ತಿದ್ದರು. ಜನರಲ್ಲಿ ಸ್ವಾತಂತ್ರ್ಯದ ಚಿಂತನೆಯನ್ನು ಬಡಿದೆಬ್ಬಿಸುತ್ತಿದ್ದರು. ಬ್ರಿಟಿಷ್ ಆಡಳಿತವನ್ನೇ ಎದುರಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ ಈ ಮೂವರ ಜೀವನ ನಿಜಕ್ಕೂ ಸ್ಫೂರ್ತಿ, ಆದರಣೀಯ, ಅನುಕರಣೀಯ…

ಮಹಾತ್ಮಾ ಗಾಂಧಿಯವರ ಅಹಿಂಸಾವಾದದ ಬಗ್ಗೆ ಭಗತ್ ಸಿಂಗ್‌ಗೆ ಹೆಚ್ಚು ನಂಬಿಕೆ ಇರಲಿಲ್ಲ .ಮದುವೆಯಾಗಲು ನಿರಾಕರಿಸಿದ ಅವರು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು.

ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದ ಅವರು ಬ್ರಿಟಿಷ್ ಪೊಲೀಸರಿಗೆ ಶರಣಾದರು. ಆದರೆ ಬಾಂಬ್ ಎಸೆತದಿಂದ ಯಾವುದೇ ಸಾವುನೋವು ಆಗಿರಲಿಲ್ಲ. ಬ್ರಿಟಿಷರ ಗಮನ ಸೆಳೆದು ಸತ್ಯ ಅರುಹುವುದೇ ಭಗತ್, ಅವನ ಗೆಳೆಯರ ಉದ್ದೇಶವಾಗಿತ್ತು. ಹೀಗಾಗಿ, ರಿವಾಲ್ವಾರ್ ಎಸೆದು, ತಪ್ಪಿಸಿಕೊಳ್ಳುವ ಪ್ರಯತ್ನ ಕೂಡ ಮಾಡದೆ ‘ಇನ್ಕ್ವಿಲಾಬ್ ಜಿಂದಾಬಾದ್’ ಎಂದು ಕೂಗುತ್ತಲೇ ಸೆರೆಯಾದರು.

“ಕ್ರಾಂತಿ ಎಂದರೆ ಅದರಲ್ಲಿ ರಕ್ತಮಯ ಕಲಹ ಇರಬೇಕು ಎಂದೇನೂ ಇಲ್ಲ. ಹಾಗೆಯೇ ವೈಯುಕ್ತಿಕ ದ್ವೇಷಕ್ಕೂ ಇದರಲ್ಲಿ ಅವಕಾಶ ಇಲ್ಲ. ಬಾಂಬ್ ಮತ್ತು ಪಿಸ್ತೂಲುಗಳ ಸಂಸ್ಕೃತಿ ಅಲ್ಲ. ನಮ್ಮ ಪ್ರಕಾರ ಕ್ರಾಂತಿ ಎಂದರೆ ಎದ್ದು ಕಾಣುವ ಅನ್ಯಾಯದಿಂದ ಕೂಡಿದ ಈಗಿನ ವ್ಯವಸ್ಥೆ ಬದಲಾಗಬೇಕು” ಎಂಬುದು ಭಗತ್ ಸಿಂಗ್ ಅವರ ಮಾತುಗಳು.

ಸಮಾಜವಾದ ಮತ್ತು ಸಮಾಜವಾದಿ ಕ್ರಾಂತಿಯ ಬಗೆಗಿನ ಸಾಹಿತ್ಯವನ್ನು ಅವರು ಚಿಕ್ಕ ವಯಸ್ಸಿನಲ್ಲಿಯೇ ಓದಲಾರಂಭಿಸಿದ್ದರು. ಅವರಲ್ಲಿದ ಓದಿನ ಪ್ರೀತಿ ಬದುಕಿನ ಕೊನೆಕ್ಷಣದವರೆಗೂ ಇತ್ತು.

ಭಗತ್ ಸಿಂಗ್ ಪರ ವಕೀಲ ಪ್ರಾಣನಾಥ್ ಮೆಹ್ತಾ, ಕೊನೆಯದಾಗಿ ಭೇಟಿಯಾದಾಗ ಭಗತ್ ‘ನಾನು ಹೇಳಿದ್ದ ‘The Revolutionary lenin’ ಪುಸ್ತಕ ತಂದಿದ್ದೀರಾ?’ ಎಂದು ಕೇಳಿದ್ದರು. ಪುಸ್ತಕ ಕೈಗೆ ಬರುತ್ತಿದ್ದಂತೆ ಓದಲು ಕುಳಿತೇ ಬಿಟ್ಟರು! ನಾಳೆ ನೇಣಿಗೆ ಕೊರಳುಡ್ಡುತ್ತಿರುವ ವ್ಯಕ್ತಿ ಹೀಗೆ ಇರಲು ಸಾಧ್ಯವೇ? ಎಂದು ರೋಮಾಂಚನಗೊಂಡ ಮೆಹ್ತಾ, ‘ದೇಶವಾಸಿಗಳಿಗೆ ನಿಮ್ಮ ಸಂದೇಶವೇನು?’ ಎಂದಾಗ ಭಗತ್ ಸಿಂಗ್ ಪುಸ್ತಕದಿಂದ ತಲೆಯೆತ್ತದೆ ‘ಸಾಮ್ರಾಜ್ಯಷಾಹಿಗೆ ಧಿಕ್ಕಾರ,ಇನ್ಕ್ವಿಲಾಬ್ ಜಿಂದಾಬಾದ್- ಈ ಎರಡು ಘೋಷಣೆಗಳನ್ನು ತಿಳಿಸಿ’ ಎಂದರು.

ಬ್ರಿಟಿಷ್ ಆಡಳಿತಕ್ಕೇ ಇವರು ಬಿಸಿಮುಟ್ಟಿಸಿದ್ದರು. ಬ್ರಿಟಿಷ್ ಪೊಲೀಸ್ ಅಧಿಕಾರಿಗೆ ಗುಂಡಿಕ್ಕಿದ ಆರೋಪದ ಮೇಲೆ ಅವರನ್ನು 1931ರ ಮಾರ್ಚ್ 23ರಂದು ಲಾಹೋರ್‌ನ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಹುತಾತ್ಮರಾದ ದಿನವನ್ನು (ಮಾರ್ಚ್ 23 ) ಸರ್ಕಾರಿ ರಜೆ ಎಂದು ಘೋಷಿಸಿದ್ದಾರೆ.

Share This Article
Leave a comment