ಮಳೆರಾಯನ ಅಂತರಂಗದ ಅಳಲು

Team Newsnap
4 Min Read

ಯಾಕಪ್ಪ ಮಳೆರಾಯ.ಕೊಬ್ಬು ಜಾಸ್ತಿಯಾಯ್ತ ನಿನಗೆ…..ಇಷ್ಟ ಬಂದಾಗ ಎಲ್ಲೆಂದರಲ್ಲಿ ಮಳೆ ಸುರಿಸಿ ಪ್ರವಾಹ ಸೃಷ್ಟಿಸಿ ನಮ್ಮ ಜನಗಳಿಗೆ ತೊಂದರೆ ಕೊಡುವೆ,

ಬೇಸರವಾದಾಗ ಈ ಕಡೆ ವರ್ಷ ಗಟ್ಟಲೆ ತಲೆ ಹಾಕುವುದಿಲ್ಲ………
ನೀನೇನು ರಾಜಕಾರಣಿಯೇ,
ಕುಡುಕನೇ, ಹುಚ್ಚನೇ……..
ಒಂದಷ್ಟು ಜವಾಬ್ದಾರಿ ಬೇಡವೇ ?
ತಲತಲಾಂತರದಿಂದ ಅಣ್ಣ ತಮ್ಮಂದಿರಾದ ನೀನು ಚಳಿ ಬೇಸಿಗೆ ಕಾಲಕಾಲಕ್ಕೆ ತಕ್ಕಂತೆ ಜವಾಬ್ದಾರಿ ನಿರ್ವಹಿಸುತ್ತಿದ್ದವರು ಈಗೇನು ನಿಮಗೆ ದಾಡಿ.

ಅವನು ಚಳಿ ಇದ್ದಕ್ಕಿದ್ದಂತೆ ನಡುಗಿಸಿಬಿಡುತ್ತಾನೆ. ಏನೋ ಕಾಫಿ ಟೀ ಎಣ್ಣೆ ಹೊಡೆದು ಮೈ ಬೆಚ್ಚಗೆ ಮಾಡಿಕೊಂಡು ಮತ್ತು ಬೆಂಕಿ ಕಾಯಿಸಿಕೊಂಡು ಸ್ವಲ್ಪ ಸುಧಾರಿಸಿಕೊಳ್ಳುತ್ತೇವೆ,

ಆ ಬೇಸಿಗೆಯವನು ಈಗೀಗ ಬೆಂಕಿಯುಗುಳಿ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾನೆ. ಕೆಲವರು ಸತ್ತೇ ಹೋಗುತ್ತಾರೆ. ಹೇಗೋ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಅಡಗಿ ಅವನನ್ನು ದೂರ ಇಡುತ್ತೇವೆ.

ಆದರೆ ನಿನ್ನದು ಅತಿಯಾಯಿತು. ನೀನಿರೋದು ನಮ್ಮನ್ನು ಬದುಕಿಸಲಿಕ್ಕೋ ಸಾಯಿಸಲಿಕ್ಕೋ…..

ವರುಣ ದೇವ – ಜೀವಜಲ ಎಂದು ನಿನ್ನನ್ನು ದೇವರಂತೆ ಗೌರವಿಸಿ ಪೂಜೆ ಮಾಡಿದರೆ ಹೀಗಾ ಮಾಡುವುದು…..

ಜನ ಜಾನುವಾರು ಮನೆ ಮಠ ಬೆಳೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿರುವೆಯಲ್ಲ ನಿನಗೆ ಮಾನ ಮರ್ಯಾದೆ ಇದೆಯಾ……

ನಿನಗೆ ಶಕ್ತಿ ಇದೆ ಎಂದ ಮಾತ್ರಕ್ಕೆ ಪಾಪ ಮುಗ್ಧ ಅಸಹಾಯಕ ಜನರನ್ನು ಹೀಗಾ ಭಯಪಡಿಸುವುದು…….

ನಾಚಿಕೆಯಾಗಬೇಕು ನಿನಗೆ ಮಳೆರಾಯ. ಶೇಮ್ ಶೇಮ್ ಶೇಮ್…….

ಆಗ ಮಳೆರಾಯ……..

” ಅಯ್ಯಾ ಮನುಜ, ದಯವಿಟ್ಟು ನಿಲ್ಲಿಸು ನಿನ್ನ ಬೈಗುಳ……… ನಾನು ಕೇಳಲಾರೆ…….
ನಿಜ ನನ್ನಿಂದ ನಿನಗೆ ಬಹಳ ತೊಂದರೆಯಾಗುತ್ತಿದೆ. ಅದು ನನಗೂ ಅರ್ಥವಾಗುತ್ತಿದೆ. ಆದರೆ ಏನು ಮಾಡಲಿ ನಾನು ಅಸಹಾಯಕ……..

ಅದಕ್ಕೆ ಕಾರಣ ಮಾತ್ರ ನೀನೇ……..

ನಾನು ನನ್ನ ಮೂಲ ಗುಣ ಸ್ವಭಾವದಂತೆ ಹುಟ್ಟಿನಿಂದಲೂ ಶತಶತಮಾನಗಳ ಕಾಲ ವರ್ತಿಸುತ್ತಿದ್ದೆ. ಕೆಲವೊಮ್ಮೆ ಹುಷಾರಿಲ್ಲದಿದ್ದಾಗ ಮಾತ್ರ ಒಂದಷ್ಟು ವ್ಯತ್ಯಾಸವಾಗುತ್ತಿತ್ತು.

ದಟ್ಟ ಕಾಡುಗಳು, ಗಿರಿ ಶಿಖರಗಳು, ಬಯಲು ಮರುಭೂಮಿಗಳ, ಹಿಮಾಚ್ಛಾದಿತ ಪ್ರದೇಶಗಳು ಮುಂತಾದ ವೈವಿಧ್ಯಮಯ ಸೃಷ್ಟಿಯಲ್ಲಿ ನಾನು ನನ್ನ ಜವಾಬ್ದಾರಿಯನ್ನು ಸರಿಯಾಗಿಯೇ ನಿರ್ವಹಿಸುತ್ತಿದ್ದೆ. ಬೆಟ್ಟಗಳ ಮೇಲೆ ನಿತ್ಯ ಹರಿದ್ವರ್ಣದ ಕಾಡುಗಳ ಮೇಲೆ ನಾನು ಚಲಿಸುವಾಗ ಸಂತೋಷದಿಂದ ಮಳೆ ಸುರಿಸುತ್ತಿದ್ದೆ. ಅಲ್ಲಿಂದ ಹರಿದು ಕಣಿವೆಗಳಲ್ಲಿ ಸಾಗಿ ಅಲ್ಲಲ್ಲಿ ಒಟ್ಟಾಗಿ ಸೇರಿ ಸಾಗುವಾಗ ಕೆರೆ ಕುಂಟೆ ಬಾವಿಗಳನ್ನು ಒಳಗೊಳಗೆ ತುಂಬಿಸಿ ಸಾಗರದ ಮಡಿಲು ಸೇರುತ್ತಾ ಆನಂದದಿಂದ ಇದ್ದೆ‌.

ಅಲ್ಲಿಂದ ಮತ್ತೆ ಆವಿಯಾಗಿ ಮೇಲೆ ಹಾರಿ ಮೋಡವಾಗಿ ಚಲಿಸುತ್ತಾ ನಿತ್ಯ ಕರ್ಮಗಳನ್ನು ಮಾಡುತ್ತಿದ್ದೆ. ನೀನು ಕೂಡ ನಾನು ಹರಿಯುವ ಎರಡೂ ಬದಿಯಲ್ಲಿ ಎತ್ತರದ ಅನುಕೂಲಕರ ಪ್ರದೇಶದಲ್ಲಿ ವಾಸಿಸುತ್ತಾ ಆಹಾರಕ್ಕಾಗಿ ಕೃಷಿ ಮಾಡುತ್ತಾ ಜಾನುವಾರುಗಳೊಂದಿಗೆ ಆರಾಮವಾಗಿ ಇದ್ದೆ. ನಾನು ಕೆಲವೊಮ್ಮೆ ಬರುವುದು ತಡವಾದರೂ ಅಥವಾ ಒತ್ತಡಕ್ಕೆ ಒಳಗಾಗಿ ಹೆಚ್ಚು ಸುರಿಸಿದರೂ ನಿನಗೆ ಅಂತಹ ದೊಡ್ಡ ತೊಂದರೆಯೇನು ಆಗುತ್ತಿರಲಿಲ್ಲ…….

ಯಾಕೋ ಬರಬರುತ್ತಾ ನಿನಗೆ ದುರಾಸೆ ಹೆಚ್ಚಾಯಿತೋ ಅಥವಾ ನಿನ್ನ ಸಂಖ್ಯೆ ಜಾಸ್ತಿಯಾಗಿ ನಿನಗೆ ಅನಿವಾರ್ಯವಾಯಿತೋ ಗೊತ್ತಿಲ್ಲ. ಆದರೆ ನೀನು ನನ್ನ ಮೇಲೆ ದೌರ್ಜನ್ಯ ಮಾಡಲು ಪ್ರಾರಂಭಿಸಿದೆ. ನಿನ್ನ ಅನುಕೂಲಕ್ಕಾಗಿ ನನ್ನ ಸಹಜ ಸ್ವಾಭಾವಿಕ ಹರಿವಿಗೆ ಅಡ್ಡಗಾಲು ಹಾಕಿ ಜಲಾಶಯ ನಿರ್ಮಿಸಿ ನನಗೆ ತೊಂದರೆ ಕೊಟ್ಟೆ. ಮಾನಸಿಕ ಹಿಂಸೆ ನೀಡಿದೆ.

ಅದಕ್ಕಿಂತ ಹಿಂಸೆಯಾದದ್ದು ಎಂದರೆ ನನ್ನ ನರನಾಡಿಯಂತಿದ್ದ ನಾನು ಹನಿಯುದುರಿಸಲು ನನ್ನಲ್ಲಿ ಉತ್ಸಾಹ ತುಂಬಿಸುತ್ತಿದ್ದ ಬೆಟ್ಟ ಗುಡ್ಡ ಕಾಡುಗಳನ್ನು ನೀನು ಕ್ರಮೇಣ ನಾಶಮಾಡುತ್ತಾ ಬಂದೆ, ನನ್ನ ಹೃದಯ ಭಾಗಕ್ಕೇ ಚಾಕುವಿನಿಂದ ಹಿರಿದಂತಾಯಿತು.

ಕಾರ್ಖಾನೆಗಳ – ವಾಹನಗಳ – ಕಟ್ಟಡಗಳ ದೂಳು ಹೊಗೆ ಎಲ್ಲವೂ ಸೇರಿ ಇಡೀ ನಮ್ಮ ಸಂಸಾರದ ವಾತಾವರಣವನ್ನೇ ಹದಗೆಡಿಸಿಬಿಟ್ಟೆ. ಇದು ನಮ್ಮ ಕುಟುಂಬದ ಅಸಹನೆಗೆ ಕಾರಣವಾಯಿತು. ಇದರಿಂದ ಆಗಾಗ ಘರ್ಷಣೆ, ವಿಕೋಪಗಳು ಪ್ರಾರಂಭವಾಯಿತು.

ನಾನು ಹರಿಯುವ ಜಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ನೀನು ವಾಸಿಸುತ್ತಾ ನೆಮ್ಮದಿಯಾಗಿರದೆ ಯಾರ ಮಾತಿಗೂ ಕಿವಿಗೊಟ್ಟು ನನ್ನ ಅನುಮತಿ ಇಲ್ಲದೆ ನನ್ನ ಮನಸ್ಸಿಗೆ ವಿರುದ್ದವಾಗಿ ಎತ್ತ ಕಡೆ ಬೇಕೋ ಅತ್ತ ಕಡೆ ತಿರುಗಿಸತೊಡಗಿದೆ. ಆಗಿನಿಂದ ನನ್ನ ಮಾನಸಿಕ ಸ್ಥಿತಿ ಸರಿಯಿಲ್ಲ. ನನ್ನ ಮನಸ್ಸು ನನ್ನ ನಿಯಂತ್ರಣದಲ್ಲಿ ಇಲ್ಲ.

ನಾನು ಚಲಿಸುವ ದಾರಿಗಳನ್ನೆಲ್ಲಾ ಮುಚ್ಚಿ ರಸ್ತೆ, ಸೇತುವೆ, ಮೈದಾನ ಕಟ್ಟಡಗಳನ್ನು ನಿರ್ಮಿಸಿ ನನಗೆ ಅವಮಾನ ಮಾಡಿರುವೆ.

ಒಮ್ಮೊಮ್ಮೆ ಈ ಕಡೆ ತಲೆ ಹಾಕಲೇ ಬಾರದು ಎನಿಸುತ್ತದೆ. ಆದರೂ ನಿನ್ನ ಗೋಳು ನೋಡದೆ ಬರುತ್ತೇನೆ. ಇಲ್ಲಿ ಬಂದಾಗ ಬರಿದಾದ ಬೆಟ್ಟ ಗುಡ್ಡ ಕಾಡು ನೋಡಿ ನನ್ನ ಹುಚ್ಚು ಕೆರಳಿ ಮನಸ್ಸು ಉದ್ವೇಗದಿಂದ ಎಲ್ಲೆಂದರಲ್ಲಿ ಮಳೆ ಸುರಿಸಿ ಬಿಡುತ್ತೇನೆ. ಈ ಖಾಯಿಲೆ ಏನೇ ಮಾಡಿದರೂ ವಾಸಿಯಾಗುತ್ತಿಲ್ಲ.

ಕಾರಣ ಅದಕ್ಕೆ ಔಷಧಿ ನೀಡಬೇಕಾದ ನೀನು ನನ್ನನ್ನು ನಿರ್ಲಕ್ಷಿಸಿ ಮತ್ತಷ್ಟು ಘಾಸಿ ಮಾಡುತ್ತಿರುವೆ. ಈಗ ನಿನಗೆ ತೊಂದರೆಯಾದಾಗ ನನ್ನನ್ನು ಶಪಿಸಿ ಬಾಯಿ ಬಡಿದುಕೊಳ್ಳುತ್ತಿರುವೆ.

ಏ ಮಾನವ ದಯವಿಟ್ಟು ಇನ್ನಾದರೂ ತಾಳ್ಮೆಯಿಂದ ಯೋಚಿಸಿ ನನಗೆ ತೊಂದರೆ ಕೊಡುವುದನ್ನು ನಿಲ್ಲಿಸು. ನನ್ನ ಆರೋಗ್ಯ ಸುಧಾರಿಸಲು ಅವಕಾಶ ಮಾಡಿಕೊಡು. ಆಗ ನನ್ನಿಂದ ನಿನಗೆ ಹೆಚ್ಚಿನ ತೊಂದರೆ ಇರುವುದಿಲ್ಲ. ಇಲ್ಲದಿದ್ದರೆ ನನ್ನ ಮಾನಸಿಕ ರೋಗ ಉಲ್ಬಣವಾಗಿ ಸಂಪೂರ್ಣ ಹುಚ್ಚು ಹಿಡಿಯಬಹುದು. ಆಗ ಆಗುವ ಅನಾಹುತಕ್ಕೆ ನಾನು ಜವಾಬ್ದಾರನಲ್ಲ.
ದಯವಿಟ್ಟು ನನ್ನನ್ನು ಕ್ಷಮಿಸು…….”

ಇದನ್ನು ಕೇಳಿ ಮನುಷ್ಯ ಎಲ್ಲಾ ಮುಚ್ಚಿಕೊಂಡು, ಬಾಯಿ ತೆರದು ಲಭಲಭಲಭ ಅಂತ ಕಿರುಚಿಕೊಂಡು ಓಡತೊಡಗಿದ. ಸರ್ಕಾರ ಸ್ಥಾಪಿಸಲು ಹರ ಸಾಹಸ ಮಾಡುವ ರಾಜಕಾರಣಿಗಳು, ತನ್ನ ದುರಾಸೆಗೆ ಪ್ರಕೃತಿಯ ಮೇಲೆಯೇ ದಾಳಿ ಮಾಡುವ ಜನಗಳು.

  • ವಿವೇಕಾನಂದ. ಹೆಚ್.ಕೆ.
Share This Article
Leave a comment