November 19, 2024

Newsnap Kannada

The World at your finger tips!

deepa1

ರಾಶಿ ರಾಶಿ ಹಣ, ಚಿನ್ನ, ಆಸ್ತಿ……

Spread the love

ಪ್ರತಿಬಾರಿ ಲೋಕಾಯುಕ್ತ ಅಥವಾ ಎ ಸಿ ಬಿ ದಾಳಿ ಮಾಡಿದಾಗ ಸೀಗುತ್ತಲೇ ಇರುತ್ತದೆ ಸರ್ಕಾರಿ ಅಧಿಕಾರಿಗಳ ಮನೆಗಳಲ್ಲಿ….

ಹಾಗೆಯೇ ಈಗ ನಡೆಯುತ್ತಿರುವ ಎಂ ಎಲ್ ಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಕೋಟಿ ಕೋಟಿಗಳ ಲೆಕ್ಕದಲ್ಲಿ…….

ಇತ್ತ ಕಡೆ ಆರ್ಥಿಕ ಸಂಕಷ್ಟದಿಂದ ಕುಟುಂಬದ ಸಾಮೂಹಿಕ ಆತ್ಮಹತ್ಯೆಗಳು, ನೋವಿನ ಘಟನೆಗಳು……….

ಶ್ರಮ ಪಡುವವರು ಯಾರೋ,
ಮಜಾ ಉಡಾಯಿಸುವವರು ಯಾರೋ……

ನಮ್ಮ ನಡುವೆ ಇಷ್ಟೊಂದು ವ್ಯತ್ಯಾಸ ಏಕೆ……..

ದುಡ್ಡು ನಮ್ಮ ವ್ಯವಹಾರಗಳನ್ನು ತುಂಬಾ ಶಿಸ್ತುಬದ್ಧ ಗೊಳಿಸಿ ಬದುಕನ್ನು ಹೆಚ್ಚು ಸಹನೀಯ ಮತ್ತು ತೃಪ್ತಿದಾಯಕವಾಗಿ ಮಾಡಬೇಕಾಗಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಇಡೀ ವ್ಯವಸ್ಥೆಯನ್ನು ಸಂಬಂಧಗಳನ್ನು ಮೌಲ್ಯಗಳನ್ನು ನಾಶ ಮಾಡುತ್ತಿದೆ.

ಇದನ್ನು ಗಮನಿಸಿದಾಗ ನೆನಪಾಗುತ್ತಿದೆ……..

ಹೊಟ್ಟೆ ಪಾಡಿನ ಕಳ್ಳರು ಮತ್ತು ಖಜಾನೆ ದೋಚುವವರು………

ಪಿಕ್ ಪಾಕೆಟರ್ಸ್, ಸರಗಳ್ಳರು, ಮನೆ ಕಳ್ಳರು, ಅಂಗಡಿಗಳಲ್ಲಿ ಕಳ್ಳತನ ಮಾಡುವವರು, ಮೊಬೈಲ್ ಪರ್ಸ್ ಕಳ್ಳರು, ಕತ್ತಲಿನಲ್ಲಿ ಒಂಟಿ ಜನರನ್ನು ಬೆದರಿಸಿ ದೋಚುವವರು, ಬಸ್ ನಿಲ್ದಾಣದ ಕಳ್ಳರು ಮುಂತಾದ ಸಣ್ಣಪುಟ್ಟ ಹೊಟ್ಟೆಪಾಡಿಗಾಗಿ ಮಾಡುವ ಒಂದು ಸಮೂಹ ಮತ್ತು ನೇರವಾಗಿಯೇ ಖಜಾನೆಯಿಂದ ಕೋಟಿಗಟ್ಟಲೆ ಲಂಚ ಕದಿಯುವವರು ……….

( ಗ್ಯಾಂಗ್ ಕಟ್ಟಿಕೊಂಡು, ವಕೀಲರನ್ನು ಇಟ್ಟುಕೊಂಡು, ಕಳ್ಳತನ, ದರೋಡೆ, ವಂಚನೆ ಮಾಡುವವರಿಗೆ ಮತ್ತು ದೈಹಿಕ ಹಲ್ಲೆ ಮಾಡುವವರಿಗೆ ಇದು ಅನ್ವಯವಾಗುವುದಿಲ್ಲ )

ಪಿಕ್ ಪಾಕೆಟ್ ರೀತಿಯಲ್ಲಿ ಕಳ್ಳತನ ಮಾಡುವ ಜನ ಬಹುತೇಕ ಕಡು ಬಡವರೇ ಆಗಿರುತ್ತಾರೆ. ಚಿಕ್ಕ ವಯಸ್ಸು ಮತ್ತು ಪ್ರೌಢಾವಸ್ಥೆಯಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಶಾಲೆಗೆ ಹೋಗದೆ ದಾರಿ ತಪ್ಪಿದ ಹುಡುಗರೇ ಇರುತ್ತಾರೆ.
ಬಡತನದ ನೋವು, ತಂದೆ ತಾಯಿಗಳ ಪ್ರೀತಿ ವಂಚಿತ, ಈಗಾಗಲೇ ಕಳ್ಳರಾಗಿರುವವರ ಸಹವಾಸ, ಹಣವಿಲ್ಲದವರನ್ನು ಈ ವ್ಯವಸ್ಥೆ ನೋಡುವ ಕ್ರೌರ್ಯ ಮನಸ್ಥಿತಿ, ದುಶ್ಚಟಗಳ ದಾಸರಾಗಿರುವುದು, ಭವಿಷ್ಯದ ಬಗ್ಗೆ ಕನಸು ಕಾಣುವ ಸ್ಥಿತಿಯಲ್ಲೇ ಇಲ್ಲದಿರುವುದು, ಇಲ್ಲಿಗಿಂತ ಜೈಲ್ಲೇ ಉತ್ತಮ ಎಂಬ ಭ್ರಮೆ, ಕೌಟುಂಬಿಕ ಸಂಬಂಧಗಳ ಅನುಬಂಧದ ಕೊರತೆ ಮುಂತಾದ ಕಾರಣಗಳು ಈ ವ್ಯಕ್ತಿಗಳ ಹಿನ್ನೆಲೆಯಲ್ಲಿ ಇರುತ್ತವೆ‌.

ಗಂಡಸರೇ ಇದರಲ್ಲಿ ಹೆಚ್ಚಾಗಿದ್ದರೂ ಇತ್ತೀಚೆಗೆ ಹೆಣ್ಣು ಮಕ್ಕಳು ಸಹ ತೊಡಗಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಮೂಲತಃ ಇವರು ಹುಟ್ಟಾ ಕ್ರಿಮಿನಲ್ ಗಳಲ್ಲ. ಅನಿವಾರ್ಯತೆ, ಅಸಹಾಯಕತೆ ಮತ್ತು ಸರಿಯಾದ ಮಾರ್ಗದರ್ಶನದ ಕೊರತೆ ಇದಕ್ಕೆ ಮೂಲ ಕಾರಣ.

ಇವರುಗಳಿಗೆ ತುಂಬಾ ಭಯವಿರುತ್ತದೆ. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಈ ಕೆಲಸ ಮಾಡುತ್ತಾರೆ. ಜನರಿಗೆ ಅಥವಾ ಪೋಲೀಸರಿಗೆ ಸಿಕ್ಕಿ ಹಾಕಿಕೊಂಡಾಗ ನರಕಯಾತನೆ ಅನುಭವಿಸುತ್ತಾರೆ. ತಮ್ಮ ದುರಾದೃಷ್ಟಕ್ಕೆ ಕಣ್ಣೀರಾಗುತ್ತಾರೆ. ಇದನ್ನು ಮರೆಯಲು ಮತ್ತಷ್ಟು ದುಶ್ಚಟಗಳಿಗೆ ಶರಣಾಗುತ್ತಾರೆ.

ಇವರು ತಮ್ಮ ಕೆಲಸದಲ್ಲಿ ಎಷ್ಟೇ ದೊಡ್ಡ ಮಟ್ಟದ ಯಶಸ್ಸು ಪಡೆದರು ಅದು ಬಿಡಿಗಾಸು ಮಾತ್ರವಾಗಿರುತ್ತದೆ. ಇದರಲ್ಲಿ ಯಾವುದೇ ದೊಡ್ಡ ಪ್ರಮಾಣದ ಹಣ ದೊರೆಯುವುದಿಲ್ಲ. ಸಾವಿರಗಳಲ್ಲಿ ಅಥವಾ ನೂರರ ಮಟ್ಟಕ್ಕೆ ಮಾತ್ರ ಸೀಮಿತ. ಅದು ಖರ್ಚಾದ ಮೇಲೆ ಮತ್ತೆ ಹಳೆಯ ಕೆಲಸವೇ ಗತಿ.

ಇವರು ಮೋರಿ, ಹಳೆಯ ಕಟ್ಟಡಗಳು, ಬಸ್ ರೈಲು ನಿಲ್ದಾಣದ ಮೂಲೆ ಮುಂತಾದ ಅತ್ಯಂತ ಕೊಳಕು ಸ್ಥಳಗಳಲ್ಲಿಯೂ ಆರಾಮವಾಗಿ ವಾಸ ಮಾಡುತ್ತಾರೆ. ಸಿಕ್ಕಿ ಹಾಕಿಕೊಂಡಾಗ ಪ್ರತಿರೋಧ ತೋರದೆ ಅತ್ಯಂತ ದೈನೇಸಿಯಾಗಿ ಬೇಡಿಕೊಳ್ಳುತ್ತಾರೆ. ಜೈಲಿಗೆ ಏನಾದರೂ ಹೋದರೆ ಅಲ್ಲಿ ಉತ್ತಮ ಸ್ಥಿತಿಯಲ್ಲಿ ಇರುವ ಖೈದಿಗಳಿಗೆ ಆಳುಗಳಾಗಿ ಸೇವೆ ಮಾಡುತ್ತಾರೆ. ಜಾಮೀನು ಸಿಗುವ ಕೇಸ್ ಆಗಿದ್ದರೂ ವಕೀಲರನ್ನು ನೇಮಿಸಿಕೊಳ್ಳುವ ರೀತಿ ಮತ್ತು ತಿಳಿವಳಿಕೆಯಿಲ್ಲದೆ ಬಹಳ ಕಾಲ ಜೈಲಿನಲ್ಲಿಯೇ ಕಳೆಯುತ್ತಾರೆ. ಅದೃಷ್ಟವಿದ್ದರೆ ಯಾರಾದರೂ ರೌಡಿ ಇವರಿಗೆ ಜಾಮೀನು ಕೊಡಿಸಿ ಅವರ ಅನೈತಿಕ ವ್ಯವಹಾರಕ್ಕೆ ಉಪಯೋಗಿಸಿಕೊಳ್ಳುತ್ತಾನೆ.

ಅಪರೂಪದಲ್ಲಿ ಇವರುಗಳು ಮದುವೆ ಸಂಸಾರದ ಬಂಧನಗಳಲ್ಲಿ ಸಿಲುಕಿದರು ಅದು ಯಶಸ್ವಿಯಾಗುವುದು ತುಂಬಾ ಕಡಿಮೆ.

ನಮ್ಮ ಸಮಾಜ ಕೂಡ ದೊಡ್ಡ ಮಟ್ಟದ ಕಳ್ಳರು, ದರೋಡೆಕೋರರು, ರೌಡಿಗಳು, ಭ್ರಷ್ಟರನ್ನು ನೇರವಾಗಿ ಎದುರಿಸಲು ಭಯ ಪಡುತ್ತಾರೆ. ಆದರೆ ಈ ರೀತಿಯ ಸಣ್ಣ ಪುಟ್ಟ ಹೊಟ್ಟೆಪಾಡಿನ ಕಳ್ಳರು ಸಿಕ್ಕರೆ ತಮ್ಮ ಇಡೀ ಪೌರುಷವನ್ನು ಅವರ ಮೇಲೆ ತೋರಿಸಿ ” ಧರ್ಮದೇಟು ” ಕೊಡುತ್ತಾರೆ.

ಸರ್ಕಾರದ ಸಂಬಳ ಪಡೆಯುವ ದೊಡ್ಡ ಕಳ್ಳರಾದ ಮಂಡಲ ಪಂಚಾಯತಿ ಸದಸ್ಯರಿಂದ ಮಂತ್ರಿಯವರೆಗೆ, ಜವಾನನಿಂದ ಐಎಎಸ್ ಅಧಿಕಾರಿಗಳವರೆಗೆ,
ಅಧಿಕೃತ ಕೆಲಸಕ್ಕೂ ಲಂಚ ಕೇಳಿದಾಗ ಭಯ ಭಕ್ತಿಯಿಂದ ದಕ್ಷಿಣೆಯಂತೆ ಕೊಡುವ ನಾವು ಈ ಚಿಕ್ಕ ಕಳ್ಳರ ಬಗ್ಗೆ ಮಾತ್ರ ರೌದ್ರಾವತಾರ ಪ್ರದರ್ಶಿಸುತ್ತೇವೆ. ಸಾಧ್ಯವಾದರೆ ಅವರನ್ನು ಬೆತ್ತಲೆ ಮಾಡಿ ಬೀದಿಯಲ್ಲಿ ಮೆರವಣಿಗೆ ಮಾಡುತ್ತೇವೆ.

ಇಲ್ಲಿ ನಾನು ಇವರ ಕೆಲಸಗಳನ್ನು ಸಮರ್ಥಿಸುತ್ತಿಲ್ಲ. ಈ ವ್ಯವಸ್ಥೆಯ ದೌರ್ಬಲ್ಯವನ್ನು ಗುರುತಿಸುವ ಜೊತೆಗೆ ,….
ನನ್ನ ಕಳಕಳಿಯ ಮನವಿ ಏನೆಂದರೆ,
” ನಮ್ಮಲ್ಲಿ ನಿಜವಾಗಲೂ ಕೆಚ್ಚು ಆಕ್ರೋಶ ಧೈರ್ಯ ಹೋರಾಡುವ ಮನೋಭಾವ ಇದ್ದರೆ ಅದನ್ನು ಕಣ್ಣ ಮುಂದೆಯೇ ಕಾಣುತ್ತಿರುವ, ಕೋಟಿ ಕೋಟಿ ಸಾರ್ವಜನಿಕ ಹಣ ದೋಚುತ್ತಿರುವ, ಭ್ರಷ್ಟ ಹಣದಲ್ಲಿ ಗಂಡ ಹೆಂಡತಿ ಮಕ್ಕಳೊಂದಿಗೆ ಐಷಾರಾಮಿ ಜೀವನ ಸಾಗಿಸುತ್ತಿರುವ ” ದೊಡ್ಡ ಕುಳಗಳನ್ನು ಎದುರಿಸೋಣ.
ಬಡ ಕಳ್ಳರ ಹುಟ್ಟಿಗೆ ಕಾರಣವೇ ಇವರು.

ಸಾಹಸ ಎಂದರೆ….
” ಹೊಡೆದರೆ ಆನೆಯನ್ನು ಹೊಡೆಯೋಣ ( ಬಲಿಷ್ಠ ದುಷ್ಟರನ್ನು ) ಅದೇ ಸಾಧನೆ. ಸೊಳ್ಳೆಯನ್ನಲ್ಲ .”

ಇದರ ಅರ್ಥ ಸಣ್ಣ ಕಳ್ಳರನ್ನು ಪ್ರೋತ್ಸಾಹಿಸಿ ಎಂದಲ್ಲ. ಅವರೂ ಸ್ವಲ್ಪ ಅಪಾಯಕಾರಿಯೇ ಅವರಿಗೂ ಶಿಕ್ಷೆ ಕೊಡಬೇಕು.
ಆದರೆ ಜೀವಾವಾಧಿ ಅಥವಾ ಮರಣದಂಡನೆಯಲ್ಲ…….

ಈ ರಾಜ್ಯದ ಎಲ್ಲಾ ಅಧಿಕಾರ ಮತ್ತು ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ, ಕಣ್ಣ ಮುಂದೆಯೇ ಅಧಿಕೃತವಾಗಿ ನಮ್ಮ ಖಜಾನೆ ದೋಚುತ್ತಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಬಗ್ಗೆ ಹೆಚ್ಚು ಜಾಗೃತರಾಗುವ ಸಮಯ ಬಂದಿದೆ.

ಸಮೂಹ ಸಂಪರ್ಕ ಕ್ರಾಂತಿಯ ಈ‌ ಸಂದರ್ಭದಲ್ಲಿ ಇದು ತುಂಬಾ ಕಷ್ಟವೇನೂ ಅಲ್ಲ. ಸ್ವಲ್ಪ ಸಮಾಜ ಮತ್ತು ಸರ್ಕಾರದ ಬಗ್ಗೆ ಯೋಚಿಸುವ ಸಮಯ ಮೀಸಲಿಡಿ. ನಮ್ಮ ಜನರ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ. ಪರಿವರ್ತನೆ ಖಂಡಿತ ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ……..

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!