71 ರ ಹರೆಯದ ಪ್ರಧಾನಿ ನರೇಂದ್ರ ದಾಮೋದರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು……….
ನೇರ ಹಾಗು ಸರಳವಾಗಿಯೇ ಅವರ ಆಡಳಿತಾತ್ಮಕ ವ್ಯಕ್ತಿತ್ವವನ್ನು ಗುರುತಿಸಬಹುದು. ಮಾಗಿದ ಮನಸ್ಸುಗಳಿಗೆ ತುಂಬಾ ಸಂಕೀರ್ಣವಾದುದೇನು ಅಲ್ಲ……
ಮಹತ್ವಾಕಾಂಕ್ಷಿ….
ಯಾವ ರಾಜಕೀಯ ಹಿನ್ನೆಲೆಯು ಇಲ್ಲದೆ ಸಂಘ ಪರಿವಾರದ ಆಶ್ರಯದಲ್ಲಿ ಬೃಹತ್ ಮರವಾಗಿ ಬೆಳೆದು ಈಗ ಸಂಘದ ಮೂಲ ಆಶಯ ಹಿಂದುತ್ವಕ್ಕೆ ನೆರಳಾಗಿದ್ದಾರೆ. ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರ ಮಾಡುವ ಕನಸುಗಳನ್ನು ಬಿತ್ತುತ್ತಿದ್ದಾರೆ. ತಮ್ಮನ್ನು ತಾವು ಸೂಪರ್ ಮ್ಯಾನ್ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
ಕಠಿಣ ಪರಿಶ್ರಮಿ ಮತ್ತು ಜೀವನೋತ್ಸಾಹಿ……
ದಣಿವರಿಯದ ಕೆಲಸಗಾರ, ರಾಜಕೀಯ ವಿಷಯಗಳಲ್ಲಿ ರಣೋತ್ಸಾಹಿ. ತಮ್ಮ ಉತ್ಸಾಹವನ್ನು ಸ್ವಲ್ಪವೂ ಕುಂದದಂತೆ ನೋಡಿಕೊಂಡಿದ್ದಾರೆ. ಎಂತಹ ಸಣ್ಣ ಕಾರ್ಯಕ್ರಮವಾದರು ಅದೇ ಉತ್ಸಾಹದಿಂದ ಭಾಗವಹಿಸುತ್ತಾರೆ. ಸೋಮಾರಿತನದ ಲವಲೇಶವೂ ಹೊರಗೆ ಕಾಣದಂತೆ ಚಟುವಟಿಕೆಯಿಂದ ಇರುತ್ತಾರೆ.
ದಿಟ್ಟ ಮತ್ತು ವೇಗದ ನಿರ್ಣಯಕಾರ….
ಆಡಳಿತಾತ್ಮಕ ನಿರ್ಣಯಗಳನ್ನು ತಮ್ಮ ಪಕ್ಷದ ಸಿದ್ದಾಂತಗಳಿಗೆ ಅನುಗುಣವಾಗಿ ಧೈರ್ಯದಿಂದ ಕೈಗೊಳ್ಳುತ್ತಾರೆ. ಫಲಿತಾಂಶಗಳಿಗಿಂತ ತಮ್ಮ ದಿಟ್ಟತೆಯೇ ಮುಖ್ಯವಾಗಬೇಕು ಎಂಬ ಹಂಬಲವಿದೆ.
ಬಹುಸಂಖ್ಯಾತರ ನಾಡಿ ಮಿಡಿತ ಗ್ರಹಿಸಿ ಮಾತನಾಡುವ ಮೋಡಿಗಾರ…..
ಯಾವ ಯಾವ ವಿಷಯಗಳು ಭಾವನಾತ್ಮಕವಾಗಿ ಜನಪ್ರಿಯತೆ ಗಳಿಸಬಹುದು ಎಂಬುದನ್ನು ಗ್ರಹಿಸಿ ಅದೇ ವಿಷಯಗಳನ್ನು ರೋಷಾವೇಶದಿಂದ ಮಾತನಾಡಿ ಜನರ ಮನಸ್ಸು ಗೆಲ್ಲುವ ಕಲೆಗಾರಿಕೆ ಅವರಿಗೆ ಸಿದ್ದಿಸಿದೆ…..
ಸದೃಢವಾದ ದೇಹ ಮತ್ತು ಗಟ್ಟಿ ಮನಸ್ಸು……
ಒಳ್ಳೆಯ ಹವ್ಯಾಸಗಳ ಕಾರಣದಿಂದ ಈ ವಯಸ್ಸಿನಲ್ಲೂ ಉತ್ತಮ ಆರೋಗ್ಯ ಮತ್ತು ವಿಚಲಿತರಾಗದ ಮನಸ್ಥಿತಿ ರೂಪಿಸಿಕೊಂಡಿದ್ದಾರೆ.
ಪ್ರಚಾರಪ್ರಿಯ…..
ಯಾವ ಸಿನಿಮಾ ನಟರಿಗೂ ಕಡಿಮೆ ಇಲ್ಲದ ಪ್ರಚಾರಕ್ಕಾಗಿ ಹಗಲು ರಾತ್ರಿ ಪರಿತಪಿಸುವ ಆ ರೀತಿಯ ಯಾವ ಸಭೆ ಸಮಾರಂಭಗಳನ್ನೂ ಬಿಡದ ಹುಡುಗ ಬುದ್ದಿಯ ಕ್ರೇಜಿ ಬಾಯ್…..
ಸರಳತೆಯ ಸುಣ್ಣ ಲೇಪಿತ ಶ್ರೀಮಂತಿಕೆ ಮನೋಭಾವಿ…..
ಹೆಚ್ಚು ಕಡಿಮೆ ಕೌಟುಂಬಿಕ ಬಂಧನಗಳಿಂದ ಮುಕ್ತವಾಗಿರುವ ಕಾರಣದಿಂದ ಹಣಕ್ಕಿಂತ ಅಧಿಕಾರ ಕೇಂದ್ರಿತ ಮನೋಭಾವ ಮತ್ತು ಅದರಿಂದಾಗಿಯೇ ಬಾಹ್ಯ ಸರಳತೆ – ಆಂತರಿಕ ಶ್ರೀಮಂತಿಕೆಯ ಜೀವನ ಶೈಲಿ ರೂಪಿಸಿಕೊಂಡು ಅದನ್ನೇ ತಮ್ಮ ಟ್ರೇಡ್ ಮಾರ್ಕ್ ಆಗಿ ಉಪಯೋಗಿಸಿಕೊಂಡ ಚತುರಗಾರ……
ನಿಸ್ವಾರ್ಥ ಬಣ್ಣದ ಸ್ವಾರ್ಥಿ…..
ಸೂಕ್ಷ್ಮವಾಗಿ ಗಮನಿಸಿದಾಗ ಈ ಅಂಶ ಕಾಣಸಿಗುತ್ತದೆ. ದೇಶದ ಹಿತಾಸಕ್ತಿಗಿಂತ ತನ್ನ ವ್ಯಕ್ತಿತ್ವವೇ ಹೆಚ್ಚು ಪ್ರಚಲಿತದಲ್ಲಿರಬೇಕು, ದೇಶದ ಪ್ರತಿ ಪ್ರಜೆಯ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ತನ್ನ ಪ್ರಭಾವ ಇರಬೇಕು, ತಾನೇ ಮುಖ್ಯ ಕೇಂದ್ರವಾಗಿರಬೇಕು ಎಂಬ ಸಣ್ಣತನದ ಸಹಜ ಜೀವಿ…
ವಿಫಲತೆಯನ್ನೇ ಸಫಲತೆಯಾಗಿ ಬಣ್ಣಿಸಿಕೊಳ್ಳುವ ಕಲೆಗಾರ….
ಅನೇಕ ವಿಫಲತೆಗಳು ಇದ್ದರೂ ಅದನ್ನು ತೋರ್ಪಡಿಕೊಳ್ಳದೆ ವಿರೋಧಿಗಳ ಮೇಲೆ ಅದನ್ನು ಆರೋಪಿಸಿ ಎಲ್ಲಾ ಸಫಲತೆಗಳಿಗೆ ತಾನೇ ಕಾರಣ ಎಂದು ಪರೋಕ್ಷವಾಗಿ ಜನರಿಗೆ ನಂಬಿಸುವ ಕಲೆಗಾರ……
ಒಳಗೆ ಸಾರ್ವಕರ್ ಹೊರಗೆ ಗಾಂಧಿ,
ಮಾತು ಅಂಬೇಡ್ಕರ್,
ಮನಸ್ಸು ಹೆಡ್ಗೆವಾರ್…….
ಬಹುಶಃ ನರೇಂದ್ರ ಮೋದಿ ಎಂಬ ವ್ಯಕ್ತಿಯ ನಿಜ ವ್ಯಕ್ತಿತ್ವ ಇಲ್ಲಿ ಕಾಣಬಹುದಾಗಿದೆ. ನಮ್ಮ ರಾಜಕೀಯ ವ್ಯವಸ್ಥೆಯೇ ಬಹುಮತದ ಆಧಾರವಾಗಿರುವುದರಿಂದ ಈ ರೀತಿಯ ಸಹಜ ಅಭಿನಯ ಸ್ವಾಭಾವಿಕ. ಬಹುಶಃ ಗಾಂಧಿ ನಂತರ ನಮ್ಮ ದೇಶದಲ್ಲಿ ಬಹುತೇಕ ಎಲ್ಲಾ ಜನರ ಬಾಯಲ್ಲಿ ಅತಿಹೆಚ್ಚು ಉಚ್ಚಾರಣೆಯಾಗುತ್ತಿರುವ ಹೆಸರು ಮೋದಿ.
ಸೇವೆಗಿಂತ ಹೆಚ್ಚಿನ ವ್ಯಾಪಾರಿ ಮನೋಭಾವ……….
ಆಡಳಿತಾತ್ಮಕ ಸಾಮರ್ಥ್ಯಕ್ಕಿಂತ ವ್ಯಾಪಾರಿ ಮನೋಭಾವ ಅವರ ಪ್ರತಿ ನಡೆಯಲ್ಲೂ ಕಾಣಬಹುದು. ಗುಜರಾತಿನ ಜನರ ಸಹಜ ಗುಣ ಇದು ಎಂದು ಕೇಳಲ್ಪಟ್ಟಿದ್ದೇನೆ. ಅಮಿತಾಭ್ ತೆಂಡೂಲ್ಕರ್ ಅಂಬಾನಿ ಅದಾನಿ ರತನ್ ಟಾಟಾ ಮುಂತಾದ ಅತಿಗಣ್ಯ ವ್ಯಕ್ತಿಗಳು, ಡೊನಾಲ್ಡ್ ಟ್ರಂಪ್ ಪುಟಿನ್ ಮುಂತಾದ ವಿದೇಶಗಳ ಅಧ್ಯಕ್ಷರುಗಳು, ವಿಶ್ವದ ಬೃಹತ್ ಕಂಪನಿಗಳ ಸಿಇಓಗಳು ಮುಂತಾದ ಅತಿ ಜನಪ್ರಿಯ ವ್ಯಕ್ತಿಗಳ ಒಡನಾಟಕ್ಕೆ ಕಾತರಿಸುವ ಮೋದಿಯವರ ಅಂತರಾಳದಲ್ಲಿ ಬಡವರು ನಿರ್ಗತಿಕರು ದೈನೇಸಿಗಳ ಬಗ್ಗೆ ನಿರ್ಲಕ್ಷ್ಯ ಮತ್ತು ಅಸಹನೆ ಸೂಕ್ಷ್ಮವಾಗಿ ಗಮನಿಸುವ ಎಲ್ಲರಿಗೂ ತಿಳಿಯುತ್ತದೆ.
ಆಳ ಜ್ಞಾನದ ಕೊರತೆಯ ಕಾರಣ ಕೀಳರಿಮೆ……..
ಮೇಲ್ನೋಟಕ್ಕೆ ಎಲ್ಲಾ ವಿಷಯಗಳ ಬಗ್ಗೆ ತಿಳಿದಿದೆ ಎಂಬ ಧೈರ್ಯ ಅವರಿಗೆ ಇದ್ದರೂ ವಿಷಯಗಳ ಆಳದ ಕೊರತೆ ಎದ್ದು ಕಾಣುತ್ತದೆ. ಆ ಕಾರಣಕ್ಕಾಗಿಯೇ ಭಾಷಣಗಳಲ್ಲಿ ಪ್ರವಚನ ರೂಪದ ಆದರ್ಶಗಳಿಗೆ ಒತ್ತು ಕೊಟ್ಟು ಭಾವನಾತ್ಮಕ ವಿಷಯಗಳನ್ನು, ಸ್ಥಳಿಯ ವಿಷಯಗಳನ್ನು ಪ್ರಸ್ತಾಪಿಸಿ ಜನರಿಂದ ಚಪ್ಪಾಳೆ ಗಿಟ್ಟಿಸುತ್ತಾರೆ. ಚಿಂತನೆಯ ರೂಪದ ಆಳಕ್ಕೆ ಇಳಿಯುವುದಿಲ್ಲ. ಪ್ರಧಾನಿಯಾಗಿ ಇಲ್ಲಿಯವರೆಗೂ ಒಮ್ಮೆಯೂ ಪತ್ರಿಕಾಗೋಷ್ಠಿ ನಡೆಸಿಲ್ಲ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವೂ ಅಲ್ಲ. ಕೆಲವು ಪೂರ್ವ ಯೋಜಿತ ಸಂದರ್ಶನದಲ್ಲಿ ಮಾತ್ರ ಭಾಗವಹಿಸಿದ್ದಾರೆ.
ಕನಸುಗಾರ ಮತ್ತು ಸೊಗಸುಗಾರ……
ಅಪಾರ ನೆನಪಿನ ಶಕ್ತಿ,
ದೇಶವನ್ನು ವಿಶ್ವ ದರ್ಜೆಯ ಮಟ್ಟಕ್ಕೆ ಏರಿಸಬೇಕೆಂಬ ಹಂಬಲ, ಆಧುನಿಕ ಭಾರತದ ಶಿಲ್ಪಿ ತಾನಾಗಬೇಕು ಎಂಬ ಹಿರೋಹಿಸಂ ಸ್ವಭಾವ ಅವರಲ್ಲಿರುವ ಉತ್ತಮ ಗುಣಮಟ್ಟದ ಪ್ರಾಮಾಣಿಕ ಆಶಯಗಳು. ಆದರೆ ವಾಸ್ತವದಲ್ಲಿ ಅದನ್ನು ಅನುಷ್ಠಾನಕ್ಕೆ ತರಲು ಬೇಕಾದ ಶೈಕ್ಷಣಿಕ ಸಾಮಾಜಿಕ ಆರ್ಥಿಕ ಚಿಂತನಾ ಸಾಮರ್ಥ್ಯ, ಅಧ್ಯಯನ, ಭಾರತೀಯ ಸಮಾಜದ ನೈಜ ಚಿತ್ರಣ ಅವರ ಗ್ರಹಿಕೆಗೆ ಸಿಗುತ್ತಿಲ್ಲ. ಸಾಮಾನ್ಯವಾಗಿ ಎಲ್ಲಾ ಹಂತಗಳಲ್ಲೂ ಪ್ರಾಮಾಣಿಕ ಎಂದು ನಂಬಿರುವ ವ್ಯಕ್ತಿ ಇತರರನ್ನು ಅಪ್ರಾಮಾಣಿಕರು ಎಂಬ ಅನುಮಾನದಿಂದಲೇ ನೋಡುತ್ತಾನೆ. ಇದೇ ಸ್ವಭಾವ ಮೋದಿಯವರಲ್ಲಿ ಇರುವುದರಿಂದ ಅವರು ಭಾರತ ಸಾಮಾನ್ಯ ಜನರು ನಂಬಿಕೆಗೆ ಅರ್ಹರಲ್ಲ ಎಂದೇ ಭಾವಿಸಿ ಅವರ ಸ್ವಾತಂತ್ರ್ಯ ಕಸಿದುಕೊಂಡು ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ ಪರೋಕ್ಷವಾಗಿ ಮತ್ತು ಕಡ್ಡಾಯವಾಗಿ ಡಿಜಿಟಲ್ ಇಂಡಿಯಾ ಆಡಳಿತ ವ್ಯವಸ್ಥೆ ರೂಪಿಸಲು ನಿರ್ಧರಿಸಿರುವುದು ಜೊತೆಗೆ ತೆರಿಗೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮುಖಾಂತರ ದೇಶದ ಜನರನ್ನು ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವುದು. ಇದರಲ್ಲಿ ಬಹುತೇಕ ವಿಫಲರಾಗುತ್ತಿರುವುದನ್ನು ಸಹ ಕಾಣಬಹುದು. ತಾಂತ್ರಿಕ ಬದಲಾವಣೆ ಅವಶ್ಯ ನಿಜ. ಆದರೆ ಅದು ಸ್ವ ಇಚ್ಛೆಯ ಅನುಕೂಲಕರ ಕ್ರಮವಾಗಬೇಕೆ ಹೊರತು ಕಾನೂನು ರೂಪದ ಒತ್ತಾಯ ಅಸಹಾಯಕರ ಶೋಷಣೆಗೆ ದಾರಿ ಮಾಡಿಕೊಡುತ್ತದೆ.
ಅಭಿವೃದ್ಧಿ ಆಧುನಿಕತೆಯ ತಪ್ಪು ಕಲ್ಪನೆ……
ನರೇಂದ್ರ ಮೋದಿಯವರು ಭಾರತವನ್ನು ಮೇಲಿನಿಂದ ನೋಡುತ್ತಿದ್ದಾರೆ, ಇಲ್ಲಿನ ಸಂಸ್ಕೃತಿ, ಮಾನವ ಸಂಪನ್ಮೂಲ, ಅಪಾರ ಪ್ರಾಕೃತಿಕ ಸಂಪತ್ತು ಮತ್ತು ಅದರ ಉಪಯೋಗಗಳ ಬಗ್ಗೆ ಹೆಚ್ಚಿನ ಭಾವನಾತ್ಮಕ ಪ್ರಾಮುಖ್ಯತೆ ನೀಡುತ್ತಿದ್ದಾರೆ ಮತ್ತು ಹಾಗೆಯೇ ಬಿಂಬಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ನಿಜವಾದ ಭಾರತವನ್ನು ನೋಡಬೇಕಿರುವುದು ಕೆಳಸ್ತರದ ಜೀವನಮಟ್ಟದಿಂದ. ಬಹುತೇಕ ಜನರ ಜೀವನ ಶೈಲಿ ಅದೇ ಮಟ್ಟದಲ್ಲಿ ಇದೆ. ಆಗ ಅವರು ರೂಪಿಸುವ ಕಾರ್ಯಕ್ರಮಗಳ ರೀತಿ ಬದಲಾಗಬಹುದು. ಇಲ್ಲದಿದ್ದರೆ ಶ್ರೀಮಂತರ ತೆವಲಾದ ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್ ಸ್ವಚ್ಛ ಭಾರತ್ ಬುಲೆಟ್ ಟ್ರೈನ್ ಮುಂತಾದ ವಿಷಯಗಳೇ ಪ್ರಾಮುಖ್ಯತೆ ಪಡೆಯುತ್ತದೆ. ಈ ಯೋಜನೆಗಳ ಬಗ್ಗೆ ಬೇಸರವಿಲ್ಲ. ಆದರೆ ಭಾರತದ ಜನರ ಅವಶ್ಯಕತೆ ಇದನ್ನು ಮೀರಿದ್ದು. ಟಾಟಾ ಬಿರ್ಲಾ ಅಕ್ಷಯ್ ಕುಮಾರ್ ಕೊಹ್ಲಿ ಅವರಿಗೆ ಸ್ವಚ್ಚತೆ ಮುಖ್ಯವಾಗಬಹುದು. ಈ ದೇಶದ ಇನ್ನೂ ಅಸಂಖ್ಯಾತ ಜನರಿಗೆ ಕನಿಷ್ಠ ಅವಶ್ಯಕತೆ ಪೂರೈಕೆಯ ಬದುಕೇ ಮುಖ್ಯವಾಗಿದೆ.
ಹುಡುಗ ಬುದ್ದಿ…..
ಇಂದಿನ ಯುವ ಜನಾಂಗದಲ್ಲಿ ಕಂಡು ಬರುವ ಪ್ರಾರಂಭದ ಅತ್ಯುತ್ಸಾಹ, ಸೋಷಿಯಲ್ ಮೀಡಿಯಾ ವ್ಯಸನ, ದಿಢೀರ್ ಶ್ರೀಮಂತಿಕೆಯ ಹಂಬಲ, ನಾನೇ – ನನ್ನಿಂದಲೇ ಎನ್ನುವ ಅಹಂ, ಹಣ ಅಧಿಕಾರದಿಂದಲೇ ಎಲ್ಲಾ ಸಾಧ್ಯ ಎನ್ನುವ ತಪ್ಪು ಕಲ್ಪನೆ, ಆತುರ ಮತ್ತು ಬೇಗ ಫಲಿತಾಂಶದ ನಿರೀಕ್ಷೆ, ಸೋಲನ್ನು ಒಪ್ಪಿಕೊಳ್ಳದ ಅಸಹನೆ ಮುಂತಾದ ಕೆಲವು ದುಡುಕು ಸ್ವಭಾವದ ಸಾಂಕೇತಿಕ ರೂಪದಂತೆ ಮೋದಿಯವರು ಕಾಣುತ್ತಾರೆ.
ಆರ್ಥಿಕ ಕುಸಿತ, ಪ್ರಾಕೃತಿಕ ವಿಕೋಪಗಳು, ಜನ ಸಾಮಾನ್ಯರ ಸಂಕಷ್ಟಗಳು ಮುಂತಾದ ವಿಷಯಗಳನ್ನು ಕುರಿತು ಯೋಚಿಸಿ ಅದರ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಕ್ಕಿಂತ ವಿದೇಶಾಂಗ ನೀತಿ ಮತ್ತು ಸೈನ್ಯದ ಬಲವರ್ಧನೆಗೆ ಹೆಚ್ಚಿನ ಮಹತ್ವ ನೀಡಿ ಜನರನ್ನು ಭಾವುಕವಾಗಿ ಸೆಳೆಯುವ ತಂತ್ರಗಾರಿಕೆಯ ಆಡಳಿತ ನೀಡುತ್ತಿರುವುದು ಸಹ ಗಮನಿಸಬಹುದಾದ ಅಂಶ.
ಇರಲಿ,
ಹಾಗೆಂದು ಹಿಂದಿನ ಪ್ರಧಾನಿಗಳೆಲ್ಲಾ ಸರ್ವಗುಣ ಸಂಪನ್ನರು ಎಂಬುದು ನನ್ನ ಅಭಿಪ್ರಾಯವಲ್ಲ. ಎಲ್ಲರಲ್ಲೂ ಸಾಮರ್ಥ್ಯ ಮತ್ತು ಮಿತಿಗಳು ಇದ್ದೇ ಇರುತ್ತದೆ. ಈ ಕ್ಷಣದಲ್ಲಿ ಭಾರತದ ಪ್ರಭಾವಿ ಪ್ರಧಾನಿ ನರೇಂದ್ರ ಮೋದಿಯವರು ಆಗಿರುವುದರಿಂದ ಅವರ ಹುಟ್ಟುಹಬ್ಬದ ಸಂಧರ್ಭದಲ್ಲಿ ಅವರ ಬಗ್ಗೆ ಮಾತ್ರ ಒಂದು ಸಣ್ಣ ಅಭಿಪ್ರಾಯ ಅದೂ ಮಾಧ್ಯಮಗಳಲ್ಲಿ ಅವರ ಬಗ್ಗೆ ಗಮನಿಸಿದ ಮಾಹಿತಿಯಂತೆ.
ಒಟ್ಟಿನಲ್ಲಿ ಹರದನಹಳ್ಳಿಯ ದೇವೇಗೌಡರು, ಟೀ ಮಾರಾಟಗಾರ ನರೇಂದ್ರ ಮೋದಿಯವರು ಬೃಹತ್ ಭಾರತದ ಪ್ರಧಾನಿಯ ಪಟ್ಟವೇರುವುದು ಪ್ರಜಾಪ್ರಭುತ್ವದ ಅಧ್ಬುತ ಸೌಂದರ್ಯ ನಿಜ. ಆದರೆ ಅವರ ಮನಸ್ಸುಗಳ ಸಹ ಅಷ್ಟೇ ಸೌಂದರ್ಯವೇ ಎಂಬ ಅನುಮಾನವೂ ಕಾಡುತ್ತದೆ.
ನಿಮ್ಮ ಅಭಿಪ್ರಾಯ ಇದಕ್ಕಿಂತ ಭಿನ್ನವಾಗಿದ್ದರೆ ಅದನ್ನೂ ಗೌರವಪೂರ್ವಕವಾಗಿ ಸ್ವಾಗತಿಸುತ್ತಾ ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಮುಕ್ತವಾಗಿ ಪ್ರೀತಿಯಿಂದ ಮತ್ತು ದೇಶದ ಹಿತಾಸಕ್ತಿಯಿಂದ ನನ್ನ ಅಭಿಪ್ರಾಯ ಮಂಡಿಸುತ್ತಿದ್ದೇನೆ. ಎಲ್ಲಾ ಪೂರ್ವಾಗ್ರಹ ಗಳನ್ನು ಮೀರುವ ಪ್ರಯತ್ನ ಮಾಡಿದ್ದೇನೆ.
ವಿವೇಕಾನಂದ ಹೆಚ್. ಕೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)