ನಾವು ಗುರುವಾಗುವತ್ತ ಮುನ್ನಡೆಯೋಣ..

Team Newsnap
2 Min Read

ನನಗೂ ಆಸೆ ಇತ್ತು, ಕ್ರೀಡಾ ಪಟುವಾಗಬೇಕೆಂದು,ಸಾಧ್ಯ ವಾಗಲೇ ಇಲ್ಲ. ಅನುಕೂಲ ಗಳು ಇರಲಿಲ್ಲ.

ನನಗೂ ಬಯಕೆ ಇತ್ತು, ಸಿನಿಮಾ ಸೇರಬೇಕೆಂದು, ಹಣದ ಕೊರತೆ ಕಾಡಿತ್ತು,ಅಲ್ಲಿ ಅವಕಾಶವೇ ಸಿಗಲಿಲ್ಲ.

ನನಗೂ ಆಸಕ್ತಿ ಇತ್ತು, ದೊಡ್ಡ ಅಧಿಕಾರಿ ಆಗಬೇಕೆಂದು,ಬಡತನ ಬೆನ್ನು ಏರಿತ್ತು, ಸಮಯ ಒದಗಿ ಬರಲಿಲ್ಲ.

ನನಗೂ ಕುತೂಹಲ ಇತ್ತು, ಸಾಹಿತ್ಯ ದಲ್ಲಿ ಸಾಧನೆ ಮಾಡಬೇಕೆಂದು,
ಸಂದರ್ಭ ಒದಗಿ ಬರಲಿಲ್ಲ.

ನನಗೂ ನಿರೀಕ್ಷೆ ಇತ್ತು,
ರಾಜಕೀಯ ನಾಯಕನಾಗ ಬೇಕೆಂದು, ಬದುಕು ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.

ನನಗೂ ಇಷ್ಟವಿತ್ತು,
ಧಾರ್ಮಿಕ ರಾಯಭಾರಿ ಯಾಗಬೇಕೆಂದು, ಅದಕ್ಕೆ ನಾನು ಅರ್ಹನೇ ಆಗಿರಲಿಲ್ಲ.

ನನಗೂ ಆಕಾಂಕ್ಷೆ ಇತ್ತು, ದೊಡ್ಡ ಉದ್ಯಮಿಯಾಗಬೇಕೆಂದು, ಅದೂ ಕನಸಾಗಿಯೇ ಉಳಿಯಿತು.

ರೈತನಾಗಲು ಜಮೀನು ಇಲ್ಲ, ಸೈನಿಕ ನಾಗಲು ಎತ್ತರವಿಲ್ಲ, ಕಾರ್ಮಿಕ ನಾಗಲು ಶಕ್ತಿ ಇಲ್ಲ, ಶಿಕ್ಷಕ ವೈದ್ಯ ವಕೀಲ ಇಂಜಿನಿಯರ್ ಆಗಲೂ ವಿದ್ಯಾರ್ಹತೆ ಇಲ್ಲ.

ಕನಿಷ್ಠ ಒಳ್ಳೆಯ ಮನುಷ್ಯನಾಗಲಾದರೂ ಪ್ರಯತ್ನಿಸುತ್ತಿದ್ದೇನೆ. ಅದರಲ್ಲಿ ಯಶಸ್ವಿಯಾದರೆ,
ಬದುಕು ಸಾರ್ಥಕದೆಡೆಗೆ ಸಾಗಿದಂತೆ……

ಏಕೆಂದರೆ………….

ನನ್ನ ದೇಹವೇ ನನ್ನ ಗುರು………
ಪಂಚೇಂದ್ರಿಯಗಳನ್ನು ಒಳಗೊಂಡ ಇಡೀ ಶರೀರವೇ ನನ್ನ ಗುರು,
ನನ್ನ ತಂದೆ ತಾಯಿ ಬಂಧು ಬಳಗವೇ ನನ್ನ ಗುರುಗಳು,

ಶಿಕ್ಷಕ, ಗೆಳೆಯ, ವೈದ್ಯ, ಚಾಲಕ, ಕ್ಷೌರಿಕ, ಅಗಸ, ಚಮ್ಮಾರ, ಪೂಜಾರಿ, ರೈತ, ದಾದಿ, ಪೋಲೀಸ್ ಮುಂತಾದ ಎಲ್ಲರೂ ಗುರುಗಳೇ,

ಪುಸ್ತಕ, ಬಳಪ, ವಾಹನ, ಪ್ರಾಣಿ, ಪಕ್ಷಿ, ಆಕಾಶ, ಭೂಮಿ, ನೀರು, ಕಾಡುಗಳು ಇತ್ಯಾದಿಗಳು ಗುರುಗಳೇ,

ಊಟ, ಬಟ್ಟೆ, ಜಗಳ, ಕೋಪ, ಜ್ವರ, ನೋವು, ಪ್ರೀತಿ, ಪ್ರೇಮ, ಪ್ರಣಯ, ಕಷ್ಟ, ಸುಖ ಎಲ್ಲವೂ ಗುರುಗಳೇ,

ಧರ್ಮ, ಕಾನೂನು, ಇತಿಹಾಸ, ವಿಜ್ಞಾನ, ಸಂಘರ್ಷ, ಟೀಕೆ, ಹೊಗಳಿಕೆಗಳು ಗುರುಗಳೇ,

ಕೊಲೆ, ಸುಲಿಗೆ, ವಂಚನೆ, ಅತ್ಯಾಚಾರ, ತ್ಯಾಗ, ಸೌಹಾರ್ದ, ಸಹಕಾರಗಳು ಗುರುಗಳೇ,ನೀವು, ನಿಮ್ಮ ಅಭಿಪ್ರಾಯಗಳು, ಸಲಹೆಗಳು ಎಲ್ಲವೂ ಗುರುಗಳೇ,

ಇಡೀ ಸಮಾಜವೇ ನನ್ನ ಗುರು. ನನ್ನ ಅನುಭವವೇ ನನ್ನ ಗುರು………

ಗುರುವೆಂದರೆ, ಅದೊಂದು, ವ್ಯಕ್ತಿ, ಶಕ್ತಿ, ಅರಿವು, ಗ್ರಹಿಕೆ, ದಾರಿ, ಮಾರ್ಗದರ್ಶನ ಹೀಗೆ ಎಲ್ಲವೂ ಹೌದು, ರೂಪಗಳು ಬೇರೆ ಬೇರೆ.
ಪ್ರತಿಕ್ಷಣವೂ ಗುರು ನಮ್ಮೊಂದಿಗೆ ಇರುತ್ತಾರೆ. ಗುರುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ನಾವು ಗುರುವಾಗುವತ್ತ ಮುನ್ನಡೆಯೋಣ…….
ಶಿಕ್ಷಕರ ದಿನಾಚರಣೆಯ ಶುಭಾಶಯಗಳು…..
( ಸೆಪ್ಟೆಂಬರ್ – 5 )

  • ವಿವೇಕಾನಂದ. ಹೆಚ್.ಕೆ.
Share This Article
Leave a comment