ಹೇಳುವುದನ್ನು ಮಾಡೋಣ – ಮಾಡುವುದನ್ನು ಹೇಳೋಣ

Team Newsnap
2 Min Read

ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ,
ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ.

ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ,
ಆದರೆ ನಿಜ ಜೀವನದಲ್ಲಿ ಅದೇ ರಾಜಕಾರಣಿಗಳ ಹಿಂಬಾಲಕರಾಗಿರುವಿರಿ.

ಕಥೆಗಳಲ್ಲಿ ಇಡೀ ಬದುಕನ್ನೇ ಇತರರಿಗಾಗಿ ತ್ಯಾಗ ಮಾಡುವ ಪಾತ್ರಗಳಲ್ಲಿ ನಿಮ್ಮನ್ನೇ ಕಲ್ಪಿಸಿಕೊಳ್ಳುತ್ತೀರಿ,
ಆದರೆ ವಾಸ್ತವದಲ್ಲಿ ಅದೇ ಎಲ್ಲವೂ ನನಗೆ ಇರಲಿ ಎಂದು ದುರಾಸೆ ಪಡುವಿರಿ.

ಪತ್ರಿಕೆ ಟಿವಿಗಳಲ್ಲಿ ವೃದ್ದ ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸಿದ ಮಕ್ಕಳ ವಿಷಯ ಕೇಳಿ ಶಾಪ ಹಾಕುವಿರಿ,
ಆದರೆ ನಿಮ್ಮ ಅಮ್ಮ ಅಪ್ಪನಿಗಾಗಿ ವೃದ್ದಾಶ್ರಮ ಹುಡುಕುವಿರಿ.

ವರದಕ್ಷಿಣೆ ಸಾವುಗಳನ್ನುವ ನೋಡಿ ಆಕ್ರೋಶ ವ್ಯಕ್ತಪಡಿಸುವಿರಿ,
ನಿಮ್ಮ ಮಕ್ಕಳ ಮದುವೆಗೆ ಚಿನ್ನ, ಕಾರು ಮನೆ ಬೇಕೆಂದು ಆಸೆ ಪಡುವಿರಿ.

ಬೇರೆ ಶ್ರೀಮಂತ ಸಮಾರಂಭಗಳಲ್ಲಿ ವ್ಯರ್ಥವಾಗುವ ಆಹಾರ ನೋಡಿ ಬೇಸರದಿಂದ ಲೊಚಗುಟ್ಟುವಿರಿ,
ನಿಮ್ಮ ಮನೆಯ ಕಾರ್ಯಕ್ರಮಗಳಲ್ಲಿ ಅದನ್ನು ಮರೆಯುವಿರಿ.

ಗುರುಹಿರಿಯರ ಅಮೂಲ್ಯ ಹಿತನುಡಿಗಳನ್ನು ಕೇಳಿ ಚಪ್ಪಾಳೆ ಹೊಡೆಯುವಿರಿ,
ನಿಜ ಜೀವನದಲ್ಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವಿರಿ.

ಪೋಟೋಗಳಲ್ಲಿ ಸುಂದರ ಪರಿಸರ, ವಾತಾವರಣ ನೋಡಿ ಆನಂದಿಸುವಿರಿ,
ನಿಮ್ಮ ಸುತ್ತ ಮುತ್ತ ಕೆಟ್ಟ ವಾತಾವರಣ ಇಟ್ಟುಕೊಂಡಿರುತ್ತೀರಿ.

ಆಂತರ್ಯದಲ್ಲಿ ಸ್ವಾರ್ಥಿಗಳಾಗಿರುವ ನಾವು,
ಬಹಿರಂಗವಾಗಿ ತ್ಯಾಗ ಜೀವಿಗಳನ್ನು ಕೊಂಡಾಡುತ್ತೇವೆ.

ಪರಿಸರ ನಾಶಮಾಡುವುದು,
ಮಳೆ ಬರುವುದಿಲ್ಲ ಎಂದು ಬೊಬ್ಬೆ ಹೊಡೆಯುವುದು.

ಕಾಡಿನಲ್ಲಿ ಊರು ನಿರ್ಮಿಸುವುದು,
ಕಾಡು ಪ್ರಾಣಿಗಳ ಹಾವಳಿ ಎಂದು ಕೂಗುವುದು.

ಕೆರೆ ಜಾಗದಲ್ಲಿ ಮನೆ ಕಟ್ಟುವುದು,
ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತದೆ ಎಂದು
ದೂರುವುದು.

ಕೆರೆಗಳನ್ನು ನುಂಗಿ ಬಿಡುವುದು,
ಕುಡಿಯಲು ನೀರಿಲ್ಲ, ಅಂತರ್ಜಲ ಬತ್ತಿದೆ ಎಂದು ಬಾಯಿ ಬಡಿದುಕೊಳ್ಳುವುದು.

ವಾಯು ಮಾಲಿನ್ಯ ಮಾಡುವುದು,
ಶುದ್ದ ಗಾಳಿ ಇಲ್ಲ ಎಂದು ಕೊರಗುವುದು.

ಮಿತಿ ಇಲ್ಲದೆ ಸಿಗರೇಟು, ಎಣ್ಣೆ ಹೊಡೆಯುವುದು,
ಆರೋಗ್ಯ ಸರಿಯಿಲ್ಲ ಎನ್ನುವುದು.

ಆಹಾರ ಕಲಬೆರಕೆ ಮಾಡುವುದು,
ರೋಗಗಳಿಗೆ ಆಹ್ವಾನ ನೀಡುವುದು.

ದಿಡೀರ್ ಶ್ರೀಮಂತಿಕೆಗೆ ದುರಾಸೆ ಪಡುವುದು,
ಬಿಪಿ, ಶುಗರ್ ಹಾವಳಿಗೆ ತುತ್ತಾಗುವುದು.

ಗೊತ್ತು ಗುರಿಯಿಲ್ಲದೆ vehicle ಗಳನ್ನು ರಸ್ತೆಗಿಳಿಸುವುದು,
Traffic jam ಎಂದು ಹಲುಬುವುದು.

ಸಂಭ್ರಮದಲ್ಲಿ ಮದುವೆ ಮಾಡಿಕೊಳ್ಳುವುದು,
ಕೋಪದಲ್ಲಿ ಡೈವೋರ್ಸ್ ಮಾಡಿಕೊಳ್ಳುವುದು.

ಹಣ ಪಡೆದು, ಜಾತಿ ನೋಡಿ ಓಟು ಹಾಕುವುದು,
ಸರ್ಕಾರ ಸರಿಯಿಲ್ಲ ಎಉದು ಕೊರಗುವುದು.

ಈಗಲಾದರೂ ಎಚ್ಚೆತ್ತುಕೊಳ್ಳೋಣ,
ಪರಿಸ್ಥಿತಿ ಕೈ ಮೀರುವ ಮುನ್ನ ಕ್ರಮ ಕ್ಯೆಗೊಳ್ಳೋಣ.

ಇದೆಲ್ಲಾ ಖಂಡಿತವಾಗಿ ಅನಿವಾರ್ಯ ಅಥವಾ ಅನಿರೀಕ್ಷಿತವಲ್ಲ. ಮಾನವ ನಿರ್ಮಿತ.

ಇದನ್ನೆಲ್ಲಾ ನಿಯಂತ್ರಿಸುವ ಶಕ್ತಿ, ಅಧಿಕಾರ ಇರುವುದು ನಮ್ಮನ್ನಾಳುವ ಸರ್ಕಾರಗಳಿಗೆ ಮಾತ್ರ.

ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ.
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ
ಪರಿವರ್ತನೆ ಮಾಡಿಕೊಳ್ಳೋಣ.

ಮಾತಿಗೂ, ಕೃತಿಗೂ ಅಂತರ ಹೆಚ್ಚಾದಾಗ ಈ ಆತ್ಮವಂಚಕತನ ಬೆಳೆಯುತ್ತದೆ.
ಇದಕ್ಕೆ ನಾವ್ಯಾರು ಹೊರತಲ್ಲ,
ಆದರೆ ಇದು ಅಪಾಯಕಾರಿ.

ಇದನ್ನು ನಾವು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನಿಸೋಣ.
ನಮ್ಮ ನಡೆಗೂ, ನುಡಿಗೂ ಅಂತರ ಕಡಿಮೆ ಇರಲಿ.

ಸಾಧ್ಯವಾದಷ್ಟೂ ಹೇಳುವುದನ್ನು ಮಾಡೋಣ – ಮಾಡುವುದನ್ನು ಹೇಳೋಣ.

ನಮ್ಮ ಮಕ್ಕಳೂ ಅದನ್ನೇ ಮುಂದುವರಿಸುತ್ತಾರೆ.
ಈ ವಿಷಯದಲ್ಲಿ ಈಗಿನಿಂದಲೇ ಬದಲಾಗೋಣ….

  • ವಿವೇಕಾನಂದ. ಹೆಚ್.ಕೆ.
Share This Article
Leave a comment