ಸಂಭ್ರಮದ ಯುಗಾದಿ

Team Newsnap
5 Min Read
image
✍️ ಸ್ನೇಹಾ ಆನಂದ್ 🌻

ಅಗೋ ಮತ್ತೇ ಬಂದಿತು ಯುಗಾದಿ,
ಹೊಸತನ ತಂದೇ ಬಿಟ್ಟಿತು ಯುಗಾದಿ,
ಭರವಸೆಯ ಬೆಳಕು ಕೊಟ್ಟ ಯುಗಾದಿ,
ಸುಂದರ ಕನಸನು ನೆಟ್ಟ ಯುಗಾದಿ,
ಚೈತ್ರ ಮಾಸದ ಮಾಮರಕೆ ಅಡಿಯಿಟ್ಟ ಯುಗಾದಿ!
ಇಗೋ ಬಂದಿತು,ಬಂದಿತು ಯುಗಾದಿ,
ನಮ್ಮಯ, ನಿಮ್ಮಯ ಸಂಭ್ರಮದ ಯುಗಾದಿ!

ಪ್ರತಿ ವರುಷ ಯುಗಾದಿ ತರುವುದು ಹೊಸತನದ ಸಂತಸದ ಭರವಸೆಯ ಹೊನಲು! ಯುಗಾದಿಯ ದಿನದ ಮಹತ್ವವೆಂದರೆ ಬ್ರಹ್ಮನು ಈ ದಿನ ಬ್ರಹ್ಮಾಂಡವನ್ನು ಸೃಷ್ಟಿಸಿದನಂತೆ ಹೀಗಾಗಿ ಅತಿ ಪವಿತ್ರ ಸರ್ವಶ್ರೇಷ್ಠ ದಿನ ಯುಗಾದಿ!

ಯುಗಾದಿ ಎಂದರೆ ಎರೆಡು ಪದಗಳ ಸಂಯೋಜನೆ, “ಯುಗ” ಎಂದರೆ ಅವಧಿ “ಆದಿ” ಎಂದರೆ ಆರಂಭ, ಹೀಗಾಗಿ ಈ ಹಬ್ಬವು ಹೊಸ ಯುಗದ ಆರಂಭ ಅಥವಾ ಪ್ರಾರಂಭ ಎನ್ನಲಾಗಿದೆ!

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ, ಹೊಸತು ಹೊಸತು ತರುತಿದೆ! ಎನ್ನುವ ಹಾಡು ಯಾರು ಕೇಳಿಲ್ಲ! ಈ ಇಂಪಾದ ಹಾಡು ಕಿವಿಗೆ ಬಿದ್ದಾಗ ಮೈಮನವರಳಿ ಯುಗಾದಿ ಹಬ್ಬ ಸಂಪೂರ್ಣವಾದ ಸಾರ್ಥಕ ಭಾವನೆ!

ಯುಗಾದಿ ಹಬ್ಬ ಹಿಂದುಗಳಿಗೆ ಹೊಸ ವರ್ಷದ ಆರಂಭ, ಭಗವಾನ್ ಬ್ರಹ್ಮನಿಂದ ಮಾನವ ಕುಲವು ಸೃಷ್ಟಿಯಾದಾಗ, ಸೃಷ್ಟಿಯ ಪ್ರಾರಂಭವನ್ನು ಗುರುತಿಸಲು ಯುಗಾದಿ ಎಂದು ಹೆಸರಿಟ್ಟು ಆಚರಿಸಲಾಯಿತಂತೆ!

ವಸಂತ ಋತುವನ್ನು ಬರಮಾಡಿಕೊಳ್ಳುವ ಈ ಹಬ್ಬದಲ್ಲಿ ಕೋಗಿಲೆಯ ಕುಹೂ ಕೇಳುವ ಸಂಭ್ರಮ, ಗಿಡಗಳು ಹಸಿರಾಗಿ ಎಳೆಯ ಚಿಗುರು ತುಂಬಿ,ಮಾವು ,ಬೇವು, ಹೂವುಗಳು ನಳನಳಿಸುವ ವಸಂತ ಋತುವಿನ ಹಚ್ಚ ಹಸುರಿನ ಚೈತ್ರ ಕಾಲ!

ಹಿತವಾದ,ಮೆಲುವಾದ ಗಾಳಿಯಿಂದ ಹಸಿರಾದ ಪ್ರಕೃತಿಯ ಬನಸಿರಿಯು ಓಲಾಡುವುದನ್ನು ನೋಡುವುದೇ ಒಂದು ಆನಂದ! ಪ್ರಕೃತಿ ಮಾತೆಯೂ ಕೂಡ ಈ ಹಬ್ಬಕ್ಕೆ ಸಂಭ್ರಮದಿಂದ ಹಸಿರು ಸೀರೆಯನು ಉಟ್ಟ, ಮೊಗ್ಗು ಹೂವನು ತೊಟ್ಟ ಚೆಂದದ ಬಂಗಾರಿಯು, ಸಿಂಗಾರಗೊಂಡಂತೆ ತೋರುತ್ತಾಳೆ!

ಬಿಸಿಲಿನ ಝಳ ಕಡಿಮೆ ಮಾಡುವ ತುಂತುರು ಮಳೆಯ ಸಿಂಚನ ಮನಸ್ಸಿಗೆ ಉಲ್ಲಾಸ ತರುತ್ತದೆ ! ನವಿಲು ನಾಟ್ಯವಾಡುತ್ತವೆ, ಗಿಡ ಮರಗಳಲ್ಲಿ ಪಕ್ಷಿಗಳ ಕಲರವದ ನಿನಾದ ಪ್ರೇಮಭಾಷೆಯಂತೆ ಕಿವಿಗೆ ಬಿದ್ದಾಗ ಕೇಳುವುದೇ ಚೆಂದ!

ವಸಂತ ಮಾಸ ಬಂದಾಗ ಮಾವು ಚಿಗುರಲೇ ಬೇಕು ಕೋಗಿಲೆ ಹಾಡಲೇ ಬೇಕು, ಕಂಕಣ ಕೂಡಿ ಬಂದಾಗ ಮದುವೆಯಾಗಲೇಬೇಕು ಎನ್ನುವಂತೆ ಈ ಮಾಸದಲ್ಲಿ ಮದುವೆಯ ಮೂಹೂರ್ತಗಳು ಜಾಸ್ತಿ ಕಂಡು ಬರುತ್ತವೆ!

ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ವಸಂತ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ,
ಭಾರತದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ, ಆದರೆ ಹಬ್ಬದ ಸಂಭ್ರಮ ಮಾತ್ರ ಎಲ್ಲರಿಗೂ ಒಂದೇ! ಚಾಂದ್ರಮಾನ ಯುಗಾದಿಯನ್ನು ಆಚರಿಸಿದ ಹಾಗೆ ಸೂರ್ಯಮಾನ ಯುಗಾದಿಯನ್ನು ಕೆಲವರು ಆಚರಿಸುವುದನ್ನು ನಾವು ಕಾಣಬಹುದು ! ಒಟ್ಟಿನಲ್ಲಿ ಈ ಹಬ್ಬದ ಆಚರಣೆಯ ಸಡಗರ ದೇಶಾದ್ಯಂತ ಹರಡಿದೆ!

ಯುಗಾದಿ ಹಬ್ಬದಿಂದ ನೂತನ ಸಂವತ್ಸರದ ಆರಂಭ, ಶೋಭಕೃತ್ ನಾಮ ಸಂವತ್ಸರವು ಕೊನೆಗೊಂಡು ಕ್ರೋಧಿನಾಮ ಸಂವತ್ಸರ ಪ್ರಾರಂಭಗೊಳ್ಳುತ್ತದೆ!

ಒಂದು ವಾರದಿಂದ ಮನೆಯನ್ನು ಸ್ವಚ್ಛಗೊಳಿಸಿ ಅಂದು ಅಂಗಳದ ತುಂಬ ಸಗಣಿಯಿಂದ ಸಾರಿಸಿ ರಂಗುರಂಗಿನ ರಂಗವಲ್ಲಿ ಹಾಕಿ, ಬಾಗಿಲಿಗೆ ತಳಿರು ತೋರಣ ಕಟ್ಟಿ, ಎಣ್ಣೆ ಸ್ನಾನವನ್ನು ಮಾಡುವಾಗ ಬೇವಿನ ಎಲೆಯನ್ನು ನೀರಿನಲ್ಲಿ ಹಾಕಿ ಮಾಡುವುದು ಪ್ರತೀತಿ, ಬೇವಿನ ಎಲೆಯಲ್ಲಿ ಆರೋಗ್ಯದಾಯಕ ಅಂಶಗಳಿರುವ ದರದಿಂದ ಮೈ ಮನಸ್ಸು ಆಹ್ಲಾದಕರವಾಗಿರಲಿ ಎನ್ನುವ ಹಾರೈಕೆ ಕೂಡ!

ಎಲ್ಲರೂ ಅಂದು ಹೊಸಬಟ್ಟೆಯನ್ನುಟ್ಟು
ಹೊಸ್ತಿಲಿಗೆ ಕುಂಕುಮ ಹೂವಿಟ್ಟು, ತುಳಸಿಯ ಮುಂದೆ ದೀಪ ಹಚ್ಚಿಟ್ಟು, ದೇವರ ಮನೆಯನ್ನು ಹೂವಿನಿಂದ ಅಲಂಕರಿಸಿ ಮನೆಯ ದೇವರನ್ನು ಪೂಜಿಸಿ ವಿಶೇಷವಾಗಿ ಪಂಚಾಂಗ ಪೂಜೆ,ಪಠನೆ ಮಾಡಿ, ಸೂರ್ಯ ಚಂದ್ರರಿಗೆ ಹಾಗು ಯುಗಗಳ ಸೃಷ್ಟಿಸಿದ ವಿಷ್ಣುವಿಗೆ, ಹಾಗು ಪ್ರಕೃತಿಯ ಸೃಷ್ಟಿ ಕರ್ತ ಬ್ರಹ್ಮನಿಗೆ ಭಕ್ತಿಯಿಂದ ಪೂಜೆ ಮಂಗಳಾರತಿ ಮಾಡಿ, ದೇವರಿಗೆ, ದೊಡ್ಡವರಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದು, ಬೇವು ಬೆಲ್ಲವನ್ನು ಮನೆಮಂದಿಯ ಜೊತೆ ಸವಿದರೆ ಹಬ್ಬ ಪೂರ್ಣಗೊಂಡಂತೆ, ಮನೆಗೆ ನೆಂಟರಿಷ್ಟರು ಬಂದಿದ್ದರೆ ಅದರ ಸಂಭ್ರಮವೇ ಮತ್ತೊಂದು ರೀತಿ ಅಲ್ಲವೇ!

ಈ ಹಬ್ಬದ ವೈಶಿಷ್ಟ್ಯ ಇರುವುದೇ ಬೇವು ಬೆಲ್ಲದಲ್ಲಿ! ಇದರ ರುಚಿ ಸಿಗುವುದು ವರ್ಷಕ್ಕೊಂದು ಸಲ ಮಾತ್ರ,
ಹೊಸ ವರುಷ ಪ್ರಾರಂಭವಾಗಿ ಜೀವನದಲ್ಲಿ ಸಿಹಿ, ಕಹಿಯ ಹಿತವಾದ ಸಮ್ಮಿಳಿತವೇ ಬೇವು ಬೆಲ್ಲ ನೀಡುವ ಉದ್ದೇಶ ಹಬ್ಬದ ದಿನದಂದು!
ಸಿಹಿಯಲ್ಲಿ ಕಹಿ ತಡೆದುಕೊಳ್ಳುವಷ್ಟು ಅಡಗಿರಲಿ ಎನ್ನುವ ಹಾಗೆ ಜೀವನವಿರಲಿ ಎಂಬ ಸೂಚನೆ ನೀಡುವಂತಿರುವ ಬೇವು ಬೆಲ್ಲವನ್ನು ದೇವರ ಮುಂದಿಟ್ಟು ನೈವೇದ್ಯ ಮಾಡಿ ಭಕ್ತಿಯಿಂದ ಸ್ವೀಕರಿಸಬೇಕು! ಇದನ್ನು ಒಬ್ಬೊಬ್ಬರು ಪಾನಕದಂತೆ ಮಾಡಿದರೆ ಹಾಗೆಯೇ ಬೇವು ಬೆಲ್ಲವನ್ನು ಕೂಡಿಸಿ ಇಡುವರು ನೈವೇದ್ಯಕ್ಕೆ, ಇದರ ಜೊತೆಗೆ ಆಗ ತಾನೇ ಬಂದ ಫಲ ಮಾವು,
ದ್ರಾಕ್ಷಿ, ಕರಬೂಜ ಹಣ್ಣನ್ನು ಸೇರಿಸಿ ರುಚಿಯಾದ ಪಾನಕದಂತೆ ಇಲ್ಲ ಗಟ್ಟಿಯಾಗಿ ಮಾಡುವರು!

ಈ ಹಬ್ಬದ ದಿನ ಹೂರಣದ ಹೋಳಿಗೆಯೇ ಅತಿ ಶ್ರೇಷ್ಠ , ಹಿರಿಯರು ಇದ್ದ ಮನೆಯಲ್ಲಿ ಹೋಳಿಗೆ ಇರಲೇ ಬೇಕು, ಬಿಸಿ ಬಿಸಿಯಾದ ಹಾಲು ತುಪ್ಪದೊಂದಿಗೆ ಹೋಳಿಗೆ ಸವಿದರೆ ಆಹಾ ಅಮೃತಕ್ಕೆ ಸಮ!

ಅಂದು ಬಾಳೆ ಎಲೆಯ ಊಟ ಮನಸ್ಸಿಗೆ ಮುದ ತರುತ್ತದೆ, ಪಾಯಸ, ಮಾವಿನಕಾಯಿ ಚಟ್ನಿ ಕೋಸಂಬರಿ, ಗೊಜ್ಜು, ಪಲ್ಯ, ತಂಬುಳಿ, ಮಾವಿನಕಾಯಿ ಚಿತ್ರಾನ್ನ, ಪಕೋಡ, ಒಬ್ಬಟ್ಟು ಹೂರಣದ ತಿಳಿಸಾರು, ಅನ್ನ, ಕೊನೆಗೆ ಮಸಾಲೆ ಮಜ್ಜಿಗೆಯನ್ನು ಬಟ್ಟಲಲ್ಲಿ ಹಾಕಿ ಕೊಟ್ಟರೆ ಬಾಳೆಯೆಲೆಯಲ್ಲಿ ಬಡಿಸಿದ ಅಡುಗೆಯು ಬಣ್ಣ ಬಣ್ಣದ ಚಿತ್ತಾರವಿಟ್ಟಂತೆ ತೋರುತ್ತದೆ!

ಹಬ್ಬದ ದಿನ ಎಲ್ಲರೂ ಒಂದೇ ಸಲ ಕುಳಿತು ಊಟ ಮಾಡುವುದು ನೋಡುವುದೇ ಒಂದು ಸೊಗಸು, ಸ್ವಲ್ಪ ಹೊಟ್ಟೆ ತುಂಬಿದ ಮೇಲೆ ಹಾಸ್ಯ ಚಟಾಕಿಯನ್ನು ಹಾರಿಸುತ್ತಾ ಉಂಡರೆ, ಬಡಿಸುವವರು ನಗುನಗುತ್ತಾ ತೃಪ್ತಿಯಿಂದ ಆದರಿಸಿ ಬಡಿಸುತ್ತಾರೆ. ಸಂತೃಪ್ತಿಯಿಂದ ಉಂಡು ಎಲೆ ಅಡಿಕೆಯನ್ನು ಹಾಕಿಕೊಂಡರೆ ಸಾಕು ತಲೆಯು ಮಲಗಲು ದಿಂಬನ್ನು ಹುಡುಕುತ್ತದೆ, ಹಾಗೆಯೇ ನೆಲದ ಮೇಲೆ ಉರುಳಿದರೆ ನಿದ್ರಾದೇವಿ ಆಲಂಗಿಸಿಕೊಳ್ಳುತ್ತಾಳೆ ನಮಗೇ ಗೊತ್ತಾಗದಂತೆ ! ಸ್ವರ್ಗಕ್ಕೆ ಕಿಚ್ಚು ಹೆಚ್ಚೆಂದ ಸರ್ವಜ್ಞ ಎನ್ನಲು ಇಷ್ಟು ಸಾಕಲ್ಲವೇ!

ಹೀಗಾಗಿ ಹಿಂದೂಗಳ ಈ ಹಬ್ಬದ ಸಂಪ್ರದಾಯವನ್ನು ಹಿರಿಯರು ಸುಖಾ ಸುಮ್ಮನೆ ಮಾಡಿಲ್ಲ , ಅದಕ್ಕೆ ಒಂದು ಬೆಲೆಯಿದೆ ಅರ್ಥವಿದೆ, ಸಡಗರವಿದೆ, ಸಂತೃಪ್ತಿಯಿದೆ !


ಯುಗಾದಿಯ ಸಮಯದಲ್ಲಿ ಭಕ್ತರು ದೇವರಲ್ಲಿ ಆರೋಗ್ಯ, ಸಂಪತ್ತು ಸಮೃದ್ಧಿಯನ್ನು ಬೇಡಿಕೊಂಡು ಸಂಜೆಯ ಸಮಯದಲ್ಲಿ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ! ಕೆಲವರು ತಮ್ಮ ಹೊಸ ಉದ್ಯಮವನ್ನು ಈ ದಿನದಂದೇ ಪ್ರಾರಂಭಿಸುತ್ತಾರೆ, ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಿಂದ ಹಿಡಿದು ರಾತ್ರಿಯವರೆಗೂ ಶುಭ ಮೂಹೂರ್ತ ಎಂದು ಹೇಳುತ್ತಾರೆ, ಒಟ್ಟಾರೆ ಯಾವುದೇ ಶುಭ ಕಾರ್ಯ ಮಾಡಲು ಈ ದಿನ ಅತಿ ಸೂಕ್ತ, ಹೀಗಾಗಿ ಈ ಪವಿತ್ರ ದಿನ ಹಿಂದೂಗಳಿಗೆ ಸರ್ವ ಶ್ರೇಷ್ಠ ದಿನವಾಗಿದೆ!

ಈ ಶುಭ ದಿನ ಸ್ವಲ್ಪವಾದರೂ ಸರಿ ಚಿನ್ನದ ನಾಣ್ಯ ಅಥವಾ ಚಿನ್ನದ ಆಭರಣ ಖರೀದಿ ಮಾಡುತ್ತಾರೆ ಕೆಲವರು, ಹೀಗಾಗಿ ಅಂದು ಚಿನ್ನದ ಅಂಗಡಿಗಳಿಗೆ ಸಂತಸದ ಸುಗ್ಗಿ, ತಡ ರಾತ್ರಿಯವರೆಗೂ ಅಂಗಡಿಯನ್ನು ತೆರೆದು ಅಂಗಡಿಯ ಮಾಲೀಕ ವ್ಯಾಪಾರವನ್ನು ಸಂಭ್ರಮಿಸುತ್ತಾನೆ! ಹೀಗಾಗಿ ಎಲ್ಲ ಹಬ್ಬಗಳಿಗೂ ಅದರದೇ ಆದ ವೈಶಿಷ್ಟ್ಯತೆ ಇದೆ !

ಮದುವೆ,ಮುಂಜಿಯ ಕೆಲಸ ಕಾರ್ಯಗಳನ್ನು ಆರಂಭಿಸಲು ಯುಗಾದಿಯ ಶುಭ ಮೂಹೂರ್ತವೇ ಸರಿಯೆಂದು ತಿಳಿದು ಅಂದು ಗಣಪತಿ ಪೂಜೆ ಮಾಡಿ ನಂತರ ಮಂಗಳಕರ ವಸ್ತು, ಬಟ್ಟೆ,ಬರೆ ಆಭರಣವನ್ನು ಸಮಾರಂಭಕ್ಕೆ ಖರೀದಿಸಲು ಪ್ರಾರಂಭಿಸುತ್ತಾರೆ!
ಒಟ್ಟಿನಲ್ಲಿ ಯುಗಾದಿ ಹೊಸ ವರುಷಕೆ ಶುಭ ಸಂಕೇತ!

ಹೀಗಾಗಿ ಯುಗಾದಿ ನಮ್ಮ ನಾಡಿನಲ್ಲಿ ಅತ್ಯಂತ ಮಹತ್ವ ಪಡೆದಿದೆ, ಸಂಭ್ರಮದ ವಾತಾವರಣವನ್ನು ಸೃಷ್ಟಿಸುವುದು ಪ್ರತಿ ವರುಷ. ಹೊಸ ವರುಷದೊಂದಿಗೆ ಹೊಸ ಭರವಸೆ, ಸುಖ, ಶಾಂತಿ, ನೆಮ್ಮದಿ ಎಲ್ಲರ ಜೀವನದಲಿ ಮೂಡಲಿ, ಎಲ್ಲರಿಗೂ ಹರುಷ ತರಲಿ ಎಂದು ಹೇಳುತ್ತಾ ಎಲ್ಲರಿಗೂ ಯುಗಾದಿಯ ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

Share This Article
Leave a comment