ಕಾರ್ಮಿಕರ ದಿನಾಚರಣೆ 2022

Team Newsnap
2 Min Read

ಕಾರ್ಮಿಕರಿಗೆ ಗೌರವ ಸಲ್ಲಿಸುವ ಮತ್ತು ಕಾರ್ಮಿಕರ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಸಲುವಾಗಿ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತದೆ.ಈ ದಿನವನ್ನು ಲೇಬರ್‌ ಡೇ, ವರ್ಕರ್ಸ್ ಡೇ, ಮೇ ಡೇ ಎಂದೂ ಕರೆಯಲಾಗುತ್ತದೆ.

ಭಾರತದಲ್ಲಿ 1923 ನೇ ಇಸವಿಯ ಮೇ 1 ರಂದು ‘ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ ‘ ಸ್ಥಾಪನೆಗೊಂಡ ದಿನದಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ಕಾರ್ಮಿಕರ ದಿನಾಚರಣೆಯ ದಿನದಂದು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಮತ್ತು ಕಾರ್ಮಿಕರಿಗೆ ಅಂದಿನ ದಿನ ರಜೆ ನೀಡಬೇಕೆಂದು ಸದನದಲ್ಲಿ ಮಸೂದೆ ಮಂಡಿಸಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

ಪ್ರತಿಯೊಂದು ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಕಾರ್ಮಿಕ ಶಕ್ತಿ ಅತ್ಯವಶ್ಯಕ. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಕಾರ್ಮಿಕ ಶಕ್ತಿ ಅನಿವಾರ್ಯ. ದಕ್ಷ ಹಾಗೂ ಪ್ರಾಮಾಣಿಕ ಕಾರ್ಮಿಕರು ಸಂಸ್ಥೆಯಾಗಲಿ, ಕಾರ್ಖಾನೆಗಳಾಗಲಿ ಅವುಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು ಆರ್ಥಿಕ ಪ್ರಗತಿಗೆ ಕಾರಣಕರ್ತರಾಗಿರುತ್ತಾರೆ.

ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಜಗತ್ತಿನ ವಿವಿಧ ಕ್ಷೇತ್ರದಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಸಮಾಜದಲ್ಲಿ ಇವರ ಪಾತ್ರ ಬಹಳ ದೊಡ್ಡದು. ಕಾರ್ಮಿಕರು ತಮ್ಮ ದುಡಿಮೆಯಿಂದ ತಮ್ಮ ಕುಟುಂಬವನ್ನು ಪೋಷಿಸುವ ಜತೆಗೆ ತಮ್ಮ ಸಂಸ್ಥೆಯ ಅಭಿವೃದ್ಧಿಗೂ ಕಾರಣರಾಗುತ್ತಾರೆ. ಈ ಮೂಲಕ ಒಂದು ದೇಶದ ಪ್ರಗತಿಗೂ ನೆರವಾಗುತ್ತಾರೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಸೇವೆಸಲ್ಲಿಸುವ ಕಾರ್ಮಿಕರಿಗೆ ಗೌರವ ಸಲ್ಲಿಸುವ ದಿನ.

ಹದಿನೆಂಟು-ಹತ್ತೊಂಬತ್ತನೇ ಶತಮಾನವು ಕೈಗಾರಿಕಾ ಕ್ರಾಂತಿಯ ಕಾಲವಾಗಿತ್ತು, ಬಂಡವಾಳಶಾಹಿ ಆರ್ಥಿಕತೆಯು ಬಲಗೊಳ್ಳಲಾರಂಭಿಸಿದ್ದ ಕಾಲವಾಗಿತ್ತು. ದೊಡ್ಡದಾಗಿ ಬೆಳೆಯತೊಡಗಿದ್ದ ಉದ್ದಿಮೆಗಳಲ್ಲಿ ಕಾರ್ಮಿಕರು ದಿನಕ್ಕೆ 12-20 ಗಂಟೆ ದುಡಿದು ಹೈರಾಣಾಗುತ್ತಿದ್ದರು. ಒಳ ಹೋದವರು ಹೊರಬರುವ ಖಾತರಿಯಿಲ್ಲದಿದ್ದ ಗಣಿಗಳು, ಉಸಿರುಗಟ್ಟಿಸುವಷ್ಟು ಮಲಿನವಾಗಿದ್ದ ಕಾರ್ಖಾನೆಗಳು, ಸ್ವಲ್ಪ ತಪ್ಪಿದರೆ ಚಚ್ಚುತ್ತಿದ್ದ ಯಂತ್ರಗಳು ದುಡಿಯುವವರ ಆರೋಗ್ಯಕ್ಕೂ, ಆಯಸ್ಸಿಗೂ ಕಂಟಕವಾಗಿದ್ದವು. ಇಂತಹ ಅಮಾನವೀಯವಾದ, ಅಪಾಯಕಾರಿಯಾದ, ಅನಾರೋಗ್ಯಕರವಾದ ಸ್ಥಿತಿಗತಿಗಳ ವಿರುದ್ಧ ವಿಶ್ವದೆಲ್ಲೆಡೆ ಪ್ರತಿಭಟನೆಗಳಾಗುತ್ತಿದ್ದವು.

ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆಗಾಗಿ ಸುಧಾರಣೆಗಳು ಆರಂಭಗೊಂಡವು. ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ದುಡಿಸಬಾರದೆನ್ನುವ ಬೇಡಿಕೆಯೂ ಎಲ್ಲೆಡೆ ಜೋರಾಯಿತು.ಕಾರ್ಮಿಕರು ದಿನದ 8 ಗಂಟೆ ದುಡಿಯುವ ಅವಧಿ ಎಂಬ ಬೇಡಿಕೆ ಮುಂದಿಟ್ಟರು. ದಿನದ 24 ಗಂಟೆಗಳಲ್ಲಿ 8 ಗಂಟೆ ದೈನಂದಿನ ಚಟುವಟಿಕೆಗಳನ್ನು ಪೂರೈಸುವ 8 ಗಂಟೆ ದುಡಿಯುವ ಅವಧಿ ಹಾಗೂ ಇನ್ನುಳಿದ 8 ಗಂಟೆ ವಿಶ್ರಾಂತಿಗಾಗಿ ಮೀಸಲು ಎಂಬ ವಾದ ಮುಂದಿಟ್ಟರು. ಇದು ಒಂದೇ ದಿನದಲ್ಲಿ ನಿರ್ವಹಿಸುವ ಸಾಕಷ್ಟು ಚಟುವಟಿಕೆಗಳಿಂದ ಒತ್ತಡ ಮತ್ತು ಒತ್ತಡದಿಂದ ಕಾರ್ಮಿಕರಿಗೆ ಪರಿಹಾರ ನೀಡುತ್ತದೆ.

‘ಮೇ 1, 1886ರಿಂದ ಎಂಟೇ ಗಂಟೆಗಳ ಕೆಲಸ’ ಎಂಬ ಘೋಷಣೆಯೊಂದಿಗೆ ಅಮೆರಿಕಾದ ಕಾರ್ಮಿಕರ ಸಂಘದ ನೇತತ್ವದಲ್ಲಿ ಮುಷ್ಕರಗಳು ನಡೆದವು. ಷಿಕಾಗೋ ನಗರದಲ್ಲಿ 40,000ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದ ಶಾಂತಿಯುತ ಪ್ರತಿಭಟನೆಯ ಮೇಲೆ ಮಾಲೀಕರು ಹಾಗೂ ಪೋಲೀಸರ ಅಮಾನುಷ ದಾಳಿಗಳಾದವು, ಹಲವರು ಸತ್ತರು, ಬಂಧಿತ ನಾಯಕರು ಗಲ್ಲಿಗೇರಿಸಲ್ಪಟ್ಟರು. ಈ ಬಲಿದಾನಗಳ ಫಲವಾಗಿ ಕೆಲಸದ ಅವಧಿಯು ವಿಶ್ವದಾದ್ಯಂತ ಎಂಟು ಗಂಟೆಗಳಿಗೆ ಮಿತಿಗೊಂಡಿತು.

ಇದರ ಫಲವಾಗಿ ಕಾರ್ಮಿಕರು ಹೋರಾಟ ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನದ 8 ಗಂಟೆ ಕಾರ್ಮಿಕರ ಕೆಲಸದ ಅವಧಿಯನ್ನು ಚಾಲನೆಗೆ ತಂದರು. ಇದರ ಸವಿ ನೆನಪಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

Share This Article
Leave a comment