“ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್’ನಲ್ಲಿ ಪ್ರಸಾರವಾಗಲಿದೆ ಕನ್ನಡ ಕಾರ್ಯಕ್ರಮ

Team Newsnap
1 Min Read

ಕನ್ನಡಿಗರಿಗೊಂದು ಸಿಹಿಸುದ್ದಿ. ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಶ್ರಯದಲ್ಲಿ ನಡೆಯುತ್ತಿರುವ “ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್'(ಎಸ್‌ವಿಬಿಸಿ)ನಲ್ಲಿ ಇನ್ನು ಮುಂದೆ ಕನ್ನಡ ಭಾಷೆಯಲ್ಲೂ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ಹಾಗೆಯೆ ಹಿಂದಿಯಲ್ಲೂ ಸಹ. ತಿರುಮಲದಲ್ಲಿ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.


ಆಂಧ್ರದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಈ ಎರಡೂ ಭಾಷೆಗಳ ಕಾರ್ಯಕ್ರಮಗಳ ಪ್ರಸಾರಕ್ಕೆ ಮಂಗಳವಾರ ಚಾಲನೆ ನೀಡಿದರು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅವರು ಸಮಾರಂಭಕ್ಕೆ ಬಂದಿರಲಿಲ್ಲ.


2008 ರಲ್ಲಿ ಆರಂಭಗೊಂಡ, 24 ಗಂಟೆಗಳ ಕಾಲ ಭಕ್ತಿ ಪ್ರದಾನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ತೆಲುಗು ಭಾಷೆಯ “ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್’ ಗೆ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಚಾಲನೆ ನೀಡಿದ್ದರು. ದಶಕದ ನಂತರ ತಮಿಳು ಭಾಷೆಯಲ್ಲೂ ಕಾರ್ಯಕ್ರಮಗಳ ಪ್ರಸಾರ ಆರಂಭಿಸಲಾಯಿತು ಎಂದು ದೇವಾಲಯದ ಅಧಿಕಾರಿಗಳು ಹೇಳಿದರು.


ಜಗನ್ ಮೋಹನ್ ರೆಡ್ಡಿ ಅವರು ತಿರುಪತಿ ಬೆಟ್ಟದ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಲಡ್ಡು ಪ್ರಸಾದ ಸಿದ್ಧಪಡಿಸಲೆಂದೇ ದೇವಸ್ಥಾನದ ಸಂಕೀರ್ಣದ ಹಿಂಭಾಗದಲ್ಲಿ 12 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಅಡುಗೆ ಮನೆಯನ್ನೂ ಉದ್ಘಾಟಿಸಿದರು.

Share This Article
Leave a comment