December 23, 2024

Newsnap Kannada

The World at your finger tips!

karnataka flag

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 30

Spread the love
k satyanarayana

ಶ್ರೀ. ಕೆ ಸತ್ಯನಾರಾಯಣ ಅವರು ಕನ್ನಡದ ಉತ್ತಮ ಲೇಖಕರಲ್ಲೊಬ್ಬರು. ಆದಾಯತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರು, ದೇಶಾದ್ಯಂತ ಸಂಚರಿಸಿ ಉನ್ನತ ಅಧಿಕಾರವನ್ನು ಅನುಭವಿಸಿಯೂ ಇವರಲ್ಲೊಬ್ಬ ಸೃಜನಶೀಲ ಲೇಖಕ ಮನೆಮಾಡಿದ್ದು ಅಚ್ಚರಿಯೇ.

ಈಗಾಗಲೇ ನಾವೇನೂ ಬಡವರಲ್ಲ, ಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆ, ಸಾವಿನ ದಶಾವತಾರ, ವೃತ್ತಿವಿಲಾಸ, ಲೈಂಗಿಕ ಜಾತಕ, ಬಾಡಿಗೆ ಮನೆಗಳ ರಾಜಚರಿತ್ರೆ ಸೇರಿದಂತೆ ಸುಮಾರು ೪೦ ಕೃತಿಗಳನ್ನು ಕನ್ನಡಕ್ಕೆ ನೀಡಿರುವ ಶ್ರೀ ಕೆ.ಸತ್ಯನಾರಾಯಣ ಸಾಹಿತ್ಯವಲಯದಲ್ಲಿ ವಿಶಿಷ್ಠ ಹೆಜ್ಜೆಗುರುತುಗಳನ್ನು ಮೂಡಿಸಿರುವ ಲೇಖಕರು. ೪೦ ಕೃತಿಗಳು ಪ್ರಕಟವಾಗಿದೆ. ಮರು ಮುದ್ರಣವನ್ನೂ ಒಳಗೊಂಡಂತೆ ೫೫ ಪುಸ್ತಕಗಳು ಬೆಳಕು ಕಂಡಿವೆ.

೧೯೫೪ ರ ಏಪ್ರಿಲ್ ೨೧ ರಂದು ಜನಿಸಿದ ಶ್ರೀ. ಕೆ ಸತ್ಯನಾರಾಯಣ ಅವರ ಬಾಲ್ಯ ಬಹುತೇಕ ಮಂಡ್ಯ ಜಿಲ್ಲೆಯಲ್ಲಿಯೇ. ಮದ್ದೂರು ತಾಲೂಕಿನ ಕೊಪ್ಪ, ಮಂಡ್ಯದ ಗುತ್ತಲು, ಕೊತ್ತತ್ತಿ, ರಾಯರಕೊಪ್ಪಲು ಮತ್ತು ಕಾಮಗೆರೆಗಳಲ್ಲಿ ಬೆಳೆದ ಇವರು ಹಳ್ಳಿಯ ಬದುಕನ್ನು ಹತ್ತಿರದಿಂದ ಕಂಡವರು. ಸತ್ಯನಾರಾಯಣ ಅವರ ಬರಹಗಳಲ್ಲಿ ಬದುಕಿನ ಅನೇಕ ದೃಷ್ಟಿಕೋನಗಳು ಕಾಣಿಸಿಕೊಳ್ಳಲು ಮೂಲದ್ರವ್ಯ ಗ್ರಾಮ್ಯ ಬದುಕಿನ ಅನುಭವಗಳೇ.

೧೯೮೮ ರಿಂದ ಇವರು ಬರವಣಿಗೆಯನ್ನು ಆರಂಭಿಸಿದವರು. ೯ ಕಾದಂಬರಿಗಳು, ೮ ಕಥಾ ಸಂಕಲನಗಳು, ೪ ಪ್ರಬಂಧ ಸಂಕಲನಗಳು, ೮ ವಿಮರ್ಶಾ ಸಂಕಲನಗಳು, ೪ ಅಂಕಣ ಬರಹಗಳು, ೪ ಆತ್ಮಚರಿತ್ರೆಯ ಕೃತಿಗಳನ್ನು ರಚಿಸಿದ್ದಾರೆ. ಇವರ ೨ ಸಂಪಾದಿತ ಕೃತಿಗಳಲ್ಲಿ ಜಾರ್ಜ್ ಆರ್ವೆಲ್ ಒಂದು. ಕನ್ನಡದ ಮೂರು ಮುಖ್ಯ ಲೇಖಕರಾದ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕೃತಿ ಕುರಿತ ಚಿನ್ನಮ್ಮನ ಲಗ್ನ ೧೮೯೩, ಕಾರಂತರ ಕಾದಂಬರಿಗಳಲ್ಲಿ ದುಡಿಮೆ ಮತ್ತು ಮಹಾಕಥನದ ಮಾಸ್ತಿ ಇವರ ಈಚಿನ ಪ್ರಮುಖ ವಿಮರ್ಶಾ ಕೃತಿಗಳು.

ಇವರ ಬರಹಗಳೆಂದರೆ ಚಾಕೊಲೇಟ್‌ಗಳಿದ್ದ ಹಾಗೆ. ಕೈಲಿ ಹಿಡಿದಿದ್ದೊಂದೇ ಗೊತ್ತು, ಸವಿ ಸವಿಯುತ್ತಾ ಮುಗಿದಿದ್ದೇ ತಿಳಿಯುವುದಿಲ್ಲ. ನಿಮಗೆ ನಿಮ್ಮ ಯಾವ ಕೃತಿ ಇಷ್ಟ ಎಂಬ ಪ್ರಶ್ನೆಗೆ ಸತ್ಯನಾರಾಯಣರ ಉತ್ತರ “ ಹೆತ್ತ ಮಕ್ಕಳಲ್ಲಿ ಯಾರು ಪ್ರಿಯ ಎಂದು ಕೇಳಿದ ಹಾಗಿದೆ. ನನಗೆ ಎಲ್ಲವೂ ಪ್ರಿಯವೇ. ಆದರೆ ಸಂತೋಷ ಎಂದರೆ ನನ್ನ ೧೨೦ ಕಥೆಗಳಲ್ಲಿ ಕಡೆಯ ಪಕ್ಷ ೨೦-೨೫ ಈ ಶತಮಾನದ ಕನ್ನಡದ ಶ್ರೇಷ್ಠ ಕತೆಗಳ ಸಾಲಿನಲ್ಲಿ ನಿಲ್ಲುವಂಥದ್ದು. ಆ ತೃಪ್ತಿಯೇ ನನ್ನ ಸಮಾಧಾನ’

ಕೆ.ಸತ್ಯನಾರಾಯಣ ಅವರದೊಂದು ವಿಶಿಷ್ಟ ಶೈಲಿಯ ಬರಹ. “ಕೇವಲ ವ್ಯಕ್ತಿಯ ಬಗೆಗೇ ಬರೆಯದೆ ನಮ್ಮ ಕಾಲದ ಬಗೆಗೆ, ಕಾಲದ ಒತ್ತಡಗಳ ಬಗೆಗೆ, ಸಂದರ್ಭಗಳು, ಸಾಂಸ್ಕೃತಿಕ ತಲ್ಲಣಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಸುಮಾರು ಇಪ್ಪತ್ತು ವರ್ಷಗಳು ಕರ್ನಾಟಕದ ಹೊರಗೆ ಅಧಿಕಾರಿಯಾಗಿ ಇದ್ದುದೂ ನನ್ನ ಅನುಭವ ವಿಸ್ತಾರಕ್ಕೆ ಜೀವ ತುಂಬಿದೆ. ಹೊರ ರಾಜ್ಯಗಳ ಜನರ ಜೀವನ, ಜೀವಭಾಷೆ, ನಡೆನುಡಿ, ಸಂಸ್ಕೃತಿಗಳು ನನ್ನ ಬರವಣಿಗೆಯ ವೈವಿಧ್ಯತೆಗೆ ಹೆಚ್ಚಿನ ಪೂರಕ-ಪ್ರೇರಕ ಶಕ್ತಿಯಾದವು” ಎನ್ನುವ ಸತ್ಯನಾರಾಯಣ ಅವರ ಎಲ್ಲ ಬರಹಗಳೂ ಓದುಗರ ಮನದಲ್ಲಿ ಅನುಭೂತಿಯ ಜೊತೆಗೇ ಹೊಸ ಆಲೋಚನೆಯನ್ನೂ ತುಂಬುತ್ತದೆ.

ಸಾವಿನ ದಶಾವತಾರ’ ಕಾದಂಬರಿಯಲ್ಲಿ ಕೂಡ ಎಂದಿನ ಪ್ರಯೊಗಶೀಲತೆಯನ್ನು ಮುಂದುವರೆಸಿರುವುದು ಎದ್ದು ಕಾಣುತ್ತದೆ. ಸಾವು ಎನ್ನುವುದು ಹುಟ್ಟಿನಂತೆಯೇ ಸತ್ಯ. ಪ್ರತಿ ಹುಟ್ಟೂ ಅದರ ಸಾವಿನ ಮುನ್ನುಡಿ. ಹುಟ್ಟು ತರುವ ಸಂಭ್ರಮವನ್ನು ಸಾವು ತರುವುದಿಲ್ಲ. ಒಂದು ಜೀವದ ಸಾವು ಆ ಜೀವದ ಒಡನಾಟ ಹೊಂದಿರುವ ಅನೇಕ ಜೀವಿಗಳ ನೋವು, ಸಂಕಟ, ದುಃಖ, ಅಸಹಾಯಕತೆ, ನೆನಪು, ಅನುಭವಗಳ ಸಂಪುಟವಾಗಿರುತ್ತದೆ. ಇದರ ಮುಂದುವರೆದ ಭಾಗವಾಗಿ ಸಾವು ಚಲನಶೀಲ ಸಮಾಜದಲ್ಲಿ ಹೇಗೆ ಗ್ರಹಿಸಲ್ಪಡುತ್ತದೆ, ವಾಣಿಜ್ಯೀಕರಣದ ಪ್ರಕ್ರಿಯೆಯಲ್ಲಿ ನಮ್ಮ ಅಸ್ಮಿತೆಗಳು ಪಡೆದುಕೊಳ್ಳುವ ಬೇರೆ ಬೇರೆ ಆಯಾಮಗಳನ್ನು, ಸಂಕೀರ್ಣತೆಗಳನ್ನು ಈ ಕಾದಂಬರಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ. ಅಷ್ಟೇ ಅಲ್ಲ ಸಾವಿನ ಆನಂತರದ ಕಾರ್ಯಗಳಲ್ಲಿ ತಾನೇ ತೊಡಗಿಸಿಕೊಂಡು ಒಂದು ಬಗೆಯ sense of involvement ಭಾವ ಹೊಂದುವುದಕ್ಕೂ, total package ಮೂಲಕ ನಿರುಮ್ಮಳವಾಗಿ ಇದ್ದುಬಿಡುವುದಕ್ಕೂ ವ್ಯಾವಹಾರಿಕತೆ ಮತ್ತು ಭಾವನಾತ್ಮಕತೆಯ ವ್ಯತ್ಯಾಸದ ಸೂಕ್ಷ್ಮ ಚಿತ್ರಣವನ್ನು ಈ ಕಾದಂಬರಿ ಅನಾವರಣಗೊಳಿಸುತ್ತದೆ.

ಇವರ ಪ್ರಬಂಧಗಳು ಕೇವಲ ಲಘು ಹರಟೆ, ಹಾಸ್ಯ ಬರಹ, ಲಲಿತ ಪ್ರಬಂಧಗಳ ಮಿತಿಗಳನ್ನು ದಾಟಿ ಚಿಂತನ ಪ್ರಧಾನತೆಯನ್ನು ರೂಢಿಸಿಕೊಂಡಿವೆ. ಅವರ ವಸ್ತುವಿಗೆ ತಕ್ಕ ಶೈಲಿ ಶೈಲಿಗೆ ತಕ್ಕ ಭಾಷೆ ಒಂದಕ್ಕೊಂದು ಅಂತರ್ ಸಂಬಂಧವಿರುವಂತೆ ಕಾಣಿಸುತ್ತದೆ. ಇವರ ‘ಸ್ಕೂಲು ಬಿಡುವ ಸಮಯ’ ಪ್ರಬಂಧದ ಎಲ್ಲ ಪ್ರಬಂಧಗಳೂ ಮುದುಡಿದ ಮನಸನ್ನು ಅರಳಿಸಿ, ತನ್ನಿಂದ ತಾನೇ ಓದಿಸಿಕೊಳ್ಳುತ್ತಾ ಹೋಗುತ್ತದೆ. ಆಧುನಿಕ ಬದುಕಿನ ಬಿಕ್ಕಟ್ಟನ್ನು ಹೊಸ ದೃಷ್ಟಿಕೋನದಿಂದ ಅವಲೋಕಿಸಿ, ಕೃತಕತೆಯ ಸುಳಿಯೊಳಗೆ ಸಿಲುಕದ ಹಾಗೆ ಎಚ್ಚರವಹಿಸುವ ನಾವಿಕನಂತೆ ಕೆಲಸಮಾಡುವಲ್ಲಿಯೇ ಈ ಕೃತಿಯ ಯಶಸ್ಸಿದೆ. ಸಹಜ ಬದುಕಿನ ಲಯವನ್ನು ಛಿದ್ರಗೊಳಿಸುವ ಆಧುನಿಕತೆಯ ಅಪಾಯವನ್ನು ಅರಿತಿರುವ ಲೇಖಕರು ಸಹಜ ನಗುವಿನೊಂದಿಗೆ ಬದುಕನ್ನು ಸವಿಯುವ ಆಶಯವನ್ನು ವ್ಯಕ್ತಪಡಿಸಿರುವ ರೀತಿ ಆಪ್ತವಾಗಿದೆ.

ವೃತ್ತಿ ಪ್ರವೃತ್ತಿಗಳೆರೆಡನ್ನೂ ಸಮಾನಾಂತರವಾಗಿ ತೂಗಿಸಿಕೊಳ್ಳುವುದು ಒಂದು ಸಾಧನೆ. ಅಧಿಕಾರಕ್ಕೂ ಕನಸು/ಕಲ್ಪನೆಗೂ ದೂರ ಎಂಬ ಮಾತಿಗೆ ಅಪವಾದ ಎಂಬಂತೆ ವೃತ್ತಿಯ ಅನುಭವಗಳನ್ನು ಪ್ರವೃತ್ತಿಯ ಸರಕಾಗಿಸಿಕೊಂಡು ಕನ್ನಡಿಗರಿಗೆ ‘ವೃತ್ತಿ ವಿಲಾಸ’ದ ಮೂಲಕ ಹೊಸತೊಂದು ರಸದೌತಣ ನೀಡಿದ್ದಾರೆ.

sathyanarayan


ವೃತ್ತಿ ಸಂಬಂಧ ಆಗುವ ವರ್ಗಾವಣೆ ತರುವ ಸ್ಥಳ ಬದಲಾವಣೆ, ಅದರಿಂದ ದೊರೆಯುವ ಹೊಸ ಜನ, ಹೊಸ ಭಾಷೆ, ಹೊಸ ಸಂಸ್ಕೃತಿಯ ಪರಿಚಯಗಳು ಒಟ್ಟಾರೆ ಬೆಳವಣಿಗೆಗೆ ಧನಾತ್ಮಕ ಅಂಶಗಳಾದರೂ, ಹುಟ್ಟಿ ಬೆಳೆದ ಬಾಲ್ಯದೂರಿನಿಂದ ಬಂಧು ಬಾಂಧವರಿಂದ, ಸ್ನೇಹಿತರಿಂದ ದೂರವಾಗಿ, ತನ್ನ ಅಸ್ತಿತ್ವದ ಬೇರು ಗಟ್ಟಿಯಾಗಿಸಿಕೊಳ್ಳಲಾರದ ಋಣಾತ್ಮಕ ಅಂಶಗಳನ್ನೂ ವೃತ್ತಿ ವಿಲಾಸ ಸೂಕ್ಷ್ಮವಾಗಿ ನಮ್ಮ ಮುಂದೆ ತೆರೆದಿಡುತ್ತದೆ
ಆದಾಯ ತೆರಿಗೆಯಂತಹ ‘ರೆವೆನ್ಯೂ’ ಇಲಾಖೆಯಲ್ಲಿನ ಅತ್ಯುನ್ನತ ಹುದ್ದೆಯ ಒಬ್ಬ ವ್ಯಕ್ತಿಯನ್ನು, ಆತ ಭ್ರಷ್ಟನಾಗಿದ್ದಿರಲೇಬೇಕೆನ್ನುವ ಎಲ್ಲರ ಸಾಮಾನ್ಯ ಪರಿಕಲ್ಪನೆಯನ್ನು ಮೀರಿಯೂ ಮಾನವೀಯ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವ, ನಿರ್ವಹಿಸಬೇಕಾದಾಗ ಒದಗುವ ಅಡೆತಡೆ, ಆತಂಕಗಳ ಚಿತ್ರಣ ಹೃದ್ಯವಾಗುತ್ತದೆ. ಸತ್ಯನಾರಾಯಣ ಅವರು ವೃತ್ತಿ’ ಮತ್ತುಪ್ರವೃತ್ತಿ’ ಗಳೆರಡನ್ನೂ ಸಮಾನವಾಗಿ ಆಷ್ಟೇ ಪ್ರಾಮಾಣಿಕತೆಯಿಂದ ಆಸಕ್ತಿಯಿಂದ ಸಾಧಿಸಿದ ಅಪರೂಪದ ಕಥನಕ್ಕೆ ಈ ಪುಸ್ತಕ ಸಾಕ್ಷಿಯಾಗಿದೆ.

ಸತ್ಯನಾರಾಯಣ ಅವರು ಯಾವ ಮುಚ್ಚುಮರೆಯೂ ಇಲ್ಲದೆ, ಮನದ ಮಾತುಗಳಿಗೆ ಮುಖವಾಡ ತೊಡಿಸದೆ ಇದ್ದುದನ್ನು ಇದ್ದಂತೆ ಸಹಜವಾಗಿ, ನೇರವಾಗಿ ಮತ್ತು ಸರಳವಾಗಿ ಹೇಳುವ ವಿಧಾನ ಅವರ ಬರವಣಿಗೆಯನ್ನು ಆಪ್ತಗೊಳಿಸುತ್ತದೆ. ಆತ್ಮಚರಿತ್ರೆಯ ಭಾಗವಾದ ‘ಬಾಡಿಗೆ ಮನೆಗಳ ರಾಜ ಚರಿತ್ರೆ’ಯಲ್ಲಿ ಲೇಖಕನ ಮಾತು ‘ಒಂದು ಮನೆಯೊಡನೆ ಭಾವನಾತ್ಮಕ ಸಂಬಂಧ ಮೂಡಬೇಕಾದರೆ, ಅನಾವು ಮಾತ್ರ ಅಲ್ಲಿ ವಾಸಿಸಿದರೆ ಸಾಲದು, ಹಿಂದಿನ ತಲೆಮಾರಿನವರೂ ವಾಸಿಸಿರಬೇಕು. ಹೆರಿಗೆ, ಮರಣ, ಮದುವೆ, ಪ್ರಸ್ತ ಇವೆಲ್ಲ ಅಲ್ಲಿ ಜರುಗಿರಬೇಕು. ಮನೆಯ ಮಾತು ಹಾಗಿರಲಿ, ಒಂದೊಂದು ತೊಟ್ಟಿಲಿಗೂ, ಒನಕೆಗೂ, ದೇವರ ಮಂಟಪಕ್ಕೂ, ಮೊಸರಿನ ಜಾಡಿಗೂ ಎಷ್ಟೊಂದು ಇತಿಹಾಸವಿರುತ್ತಿತ್ತು. ಅವುಗಳನ್ನು ಬಳಸಿತ್ತಿದ್ದುದರಿಂದಲೇ ಒಂದು ರೀತಿಯ ಕಂಪನ, ಪುಳಕ ನಮ್ಮ ದೇಹ, ಮನಸ್ಸಿನಲ್ಲಿ ಜಾಗೃತವಾಗುತ್ತಿತ್ತು. ಒಂದೊಂದು ಬಾಡಿಗೆ ಮನೆಯಲ್ಲಿದ್ದಾಗಲೂ ನಮ್ಮಭಾವಲೋಕ, ಒಡನಾಟ, ದೃಷ್ಟಿಕೋನ, ಅನುಭವ ಎಲ್ಲವೂ ಬದಲಾಗುತ್ತದೆ ಎಂಬುದು ನಿಜ’ ಕೃತಿಯ ಗಟ್ಟಿತನವನ್ನು ಅನಾವರಣಗೊಳಿಸಿ ತನ್ನ ಆವರಣಕ್ಕೆ ಸೆಳೆದುಕೊಳ್ಳುತ್ತದೆ.

ವಠಾರಗಳಿಂದ ಹಿಡಿದು ಅಪಾರ್ಟ್ಮೆಂಟುಗಳ ಬಾಡಿಗೆ ಮನೆಗಳ ತನಕ ಅದು ಯಾವ ಸ್ವರೂಪದ್ದೇ ಆಗಿರಲಿ, ಅವುಗಳು ನಾವು ಇದ್ದಾಗ ಕಟ್ಟಿಕೊಟ್ಟ ಬದುಕು, ಬಿಟ್ಟ ಮೇಲೆ ಕಾಡುವ ಭಾವತೀವ್ರತೆ, ಮತ್ತೆ ಮತ್ತೆ ಆ ದಿನಗಳನ್ನು ಅನುಭವಿಸಬೇಕೆಂಬ ಆಸೆಯನ್ನು ಹುಟ್ಟಿಸುವುದು, ಇದರೊಟ್ಟಿಗೆ ಹಳೆಯ ನೆನಪುಗಳಿ ಇಂಬುಕೊಡುವ ಸ್ಥಿತಿಯನ್ನು ಎಳ್ಳಷ್ಟೂ ಬಿಂಬಿಸದೆ ಕಾಲಕ್ಕೆ ತಕ್ಕ ಬದಲಾವಣೆ ಆಗುವುದು; ಆ ಬದಲಾವಣೆ ತರುವ ನಿರಾಸೆ, ವಾಸ್ತವಕ್ಕಿಂತ ನೆನಪೇ ಸವಿ ಇತ್ತು ಎನ್ನುವ ಭಾವಗಳನ್ನು ಈ ಕೃತಿ ಸಶಕ್ತವಾಗಿ ಚಿತ್ರಿಸಿದೆ.

‘ಲೈಂಗಿಕ ಜಾತಕ’ ಕಾದಂಬರಿ ಸಲಿಂಗಕಾಮದ ಪ್ರಧಾನ ಭೂಮಿಕೆ ಹೊಂದಿದೆ. ವಸ್ತುಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನಕ್ಕೊಳಪಡಿಸಿ, ಎಲ್ಲಿಯೂ ಸಭ್ಯತೆಯ ಗೆರೆ ಮೀರದಂತೆ ಬೆಳೆಸಿರುವುದು ಅವರ ಬರವಣಿಗೆಯ ಕೌಶಲಕ್ಕೆ ಸಾಕ್ಷಿಯಾಗಿದೆ. ‘ಸಲಿಂಗಕಾಮಿಗಳ ಸಮ್ಮೇಳನ’ ಎಂದು ಆರಂಭವಾಗುವ ಕಾದಂಬರಿ ಮನುಷ್ಯನ ಸುಪ್ತಮನದೊಳಗೆ ಹೊಗೆಯಾಡುವ ವಿಷಯಾಸಕ್ತಿ ತಾಳುವ ವಿವಿಧ ಆಯಾಮಗಳನ್ನು ಚರ್ಚಿಸುತ್ತಾ ಮನೋವಿಜ್ನಾನದ ಭೂಮಿಕೆಯನ್ನೂ ಹೊಕ್ಕುತ್ತದೆ. ಕನ್ನಡ ಕಾದಂಬರಿ ಲೋಕಕ್ಕೆ ಈ ಕೃತಿ ಹೊಸ ಹೊರಳೊಂದನ್ನು ನೀಡಿದೆ.

ಕೇವಲ ಪ್ರಯೋಗಕ್ಕಾಗಿ ಪ್ರಯೋಗ ಮಾಡದೆ ಆಯಾ ಪ್ರಕಾರದ ಸಂವೇದನೆಗಳ ಹೊಸ ಶೋಧಕ್ಕೂ ತುಡಿಯುವುದು ಸತ್ಯನಾರಾಯಣ ಅವರ ವಿಶೇಷತೆ.

ಇವರ ಕಥೆಗಳು ಬೇರೆ ಭಾಷೆಗಳಿಗೂ ಅನುವಾದವಾಗಿದೆ ಎಂಬುದು ಕನ್ನಡಿಗರ ಹೆಮ್ಮೆ. ಇವರ ಕಥೆಗಳಿಗೆ ದೊರೆತ ಮನ್ನಣೆ ಅಪಾರ. ಕನ್ನಡಪ್ರಭದ ಸಂಕ್ರಾAತಿ ಪುರಸ್ಕಾರ ಮತ್ತು ಯುಗಾದಿ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಮಾಸ್ತಿ ಕಥಾ ಪುರಸ್ಕಾರ ಲಭಿಸಿದೆ. ಕಾದಂಬರಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಭಾರತೀಸುತ ದತ್ತಿ ಪುರಸ್ಕಾರ, ಪ್ರಬಂಧ ಸಂಕಲನಕ್ಕೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದ್ದು, ಇವೆಲ್ಲಕ್ಕೂ ಕಿರೀಟವಿಟ್ಟಂತೆ ಒಟ್ಟು ಸಾಹಿತ್ಯ ಸೇವೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ದೊರೆತಿದೆ. ಇವಲ್ಲದೆ ಡಾ. ರಾಗೌ ಪುರಸ್ಕಾರ, ಎಂ.ವಿ.ಸಿ ಪ್ರಶಸ್ತಿಯೂ….
ಮದ್ದೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರ ಸಾಹಿತ್ಯ ಸೇವೆಗೆ ಮಂಡ್ಯ ಜಿಲ್ಲೆ ಕೊಟ್ಟ ಗೌರವ.

ಅನೇಕ ಸಾಹಿತ್ಯಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಸಮರ್ಥವಾಗಿ ಆಭಿವ್ಯಕ್ತಿಸಿರುವ ಕೆ.ಸತ್ಯನಾರಾಯಣ ಅವರಿಂದ ಕನ್ನಡಕ್ಕೆ ಮತ್ತಷ್ಟು ಮೆರುಗು ಲಭಿಸಲಿ ಎಂಬುದೇ ಸಹೃದಯರ ಆಶಯ

IMG 20180306 WA0008 1 edited
ಡಾ.ಶುಭಶ್ರೀ ಪ್ರಸಾದ್, ಮಂಡ್ಯ

Copyright © All rights reserved Newsnap | Newsever by AF themes.
error: Content is protected !!