December 23, 2024

Newsnap Kannada

The World at your finger tips!

karnataka flag

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 29

Spread the love

ಕಾದಂಬರಿ ಬ್ರಹ್ಮ ತರಾಸು

ta ra su


ಓದುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಪ್ರಮುಖ ಕನ್ನಡ ಕಾದಂಬರಿಕಾರರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವವರು ತರಾಸು. ನಾಗರಹಾವು ಚಿತ್ರದ ಮೂಲಕ ಚಿತ್ರರಸಿಕರಲ್ಲಿ ಹಾಗೂ ದುರ್ಗಾಸ್ತಮಾನ ಕಾದಂಬರಿಯ ಮೂಲಕ ಓದುಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯುವವರು ಈ ಖ್ಯಾತ ಬರಹಗಾರ ತಳುಕು ರಾಮಸ್ವಾಮಯ್ಯ ಸುಬ್ಬರಾವ್.

ಕಥೆ ಹೇಳುವುದರಲ್ಲಿ ನಿಸ್ಸೀಮರಾದ ತರಾಸು ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾದ ವರ್ಣನೆ, ಅತಃಕರಣ ಉಕ್ಕಿ ಬರುವ ಸಂಭಾಷಣೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಇವರ ಕಾದಂಬರಿಗಳಲ್ಲಿ ಕಾಣಬಹುದು ಎನ್ನುವ ಅಭಿಪ್ರಾಯ ಪ್ರಕಾಶಕರ ವಲಯದ್ದಾಗಿದೆ.
ತರಾಸು ಅವರ ಕಾದಂಬರಿಗಳು ರೋಚಕವಾಗಿರುತ್ತವೆ ಹಾಗೂ ವಿಷಯವನ್ನು ಸಮರ್ಥವಾಗಿ ತಿಳಿಸುವ ಅದ್ಭುತ ಶೈಲಿ ಹೊಂದಿದ್ದವು ಎನ್ನುವುದಕ್ಕೆ ಹಲವು ಕಾದಂಬರಿಗಳು ಮರು ಮುದ್ರಣವಾಗಿರುವುದು ಮತ್ತು ಚಲನಚಿತ್ರಗಳಾಗಿರುವುದಕ್ಕೆ ಉದಾಹರಣೆಯಾಗಿವೆ.


ಪ್ರಸ್ತುತ ದಾವಣೆಗೆರೆ ಜಿಲ್ಲೆಗೆ ಸೇರಿರುವ ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ ೧೯೨೦ ಏಪ್ರಿಲ್ ೨೧ರಂದು ತರಾಸು ಜನನವಾಗುತ್ತೆ. ರಾಮಸ್ವಾಮಯ್ಯ- ಸೀತಮ್ಮ ಜನ್ಮದಾತರು. ಹರಿಹರದಲ್ಲಿ ವಕೀಲ ವೃತ್ತಿಯಲ್ಲಿರುತ್ತಾರೆ ತರಾಸು ತಂದೆ. ಇವರ ಪೂರ್ವಿಕರು ಚಿತ್ರದುರ್ಗ ಜಿಲ್ಲೆಯ ತಳುಕು ಗ್ರಾಮದವರು. ಪುಟ್ಟನ ಚೆಂಡು ತರಾಸು ಬರೆದ ಪ್ರಥಮ ಕಥೆ. ದೇಶದಲ್ಲಿ ಸ್ವಾತಂತ್ರ ಚಳವಳಿಯ ಬಿಸಿಇದ್ದ ಸಂದರ್ಭ. ಇದರಿಂದ ಪ್ರಭಾವಿತರಾದ ೧೭ ವರ್ಷದ ಯುವಕ ತರಾಸು ಸಮಾನ ಮನಸ್ಕರೊಂದಿಗೆ ದೇಶಭಕ್ತಿಗೀತೆಗಳನ್ನು ಹಾಡುತ್ತಾ, ಪರಿಣಾಮಕಾರಿ ಭಾಷಣಗಳನ್ನು ಮಾಡುತ್ತಾ ಗ್ರಾಮೀಣ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚುಹಚ್ಚಿಸತೊಡಗುತ್ತಾರೆ. ಪರಿಣಾಮ ಕಾರಾಗೃಹವಾಸ ಅನುಭವಿಸಬೇಕಾಗುತ್ತೆ.


ಸ್ವಾತಂತ್ರ್ಯ ಚಳವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ತಮ್ಮ ಮಗನ ವಿದ್ಯಾಭ್ಯಾಸ ಎಲ್ಲಿ ಮೊಟಕಾಗುತ್ತದೋ ಎಂದು ಹೆದರಿದ ತಂದೆ ರಾಮಸ್ವಾಮಯ್ಯ ತಮ್ಮ ಮಗನನ್ನು ಬೆಂಗಳೂರಿಗೆ ಕಳುಹಿಸುತ್ತಾರೆ. ಶಾಲಾ ಶಿಕ್ಷಣವನ್ನು ಅಲ್ಲಿ ಪೂರೈಸಿದ ತರಾಸು, ಶಿವಮೊಗ್ಗದಲ್ಲೂ ಓದಿದ ನಂತರ ತುಮಕೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮುಂದುವರಿಸುತ್ತಾರೆ. ಅದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡು ಮಹಾತ್ಮಗಾಂಧಿ ಬಂಧನವಾಗುತ್ತಲೇ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಚಳವಳಿಗೆ ಮುಂದಾಗುತ್ತಾರೆ.


ಛಲಗಾರ ಯುವಕ ತರಾಸು ಮತ್ತು ಸ್ನೇಹಿತರು ಚಳವಳಿಯಲ್ಲಿ ಭಾಗವಹಿಸಲು ಯೋಚಿಸುತ್ತಿದ್ದಾಗಲೇ ವಿಷಯ ತಿಳಿದ ಪೊಲೀಸರು ತರಾಸು ಅವರನ್ನು ಬಂಧಿಸುತ್ತಾರೆ. ೧೯೪೨ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ತರಾಸು ನಂತರ ಬೆಂಗಳೂರಿಗೆ ಬಂದು ವಿಶ್ವಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾಕದರಾಗಿ ಕೆಲಸಕ್ಕೆ ಸೇರುತ್ತಾರೆ. ಇದೇ ಸಂದರ್ಭದಲ್ಲಿ ಅಂಬುಜಾ ಅವರನ್ನು ವಿವಾಹವಾಗುವ ತರಾಸು ನಂತರ ಪ್ರಜಾಮತ, ನವೋದಯ ಮತ್ತಿತರ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಾರೆ.


ಬರವಣಿಗೆಯಲ್ಲಿ ಆಸಕ್ತಿಹೊಂದಿದ್ದ ತರಾಸು ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದವರು ಕಾದಂಬರಿ ಸಾರ್ವಭೌಮ, ಪ್ರಗತಿಶೀಲಬರಹಗಾರ ಅ.ನ.ಕೃಷ್ಣರಾವ್. ತರಾಸು ಅವರ ಪ್ರಾಥಮಿಕ ಬರವಣಿಗೆಯಲ್ಲಿ ಪ್ರಗತಿಶೀಲ ಸಾಹಿತ್ಯದ ಪ್ರಭಾವ ಕಾಣಬಹುದು. ಇದಕ್ಕೆ ಉದಾಹರಣೆಯೆಂದರೆ ಪುರುಷಾವತಾರ ಮತ್ತು ಮುಂಜಾವಿನಿAದ ಮುಂಜಾವು ಕಾದಂಬರಿ. ಆ ದಿನಗಳಲ್ಲಿ ಸಮಾಜದಲ್ಲಿ ತುಳಿತಕ್ಕೊಳಗಾದವರು, ಕೆಳಜಾತಿಯವರು ಎದುರಿಸುತ್ತಿದ್ದ ಸಮಸ್ಯೆಯನ್ನು ಅಕ್ಷರಗಳಲ್ಲಿ ಇಳಿಸಿರುವುದನ್ನು ಈ ಕಾದಂಬರಿಗಳಲ್ಲಿ ಕಾಣಬಹುದಾಗಿದೆ.

ta ra

ನವ್ಯ ಸಾಹಿತ್ಯ ಚಳವಳಿ ಶೈಶಾವಸ್ಥೆಯಲ್ಲಿದ್ದ ಸಮಯದಲ್ಲೇ ತರಾಸು ತಮ್ಮ ಬರವಣಿಗೆಯನ್ನು ಆರಂಭಿಸಿ ಇದರ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಗೆಯೇ ಗಾಂಧಿ ತತ್ವವನ್ನು ಹೇಳುವ, ಗ್ರಾಮೀಣ ಕುಟುಂಬದ ಕಥೆ ಬಿಂಬಿತವಾಗಿರುವುದು ತರಾಸು ಅವರ ಚಂದವಳ್ಳಿಯ ತೋಟದಲ್ಲಿ. ಇದು ನಂತರ ಡಾ. ರಾಜ್‌ಕುಮಾರ್ ನಾಯಕರಾಗಿರುವ ಚಿತ್ರವಾಗಿ ರೂಪುಗೊಂಡಿತು. ಈ ಇಬ್ಬರು ಜೋಡಿಯ ಮತ್ತೆರಡು ಚಿತ್ರವೆಂದರೆ ಮಾರ್ಗದರ್ಶಿ ಮತ್ತು ಚಕ್ರತೀರ್ಥ.ಪ್ರಮುಖವಾಗಿ ನಾಗರಹಾವು, ಹಂಸಗೀತೆ, ಮಸಣದಹೂವು, ಆಕಸ್ಮಿಕ ಚಿತ್ರಗಳಿಗೆ ಆಧಾರವಾಗಿರುವ ಇವರ ಕಾದಂಬರಿಗಳು ವಿಭಿನ್ನ ಕತೆಗಳಾಗಿದ್ದು ಜನಮೆಚ್ಚುಗೆ ಗಳಿಸಿವೆ. ಹಾಗೆಯೇ ಐತಿಹಾಸಿಕ ಕಾದಂಬರಿಗಳನ್ನು ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ ತರಾಸು. ಇದಕ್ಕೆ ಅತ್ಯುತ್ತಮ ಉದಾಹರಣೆ ನೃಪತುಂಗ ಮತ್ತು ದುರ್ಗಾಸ್ತಮಾನ. ಚಿತ್ರದುರ್ಗದ ಇತಿಹಾಸವನ್ನು ತಿಳಿಸುವ ಇತರ ಕೃತಿಗಳೆಂದರೆ ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ. ತರಾಸು ಅವರ ಕೊನೆಯ ಕಾದಂಬರಿ, ಮದಕರಿನಾಯಕನ ಆಳ್ವಿಕೆಯನ್ನು ಚಿತ್ರಿಸಿರುವ ದುರ್ಗಾಸ್ತಮಾನ. ಇದಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.


ತರಾಸು ಅವರ ಮೂರು ಕಥೆಗಳನ್ನಾಧರಿಸಿದ, ಪುಟ್ಟಣ್ಣಕಣಗಾಲ್ ನಿರ್ದೇಶನದ ನಾಗರಹಾವು, ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಚಿತ್ರಗಳಲ್ಲೊಂದು ಎಂಬ ಪ್ರಶಂಸೆಯೂ ಬಂದಿದೆ. ಆದರೆ ಈ ಚಿತ್ರ ಮೂಲ ಲೇಖಕರ ಮನಸ್ಸನ್ನು ಗೆಲ್ಲಲಾರದೆ ಹೋಯಿತು ಎಂಬುದು ನೋವಿನ ವಿಷಯ. ಕನ್ನಡ ಚಿತ್ರರಂಗದ ಯಶಸ್ವಿನಿರ್ದೇಶಕ ಜೋಡಿಯಾದ ದೊರೆ-ಭಗವಾನ್ ಅವರ ಅಚ್ಚುಮೆಚ್ಚಿನ ಕಾದಂಬರಿಕಾರರೆಂದರೆ ತರಾಸು. ಇವರ ಚಂದನದಗೊಂಬೆ, ಗಾಳಿಮಾತು, ಬೆಂಕಿಯಬಲೆ, ಬಿಡುಗಡೆಯ ಬೇಡಿ ಚಲನಚಿತ್ರಗಳಾಗಿ ಪ್ರೇಕ್ಷಕರ ಮನಗೆದ್ದಿವೆ.

nagara


ಚಕ್ರೇಶ್ವರಿ, ರಾಜ್ಯದ್ರೋಹ, ರಾಜ್ಯದಾಹ, ರಕ್ತರಾತ್ರಿ, ರಕ್ತತರ್ಪಣ, ಯಕ್ಷಪ್ರಶ್ನೆ, ಹೊಯ್ಸಳೇಶ್ವರ ವಿಷ್ಣುವರ್ಧನ, ಬಯಕೆಯ ಬೂದಿ, ಬಂಗಾರಿ, ಭಾಗ್ಯಶಿಲ್ಪಿ, ಮೊದಲನೋಟ, ವಿಜಯೋತ್ಸವ, ಕಸ್ತೂರಿ ಕಂಕಣ, ಮರಳುಸೇತುವೆ, ಬೇಡದ ಮಗು, ಬೆಳಕು ತಂದ ಬಾಲಕ, ಪಂಜರದ ಪಕ್ಷಿ, ಚದುರಂಗದ ಮನೆ, ಅಕ್ಕಮ್ಮನ ಭಾಗ್ಯ ಹೀಗೆ ತರಾಸು ಅವರ ಕಾದಂಬರಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತೆ. ೧೯೫೬ರಲ್ಲಿ ತೆರೆಗೆಬಂದ ಹಿಂದಿ ಚಿತ್ರ ಬಸಂತ್ ಬಹಾರ್ ಹಂಸಗೀತೆ ಕಾದಂಬರಿ ಆಧರಿಸಿತ್ತು. ಹಂಸಗೀತೆ ಹೆಸರಿನಲ್ಲಿ ಕನ್ನಡದಲ್ಲಿ ಚಿತ್ರಬಂದಿದ್ದು ೧೯೭೫ರಲ್ಲಿ. ಇದರ ನಿರ್ದೇಶಕರು ಜಿ.ವಿ. ಅಯ್ಯರ್.


೧೯೮೪ ಏಪ್ರಿಲ್ ೧೦ರಂದು ಈ ಮಹಾ ಕಾದಂಬರಿಕಾರ ಬೆಂಗಳೂರಿನಲ್ಲಿ ಅಸ್ತಂಗತರಾದರು. ಈ ಸಮಯದಲ್ಲಿ ಇವರ ಆತ್ಮಚರಿತ್ರೆ ಹಿಂದಿರುಗಿ ನೋಡಿದಾಗ ಪುಸ್ತಕವೂ ಅರ್ಧಕ್ಕೆ ನಿಂತಿತು. ನಂತರ ಇವರ ಪತ್ನಿ ಅದನ್ನು ಪೂರ್ಣಗೊಳಿಸಿದರು.

kcsp
ಕೆ.ಸಿ.ಸತ್ಯಪ್ರಕಾಶ್
ಹಿರಿಯ ಪತ್ರಕರ್ತರು
Copyright © All rights reserved Newsnap | Newsever by AF themes.
error: Content is protected !!