ನನ್ನನ್ನು ಮಂತ್ರಿ ಮಾಡುವ ವಿಚಾರ ಸಿಎಂ ಗೆ ಬಿಟ್ಟದ್ದು : ಸಿ. ಪಿ. ಯೋಗೇಶ್ವರ್

Team Newsnap
1 Min Read

ಯಾವುದೇ ಕಾಂಟ್ರವರ್ಸಿ ನನಗಿಷ್ಟ ಇಲ್ಲ. ನನ್ನ ಮಂತ್ರಿ ಮಾಡುವ ವಿಚಾರ ಸಿಎಂಗೆ ಬಿಟ್ಟದ್ದು. ಮಂತ್ರಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ  ನಾನು ಬದ್ದನಾಗಿರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್​ ತಿಳಿಸಿದ್ದಾರೆ.

ಸಚಿವಸ್ಥಾನಕ್ಕಾಗಿ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಅವರನ್ನು ಭೇಟಿಯಾಗಿ ಸಭೆ ನಡೆಸುತ್ತಿದ್ದಾರೆ ಎಂಬ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್ , ನಾನು ಸಚಿವ ಸ್ಥಾನ ಬೇಕು ಎಂದು ಎಲ್ಲೂ ಹೇಳಿಲ್ಲ. ಒಂದು ವೇಳೆ ಮುಖ್ಯಮಂತ್ರಿಗಳು, ವರಿಷ್ಠರು ಮನಸು ಮಾಡಿ ಕೊಟ್ಟರೆ ಅದನ್ನು ನಿಭಾಯಿಸುತ್ತೇನೆ ಎಂದು ಸಚಿವಗಿರಿ ಆಸೆಯನ್ನು ಸಹ ಪರೋಕ್ಷವಾಗಿ ವ್ಯಕ್ತಪಡಿಸಿದರು.

ನನ್ನನ್ನು ವಿವಾದಗಳು ಕಾಡುತ್ತವೆ:

ನಾನು ಸೋತವನು ಅಂತ ಹೇಳುತ್ತಿದ್ದಾರೆ. ನಮ್ಮ ಶಾಸಕರೂ ಕೂಡ ಈ ರೀತಿ ಹೇಳಿಕೆ ನೀಡುತ್ತಾರೆ. ಯಾಕೋ ಗೊತ್ತಿಲ್ಲ, ವಿವಾದ ನನ್ನ ಹಿಂದೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಕುಮಾರಸ್ವಾಮಿಗೆ ಈಗ ತಳಮಳ :

ಇನ್ನು ಚನ್ನಪಟ್ಟಣಕ್ಕೆ ನಾನೇ ಸಿಎಂ ಎಂಬ ಎಚ್​ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಈ ಹೇಳಿಕೆ ಮೂಲಕ ಅವರು, ಚನ್ನಪಟ್ಟಣಕಷ್ಟೇ ಸೀಮಿತರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನ ಹೋದ ಮೇಲೆ ಕುಮಾರಸ್ವಾಮಿಗೆ ತಳಮಳ ಆಗಿದೆ. ಅವರು ಬಹಳ‌ ಹತಾಶರಾಗಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿಗೆ ಈಗ ರಾಜಕೀಯವಾಗಿ ಸಾಕಷ್ಟು ಕಷ್ಟ ಇದೆ. ಅವರು ಬಹಳ ವರ್ಷಗಳಿಂದಲೂ ನನ್ನ ವಿರುದ್ಧ ಪಿತೂರಿ ಮಾಡುತ್ತಲೇ ಇದ್ದಾರೆ. ಡಿಕೆ ಶಿವಕುಮಾರ್​ ಕೂಡ ನನ್ನ ವಿರುದ್ಧ ಪಿತೂರಿ ಮಾಡುತ್ತಿ ದ್ದಾರೆ. ಅವರಿಬ್ಬರೂ ಇವತ್ತು ಯಾವ ಪರಿಸ್ಥಿತಿಯಲ್ಲಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ಮುಂದಿನ ದಿನಗಳಲ್ಲಿ ಅವರಿಬ್ರೂ ಅನುಭವಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

ವಿಶೇಷ ಅರ್ಥ ಬೇಡ:

ಇದೇ ವೇಳೆ ರಮೇಶ್​ ಜಾರಕಿಹೊಳಿ ಮನೆಗೆ ಭೇಟಿ ನೀಡಿದ ಕುರಿತು ಪ್ರತಿಕ್ರಿಯಿಸಿರುವ ಅವರು, ರಮೇಶ್ ಜಾರಕಿಹೊಳಿ​ ಭೇಟಿಯಲ್ಲಿ ವಿಶೇಷವಿಲ್ಲ. ಅವರು ಇವತ್ತು ಊರಿಗೆ ಹೊರಟಿದ್ದರು, ಊಟ ಮಾಡಿದ್ವಿ, ಮಾತಾಡಿದ್ವಿ, ಶಾಸಕರು ತಮ್ಮ ಅಭಿಪ್ರಾಯ ಹೇಳಿ ಕೊಂಡರು ಅಷ್ಟೇ ಎಂದು ಹೇಳಿದ್ದಾರೆ.

ಗಾಳಿಯಲ್ಲಿ ಪಟಾಕಿ ಹೊಡೆದಿದ್ದಾರೆ:

ಸಂತೋಷ್ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಡಿಕೆ ಶಿವಕುಮಾರ್​ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಡಿಕೆಶಿ ಗಾಳಿಯಲ್ಲಿ ಪಟಾಕಿ ಹೊಡೆಯುವ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು, ಅನುಭವಿಗಳು. ಅವರು ನಗೆಪಾಟಲಿನಂಥ ಹೇಳಿಕೆ ಕೊಡೋದು ಯಾಕೆ ಎಂದು ಪ್ರಶ್ನಿಸಿದ್ದಾರೆ.

Share This Article
Leave a comment