December 23, 2024

Newsnap Kannada

The World at your finger tips!

deepa1

ಪ್ರತಿ ಕ್ಷಣವೂ ಆತಂಕದಲ್ಲೇ ಬದುಕಬೇಕಾದ ಅನಿವಾರ್ಯ……

Spread the love

ಹೋಮಿಯೋಪತಿ,
ಅಲೋಪತಿ,
ನ್ಯಾಚುರೋಪತಿ,
ಆಯುರ್ವೇದಿಕ್,
ಪ್ರಾಣಿಕ್ ಹೀಲಿಂಗ್,
ಅಕ್ಯುಪಂಕ್ಚರ್,
ಮನೆ ಮದ್ದು ……..

ಹೀಗೆ ಮನುಷ್ಯನ ಸುರಕ್ಷತೆಗಾಗಿ ಮಾಡಿಕೊಂಡ ವ್ಯವಸ್ಥೆಗಳು.

ಯೋಗ, ಧ್ಯಾನ, ಪ್ರಾಣಾಯಾಮ, ಓಟ, ಜಿಗಿತ, ಕುಣಿತ, ಕರಾಟೆ, ಕುಂಗ್ ಪು, ಕಳರಿಪಯಟ್ಟು, ಕುಸ್ತಿ, ಕುದುರೆ ಸವಾರಿ…….

ಎಲ್ಲವೂ ದೇಹ ಮನಸ್ಸುಗಳ ಆರೋಗ್ಯಕ್ಕಾಗಿ ಮಾಡಿಕೊಂಡಿರುವ ತಯಾರಿಗಳು.

ಓದು, ಬರಹ, ಪ್ರವಾಸ, ನಾಟಕ, ಸಿನಿಮಾ, ಸಂಗೀತ, ಕಲೆ, ನೃತ್ಯ, ಹಾಡು…..

ಎಲ್ಲವೂ ಮನರಂಜನೆ ಮತ್ತು ಪ್ರತಿಭೆ ಪ್ರದರ್ಶನಕ್ಕೆ ಕಂಡುಕೊಂಡಿರುವ ಅಭ್ಯಾಸಗಳು,

ಮದುವೆ, ಕುಟುಂಬ, ಮಕ್ಕಳು, ಅಳಿಯಂದಿರು, ಸೊಸೆಯಂದಿರು…..

ಎಲ್ಲವೂ ನಮ್ಮ ಹಿತಾಸಕ್ತಿಗಾಗಿ ನಿರ್ಮಿಸಿಕೊಂಡ ಸಂಬಂಧಗಳು.

ಪೋಲೀಸು, ಮಿಲಿಟರಿ, ಅರೆ ಸೇನಾಪಡೆ, ಗೃಹ ರಕ್ಷಕ ದಳ, ಗಡಿ ಭದ್ರತಾ ಪಡೆ…..

ಎಲ್ಲವೂ ನಮ್ಮ ರಕ್ಷಣೆಗಾಗಿ ಮಾಡಿಕೊಂಡ ವ್ಯವಸ್ಥೆ.

ಶಿಕ್ಷಣ, ತರಬೇತಿ, ಉದ್ಯೋಗ, ವ್ಯಾಪಾರ, ಉತ್ಪಾದನೆ…..

ಎಲ್ಲವೂ ಬದುಕಲು ಕಟ್ಟಿಕೊಂಡ ವ್ಯವಸ್ಥೆ.

ಕಾನೂನು, ಆಡಳಿತ, ಅಧಿಕಾರಿಗಳು, ಲೆಕ್ಕ ಪರಿಶೋಧಕರು…..

ಎಲ್ಲರೂ ನಮ್ಮ ಹಿತಕ್ಕಾಗಿ ಸಕ್ರಿಯವಾಗಿರುವವರು.

ದೇವರು, ಧರ್ಮ, ದೇವಸ್ಥಾನ, ಪೂಜಾರಿಗಳು,…..

ಎಲ್ಲವೂ ನಮ್ಮ ಮಾನಸಿಕ ನೆಮ್ಮದಿಗಾಗಿ ಸೃಷ್ಟಿಸಿರುವ ವ್ಯವಸ್ಥೆಗಳು.

ಮನೆ, ಹೋಟೆಲ್, ಆಶ್ರಯ, ಛತ್ರ, ಮಠ……..

ಎಲ್ಲವೂ ನಮ್ಮ ಸೌಕರ್ಯಕ್ಕಾಗಿ ನಿರ್ಮಿಸಿರುವ ಕಟ್ಟಡಗಳು.

ಬಾವಿ, ಕೆರೆ, ಸೇತುವೆ, ಕಾಲುವೆ, ಜಲಾಶಯ…

ಎಲ್ಲವನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಲು ನಿರ್ಮಿಸಿರುವ ವ್ಯವಸ್ಥೆಗಳು.

ಹಣ್ಣು ತರಕಾರಿ ಬೇಳೆ ಸಿರಿ ಧಾನ್ಯಗಳು…….

ಎಲ್ಲವೂ ‌ಆಹಾರಕ್ಕಾಗಿ ಕಂಡುಹಿಡಿದ ವಸ್ತುಗಳು.

ಮಂಡಲ, ತಾಲ್ಲೂಕು, ಜಿಲ್ಲಾ, ರಾಜ್ಯ, ದೇಶ…….

ಎಲ್ಲಾ ವಿಂಗಡನೆಗಳು ತನ್ನ ಸುಖಕ್ಕಾಗಿ ಮಾಡಿರುವ ವ್ಯವಸ್ಥೆಗಳು.

ಬಸ್ಸು, ಕಾರು, ರೈಲು, ವಿಮಾನ, ರಾಕೆಟ್‌…….

ಎಲ್ಲವನ್ನೂ ತನ್ನ ಪ್ರಯಾಣಕ್ಕಾಗಿ ತಯಾರಿಸಿ ಇಟ್ಟುಕೊಂಡಿರುವ ವ್ಯವಸ್ಥೆಗಳು.

ಅಬ್ಬಾ, ಅಂಕೆ ಸಂಖ್ಯೆಗಳಿಗೆ ನಿಲುಕಲಾರದಷ್ಟು ಅನುಕೂಲಗಳನ್ನು ಮಾಡಿಕೊಂಡು ಮತ್ತು ಮಾಡಿಕೊಳ್ಳುತ್ತಾ ಬದುಕುತ್ತಿದ್ದಾನೆ.

ಆದರೆ……

ನೆಮ್ಮದಿಯ ಬದುಕು ಅವನಾದಾಗಿಲ್ಲ. ಸ್ವತಂತ್ರ ಜೀವನ ನಡೆಸಲಾಗುತ್ತಿಲ್ಲ.

ಆಸ್ಪತ್ರೆಗಳು, ಪೋಲೀಸ್ ಸ್ಟೇಷನ್ ಗಳು, ನ್ಯಾಯಾಲಯಗಳು, ಸಿಸಿ ಟಿವಿಗಳು ಹೆಚ್ಚುತ್ತಲೇ ಇವೆ.

ಶುದ್ದ ಗಾಳಿ, ಶುದ್ದ ನೀರು, ಶುದ್ದ ಆಹಾರ ಸಿಗುತ್ತಿಲ್ಲ.

ಕಣ್ತುಂಬ ನಿದ್ದೆಗಾಗಿ ಪರದಾಡುವಂತಾಗಿದೆ.

ದೇವಸ್ಥಾಗಳ ಮುಂದೆ ಚಪ್ಪಲಿ ಬಿಟ್ಟು ನೆಮ್ಮದಿಯಿಂದ ಒಳಗೆ ಕೈಮುಗಿಯಲು ಕಷ್ಟವಾಗುತ್ತಿದೆ. ಏಕೆಂದರೆ ಹೊರಗೆ ಬರುವಷ್ಟರಲ್ಲಿ ಚಪ್ಪಲಿ ಮಾಯ. ತಾರಸಿ ಮೇಲಿನ ಬಟ್ಟೆಗಳನ್ನು ಕದಿಯಲಾಗುತ್ತಿದೆ.

ಬಸ್ಸು ರೈಲು ನಿಲ್ದಾಣಗಳಲ್ಲಿ ಕಳ್ಳರಿದ್ದಾರೆ ಎಂಬ ಎಚ್ಚರಿಕೆಯ ಬೋರ್ಡುಗಳು.

ಒಂದು ಸೈಟು ಮನೆ ಕೊಳ್ಳಲು ಹಲವಾರು ವಂಚನೆಯ ಅನುಮಾನಗಳು.

ಒಂದು ಸಣ್ಣ ಕೆಲಸಕ್ಕೆ ಲಂಚ ನೀಡಬೇಕಾದ ಅನಿವಾರ್ಯತೆ.

ಮದುವೆಗಾಗಿ ವಧು ವರರನ್ನು ಹುಡುಕುವುದೇ ಒಂದು ದೊಡ್ಡ ಸಾಹಸ.

ರಾತ್ರಿ ಹೊತ್ತು ನೆಮ್ಮದಿಯಾಗಿ ಒಂಟಿಯಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ.

ಟಿವಿ ಇಂಟರ್ನೆಟ್ ಎಲ್ಲಾ ‌ಬೆರಳ ತುದಿಯಲ್ಲಿ ಇದ್ದರೂ ಯಾವ ಮಾಹಿತಿ ನಿಜ, ಯಾವುದು ಸುಳ್ಳು ಎಂಬ ಗೊಂದಲ ಎಲ್ಲರಲ್ಲೂ ಇರುತ್ತದೆ.

ಪ್ರತಿ ಕ್ಷಣವೂ ಆತಂಕದಲ್ಲೇ ಬದುಕಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಎಲ್ಲಾ ಅನುಕೂಲಗಳೂ ಅನಾನುಕೂಲಗಳಾಗಿರುವ ಪರಿಸ್ಥಿತಿಯಲ್ಲಿ ನಾವು ನೀವು.

ಸರಳತೆಯಿಂದ ಸಂಕೀರ್ಣ ಬದುಕಿನತ್ತ ಸಾಗಿದ ನಾವು ಈಗ ಮತ್ತೆ ಸಂಕೀರ್ಣತೆಯಿಂದ ಸರಳತೆಯತ್ತ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಎಲ್ಲವೂ ಇದ್ದು ಏನೂ ಇಲ್ಲದ ಅನಾಥ ಪ್ರಜ್ಞೆಯಿಂದ ಹೊರಬಂದು ನೆಮ್ಮದಿಯ ಹುಡುಕಾಟದಲ್ಲಿ ನಮ್ಮ ಸಮಾಜ

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!