“ಹಣವಿದ್ದರೆ ದಿನಕರನಂತೆ ಇಲ್ಲದಿದ್ದರೆ ಶ್ವಾನದಂತೆ……’

Team Newsnap
1 Min Read

….”ಹಣವಿದ್ದರೆ ದಿನಕರನಂತೆ ಇಲ್ಲದಿದ್ದರೆ ಶ್ವಾನದಂತೆ……’ ಕನ್ನಡದ ವರನಟ ಡಾ.ರಾಜ್‌ಕುಮಾರ್ ನಟಿಸಿರುವ “ಭಾಗ್ಯದ ಲಕ್ಷ್ಮೀ ಬಾರಮ್ಮ’ ಚಿತ್ರದಲ್ಲಿ ಬರುವ ಟೈಟಲ್ ಹಾಡಿನಲ್ಲಿ ಈ ಸಾಲು ಬರುತ್ತದೆ. ಹಣವಿದ್ದರೆ ಭೂಲೋಕದಲ್ಲೇ ಸ್ವರ್ಗವನ್ನು ಸೃಷ್ಟಿಸಬಹುದು ಎಂಬ ಮಾತು ಇದೆ. ಕೇಂದ್ರ ಸಚಿವರೊಬ್ಬರು ಮಾಡಿದ ಭಾಷಣ ಇದಕ್ಕೆ ಪುಷ್ಟಿ ನೀಡುತ್ತದೆ.


ಅತ್ಯುತ್ತಮವಾದುದು ಬೇಕೆಂದರೆ ಖರ್ಚುಮಾಡಬೇಕು. ಇಲ್ಲದಿದ್ದರೆ ಇರುವುದರಲ್ಲೇ ತೃಪ್ತಿಪಟ್ಟುಕೊಳ್ಳಬೇಕೆಂಬ ಅರ್ಥದಲ್ಲಿ ಮಾತನಾಡಿದ್ದಾರೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ.


ಅವರ ಭಾಷಣದ ತುಣುಕು ಮೊದಲು ತಿಳಿದು ನಂತರ ಕಾರ್ಯಕ್ರಮದ ವಿವರ ಓದಿ.
“ಹವಾನಿಯಂತ್ರಿತ ಕಲ್ಯಾಣಮಂಟಪದಲ್ಲಿ ಮದುವೆ ಮಾಡಬೇಕು ಎಂದರೆ ನೀವು ಹಣ ನೀಡಬೇಕು. ಇಲ್ಲದಿದ್ದರೆ ಹೊಲದಲ್ಲಿಯೇ ಮದುವೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದ್ದಾರೆ ಗಡ್ಕರಿಯವರು ಗುರುವಾರ ಹರಿಯಾಣದ ಸೋಹನಾದಲ್ಲಿ. ಟೋಲ್ ಶುಲ್ಕದಿಂದಾಗಿ ಪ್ರಯಾಣದ ವೆಚ್ಚ ಹೆಚ್ಚಾಗುತ್ತಿದೆ ಎಂದು ಕೇಳಿಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಅವರು ತಮ್ಮ ಈ ವಾದ ಮಂಡಿಸಿದರು.


ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿ ಪರಿಶೀಲಿಸಿದ ಕೇಂದ್ರ ಸಚಿವರು ನಂತರ ಮಾತನಾಡಿದರು. ದೇಶದಲ್ಲಿ ಉತ್ತಮ ರಸ್ತೆಗಳು, ಸಂಚಾರಕ್ಕೆ ಮೂಲ ಸೌಕರ್ಯ ಬೇಕೆಂದರೆ ಜನರು ಹಣಕೊಡಬೇಕಾಗುತ್ತೆ. ದೇಶದ ಹಲವು ಕಡೆ ಎಕ್ಸ್‌ಪ್ರೆಸ್ ಹೈವೇಗಳನ್ನು ನಿರ್ಮಿಸಲಾಗಿದೆ. ಇದರಿಂದ ಪ್ರಯಾಣದ ಅವಧಿ ಕಡಿಮೆಯಾಗಿದೆಯಲ್ಲದೆ ಇಂಧನ ವೆಚ್ಚವೂ ಇಳಿದಿದೆ ಎಂದು ವಿವರಿಸಿದರು.


ದೆಹಲಿ- ಮುಂಬೈ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣದಿಂದ ಪ್ರಯಾಣದ ಅವಧಿ ಸಾಕಷ್ಟು ಇಳಿಯಲಿದೆ. ರೈತರು ಹೆದ್ದಾರಿಗಳ ಬಳಿ ಇರುವ ತಮ್ಮ ಜಮೀನನ್ನು ರಿಯಲ್ ಎಸ್ಟೇಟ್ ಡೆವಲೆಪರ್‌ಗಳಿಗೆ ಮಾರಾಟ ಮಾಡಬಾರದು ಎಂದು ಸಚಿವರು ಕಿವಿಮಾತು ಹೇಳಿದರು.

Share This Article
Leave a comment