November 27, 2021

Newsnap Kannada

The World at your finger tips!

Picture Credits: MihirAkash

ಬುದ್ದತ್ವ ಇಂದಿಗೂ ಪ್ರಸ್ತುತ ಅದು ಹೇಗೆ ? ಬುದ್ದನ ಪ್ರಬುದ್ದ ಮಾತುಗಳಲ್ಲೇ ಕೇಳಿ …..

Spread the love

ಬುದ್ದತ್ವ ಇಂದಿಗೂ ಪ್ರಸ್ತುತ ಅದು ಹೇಗೆ ? ಬುದ್ದನ ಪ್ರಬುದ್ದ ಮಾತುಗಳಲ್ಲೇ ಕೇಳಿ …..

ಆರೋಗ್ಯ ಎಂಬುದು ದೊಡ್ಡ ಕೊಡುಗೆ,
ಸಂತೃಪ್ತಿ ದೊಡ್ಡ ಸಂಪತ್ತು,
ವಿಶ್ವಾಸಾರ್ಹತೆ ಎಂಬುದು ಅತ್ಯುತ್ತಮ ಸಂಬಂಧ…..
ಗೌತಮ ಬುದ್ಧ….

ಇನ್ನೊಮ್ಮೆ ಓದಿ ನೋಡಿ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಬದುಕು ಇನ್ನು ಸಂಕೀರ್ಣವಾಗದ, ಅತ್ಯಂತ ಕಡಿಮೆ ಜನಸಂಖ್ಯೆಯ, ಯಾವುದೇ ಆಧುನಿಕ ತಂತ್ರಜ್ಞಾನ ಇಲ್ಲದ, ಪ್ರಕೃತಿಯ ಮಡಿಲಲ್ಲಿ ಇನ್ನೂ ಮನುಷ್ಯ ಮಗುವಾಗಿರುವಾಗಲೇ ಸಿದ್ದಾರ್ಥನೆಂಬ ಗೌತಮ ಬುದ್ಧ ಈ ಮಾತುಗಳನ್ನು ತನ್ನ ಜ್ಞಾನೋದಯದ ನಂತರ ಹೇಳಿರುವುದಾದರೆ ಅವರ ದೂರದೃಷ್ಟಿ ಎಷ್ಟಿರಬಹುದು ಊಹಿಸಿ.

ನಾವು ಕಳೆದುಕೊಂಡಿರುವುದು ಏನು, ಹುಡುಕುತ್ತಿರುವುದು ಏನು, ಪಡೆಯಬೇಕಾಗಿರುವುದು ಏನು ಎಂಬುದನ್ನು ಅರಿಯಬಹುದು.

ಆರೋಗ್ಯ, ಸಂತೃಪ್ತಿ ವಿಶ್ವಾಸಾರ್ಹತೆ ಇದೇ ಇಂದು ನಮ್ಮಿಂದ ದೂರವಾಗಿ ಅತ್ಯಂತ ವಿರಳವಾಗಿ ಕಂಡುಬರುತ್ತಿದೆ. ಈ ಸಮಾಜದಲ್ಲಿ ಇವುಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಯಾರನ್ನೇ ಕೇಳಿ ಇವುಗಳೇ ನಮ್ಮ ಬದುಕಿನಲ್ಲಿ ನಾವು ಕಳೆದುಕೊಳ್ಳುತ್ತಿರುವ ಅತ್ಯಮೂಲ್ಯ ಮೌಲ್ಯಗಳು ಎಂದೇ ಹೇಳುತ್ತಾರೆ.

ಆರೋಗ್ಯ = ವೈದ್ಯಕೀಯ ವಿಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ವಿಶ್ವದಲ್ಲಿ ಕೆಲವೇ ಸಂಪೂರ್ಣ ಆರೋಗ್ಯವಂತ ಜನರು ಉಳಿದಿದ್ದಾರೆ. ಇದು ಹಾಸ್ಯ ಎನಿಸಿದರು ವಾಸ್ತವಕ್ಕೆ ಹತ್ತಿರವಿದೆ. ಆರೋಗ್ಯವೇ ಭಾಗ್ಯ ಅನಾರೋಗ್ಯವೇ ನರಕ ಎಂದು ತಿಳಿದಿದ್ದರು ಇಂದಿನ ವೇಗ ಮತ್ತು ಸ್ಪರ್ಧಾತ್ಮಕ ಸಮಾಜದಲ್ಲಿ ಆರೋಗ್ಯ ಸಾಕಷ್ಟು ಕೈಕೊಡುತ್ತಿದೆ. ಬಿಪಿ ಶುಗರ್ ಥೈರಾಯ್ಡ್ ಆಸ್ತಮಾ ಅಸಿಡಿಟಿ ಮೈಗ್ರೇನ್‌ ನಿದ್ರಾಹೀನತೆ ಖಿನ್ನತೆ ಇವುಗಳಲ್ಲಿ ಯಾವುದೂ ಒಂದು ಇಲ್ಲದ ಮಧ್ಯ ವಯಸ್ಸಿನ ಆರೋಗ್ಯವಂತ ವ್ಯಕ್ತಿ ಸಿಗುವುದು ತೀರಾ ಅಪರೂಪ. ಕೊರೋನಾ ನಂತರವಂತು ಆರೋಗ್ಯವೇ ಎಲ್ಲರ ಬದುಕಿನ ಬಹುದೊಡ್ಡ ಕಾಳಜಿಯಾಗಿದೆ. ನಮ್ಮ ಸಂಪಾದನೆ ಮತ್ತು ಉಳಿತಾಯವನ್ನು ನಾವು ಸುಖ ಪಡುವುದಕ್ಕಿಂತ ಅನಾರೋಗ್ಯದ ಭಯದಿಂದಲೇ ಸಂಗ್ರಹ ಮಾಡುವ ಅನಿವಾರ್ಯ ಮನಸ್ಥಿತಿಗೆ ಬಂದಿದ್ದೇವೆ. ಸಣ್ಣ ಖಾಯಿಲೆಗು ಲಕ್ಷಾಂತರ ಹಣ ಖರ್ಚು ಮಾಡಬೇಕಾಗಿದೆ. ಹಣದ ಮೋಹದ ಫಲವಿದು……

ಸಂತೃಪ್ತಿ = ನಾನು ಈ ಬದುಕಿನಲ್ಲಿ ಸಂಪೂರ್ಣ ತೃಪ್ತ ಎನ್ನುವ ಜನರು ಸ್ವಲ್ಪ ಅಪರೂಪ. ಇನ್ನೂ ಕೆಲವರು ಮೇಲ್ನೋಟಕ್ಕೆ ಹೇಳಿದರು ಒಳಗೆ ನಾನಾ ರೀತಿಯ ಅತೃಪ್ತಿ ಇದ್ದೇ ಇರುತ್ತದೆ. ವಿದ್ಯಾಭ್ಯಾಸ, ಉದ್ಯೋಗ, ಮದುವೆ ಮಕ್ಕಳು ಹಣ ಸಂಬಂಧ ಎಲ್ಲದರಲ್ಲೂ ಏನಾದರೂ ಕೊರತೆ ಇದ್ದೇ ಇರುತ್ತದೆ. ಸಂತೃಪ್ತಿ ದೊಡ್ಡ ಸಂಪತ್ತು ಎಂದು ಬುದ್ದರು ಹೇಳಿದ್ದಾರೆ. ಆದರೆ ಈಗ ಆ ಸಂಪತ್ತಿನ ಒಡೆಯರು ತುಂಬಾ ಕಡಿಮೆ. ಕೊಳ್ಳುಬಾಕ ಸಂಸ್ಕೃತಿ, ಇತರರೊಂದಿಗೆ ಹೋಲಿಸಿಕೊಳ್ಳುವುದು, ಇಲ್ಲದಿರುವುದರ ಬಗ್ಗೆಯೇ ಹೆಚ್ಚು ಚಿಂತಿಸುವ ಕಾರಣದಿಂದ ನಮ್ಮಲ್ಲಿ ಸಂತೃಪ್ತಿ ಮಾಯವಾಗಿದೆ. ಇನ್ನೂ ಬೇಕು, ಇನ್ನೂ ಬೇಕು ಎನ್ನುವ ಬಯಕೆಗಳು ನಿಯಂತ್ರಿಸುವವರಗೆ ಅಸಂತೃಪ್ತಿ ನಿರಂತರ…….

ವಿಶ್ವಾಸಾರ್ಹತೆ = ಎಲ್ಲಿ ಹುಡುಕುವುದು ಇದನ್ನು. ವಿಶ್ವಾಸಾರ್ಹತೆಯೇ ದೊಡ್ಡ ಸಂಬಂಧ ಎಂದು ಬುದ್ದರು ಹೇಳುತ್ತಾರೆ. ಯಾವ ಸಂಬಂಧಗಳಲ್ಲಿ ವಿಶ್ವಾಸಾರ್ಹತೆ ಉಳಿದಿದೆ. ಆತ್ಮ ವಂಚನೆ ಮಾಡಿಕೊಳ್ಳದೆ ಉತ್ತರಿಕೊಳ್ಳಿ.
ನಮ್ಮದೇ ಸಮಾಜದ ಒಂದು ಹೆಣ್ಣು ಒಂದು ಗಂಡು ನೋಡಿ ಮದುವೆ ಮಾಡಲು ಎಷ್ಟೊಂದು ಅಡ್ಡಿ ಆತಂಕಗಳು ಅನುಮಾನಗಳು ಕಾಡುತ್ತವೆ ಎಂಬುದು ಅನುಭವಿಗಳಿಗೆ ತಿಳಿದಿರುತ್ತದೆ. ನಂತರವೂ ಆ ಸಂಬಂಧ ದೀರ್ಘಕಾಲ ಉಳಿದರೆ ಅದೇ ದೊಡ್ಡ ಸಾಧನೆ. ಇನ್ನು ಸ್ನೇಹಿತರು, ಅಕ್ಕ ತಂಗಿ, ಅಣ್ಣ ತಮ್ಮ, ಅತ್ತೆ ಸೊಸೆ, ಅಪ್ಪ ಮಕ್ಕಳು, ಚಿಕ್ಕಪ್ಪ ದೊಡ್ಡಪ್ಪ ಎಂಬ ಸಂಬಂಧಗಳು ಅದೇ ಅರ್ಥದಲ್ಲಿ ಈಗಲೂ ತೀವ್ರ ಪ್ರೀತಿಯನ್ನು ಉಳಿಸಿಕೊಂಡಿದ್ದರೆ ನಿಮ್ಮನ್ನು ನೀವು ಅದೃಷ್ಟಶಾಲಿಗಳು ಎಂದೇ ಪರಿಗಣಿಸಿ.
ಯಾವುದೇ ಜಮೀನು, ಮನೆ, ವ್ಯಾಪಾರ, ವ್ಯವಹಾರಗಳಲ್ಲಿ ಎಲ್ಲಾ ರೀತಿಯ ಎಚ್ಚರಿಕೆಯ ನಂತರವೂ ಸಾಕಷ್ಟು ಅಡ್ಡಿ ಆತಂಕಗಳನ್ನು ಎದುರಿಸುವುದು, ಮೋಸ ಹೋಗುವುದು, ನ್ಯಾಯಾಲಯಗಳಿಗೆ ಅಲೆದಾಡುವುದು ನಮ್ಮ ಜೀವನದ ಭಾಗವೇ ಆಗಿದೆ. ಯಾರನ್ನು ಯಾರೂ ನಂಬದ ಸ್ಥಿತಿ ತಲುಪಿದ್ದೇವೆ.

ಕ್ರಿಸ್ತ ಪೂರ್ವದ ಬುದ್ದನ ಮಾತುಗಳು 2021 ರ ಈ ಕ್ಷಣದಲ್ಲಿ ನಿಂತು ಒಮ್ಮೆ ಅವಲೋಕಿಸಿ. ನಾವು ಸಾಗುತ್ತಿರುವ ದಿಕ್ಕಿನ ಬಗ್ಗೆಯೇ ನಮಗೆ ಅಸಮಾಧಾನ ಮೂಡಿಸುತ್ತದೆ.

ಈಗಲೂ ಕಾಲ ಮಿಂಚಿಲ್ಲ. ಎಲ್ಲ ಸ್ಪರ್ಧೆ, ಆಧುನಿಕ ತಂತ್ರಜ್ಞಾನ, ವೇಗದ ನಡುವೆಯೂ ಮಾನವೀಯ ಮೌಲ್ಯಗಳನ್ನು ನಾವು ಕನಿಷ್ಠ ಪ್ರಮಾಣದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಖಂಡಿತ ಬುದ್ದನ ಹೇಳಿಕೆಗಳಲ್ಲಿರುವ ಆ ಮೌಲ್ಯಗಳನ್ನು ಅನುಭವಿಸಬಹುದು. ಅದಕ್ಕಾಗಿ ನಿರಂತರ ಪ್ರಯತ್ನ ಮಾಡಬೇಕಾಗಿದೆ.

ಅದನ್ನು ನಿಮಗೆ ಸದಾ ನೆನಪಿಸುವ ಪ್ರಯತ್ನ ಮನಸ್ಸುಗಳ ಅಂತರಂಗದ ಚಳವಳಿ ಸದಾ ಮಾಡುತ್ತದೆ……

  • ವಿವೇಕಾನಂದ ಹೆಚ್ ಕೆ
error: Content is protected !!