ಅನಾಗರಿಕ ಸಮಾಜದ ಮರ ಕೋತಿಯಾಟ ಶುರುವಾಗಿದೆ ?

Team Newsnap
1 Min Read

ಕೊರೊನಾ ಎರಡನೆಯ ಅಲೆ,
ಖಾವಿ ಸ್ವಾಮಿಗಳ ಮೀಸಲಾತಿಯ ಸುನಾಮಿ,
ಜಾತಿ ನಿಂದನೆಗಳು,
ಸಿನಿಮಾ ನಟರ ಜಗಳಗಳು,
ಮಾಧ್ಯಮಗಳ ಬೆಂಕಿ ಹಚ್ಚುವಿಕೆ…..

ಅನಾಗರಿಕ ಸಮಾಜದ ಮರಕೋತಿಯಾಟ…….

ಎಷ್ಟೊಂದು ಪ್ರಾಕೃತಿಕ ಸಂಪತ್ತು,
ಸ್ವಾತಂತ್ರ್ಯ ಸಮಾನತೆಯ ಪ್ರಜಾಪ್ರಭುತ್ವ,
ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳು,
ಸುಖದ ಸಂಪತ್ತಿಗೆಯಲ್ಲಿ ತೇಲಾಡಬಹುದಾದ ಸವಲತ್ತುಗಳು

ಆಶ್ಚರ್ಯ……,
ಏನೂ ಇಲ್ಲದಿದ್ದಾಗ ಅನುಭವಿಸುತ್ತಿದ್ದ ನೆಮ್ಮದಿ,
ಎಲ್ಲವೂ ಸಿಕ್ಕಾಗ ಅಸಹನೀಯ ಬದುಕಾಗಿ ಪರಿವರ್ತನೆ ಹೊಂದುತ್ತಿರುವುದಕ್ಕೆ ಕಾರಣವಾದರೂ ಏನು…..

Speed thrills but it kill’s
ಎಂಬ ಅಪಘಾತದ ಎಚ್ಚರಿಕೆಯ ಸಂದೇಶ ಬದುಕಿಗೂ ಅನ್ವಯ ವಾಗುತ್ತಿದೆ,

ಸಹಜ ಸಮಯವನ್ನು ವೇಗದ ಬದುಕಾಗಿ ಮಾರ್ಪಡಿಸಿಕೊಂಡು ಹಣ ಅಧಿಕಾರ ಪ್ರಚಾರದ ದುರಾಸೆಗೆ ಬಿದ್ದು ಮಾನವೀಯ ಮೌಲ್ಯಗಳನ್ನು ಹಿನ್ನೆಲೆಗೆ ಸರಿಸಿದ ಫಲವನ್ನು ಈಗ ಉಣ್ಣಬೇಕಾಗಿದೆ.

ವಿವೇಚನಾ ಶಕ್ತಿ ಇಲ್ಲವಾಗುತ್ತಿದೆ,
ತಾಳ್ಮೆ ಕಡಿಮೆಯಾಗುತ್ತಿದೆ,
ಸಹಕಾರ ಸಮನ್ವಯ ಮರೆಯಾಗುತ್ತಿದೆ,
ಸಂಬಂಧಗಳು ಸರಕುಗಳಾಗುತ್ತಿವೆ,
ಪ್ರೀತಿ ಕಾಣೆಯಾಗುತ್ತಿದೆ,
ಕ್ಷಮಾಗುಣ ಕಾಣೆಯಾಗಿದೆ,
ತ್ಯಾಗ ಬಲಿದಾನಗಳು ಪತ್ತೆಯಾಗುತ್ತಿಲ್ಲ,

ಹಣ, ಅಧಿಕಾರ ಪ್ರಚಾರ ಪಡೆಯುವ ಅಬ್ಬರಲ್ಲಿ
ನಾಗರಿಕ ಮಾನವನ ಗುಣಲಕ್ಷಣಗಳೇ ದೂರ ಸರಿಯುತ್ತಿವೆ, ಮನುಷ್ಯ ತಾನು ಮಾಡಬೇಕಾದ ಮೂಲ ಕರ್ತವ್ಯಗಳು, ತನ್ನ ಕರ್ತವ್ಯ ನಿಷ್ಠೆ, ವೃತ್ತಿ ಧರ್ಮ ಎಲ್ಲವನ್ನೂ ವ್ಯಾಪಾರದ ದೃಷ್ಟಿಯಿಂದ ನೋಡುತ್ತಿದ್ದಾನೆ.

ತನ್ನನ್ನು ತಾನು ಮಾರಿಕೊಂಡು ಈಗ ಬಹುತೇಕ ತನ್ನ ಸಮಯವನ್ನು ಸಹ ಮಾರಿಕೊಳ್ಳುತ್ತಿದ್ದಾನೆ.

ಅದರಿಂದಾಗಿಯೇ ಸರ್ವಸಂಗ ಪರಿತ್ಯಾಗಿಗಳು,
ಸಕಲ ಪ್ರಾಣಿಗಳಲ್ಲಿ ಲೇಸನ್ನೇ ಬಯಸಬೇಕಾದವರು,
ಸಮಾನತೆ ಸ್ವಾತಂತ್ರ್ಯ ಎತ್ತಿ ಹಿಡಿಯಬೇಕಾದವರು,
ಇಂವ ನಾರವ ಇಂವ ನಾರವ ಎಂದೆಣಿಸದಿರಯ್ಯ,
ಇಂವ ನಮ್ಮವ ಇಂವ ನಮ್ಮವ ಎಂದೆನಣಿಸಯ್ಯ,
ಎನ್ನುವ ತತ್ವ ಪಾಲನೆ ಮಾಡಬೇಕಾದವರು,
ತಮ್ಮ ಜಾತಿಗಾಗಿ ಮೀಸಲಾತಿ ಪಡೆಯಲು ನಾಚಿಕೆ ಬಿಟ್ಟು ಬೀದಿಗೆ ಇಳಿದಿದ್ದಾರೆ.

ಅತ್ತ ಕಡೆ ವೈರಸ್ ಎಂಬ ರೋಗಾಣು ವನ್ನು ಅಲೆಯಾಗಿ ಪರಿವರ್ತಿಸಿ, ವ್ಯಕ್ತಿಗಳ ನಡುವಿನ ಸಣ್ಣ ಅಸಮಾಧಾನವನ್ನು ದೊಡ್ಡದು ಮಾಡಿ ತಾವೇ ಒಂದು ವೈರಸ್ ನಂತಾಗಿದ್ದಾರೆ ಮಾಧ್ಯಮಗಳು.

ಎಚ್ಚೆತ್ತುಕೊಳ್ಳಬೇಕಾದ ಸರದಿ ನಮ್ಮದು.
ನಮಗಾಗಿ, ನಮ್ಮ ಮಕ್ಕಳಿಗಾಗಿ ನಾವು
ಹಿನ್ನೆಲೆಗೆ ಸರಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಮತ್ತೆ ಪುನರ್ ಸ್ಥಾಪಿಸಬೇಕಾದ ಅತ್ಯಂತ ತುರ್ತು ಅಗತ್ಯವಿದೆ. ಆ ನಿಟ್ಟಿನಲ್ಲಿ ಎಲ್ಲರೂ ನಮ್ಮ ನಮ್ಮ ನೆಲೆಯಲ್ಲಿ ಸಾಧ್ಯವಾದಷ್ಟು ಪ್ರಯತ್ನಿಸೋಣ.

ಒಂದು ಸಾಂಸ್ಕೃತಿಕ ನಾಗರಿಕ ಜವಾಬ್ದಾರಿಯ ಸಮಾಜ ಮತ್ತು ಸರ್ಕಾರ ನಿರ್ಮಿಸೋಣ.
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ
ಒಂದು ಬದಲಾವಣೆಯ ಕ್ರಾಂತಿ ಮಾಡೋಣ.

  • ವಿವೇಕಾನಂದ ಹೆಚ್ ಕೆ
Share This Article
Leave a comment