December 26, 2024

Newsnap Kannada

The World at your finger tips!

hanuma jayanthi

ಹನುಮ ಜಯಂತಿ (Hanuma Jayanthi) 2023

Spread the love

ಚೈತ್ರ ಮಾಸದ ಪೌರ್ಣಮಿಯಂದು ಬರುವ ಹಬ್ಬವೇ ಹನುಮ ಜಯಂತಿ. ಉತ್ತರ ಭಾರತದಾದ್ಯಂತ, ಕರ್ನಾಟಕದ ಕೆಲವು ಭಾಗಗಳಲ್ಲಿ ಹನುಮ ಜಯಂತಿಯನ್ನು ಇಂದು ಆಚರಿಸಲಾಗುತ್ತದೆ. ವಾನರ ದೇವ ಭಜರಂಗ ಬಲಿ ಆಂಜನೇಯನು ಜನಿಸಿದ ಶುಭ ದಿನ. ಹಾಗಾಗಿ ಹಿಂದೂಗಳು ಈ ದಿನವನ್ನು ಭಕ್ತಿ ಮತ್ತು ಶ್ರದ್ಧೆಯಿಂದ,ಸಡಗರ ಸಂಭ್ರಮದೊಂದಿಗೆ ಹನುಮ ಜಯಂತಿಯನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.

ಹನುಮಂತನ ತಾಯಿಯ ಹೆಸರು ಅಂಜನಿ ಮತ್ತು ತಂದೆಯ ಹೆಸರು ಕೇಸರಿ. ಅವನನ್ನು ಪವನಪುತ್ರ ಮತ್ತು ಶಂಕರಸುವನ ಎಂದೂ ಕರೆಯುತ್ತಾರೆ.

ಆಂಜನೇಯನೆಂದರೆ ಧೈರ್ಯ ಕೊಡುವ ದೇವರು. ಭಕ್ತಿಗೆ, ಶಕ್ತಿಗೆ ಹೆಸರಾದವನು. ಚಿರಂಜೀವಿಗಳಲ್ಲೊಬ್ಬನಾದ ಆಂಜನೇಯನ ಜನ್ಮ ದಿನವನ್ನು ಜಗತ್ತಿನೆಲ್ಲೆಡೆ ಹನುಮಾನ್‌ ಜಯಂತಿಯೆಂದು ಆಚರಿಸಲಾಗುತ್ತದೆ.

ರಾಮನ ಪರಮ ಭಕ್ತ ಹನುಮ, ರಾಮಾಯಣದಲ್ಲಿ ಪ್ರಮುಖ ಪಾತ್ರಧಾರಿಯಾಗಿರುವ ಇವರಿಗೆ ವಾಯುಪುತ್ರ, ಆಂಜನೇಯ, ಕಪಿವೀರ, ಅಂಜನಿ ಪುತ್ರ, ಪವನಸುತ, ಭಜರಂಗಬಲಿ, ಬಲಿಭೀಮ, ಸಂಕಟ ಮೋಚನಾ, ಮಾರುತಿ, ರುದ್ರ ಎಂಬ ಹೆಸರುಗಳಿಂದ ಕರೆಯುತ್ತಾರೆ.

ಲಂಕೆಯಲ್ಲಿದ್ದ ಸೀತಾ ದೇವಿಯನ್ನು ಕರೆತರಲು ಹೋರಾಡಿದ ಕಥೆ ಎಲ್ಲರಿಗೂ ಪ್ರಿಯವೇ. ರಾಮ ಎಲ್ಲಿ ಇರುವನೋ ಅಲ್ಲಿ ಹನುಮನು ಇದ್ದೇ ಇರುತ್ತಾನೆ. ಜಾತಿ ಮತ ಪಂಥಗಳನ್ನು ಮೀರಿ ಆರಾಧನೆಗೊಳಗಾಗುವ ಆಂಜನೇಯನಿಗೆ ತುಳಸಿಮಾಲೆ ಬಲುಪ್ರಿಯ.

ದೇಹಬಲ, ಮನೋಬಲ, ಬುದ್ಧಿಬಲ, ತಪೋಬಲ, ಯೋಗಶಕ್ತಿಯಲ್ಲೂ ಪರಿಣಿತನಾದ ಆಂಜನೇಯನನ್ನು ಆರಾಧಿಸುತ್ತಾರೆ , ಜೊತೆಗೆ ಶನಿವಾರ ಆಂಜನೇಯನ ವಾರ ಆಗಿರುವುದರಿಂದ ವಿಶೇಷವಾದ ಅಲಂಕಾರದೊಂದಿಗೆ ಹನುಮ ಕಂಗೊಳಿಸುತ್ತಾನೆ.

ಶನಿವಾರದಂದು ಹನುಮಾನ್ ಪೂಜೆಗೆ ವಿಶೇಷ ಮಹತ್ವವಿದೆ. ಆಂಜನೇಯನನ್ನು ಮೆಚ್ಚಿಸಲು ಸುಲಭವಾದ ಮಾರ್ಗವೆಂದರೆ ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವುದು. ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ಹನುಮನಿಗಾಗಿಯೇ ರಚಿಸಲಾದ ತುಳಸಿ ದಾಸರ ಪದ್ಯವನ್ನು ಪೂಜೆ ಸಮಯದಲ್ಲಿ ಪಠಿಸುತ್ತಾರೆ. ಕೇವಲ ಹನುಮ ಜಯಂತಿ ಯೊಂದೇ ಅಲ್ಲದೇ ಕಷ್ಟದ ಕಾಲದಲ್ಲಿ ಧೈರ್ಯ, ಸಾಮರ್ಥ್ಯಕ್ಕೆ ಹೆಸರಾದ ಹನುಮಂತನನ್ನು ನೆನೆದರೆ ಧೈರ್ಯದಿಂದ ಮುನ್ನುಗ್ಗಬಹುದು ಎಂಬ ನಂಬಿಕೆಯಿಂದ ಹನುಮಾನ್ ಚಾಲೀಸ್​ ಪಠಿಸುವ ಮೂಲಕ ಹನುಮನನ್ನು ನೆನೆಯುತ್ತಾರೆ. ಹನುಮ ಜಯಂತಿಯ ದಿನದಂದು ಶ್ರೀರಾಮ ಮತ್ತು ಮಾತೆ ಸೀತೆಗೂ ಪೂಜೆ ಸಲ್ಲಿಸಲಾಗುತ್ತದೆ. ಶ್ರೀರಾಮ ರಕ್ಷಾ ಮಂತ್ರವನ್ನೂ ಪಠಿಸಲಾಗುತ್ತದೆ.

ರಾವಣನು ಅಪಹರಿಸಿದ ಸೀತೆಯ ಹುಡುಕಾಟದಲ್ಲಿ ಆಂಜನೇಯ ಪಾತ್ರವೇ ದೊಡ್ಡದು. ರಾಮನ ಜಯದಲ್ಲಿ ಆಂಜನೇಯನ ಪಾತ್ರವಿದೆ. ಇನ್ನು ಚಿರಂಜೀವಿಯಾಗಿರುವ ಆಂಜನೇಯನು ಭಕ್ತರ ಕರೆಗೆ ಬೇಗ ಸ್ಪಂದಿಸುವವನು. ಹಾಗಾಗಿ ಹನುಮಾನ್ ಜಯಂತಿಯಂದು ಆಂಜನೇಯನ ಪೂಜೆಯಿಂದ ಆತನ ಆಶೀರ್ವಾದ ಗಳಿಸಿ, ಸಂಕಟಮೋಚನನೆಂದೇ ಹೆಸರಾಗಿರುವ ಆತನಿಂದ ಜೀವನದಲ್ಲಿ ಸಾಕಷ್ಟು ಸಮೃದ್ಧಿ ಕಾಣಬಹುದಾಗಿದೆ.ಇದನ್ನು ಓದಿ –ಅಕ್ಷಯ ತೃತೀಯಕ್ಕೆ ಬಂಗಾರದ ಬೆಲೆ ಮತ್ತಷ್ಟು ಗಗನಕ್ಕೆ ?

Copyright © All rights reserved Newsnap | Newsever by AF themes.
error: Content is protected !!