ಫಿಫಾ ಫುಟ್‌ಬಾಲ್‌ : 3ನೇ ಬಾರಿ ಅರ್ಜೆಂಟೀನಾ ಚಾಂಪಿಯನ್‌ -ಬಹುಮಾನಗಳ ಸುರಿಮಳೆ

Team Newsnap
2 Min Read

ಫಿಫಾ ಫುಟ್‌ಬಾಲ್‌ ಫೈನಲಿನಲ್ಲಿ ನಾಯಕ ಲಿಯೋನೆಲ್‌ ಮೆಸ್ಸಿ ಅವರ ಅದ್ಭುತ ಆಟದಿಂದಾಗಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್‌ ತಂಡವನ್ನು ಸೋಲಿಸುವ ಮೂಲಕ ವಿಶ್ವ ಫುಟ್ ಬಾಲ್ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.ಕೊನೆಯ ಪಂದ್ಯದಲ್ಲಿ ಮೆಸ್ಸಿ 2 ಗೋಲ್‌ ಹೊಡೆದು ತಂಡಕ್ಕೆ ಜಯ ತಂದು ಕೊಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿದರು.

1978, 1986ರಲ್ಲಿ ಅರ್ಜೆಂಟೀನಾ ಚಾಂಪಿಯನ್‌ ಆಗಿ ಹೊರ ಹೊಮ್ಮಿತ್ತು. 2014ರಲ್ಲಿ ಜರ್ಮನಿ ವಿರುದ್ಧ ಫೈನಲ್‌ನಲ್ಲಿ ಅರ್ಜೆಂಟೀನಾ ಸೋತಿತ್ತು. ಈಗ 36 ವರ್ಷದ ಬಳಿಕ ಮೂರನೇ ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

ಗೆಲುವಿನ ಆಟ ಹೇಗಿತ್ತು?

ಫ್ರಾನ್ಸ್‌ ವಿರುದ್ಧದ ಪಂದ್ಯ ಆರಂಭದಲ್ಲೇ ಅರ್ಜೆಂಟೀನಾ ಮುನ್ನಡೆ ಪಡೆದಿತ್ತು. 23ನೇ ನಿಮಿಷದಲ್ಲಿ ಮೆಸ್ಸಿ ಪೆನಾಲ್ಟಿ ಕಿಕ್‌ ಮೂಲಕ ಮೊದಲ ಗೋಲು ಹೊಡೆದರು. ಇದರ ಬೆನ್ನಲ್ಲೇ ಡಿ ಮಾರಿಯಾ 36ನೇ ನಿಮಿಷದಲ್ಲಿ ಗೋಲು ಹೊಡೆದರು.

80ನೇ ನಿಮಿಷದಲ್ಲಿ ಕಿಲಿಯನ್‌ ಎಂಬಾಪೆ ಪೆನಾಲ್ಟಿ ಮೂಲಕ ಫ್ರಾನ್ಸ್‌ ಪರ ಮೊದಲ ಗೋಲು ಬಾರಿಸಿದರು. ಎರಡೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಿಗದಿತ 90 ನಿಮಿಷದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯ 30 ನಿಮಿಷಗಳ ಹೆಚ್ಚುವರಿ ಸಮಯಕ್ಕೆ ವಿಸ್ತರಿಸಿತ್ತು.

ಈ ವೇಳೆ ಮೆಸ್ಸಿ 109ನೇ ನಿಮಿಷದಲ್ಲಿ ಗೋಲು ಹೊಡೆಯುವ ಮೂಲಕ ಫ್ರಾನ್ಸ್‌ಗೆ ಮುನ್ನಡೆ ತಂದುಕೊಟ್ಟರು. ಆದರೆ 118ನೇ ನಿಮಿಷದಲ್ಲಿ ಎಂಬಾಪೆ ಪೆನಾಲ್ಟಿ ಮೂಲಕ ಗೋಲು ಹೊಡೆದು ಮತ್ತೆ ತಿರುವು ನೀಡಿದರು.120 ನಿಮಿಷಗಳ ಆಟದಲ್ಲಿ ಎರಡು ತಂಡಗಳು ತಲಾ 3 ಗೋಲ್‌ ಹೊಡೆದ ಕಾರಣ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು.

ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಫ್ರಾನ್ಸ್‌ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವಕಪ್‌ಗೆ ಮುತ್ತಿಕ್ಕಿತು. ವಿಶೇಷ ಏನೆಂದರೆ ಅರ್ಜೆಂಟೀನಾ ಮೊದಲ ಪಂದ್ಯಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಅತ್ಯುತ್ತಮ ಆಟದ ಮೂಲಕ ಫೈನಲ್‌ ಪ್ರವೇಶಿಸಿತ್ತು.

ಪ್ರಶಸ್ತಿ ಎಷ್ಟು?

ಅರ್ಜೆಂಟೀನಾ ಬರೋಬ್ಬರಿ 42 ಮಿಲಿಯನ್ ಡಾಲರ್ (ಅಂದಾಜು 347 ಕೋಟಿ ರೂ.) ಸಿಕ್ಕರೆ, ರನ್ನರ್-ಅಪ್ ಫ್ರಾನ್ಸ್‌ಗೆ 30 ಮಿಲಿಯನ್ ಡಾಲರ್ (ಅಂದಾಜು 248 ಕೋಟಿ ರೂ.) ನಗದು ಬಹುಮಾನ ಸಿಕ್ಕಿದೆ.

Share This Article
Leave a comment