ನ್ಯೂಸ್ ಸ್ನ್ಯಾಪ್ ಗೆ ವರ್ಷ ತುಂಬಿದ ಹರ್ಷ

Team Newsnap
2 Min Read

ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಹೊಸ ಮನ್ವಂತರವಾಗಿ ರೂಪಗೊಂಡ ನ್ಯೂಸ್ ಸ್ನ್ಯಾಪ್ ಡಿಜಿಟಲ್‌ ಪತ್ರಿಕೆ ಇಂದಿಗೆ ಒಂದು ವರ್ಷ ತುಂಬಿದೆ. ಇದು ಹರ್ಷದ ಸಂಗತಿ.

32 ವರ್ಷಗಳ ಕಾಲ ಸುದೀರ್ಘವಾಗಿ ಪತ್ರಿಕೆ ಮತ್ತು ಪತ್ರಿಕೋದ್ಯಮದ ಜಾಡಿನಲ್ಲಿ ಹೋರಾಟ ಮಾಡಿಕೊಂಡೇ ಬದುಕು ರೂಪಿಸಿಕೊಂಡಿರುವುದು ತಂತಿಯ ಮೇಲಿನ ನಡಿಗೆ ಆಗಿತ್ತು.

ಆದರೆ ಈಗ ಕಳೆದ ಒಂದು ವರ್ಷದ ಹಿಂದೆ ನನ್ನ ಮಕ್ಕಳಾದ ಅನನ್ಯ, ಮಿಹಿರ್ ಆಕಾಶ್ , ಪತ್ನಿ ಸುಮಾಳ ಸಹಕಾರ , ಸಂಕಲ್ಪದೊಂದಿಗೆ ನಾವು ಆರಂಭಿಸಿದ ನ್ಯೂಸ್ ಸ್ನ್ಯಾಪ್ ಡಿಜಿಟಲ್ ಪತ್ರಿಕೆ ಹೊಸ ದಿಕ್ಕಿನಲ್ಲಿ ಭರವಸೆ ಮೂಡಿಸುವ ಪಥದಲ್ಲಿ ಸಾಗಿರುವುದು ನಿಜಕ್ಕೂ ಹೆಮ್ಮೆ ಅನಿಸುತ್ತಿದೆ.

ಹೊಸ ಆವಿಷ್ಕಾರಕ್ಕೆ ನಾವು ಕೈ ಹಾಕಿದ ದಿನಗಳಲ್ಲಿ ನನ್ನ ಕುಟುಂಬ, ಗೆಳೆಯರ ಬಳಗ, ನಮ್ಮ ಪತ್ರಿಕೆಯ ಲೇಖಕರು, ಹಿತೈಷಿಗಳು ನನ್ನ ನೆರವಿಗೆ ಬಂದು, ಆಸರೆಯಾಗಿದ್ದು ಮರೆಯುವ ಹಾಗಿಲ್ಲ.

ಒಂದು ವರ್ಷದ ಅನುಭವವೇ ವಿಭಿನ್ನವಾಗಿತ್ತು. ಏಕೆಂದರೆ ಡಿಜಿಟಲ್ ಕ್ಷೇತ್ರ ನಿಜಕ್ಕೂ ನಂಗೆ ಹೊಸದಾಗಿತ್ತು. ಭಾಷೆ, ಬರವಣಿಗೆ, ವರದಿಯ ಆಯ್ಕೆ ನಂಗೆ ಎಲ್ಲವೂ ನುಂಗಲಾರದ ಬಿಸಿ ತುಪ್ಪವಾಗಿತ್ತು. ಕಲಿಯುವುದು ಕಷ್ಟ ಎಂತಲ್ಲ. ಪರಿವರ್ತನೆ ಆಗುವ ಅನಿವಾರ್ಯತೆ ಹೊಸ ಆವಿಷ್ಕಾರಕ್ಕೆ ಒಗ್ಗಿಕೊಳ್ಳುವಂತೆ ಮಾಡಿತು.

newsnap1

ನಾನು ಕಳೆದುಕೊಂಡಿದ್ದು ಏನೂ ಇಲ್ಲ. ಜೀವನೋತ್ಸಹ ಇಟ್ಟುಕೊಂಡು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳುವ ನಿರಂತರ ಪ್ರಯತ್ನ ಮಾತ್ರ ನಿತ್ಯವೂ ಅನುಭವಕ್ಕೆ ಬರುತ್ತದೆ. ಇನ್ನೂ ಸಾಕಷ್ಟು ಕಲಿಯುವುದು ಇದೆ. ಸ್ಪೂರ್ತಿ ಸೆಲೆ ಗಳಿಸಿಕೊಂಡು ಆತ್ಮವಿಶ್ವಾಸದಿಂದ ಬದುಕನ್ನು ರೂಪಿಸಿಕೊಳ್ಳುವ ಈ ಕಾಲಘಟ್ಟದಲ್ಲಿ ಹೊಸ ಹುಮ್ಮಸ್ಸು, ಪ್ರೋತ್ಸಾಹ ಪಡೆದುಕೊಳ್ಳುವ ಅದಮ್ಯ ಬಯಕೆಯಲ್ಲಿ ಮತ್ತೆ ಉತ್ಸಾಹದ ಕೊರಡು ಕೊನರುತ್ತಿದೆ ಎಂಬುದೇ ತೃಪ್ತಿಯ ಸಂಗತಿ.

ನ್ಯೂಸ್ ಸ್ನ್ಯಾಪ್ ಡಿಜಿಟಲ್ ಪತ್ರಿಕೆ ಮಾತ್ರವಲ್ಲದೆ ಸಾಮಾಜಿಕ ಜಾಲ ತಾಣದ ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟರ್ ನಲ್ಲೂ ವಿಸ್ತಾರವಾಗಿ ಬೆಳವಣಿಗೆಯ ಹಾದಿಯಲ್ಲಿ ಒಂದಷ್ಟು ಭರವಸೆ ಮೂಡಿಸಿದೆ.

ಬೆರಳ ತುದಿ ಅಂಚಿನಲ್ಲಿ ಪ್ರಪಂಚ ಎಂಬ ಟ್ಯಾಗ್ ಲೈನ್ ಇಟ್ಟು ಕೊಂಡು, ಪ್ರಪಂಚ ಪರ್ಯಟನೆಯಲ್ಲಿ ಸಿಗುವ ಸುದ್ದಿಗಳಿಗೆ ಆದ್ಯತೆ ನೀಡುವ ನ್ಯೂಸ್ ಸ್ನ್ಯಾಪ್ ಬೆಳೆದು ಬಂದ ದಾರಿ ಕೂಡ ಹೊಸ ಅನುಭವ ನೀಡಿದೆ. ನಮ್ಮ ಡಿಜಿಟಲ್ ಪತ್ರಿಕೆ ಇನ್ನೂ ಸಾಕಷ್ಟು ಬದಲಾಗಬೇಕಾಗಿದೆ. ದಾರಿ , ದಿಕ್ಕುಗಳು ಹಲವಾರು ಇವೆ. ಆದರೆ ಸಂಪನ್ಮೂಲಗಳ ಶಕ್ತಿ ಬಂದರೆ ಉಳಿದೆಲ್ಲವೂ ಸಹಜವಾಗಿ ಬದಲಾವಣೆ ಪಥದಲ್ಲಿ ಸಾಗಿ, ಮುನ್ನುಗ್ಗಲು ಸಾಧ್ಯವಾಗುತ್ತದೆ ಎಂಬ ಆಶಯವಿದೆ.

ನಮ್ಮ‌ ಲೇಖಕರ ಬಳಗದ ಪ್ರೋತ್ಸಾಹವೂ‌ ಕೂಡಾ ಅದಮ್ಯ ವಿಶ್ವಾಸ ಮೂಡಿಸುತ್ತದೆ. ಡಾ.ಶುಭಶ್ರೀ ಪ್ರಸಾದ್ , ವಿವೇಕಾನಂದ ಹೆಚ್ ಕೆ, ಹಿರಿಯ ಪತ್ರಕರ್ತರಾದ ಎಚ್ ಆರ್ ಶ್ರೀಶಾ , ಲಕ್ಷ್ಮಣ್ ಕೊಡಸೆ, ಕೆ .ಸಿ‌. ಸತ್ಯಪ್ರಕಾಶ್ , ಮಂಗಳೂರಿನ ಉಷಾ ರಾಣಿ , ರಾಣೆಬೆನ್ನೂರಿನ‌‌ ಅರುಣ್ ಕುಲ್ಕರ್ಣಿ , ಗೋವಿಂದ ಕುಲಕರ್ಣಿ ಸೇರಿದಂತೆ ಅನೇಕರ ಬರವಣಿಗೆಯ ಕೊಡುಗೆಯು ನ್ಯೂಸ್ ಸ್ನ್ಯಾಪ್ ಬೆಳವಣಿಗೆ ಇಮ್ಮಡಿಯಾಗುವಂತೆ ಮಾಡಿದೆ.

ಸಾಮಾಜಿಕ ಹೊಣೆಗಾರಿಕೆ ಜೊತೆ ಜವಾಬ್ದಾರಿಯುತ ಡಿಜಿಟಲ್ ಪತ್ರಿಕೋದ್ಯಮ ನಡೆಸುವ ಹೊಣೆಗಾರಿಕೆ ನಮ್ಮದಾಗಿದೆ. ಓದುಗರೇ ನಮಗೆ ಶ್ರೀರಕ್ಷೆ.‌ ಜಾಹೀರಾತುದಾರರು ನಮಗೆ ಆಶ್ರಯದಾತರು. ಯಾವುದೇ ಬೆಳವಣಿಗೆ ಅನಿವಾರ್ಯತೆ ಆಗಬಾರದು. ಅದೊಂದು‌ ಸಹಜ‌ ಪ್ರಕ್ರಿಯೆಯಾಗಬೇಕು. ಆಗ ಮಾತ್ರ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ನ್ಯೂಸ್ ಸ್ನ್ಯಾಪ್ ಈ ದಿಕ್ಕಿನಲ್ಲಿ ಸದಾ ಸಾಗುತ್ತದೆ. ನಿಮ್ಮ‌ ಸಹಕಾರ ಪ್ರೋತ್ಸಾಹ ದೊಂದಿಗೆ……

ಕೆ.ಎನ್. ರವಿ
ಸಂಪಾದಕ

Share This Article
Leave a comment