ಒಳ್ಳೆಯ ಮನಸ್ಸಿನವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ನಿಜವೇ ?

Team Newsnap
2 Min Read

ನಾವು ಏನು ದಾನ ಮಾಡುತ್ತೇವೆಯೋ ಅದರ ಎರಡು ಪಟ್ಟು ನಮಗೆ ಬರುತ್ತದೆ.
ಸತ್ಯವೇ ?

ಒಳ್ಳೆಯವರಿಗೆ ಒಳ್ಳೆಯದು ಕೆಟ್ಟವರಿಗೆ ಕೆಟ್ಟದ್ದು ಆಗುತ್ತದೆ. ವಾಸ್ತವವೇ ?

ನಾವು ಬದಲಾದರೆ ಜಗತ್ತೇ ಬದಲಾಗುತ್ತದೆ. ಇದು ಪ್ರಾಯೋಗಿಕವೇ ?

ಇಂದಿನ ಎಲ್ಲಾ ಕಷ್ಟ ಸುಖಗಳಿಗೂ ಹಿಂದಿನ ಜನ್ಮದ ಪಾಪ ಪುಣ್ಯಗಳೇ ಕಾರಣ. ನಂಬಬಹುದೇ ?

ಗಂಡು ಹೆಣ್ಣಿನ ಮದುವೆ ಸಂಬಂಧ ಪೂರ್ವ ನಿಯೋಜಿತ ಋಣಾನುಬಂಧ. ಸರಿಯೇ ?

ಗಂಡ ಹೆಂಡತಿ ಸಂಬಂಧ ಏಳು ಜನುಮಗಳ ಅನುಭಂದ. ಹೌದೇ ?

ಅನ್ನದ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು ಬರೆದಿರುತ್ತದೆ. ಗೊತ್ತೇ ?

ಅಪಘಾತ, ಆಕಸ್ಮಿಕ, ಅನಾರೋಗ್ಯದ ಸಾವು ನಮ್ಮ ಹಣೆಬರಹ. ಒಪ್ಪೋಣವೇ ?

ಬದುಕಿನ ಎಲ್ಲಾ ಘಟನೆಗಳೂ ಪೂರ್ವ ನಿರ್ಧಾರಿತ. ಪ್ರಶ್ನಿಸಬಾರದೇ ?

ನಮ್ಮನ್ನು ಕಾಡುವ ಈ ಮನಸ್ಥಿತಿಗೆ ಸಮಾಧಾನಕರ ಉತ್ತರಬೇಕಿದೆ……………

ಹೊಟ್ಟೆ ತುಂಬಿದ ಶ್ರೀಮಂತರು,
ವೇದಾಧ್ಯಯನ ಪಂಡಿತರು,
ಬೈಬಲ್ ಪ್ರಚಾರಕರು,
ಖುರಾನ್ ಆರಾಧಕರು,
ವಿಭೂತಿ ಬಳಿದ ಮಠಾಧೀಶರು,
ಪುನರ್ಜನ್ಮ ಸೃಷ್ಟಿಕರ್ತರು,
ಜ್ಯೋತಿಷಿಗಳು,
ವಿಚಾರವಾದಿಗಳು,
ವಿಜ್ಞಾನಿಗಳ ಉತ್ತರಗಳು ನಮಗೆ ಬೇಡ,

ಬೀದಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯಿಂದ ಉತ್ತರ ಬೇಕಿದೆ.

ಹುತಾತ್ಮ ಯೋಧನ ಹೆಂಡತಿಯಿಂದ ಉತ್ತರ ಬೇಕಿದೆ,

ಆತ್ಮಹತ್ಯೆ ಮಾಡಿಕೊಂಡ ರೈತನ ಮಗನಿಂದ ಉತ್ತರ ಬೇಕಿದೆ,

ಬಸ್ ಸ್ಟ್ಯಾಂಡಿನಲ್ಲಿ ದಿನ ಕಳೆಯುವ ಅನಾಥನಿಂದ ಉತ್ತರ ಬೇಕಿದೆ,

ಗಂಡನಿಂದಲೇ ಏಡ್ಸ್ ಬಂದು ಈಗ ಆತನಿಂದಲೇ ಪರಿತ್ಯಕ್ತಳಾದ ಮಹಿಳೆಯಿಂದ ಉತ್ತರ ಬೇಕಿದೆ,

ಮಾನವೀಯತೆಯಿಂದ ವಿಧುವೆಗೆ ಬದುಕು ನೀಡಿ ಈಗ ವರದಕ್ಷಿಣೆ ಆರೋಪದಲ್ಲಿ ಜೈಲಿನಲ್ಲಿ ದಿನದೂಡುತ್ತಿರುವ ಯುವಕನಿಂದ ಉತ್ತರ ಬೇಕಿದೆ,

ತನ್ನದೆಲ್ಲವನ್ನೂ ಗಲಭೆಯಲ್ಲಿ ಕಳೆದುಕೊಂಡ ವ್ಯಕ್ತಿಯ ಉತ್ತರ ಬೇಕಿದೆ,

ತಮ್ಮ ಸರ್ವಸ್ವವನ್ನೂ ತಮ್ಮ ನಾಲ್ಕು ಮಕ್ಕಳಿಗಾಗಿ ತ್ಯಾಗಮಾಡಿ ಈಗ ಅವರಿಂದ ತಿರಸ್ಕೃತರಾಗಿ ವೃಧ್ಧಾಶ್ರಮದಲ್ಲಿ ಬದುಕುತ್ತಿರುವ ತಂದೆಯ ಉತ್ತರ ಬೇಕಿದೆ,

ನಿವೃತ್ತಿ ವೇತನ ಪಡೆಯಲು 5 ವರ್ಷದಿಂದ ಭ್ರಷ್ಟ ಸರ್ಕಾರಿ ವ್ಯವಸ್ಥೆಯಲ್ಲಿ ನರಳುತ್ತಿರುವ ವೃಧ್ಧರಿಂದ ಉತ್ತರ ಬೇಕಿದೆ,

ಪ್ರಾಮಾಣಿಕರಾಗಿದ್ದುದರಿಂದಲೇ ತನ್ನ ಸಹಚರರಿಂದ ಕಿರುಕುಳಕ್ಕೊಳಗಾಗಿ ಸೇವೆಯಿಂದ ವಜಾಗೊಂಡ ಸರ್ಕಾರಿ ಅಧಿಕಾರಿಯಿಂದ ಉತ್ತರ ಬೇಕಿದೆ,

ಅವರ ಉತ್ತರಗಳು ಆಶಾದಾಯಕವಾಗಿದ್ದರೆ ಇವನ್ನೆಲ್ಲಾ ಮತ್ತೊಮ್ಮೆ ವಾಸ್ತವದ ವಿಮರ್ಶೆಗೊಳಪಡಿಸಬಹುದು.

ಇಲ್ಲದಿದ್ದರೆ ಇನ್ನೆಷ್ಟು ದಿನ ಈ ಭ್ರಮೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯುವುದು.

ಅಥವಾ
ಮೇಲೆ ಹೇಳಿದ ಎಲ್ಲವೂ ಸತ್ಯ. ನಿಮಗೆ ತಿಳಿವಳಿಕೆಯ ಕೊರತೆಯಿದೆ ಎನ್ನುವುದಾದರೆ ನಿಮಗೆ ಧನ್ಯವಾದಗಳು. ನಿಮ್ಮ ಅದೃಷ್ಟ ನಮಗಿಲ್ಲ.

ಏಕೆಂದರೆ…….

ಅಪ್ಪ ಅಮ್ಮ ಇದ್ದರೂ ಅನಾಥ ನಾ,

ಹೆಂಡತಿ ಮಕ್ಕಳಿದ್ದರೂ ಒಂಟಿ ನಾ,

ಗೆಳೆಯರಿದ್ದರೂ ಸ್ವತಂತ್ರ ನಾ,

ಹಣವಿದ್ದರೂ ದರಿದ್ರ ನಾ,

ಗುಣವಿದ್ದರೂ ದಡ್ಡ ನಾ,

ಆರೋಗ್ಯವಿದ್ದರೂ ರೋಗಿ ನಾ,

ಮಾತು ಬಂದರೂ ಮೂಕ ನಾ,

ದೇಶವಿದ್ದರೂ ನಿರಾಶ್ರಿತ ನಾ,

ಜ್ಞಾನವಿದ್ದರೂ ಅರಿಯದವನು ನಾ,

ಭಕ್ತಿಯಿದ್ದರೂ ನಾಸ್ತಿಕ ನಾ,

ಅಧಿಕಾರವಿದ್ದರೂ ಬೈರಾಗಿ ನಾ,

ಎಲ್ಲಾ ಇದ್ದರೂ ಏನೂ ಇಲ್ಲದವನು ನಾ,

ಏಕೆಂದರೆ ನಾ ಬಂದಿದ್ದೂ ಒಂಟಿಯಾಗಿ,
ಹೋಗುವುದು ಒಂಟಿಯಾಗಿ
ಎಂದು ತಿಳಿದವನು ನಾ,

ವಿವೇಕಾನಂದ ಹೆಚ್ ಕೆ

Share This Article
Leave a comment