ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಸ್ಥಾಪನೆ ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸ್ವಾಗತ

Team Newsnap
2 Min Read

ರಾಜ್ಯ ಸರ್ಕಾರ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವ ನಿರ್ಧಾರವನ್ನು ಬಹುಜನ ಸಮಾಜ ಪಕ್ಷದ ರಾಜ್ಯ ಅಧ್ಯಕ್ಷ ಎಂ. ಕೃಷ್ಣಮೂರ್ತಿ
ಸ್ವಾಗತಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಕೃಷ್ಣಮೂರ್ತಿ ಲಿಂಗಾಯತ – ವೀರಶೈವ ಎಂದರೆ ಸಮುದಾಯದಲ್ಲಿರುವ ದೊಡ್ಡ ದೊಡ್ಡ ರಾಜಕಾರಣಿಗಳು, ಉದ್ಯಮಿ ಗಳು,ಕಂಟ್ರಾಕ್ಟರುಗಳು ಮತ್ತು ವ್ಯಾಪಾರಿಗಳು ಮಾತ್ರವಲ್ಲ ಆ ಸಮುದಾಯದಲ್ಲಿ ಇನ್ನೂ ಸಹ ಅತ್ಯಂತ ಕಡುಬಡವರು ಇದ್ದಾರೆ. ಅವರ ಶ್ರೇಯೋಭಿವೃದ್ಧಿಗಾಗಿ ಇಂತಹ ಅಭಿವೃದ್ಧಿ ನಿಗಮ ಅವಶ್ಯಕ ಎಂದು ಹೇಳಿದರು.

ಹಾಗೆಯೇ ಒಕ್ಕಲಿಗ, ಕುರುಬ, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದಲ್ಲಿರುವ ಬಡವರು ಮತ್ತು ದುರ್ಬಲರನ್ನು ಅಭಿವೃದ್ಧಿಗೊಳಿಸಲು ಒಕ್ಕಲಿಗ ಅಭಿವೃದ್ಧಿ ನಿಗಮ, ಕುರುಬ ಅಭಿವೃದ್ಧಿ ನಿಗಮ,ಮುಸ್ಲಿಂ ಅಭಿವೃದ್ಧಿ ನಿಗಮ ಹಾಗೂ ಕ್ರೈಸ್ತ ಅಭಿವೃದ್ಧಿ ನಿಗಮಗಳನ್ನು ಸಹ ಸ್ಥಾಪನೆ ಮಾಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯ ಮಾಡಿದರು.

ಸರ್ವರು ಅಭಿವೃದ್ಧಿ ಹೊಂದಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಮುಖ್ಯವಾಹಿನಿಗೆ ಬರಬೇಕು. ಯಾರು ಸಹ ಅಭಿವೃದ್ಧಿಯ ಅವಕಾಶಗಳಿಂದ ವಂಚಿತರಾಗಬಾರದು ಎನ್ನುವುದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯವಾಗಿದೆ ಎಂದರು.

ಸಂವಿಧಾನ ಜಾರಿಯಾಗಿ ಎಪ್ಪತ್ತು ವರ್ಷಗಳು ಕಳೆದರೂ ಎಲ್ಲ ಜಾತಿ ವರ್ಗಗಳ ಸಮಾಜದಲ್ಲಿ ಬಡವರು ಮತ್ತು ಕಡುಬಡವರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಹಾಗಾಗಿ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಜಾತಿಯ ಬಡವರು ಅಭಿವೃದ್ಧಿ ಹೊಂದಲೇಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ
ಎಂದು ಹೇಳಿದರು.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುವುದು ಮಾತ್ರ ಅಲ್ಲ ಸಮಾಜದ ಕಡುಬಡವರಿಗೆ ಯೋಜನೆಗಳು ಮತ್ತು ಅವಕಾಶಗಳು ತಲುಪುವಂತೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ವಿದ್ಯುತ್ ಬೆಲೆ ಏರಿಕೆಗೆ ಖಂಡನೆ:

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಬೆಲೆ ಏರಿಸಿರುವುದನ್ನು ಖಂಡಿಸಿದರು. ಕರೋನಾ ಕಾರಣದಿಂದ ರಾಜ್ಯದ ಜನತೆ ಉದ್ಯೋಗ ಮತ್ತು ಆದಾಯವಿಲ್ಲದೆ ಕಷ್ಟಕ್ಕೆ ಸಿಲುಕಿದ್ದಾರೆ.
ಇಂತಹ ಸಂದರ್ಭದಲ್ಲಿ ವಿದ್ಯುತ್ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕೂಡಲೇ ಬೆಲೆಯನ್ನು ಇಳಿಸಬೇಕು.ಇಲ್ಲದಿದ್ದರೆ ರಾಜ್ಯಾದ್ಯಂತ ಬಹುಜನ ಸಮಾಜ ಪಕ್ಷ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಕಮಲ್ ಶರೀಫ್, ಮಾಜಿ ಅಧ್ಯಕ್ಷ ಕಿರಗಸೂರು ದೇವರಾಜ್, ಟೌನ್ ಮುಖಂಡ ಸುಧಾಕರ್ ಮುಂತಾದವರು ಇದ್ದರು.

Share This Article
Leave a comment