December 22, 2024

Newsnap Kannada

The World at your finger tips!

WhatsApp Image 2023 06 05 at 9.01.22 AM

ಪರಿಸರವೇ ಪರಮಾತ್ಮ

Spread the love

ಪರಿಸರವೆಂದರೆ ಪರಮಾತ್ಮ. ಪರಿಸರವೆಂದರೆ ಸಮತೋಲನ. ಪರಿಸರವೆಂದರೆ ಸಮಾನತೆ. ಪರಿಸರವೆಂದರೆ ಶುದ್ಧ ಭಾವ.

dr rajshekar nagur
ಡಾ. ರಾಜಶೇಖರ ನಾಗೂರ

🌲ಸಮಾನತೆ ಹೇಗೆ?

● ಪರಿಸರವು ಒಂದು ಆನೆಯನ್ನು ಸೃಷ್ಟಿಸಲು ತೆಗೆದುಕೊಂಡ ಶ್ರಮವನ್ನು ಒಂದು ಇರುವೆಯ ಸೃಷ್ಟಿಗೂ ತೆಗೆದುಕೊಂಡಿರುತ್ತದೆ. ಒಂದು ಹುಲಿಯ ಪರಿಸರ ಮುಖೇನ ಕೆಲಸಗಳು, ಒಂದು ಚಿಟ್ಟೆಯ ಪರಿಸರ ಮುಖೇನ ಕೆಲಸಗಳಿಗೆ ಸಮ. ಇಲ್ಲಿ ಹುಲಿಯೂ ಬೇಕು. ಚಿಟ್ಟೆಯೂ ಬೇಕು.

● ಕುತೂಹಲಕಾರಿ ವಿಸ್ಮಯವೆಂದರೆ ಭೂಮಿಯ ಮೇಲಿನ ಎಲ್ಲ ಕ್ರಿಮಿ-ಕೀಟಗಳು ಇಂದೇ ಸರ್ವನಾಶವಾದರೆ ಕೇವಲ ಮುಂದಿನ ನಾಲ್ಕಾರು ವರ್ಷಗಳಲ್ಲಿ ಭೂಮಿಯ ಮೇಲೆ ಉಳಿದ ಪ್ರತಿಯೊಂದು ಜೀವಿಗಳು ನಶಿಸಿ ಹೋಗುತ್ತವೆ. ಕ್ರಿಮಿ-ಕೀಟಗಳು ಗಾತ್ರದಲ್ಲಿ ಚಿಕ್ಕವು. ಅವುಗಳಿಂದ ಪ್ರಯೋಜನವೇನು ಎನ್ನುವಂತಿಲ್ಲ. ಕೀಟಗಳಿಂದ ಪರಾಗಸ್ಪರ್ಶ. ಈ ಸ್ಪರ್ಶದಿಂದಲೆ ಹೂವು,ಕಾಯಿ, ಹಣ್ಣುಗಳ, ಬೆಳೆಗಳ ಉತ್ಪಾದನೆ. ಹೀಗಾಗಿ ಪ್ರತೀ ಜೀವಿಗೂ ಸಮಾನತೆ, ಸಮನಾದ ಮಹತ್ವ ಈ ಪರಿಸರದ ಮಡಿಲಲ್ಲಿದೆ.

● ಅದೇ ಮನುಷ್ಯ ಇಂದೇ ನಾಶವಾದಲ್ಲಿ, ಭೂಮಿಯು ಹಿಂದೆಂದಿಗಿಂತಲೂ ಮೈದುಂಬಿ ನಿಲ್ಲುತ್ತದೆ. ಪ್ರಕೃತಿಯಲ್ಲಿ ಮನುಷ್ಯನಿಗಿರುವ ಬೆಲೆ ಇಷ್ಟೆ.

ಸಮತೋಲನ ಹೇಗೆ?

● ಪ್ರಾಣಿಗಳು ಉಸಿರಾಡಿ ಹೊರಬಿಟ್ಟ ಮತ್ತು ವಾಹನಗಳು, ಕಾರ್ಖಾನೆಗಳು ಹೊರಸೂಸುವ ಕಾರ್ಬನ್ ಡೈ ಆಕ್ಷೈಡ್ ನ್ನು ಮರಗಳು ಒಳಗೆ ಎಳೆದುಕೊಳ್ಳುತ್ತವೆ. ಹೀಗಾಗಿ ಕಾಡುಗಳು ಈ ಭೂಮಿಯ “ಕಾರ್ಬನ್ ಸಿಂಕ್” ಗಳಂತೆ ವರ್ತಿಸುತ್ತವೆ.

● ಮರಗಳು ಹೊರ ಸೂಸುವ ಆಮ್ಲಜನಕವು ಪ್ರಾಣಿಗಳ ಜೀವಾಳ. ಹೀಗೆ ಜೀವ-ಜೀವಗಳ ನಡುವೆ ಸಮತೋಲನವನ್ನು ಪರಿಸರವು ಕೊಡಮಾಡಿದೆ.

● ಒಂದು ಪ್ರಾಣಿ ಮರಣ ಹೊಂದಿದರೆ ಅದರ ಮೃತ ದೇಹವನ್ನು ಕೊಳೆಯುವಂತೆ ಮಾಡಿ ಮಣ್ಣಾಗಿಸಲು ಕೆಲವು ಸೂಕ್ಷ್ಮಾಣು ಜೀವಿಗಳನ್ನು ಪರಿಸರ ಸಮತೋಲನಕ್ಕಾಗಿ ಒದಗಿಸಿದೆ.

● ಭೂಮಿಯ ಮೇಲಿನ ಉಷ್ಣತೆ ಹೆಚ್ಚಾದಾಗ ಸಾಗರ, ನದಿ, ಸರೋವರಗಳನ್ನು ಆ ಹೆಚ್ಚುವರಿ ಉಷ್ಣತೆಯನ್ನು ಹೀರಿ ಉಷ್ಣತೆಯ ಸಮತೋಲನ ಕಾಪಾಡಲು ಪರಿಸರ ನಮಗೊದಗಿಸಿದೆ.

ಹೀಗೆ ಜೀವಿಸುವಾಗ ಮತ್ತು ಮರಣಿಸಿದ ಮೇಲೂ ಸಮತೋಲನವಿದೆ ಎಂದಾದರೆ ಅದು ಈ ಪರಿಸರದಿಂದ ಮಾತ್ರ.

🦜 ಶುದ್ಧ ಭಾವ ಹೇಗೆ?

● ಈ ಬ್ರಹ್ಮಾಂಡದಲ್ಲಿ ನಿರ್ವಾತ (vacuume) ವೇ ತುಂಬಿದೆ. ಅಲ್ಲಿ ಗಾಳಿಯಿಲ್ಲ. ಇಂತಹ ನಿರ್ವಾತದಲ್ಲಿ ಭೂಮಿಯ ಮೇಲ್ಮೈ ಗೆ ವಾತಾವರಣವೆಂಬ ಗಾಳಿಯ ಹೊದಿಕೆಯನ್ನು ಹೊದಿಸಿ ಅದರೊಳಗೆ ಪ್ರತಿ ಜೀವಿಯು ಬದುಕಲು ಅವಕಾಶ ಮಾಡಿಕೊಟ್ಟ ತಾಯಿಯ ಶುದ್ಧ ಗರ್ಭದಂತಹ ಸ್ಥಳಾವಕಾಶ ಒದಗಿಸಿದ್ದು ಈ ಪರಿಸರ.

● ‘ಅಲ್ಟ್ರಾವೈಲೆಟ್’ ನಂತಹ ಸೂರ್ಯನ ಅಪಾಯಕಾರಿ ವಿಕಿರಣಗಳನ್ನು ತಡೆದು, ಸೋಸಿ ಬಿಡುವ “ಓಝೋನ್” ಪದರವನ್ನು ಒದಗಿಸಿದ ಪರಿಸರವು ಮಕ್ಕಳನ್ನು ಕಾಪಾಡುವ ತಾಯಿಯ ಶುದ್ಧ ಭಾವದಂತೆಯೇ ಅಲ್ಲವೆ?

● ಅದೆಷ್ಟೇ ಪ್ರಾಣಿ ಪ್ರಪಂಚವು ಪರಿಸರವನ್ನು ಕಲುಷಿತಗೊಳಿಸಿದರು ಮತ್ತೆ ಮತ್ತೆ ಶುದ್ಧಿಕರಿಸಿ ಮಳೆಯನ್ನು, ಗಾಳಿಯನ್ನು ಕೊಡುವ ಪರಿಸರವು ಶುದ್ಧ ದೈವಿದತ್ತ ಭಾವವಲ್ಲವೆ?

🦋 ಶುದ್ಧವಾದ ಉಸಿರು ಕೊಡುವ, ಸಮಾನವಾಗಿ ಎಲ್ಲ ಜೀವಿಗಳನ್ನು ಪೊರೆಯುತ್ತಿರುವ ಮತ್ತು ವಿವಿಧ ಜೀವ ವೈವಿದ್ಯದ ನಡುವೆಯೂ ಸಮತೋಲನವನ್ನು ಉಳಿಸಿ ಕೊಡುವ ಪರಿಸರವನ್ನು ಮಲಿನಗೊಳಿಸದೆ ಮುಂದಿನ ಪೀಳಿಗೆಯ ವರೆಗೂ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

🦜”ಪರಿಸರವೇ ಪರಮಾತ್ಮ” ನೆನ್ನುವ ಭಕ್ತಿ ಭಾವ ಬರದ ಹೊರತು ಪರಿಸರ ಉಳಿಯುವುದಾದರೂ ಹೇಗೆ? ಕಾನೂನುಗಳು ಇನ್ನಷ್ಟು ಕಠಿಣವಾಗಬೇಕು.

🌳 “ಮರ ಕಡಿದರೆ ಮರಣ ದಂಡನೆ” ಎನ್ನುವವರೆಗೆ ಪರಿಸರ ನಾಶ ಮುಂದುವರೆಯುತ್ತಲೇ ಇರುತ್ತದೆ.

Copyright © All rights reserved Newsnap | Newsever by AF themes.
error: Content is protected !!