December 9, 2024

Newsnap Kannada

The World at your finger tips!

WhatsApp Image 2023 06 05 at 9.03.21 AM

ವಿಶ್ವ ಪರಿಸರ ದಿನಾಚರಣೆ

Spread the love

“ಸರ್ವ ಜೀವಿನೋ – ಸುಖಿನೋ ಭವಂತು.”

WhatsApp Image 2023 06 04 at 10.45.09 PM
ಮಹೇಶಚಂದ್ರಗುರು

ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 5ರಂದು ಜಗತ್ತಿನಾದ್ಯಂತ ಕಳೆದ 49 ವರ್ಷಗಳಿಂದ ಆಚರಿಸಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮನುಕುಲ ಮತ್ತು ಪರಿಸರದ ಮೇಲೆ ಜಗತ್ತಿನಾದ್ಯಂತ ಆಗುತ್ತಿದ್ದ ಆಗಬಹುದಾದ ಪರಿಣಾಮಗಳ ಕುರಿತು ಚರ್ಚೆ ಅಧ್ಯಯನಗಳಿಂದ ಪ್ರಭಾವಿತವಾದ ವಿಶ್ವಸಂಸ್ಥೆಯು ಸ್ಟಾಕ್ ಹೋಂನಲ್ಲಿ 5-6- 1972 ರಿಂದ 16- 6-1972 ರವರೆಗೆ ನಡೆದ ಚರ್ಚೆ ಪ್ರಕ್ರಿಯೆಗಳ ಪರಿಣಾಮವಾಗಿ 1972ರಲ್ಲಿ ವಿಶ್ವ ಪರಿಸರ ದಿನಾಚರಣೆ ಘೋಷಿತವಾಯಿತು. ಮೊಟ್ಟಮೊದಲ ವಿಶ್ವ ಪರಿಸರ ದಿನಾಚರಣೆ 5-6- 1973 ರಂದು “ಒಂದೇ ಭೂಮಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಯಿತು. ಹೀಗೆ ಕಳೆದು 49 ವರ್ಷಗಳಿಂದ ವಿವಿಧ ಧ್ಯೇಯ ವಾಕ್ಯಗಳೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.
ಪ್ರಸ್ತುತ ವರ್ಷ “ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು” ಎಂಬ ಥೀಮನ್ನು ಘೋಷಿಸಲಾಗಿದೆ.
ಕಳೆದ ಐದು ದಶಕಗಳ ಈ ಆಚರಣೆಯು ಪರಿಸರ ಕುರಿತು ಜಾಗೃತಿ ಮೂಡಿಸುತ್ತಿದೆ, ಪೂರಕ ಕ್ರಿಯೆಗಳನ್ನು ಬೆಂಬಲಿಸುತ್ತಿದೆ, ಮತ್ತು ಪರಿಸರ ಸ್ನೇಹಿ ಆಲೋಚನೆ – ನಡವಳಿಕೆ – ಕ್ರಮ- ಕಾನೂನು -ನೀತಿಗಳನ್ನು ಪ್ರಭಾವಿಸುತ್ತಿದೆ.

ಪರಿಸರ ದಿನಾಚರಣೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು.

ಪರಿಸರ ಮತ್ತು ಸ್ವಯಂ ಸೇವಾ ಸಂಸ್ಥೆಗಳ ನಡುವೆ ಪ್ರಬಲ, ಅವಿನಾಭಾವ ಸಂಬಂಧ ಇದೆ. ಸಾಮಾನ್ಯವಾಗಿ ಸ್ವಯಂ ಸೇವಾ ಸಂಸ್ಥೆಗಳು, ಎಲ್ಲಾ ಧರ್ಮ- ಜಾತಿಯ, ಬಡವರು, ಮಕ್ಕಳು, ಮಹಿಳೆಯರು, ವಿಶೇಷ ಚೇತನರು, ಹಿರಿಯ ನಾಗರಿಕರು, ಬುಡಕಟ್ಟು ಜನಾಂಗ, ಅನಾರೋಗ್ಯ ಪೀಡಿತರು, ವಸತಿ ರಹಿತರಿಗೆ, ವಲಸಿಗರು……. ಹೀಗೆ ತುಂಬಾ ತುಂಬಾ ಸಂಕಷ್ಟದಲ್ಲಿರುವವರ ಸ್ವಾವಲಂಬಿ, ಸುಸ್ಥಿರ, ಘನತೆಯ ಬದುಕಿಗಾಗಿ ಕಾರ್ಯನಿರ್ವಹಿಸುತ್ತಿವೆ. ಪರಿಸರದ ಪರಿಭಾಗವೂ, ಜಗತ್ತಿನ ಆರ್ಥಿಕ ಹಾಗೂ ನೈಸರ್ಗಿಕ ಜೀವನಾಧಾರವೂ ಅದ ಮಣ್ಣು, ನೀರು, ಹಸಿರು ಮತ್ತು ಜೀವ ವೈವಿಧ್ಯತೆಗಳ ಸಂರಕ್ಷಣೆ, ಅಭಿವೃದ್ಧಿ, ಸಮರ್ಪಕ ಬಳಕೆ ಮತ್ತು ನಿರ್ವಹಣೆಯಿಂದ ಮಾತ್ರ ನಮ್ಮ ಮೇಲ್ಕಂಡ ಗುರಿ ಸಾಧಿಸಲು ಸಾಧ್ಯ.
ನಮಗೆ ಸಮುದಾಯ, ಕೃಷಿ, ಕೈಗಾರಿಕೆ, ಮಾರುಕಟ್ಟೆ, ಆರ್ಥಿಕತೆಯನ್ನು ಪರಿಸರ ಸ್ನೇಹಿಯಾಗಿ ಪ್ರಭಾವಿಸಲು, ಅದಕ್ಕೆ ಪೂರಕ ನೀತಿ – ನಿಯಮಗಳನ್ನು ರೂಪಿಸುವಂತೆ ಸರ್ಕಾರಗಳನ್ನು ಒತ್ತಾಯಿಸಲು, ಪರಿಸರ- ಪರಿಸರ ದಿನಾಚರಣೆ ಒಂದು ಪ್ರಬಲ ಅಸ್ಥ್ರ.
ಅಭಿವೃದ್ಧಿಯ ಪರಿಕಲ್ಪನೆ -ಭಾಷ್ಯ ವನ್ನು,
“ಸುಸ್ಥಿರ ಅಭಿವೃದ್ಧಿ” ಎಂದು ಬದಲಾಯಿಸುವಲ್ಲಿ ನಮ್ಮೆಲ್ಲರ ಪಾತ್ರ ಇದೆ. ನಮ್ಮ ಸ್ವಯಂ ಸೇವಾ ಸಂಸ್ಥೆಗಳು ನಿರ್ವಹಿಸುವ ಯಾವುದೇ ಕಾರ್ಯಗಳು, ಸುಸ್ಥಿರ ಅಭಿವೃದ್ಧಿಯ ಗುರಿಗಳ ಭಾಗವೇ ಆಗಿದೆ. ಅಲ್ಲಿ ಘೋಷಿಸಿರುವ – ನಿಗದಿ ಪಡಿಸಿರುವ 17 ಗುರಿಗಳು ತುಂಬಾ ಸರಳ, ಸ್ಪಷ್ಟ,
ದೃಡವಾಗಿ ರೂಪಿತವಾಗಿದೆ. ಅಲ್ಲಿನ 16 ಮತ್ತು 17ನೇ ಗುರಿಗಳಲ್ಲಿ, ಸರ್ಕಾರ ನಾಗರಿಕ ಸೇವಾ ಸಂಸ್ಥೆಗಳು ಹಾಗೂ ಸಮುದಾಯ, ಹೇಗೆ ಪರಸ್ಪರ ಸಹಭಾಗಿತ್ವದಲ್ಲಿ – ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕಾದ ಅಗತ್ಯತೆ ಅನಿವಾರ್ಯತೆಯನ್ನು ಹೇಳಿವೆ.
ಈ ಎಲ್ಲಾ ಗುರಿ ಸಾಧನೆಯಲ್ಲಿ ಪಾಲುದಾರರಾಗಿ ಕೆಲಸ ಮಾಡಲು ನಾವು ಮತ್ತಷ್ಟು ಬದ್ಧರಾಗಬೇಕಾಗಿದೆ. ಈಗಾಗಲೇ ಸಾಕಷ್ಟು ಸಮಯ ಕಳೆದು ಹೋಗಿದೆ. ಇದು ಸುಸ್ಥಿರ ಅಭಿವೃದ್ಧಿಗಾಗಿ ಕೆಲಸ ಮಾಡಲೇಬೇಕಾದ ಸಮಯ. ನಾನು ನಮ್ಮ ಹಳ್ಳಿಯಲ್ಲಿ ಒಂದು ರೈತ ಗುಂಪಿನ ಜೊತೆ ಕಳೆದ ವರ್ಷ ಈ ಕುರಿತು ಚರ್ಚಿಸುತ್ತಿದ್ದ ಸಮಯದಲ್ಲಿ, ಸುಮಾರು ಎರಡು-ಮೂರು ಗಂಟೆಗಳ ಚರ್ಚೆಯಲ್ಲಿ ಮೌನಿಯಾಗಿ – ನಿರ್ವಿಕಾರವಾಗಿ ಕುಳಿತಿದ್ದ ಹಿರಿಯರೊಬ್ಬರು, ಕೊನೆಯ
ಕ್ಷಣದಲ್ಲಿ ಒಂದು ಮಾತನ್ನು ಹೇಳಿದರು.
ಸರ್ ಮನುಷ್ಯ ಸ್ವಾರ್ಥಿ, ಸರ್ವೇ ಜನೋ ಸುಖಿನೋ ಭವಂತು ಎಂದರು. ಕೇವಲ ಮನುಷ್ಯ ಸುಖಿಯಾಗಿದ್ದರೆ ಸಾಲದು, ಅವನು ಒಬ್ಬನೇ ಸುಖವಾಗಿರಲು ಸಾಧ್ಯವೂ ಇಲ್ಲ. ಮನುಷ್ಯ ಈ ಪರಿಸರದ ಪ್ರಕೃತಿಯ ಒಂದು ಸಣ್ಣ ಭಾಗ ಮಾತ್ರ. ಈಗ ಅದನ್ನು ಬದಲಾಯಿಸಿ “ಸರ್ವ ಜೀವಿನೋ ಸುಖಿನೋ ಭವಂತು” ಎಂದು ಹೇಳಬೇಕಾಗಿದೆ. ಆಗ ಎಲ್ಲವೂ ಸರಿ ಹೋಗುತ್ತದೆ ಎಂದರು. ಎಂತಹ ಅದ್ಭುತ ಚಿಂತನೆ. ನಾವು ಕಲಿಯಬೇಕಾದ, ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಈ ದಿಶೆಯಲ್ಲಿ ನಾವೆಲ್ಲಾ ಕಾರ್ಯಪ್ರವೃತ್ತರಾಗೋಣ, ಪರಿಸರ ದಿನಾಚರಣೆಯನ್ನು ನಮ್ಮ ಬದಲಾವಣೆಯ ಗುರಿ- ಸಾಧನೆಗೆ, ವೇದಿಕೆ – ಅಸ್ತ್ರವಾಗಿ ಬಳಸೋಣ. ಈ ದೆಸೆಯಲ್ಲಿ ನಾವೆಲ್ಲಾ ಒಗ್ಗೂಡಿ ರಾಜ್ಯಾದ್ಯಂತ ಸ್ವಾವಲಂಬಿ – ಸುಸ್ಥಿರ ಕರ್ನಾಟಕ ನಿರ್ಮಾಣಕ್ಕಾಗಿ ಕೆಲಸ ಮಾಡೋಣ.
ಸುಸ್ಥಿರ ಅಭಿವೃದ್ಧಿಗಾಗಿ
ನಾವು – ನೀವು

ಮಹೇಶಚಂದ್ರಗುರು ಅಧ್ಯಕ್ಷರು ಕರ್ನಾಟಕ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಬೆಂಗಳೂರು
ಹಾಗೂ
ನಿರ್ದೇಶಕರು ವಿಕಸನ ಸಂಸ್ಥೆ ಮಂಡ್ಯ.

Copyright © All rights reserved Newsnap | Newsever by AF themes.
error: Content is protected !!