ವರದಕ್ಷಿಣೆ ಕಿರುಕುಳ : ಇಬ್ಬರು ಮಕ್ಕಳು ಸೇರಿ ಮೂವರು ಸಹೋದರಿಯರು ಬಾವಿಗೆ ಹಾರಿ ಆತ್ಮಹತ್ಯೆ

Team Newsnap
1 Min Read

ವರದಕ್ಷಿಣೆ ಕಿರುಕುಳಕ್ಕೆ ಒಂದೇ ಕುಟುಂಬದ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಘಟನೆ ರಾಜಸ್ಥಾನದ ಜೈಪುರದ ಚಪಿಯಾ ಗ್ರಾಮದಲ್ಲಿ ಜರುಗಿದೆ.

ಮೂವರು ಹೆಣ್ಣು ಮಕ್ಕಳನ್ನು ಒಂದೇ ಕುಟುಂಬಕ್ಕೆ ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ಆ ಕುಟುಂಬದಲ್ಲಿ ಮೂವರು ಸಹೋದರಿಯರಿಗೂ ಪತಿ ಮನೆಯವರು ಸದಾ ವರದಕ್ಷಿಣೆ ಕಿರುಕುಳ ಕೊಡ್ತಿದ್ದರಂತೆ. ಈ ನಿತ್ಯ ನರಕ ತಾಳಲಾರದೆ ಮೂವರೂ ಅಕ್ಕತಂಗಿಯರು ತಮ್ಮ ಎರಡು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಇಬ್ಬರು ಗರ್ಭಿಣಿಯಾಗಿದ್ದರು.ಮೃತ ಮಕ್ಕಳಲ್ಲಿ ಒಂದು 4 ವರ್ಷದ ಗಂಡು ಮಗು ಹಾಗೂ ಮತ್ತೊಂದು ಕೇವಲ 27 ದಿನಗಳ ಹಸುಗೂಸು ಸೇರಿದೆ.

ಇದನ್ನು ಓದಿ : ಕೆಸರು, ನೀರಿನಲ್ಲಿ ಸಾಮಾನ್ಯ ಮಹಿಳೆಯಂತೆ ನಡೆದುಕೊಂಡು ಹೋಗುವ ಐಎಎಸ್ ಅಧಿಕಾರಿ 

ನನ್ನ ಸಹೋದರಿಯರ ಮೇಲೆ ವರದಕ್ಷಿಣೆಗಾಗಿ ನಿರಂತರವಾಗಿ ಅವರ ಪತಿ ಮನೆಯವರು ಥಳಿಸುತ್ತಿದ್ದರು. ಮೇ 25ರಂದು ಅವರು ನಾಪತ್ತೆಯಾದಾಗ, ಹುಡುಕಾಡಿ ಸೋತು ಕೊನೆಗೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೆವು. ಮಹಿಳಾ ಸಹಾಯವಾಣಿ ಮತ್ತು ಮಹಿಳಾ ಆಯೋಗವನ್ನು ಕೂಡ ಸಂಪರ್ಕಿಸಿದ್ದೆವು. ಆದರೆ ಯಾರಿಂದಲೂ ಸಹಾಯ ಸಿಕ್ಕಿರಲಿಲ್ಲ ಎಂದು ಮೃತರ ಸಹೋದರ ಸಂಬಂಧಿ ಹೇಮರಾಜ್ ಮೀನಾ ಅಳಲು ತೋಡಿಕೊಂಡಿದ್ದಾರೆ.

ಇನ್ನು ಆತ್ಮಹತ್ಯೆ ಶರಣಾದ ಕಿರಿಯ ಸಹೋದರಿ, ಕಮಲೇಶರ ವಾಟ್ಸಾಪ್​ಗೆ ನಮ್ಮ ಸಾವಿಗೆ ಅತ್ತೆ ಮಾವನೇ ಕಾರಣ. ವರದಕ್ಷಿಣೆಗಾಗಿ ಕಿರುಕುಳ ಕೊಡುತ್ತಿದ್ದಾರೆ. ಹೀಗಾಗಿ ನಾವು ಜೊತೆಯಾಗಿ ಸಾಯಲು ನಿರ್ಧರಿಸಿದ್ದೇವೆ ಎಂದು ಮೆಸೇಜ್​ ಕಳಿಸಿದ್ದಾರೆ. ಕಾಣೆಯಾದ ನಾಲ್ಕು ದಿನಗಳ ಬಳಿಕ ಮೂವರು ಸಹೋದರಿಯರು ಹಾಗೂ ಎರಡು ಮಕ್ಕಳ ಶವಗಳು ಬಾವಿಯೊಂದರಲ್ಲಿ ಪತ್ತೆಯಾಗಿದ್ದವು. ಮೂವರು ಪಾಪಿ ಪತಿಯರು ಮತ್ತು ಅತ್ತೆ ಮಾವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕುಟುಂಬದ ಇತರೆ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Share This Article
Leave a comment