ಹುಬ್ಬಳ್ಳಿಯ ನೇಹಾ ಹತ್ಯೆ ಖಂಡಿಸಿ ಮಂಡ್ಯದಲ್ಲಿ ಬಿಜೆಪಿ, ಎಬಿವಿಪಿಯಿಂದ ಭಾರಿ ಪ್ರತಿಭಟನೆ

Team Newsnap
1 Min Read

ಮಂಡ್ಯ : ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಶನಿವಾರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರುಭಾರಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಂಡ್ಯ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟ ಜಾಗೃತ ಹಿಂದೂ ವೇದಿಕೆ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ” ಜಸ್ಟಿಸ್ ಫಾರ್ ನೇಹಾ ” ಘೋಷಣೆ ಕೂಗಿದರು.

ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿ, ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿ ವೈಯಕ್ತಿಕ ಕಾರಣದಿಂದ ವಿದ್ಯಾರ್ಥಿನಿ ನೇಹಾ ಹತ್ಯೆಯಾಗಿದೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲವ್ ಜೆಹಾದ್ ಅಲ್ಲ, ಇಂತಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ ಎಂದಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಕಿಡಿಕಾರಿದರು.

ರಾಜ್ಯದಲ್ಲಿ ಇಂತಹ ಹತ್ಯೆಗಳು ನಡೆಯಬಾರದು. ಮತ್ತೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ದುಷ್ಕೃತ್ಯ ಮಾಡಿರುವವರನ್ನು ಎನ್ ಕೌಂಟರ್ ಮಾಡುವಂತ ಕಾನೂನು ಜಾರಿಗೊಳ್ಳಬೇಕು. ನೇಹಾ ಕೊಲೆ ಮಾಡಿದ ಆರೋಪಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

neha

ಪ್ರತಿಭಟನೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕಿ ಸುಗುಣ, ಸುಶ್ಮಿತಾ, ಉಲ್ಲಾಸ್, ಜಾಗೃತ ಹಿಂದೂ ವೇದಿಕೆಯ ಸುರೇಶ್,ಎಂ ವಸಂತ್ ಕುಮಾರ್ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಅಬ್ಬಾಸ್ ಆಲಿ ಬೋಹ್ರಾ,ಉಮೇಶ್, ಇಂಡುವಾಳು ಸಚ್ಚಿದಾನಂದ,ಅರವಿಂದ್, ಸಿ.ಟಿ ಮಂಜುನಾಥ್,ಬಿ.ಟಿ ಶಿವಲಿಂಗಯ್ಯ, ನಿತ್ಯಾನಂದ ನೇತೃತ್ವ ವಹಿಸಿದ್ದರು.

Share This Article
Leave a comment