ನಾಡುಕಂಡ ಸಾಂಸ್ಕೃತಿಕ ನಾಯಕ ಸಿದ್ದರಾಮಯ್ಯ: ಪ್ರೊ. ಹಿ.ಶಿ. ರಾಮಚಂದ್ರೇಗೌಡ

Team Newsnap
1 Min Read
Pic Credits : deccanherald.com

ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ನಾಡುಕಂಡ ಸಾಂಸ್ಕೃತಿಕ ನಾಯಕ ಎಂದು ಬಣ್ಣಿಸಿದವರು ಜಾನಪದ ವಿದ್ವಾಂಸ ಪ್ರೊ. ಹಿ.ಶಿ. ರಾಮಚಂದ್ರೇಗೌಡ.


ಮೈಸೂರಿನಲ್ಲಿ ಶನಿವಾರ ನಡೆದ ಪ್ರೊ. ಎಚ್.ಜೆ.ಲಕ್ಕಪ್ಪಗೌಡ ಅವರಿಗೆ ನುಡಿನಮನ ಮತ್ತು ಅವರ ಬದುಕು: ಬರಹ ಒಂದು ಮೆಲುಕು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲ ವರ್ಗದಿಂದ ಸಾಂಸ್ಕೃತಿಕ ನಾಯಕರು ಬರಬೇಕು. ಬಸವಣ್ಣನವರು ಎಲ್ಲ ವರ್ಗದವರಿಗೂ ಲಿಂಗ ದೀಕ್ಷೆ ಕೊಟ್ಟು ಸಮಾನತೆ ಪ್ರದರ್ಶಿಸಿದರು. ಬಸವಣ್ಣನವರ ನಂತರ ರಾಷ್ಟ್ರಕವಿ ಕುವೆಂಪು, ತದನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ನಾಡು ಕಂಡ ಸಾಂಸ್ಕೃತಿಕ ನಾಯಕರು ಎಂದು ಹೊಗಳಿದರು.


ರಾಜ್ಯದ ಏಕೈಕ ವೈಚಾರಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದೂ ಇದೇ ವೇಳೆ ಬಣ್ಣಿಸಿದರು. ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದೂ ಪ್ರೊ.ಹಿಶಿರಾ ಆತಂಕದಿಂದ ನುಡಿದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ, ಆಧಾರಸಹಿತ ಟೀಕೆಗಳು ಇರಬೇಕು ಎಂದು ಅಭಿಪ್ರಾಯಪಟ್ಟರು.


ಟೀಕೆಗಳು ಇಲ್ಲವಾದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಈಗ ಸಾಹಿತಿಗಳು ಕೇಂದ್ರ ಸರ್ಕಾರವನ್ನು ಟೀಕಿಸಿದರೆ ಅದು ದೇಶದ್ರೋಹವೆನ್ನುತ್ತಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ದೇಶದಲ್ಲೀಗ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ದೂರಿದರು.


ಮೈಸೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಮತ್ತು ಪ್ರೊ. ಎಚ್.ಜೆ. ಲಕ್ಕಪ್ಪಗೌಡ ಸಾಹಿತ್ಯಾಭಿಮಾನಿ ಬಳಗದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

Share This Article
Leave a comment