ಸುಳ್ಳು ಸಾಕ್ಷಿ ನುಡಿದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ಕೋರ್ಟ್

Team Newsnap
2 Min Read

ಮಂಡ್ಯ ಲೋಕಯುಕ್ತ ಪೋಲಿಸರು ದಾಖಲಿಸಿದ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷಿ ನುಡಿದ ವ್ಯಕ್ತಿ ವಿರುದ್ಧ ಮಂಡ್ಯ ಜಿಲ್ಲಾ ಸತ್ರ ನ್ಯಾಯಾದೀಶ ಎಸ್ ಬಿ ವಸ್ತೃದಮಠ್ ರವರು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿದ್ದಾರೆ.

ಮಂಡ್ಯ ನಗರದ ಗುತ್ತಲೂ ಬಡಾವಣೆಯ ನಿವಾಸಿ ರವಿಕುಮಾರ್ ಎಂಬುವವರು 2014ರಲ್ಲಿ ಮಂಡ್ಯ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಯಾಗಿದ್ದ ಯೋಗನಂದ ಎಂಬುವವರ ವಿರುದ್ಧ ಮೂವತ್ತು ಸಾವಿರ ಲಂಚದ ಹಣಕ್ಕೆ ಒತ್ತಾಯಿಸಿದರು ಎಂದು ಮಂಡ್ಯ ಲೋಕಯುಕ್ತ ಪೋಲಿಸರ ಮುಂದೆ ದೂರು ನೀಡಿ ಪ್ರಕರಣ ದಾಖಲಿಸಿದ್ದರು.

ಅವರ ದೂರಿನ ಆಧಾರದ ಮೇಲೆ ಲೋಕಯುಕ್ತ ಪೋಲಿಸರು ಯೋಗನಂದ ರವರನ್ನು ಟ್ರಾಪ್ ಮಾಡಿ ಬಂಧಿಸಿ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಸಂಧರ್ಭದಲ್ಲಿ ದೂರು ನೀಡಿದ್ದ ರವಿಕುಮಾರ್ ರವರು ತಾನು ಆರೋಪಿಸಿದ್ದ ಅಧಿಕಾರಿ ಯೋಗನಂದ ರವರ ಜೊತೆ ಶಾಮೀಲಾಗಿ ನ್ಯಾಯಾಲಯದಲ್ಲಿ ವ್ಯತಿರಿಕ್ತ ಸಾಕ್ಷಿ ನುಡಿದಿದ್ದರಿಂದ ಆರೋಪಿ ಯನ್ನು ನ್ಯಾಯಾಲಯ ಖುಲಾಸೆ ಗೊಳಿಸಿತ್ತು.

ನ್ಯಾಯಾಲಯ ತನ್ನ ತೀರ್ಪಿನಲ್ಲಿ ನ್ಯಾಯಾಲಯ ಮತ್ತು ಲೋಕಯುಕ್ತ ಪೋಲಿಸ್ ರನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು ಸಾಕ್ಷಿ‌ ನುಡಿದ ರವಿಕುಮಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿ ನೋಟಿಸ್ ಜಾರಿ ಗೊಳಿಸಿತ್ತು.

ನೋಟಿಸ್ ಗೆ ಉತ್ತರಿಸಿದ ರವಿಕುಮಾರ್ ತಾನು ನುಡಿದ ಸಾಕ್ಷಿ ಸತ್ಯವೆಂದು ಹೇಳಿಕೆ ನೀಡಿದ್ದರು. ಅದನ್ನು ಬಲವಾಗಿ ವಿರೋಧಿಸಿದ ಲೋಕಯುಕ್ತ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಬಿಯೋಜಕ ಟಿ.ಎಸ್.ಸತ್ಯಾನಂದ ರವಿಕುಮಾರ್ ಸುಳ್ಳು ಸಾಕ್ಷ ನುಡಿದ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಕ್ರಿಮಿನಲ್
ಮೊಕದ್ದಮೆ ದಾಖಲಿಸಲು ಮನವಿ ಮಾಡಿದ್ದರು.

ನ್ಯಾಯಾಲಯದ ಮುಂದೆ ರವಿಕುಮಾರ್ ಈ ಹಿಂದೆಯು ಇದೇ ರೀತಿ ಲೋಕಯುಕ್ತ ಮತ್ತು ಎಸಿಬಿ ಪೋಲಿಸ್ ರ ಮುಂದೆ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಸಾಕ್ಷಿ ನುಡಿಯುವಾಗ ಆರೋಪಿತರ ಜೊತೆ ಶಾಮೀಲಾಗಿ ವ್ಯತಿರಿಕ್ತ ಸಾಕ್ಷಿ ನುಡಿದಿರುವುದನ್ನು ದಾಖಲೆ ಸಹಿತ ನಿರೂಪಿಸಿ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅದರ ಆಧಾರದ ಮೇಲೆ ನ್ಯಾಯಾಲಯ ರವಿಕುಮಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿದೆ.

ನ್ಯಾಯಾಲಯದ ಆದೇಶದಂತೆ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ದೂರು ದಾಖಲಿಸಲ್ಲಿದ್ದು ಮಂಡ್ಯ ನ್ಯಾಯಾಂಗದ ಇತಿಹಾಸದಲ್ಲಿ ಸುಳ್ಳು ಸಾಕ್ಷಿ ನುಡಿದ ವ್ಯಕ್ತಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ವಿರಳಾತೀ ವಿರಳಾ ಪ್ರಕರಣ ಇದಾಗಿದೆ.

Share This Article
Leave a comment