ನಮಗಂತೂ ಬರುವುದೂ, ಇರುವುದೂ, ನುಡಿವುದೂ ಒಂದೇ ಅದೇ ಕನ್ನಡ ಕನ್ನಡ ಕನ್ನಡ……………
ಇದುವರೆಗಿನ ಮಾನವ ಇತಿಹಾಸದಲ್ಲಿ, ಆತ ಇಲ್ಲಿಯವರೆಗೆ ಬೆಳೆದ ರೀತಿಯನ್ನು ಅವಲೋಕಿಸಿದಾಗ ಮನುಷ್ಯರಲ್ಲಿ ಅರಿವನ್ನು ಮೂಡಿಸುವ ಅತ್ಯಂತ ಪ್ರಬಲ ಮಾಧ್ಯಮ ಭಾಷೆ……………
ಆ ಭಾಷೆಗಳಲ್ಲಿ ಆತನ ಜ್ಞಾನವನ್ನು ಆಳವಾಗಿ ಬೆಳೆಸುವುದು, ಸಂವೇದನೆ ಉಂಟುಮಾಡುವುದು ಮತ್ತು ವ್ಯಕ್ತಿತ್ವ ರೂಪಿಸುವುದು ಅವರವರ ತಾಯಿ ಭಾಷೆ ಎಂದು ಖಚಿತವಾಗಿ ಹಾಗು ವೈಜ್ಞಾನಿಕವಾಗಿ ದೃಢಪಟ್ಟಿದೆ.
ಕೋಟ್ಯಾನುಕೋಟಿ ಭಾಷೆಗಳಿದ್ದರೂ, ಅವುಗಳು ಹೆಚ್ಚು ಕಡಿಮೆ ಒಂದೇ ರೀತಿಯ ಉಗಮ, ಹಿನ್ನೆಲೆ, ಪ್ರೌಡಿಮೆ, ಶ್ರೇಷ್ಠತೆ ಹೊಂದಿದ್ದರೂ ಸಂವೇದನೆಯ ದೃಷ್ಟಿಯಿಂದ ಅವರವರ ತಾಯಿ ಭಾಷೆಗಳೇ ಸರ್ವಶ್ರೇಷ್ಠ ಎಂದು ಸಾಬೀತಾಗಿದೆ.
ಆದ್ದರಿಂದ,…
ನನ್ನ ತಾಯಿಭಾಷೆ ಕನ್ನಡವೇ ನಮಗೆ ಸರ್ವಶ್ರೇಷ್ಠ.
ಇಲ್ಲಿನ ನೀರು ನೆಲ ಗಾಳಿಯಲ್ಲದೆ, ನಮ್ಮ ತಂದೆ ತಾಯಿ ಬಂಧು ಬಳಗಗಳ ರಕ್ತ ಮಿಳಿತವಾಗಿ ನಮ್ಮನ್ನು ರೂಪಿಸಿದ ಕನ್ನಡವೇ ನಮ್ಮ ಜೀವಂತ ಅಸ್ತಿತ್ವದ ಕುರುಹು.
ಅದರಲ್ಲೂ ಶಿಕ್ಷಣ ಮಾಧ್ಯಮಕ್ಕೆ ಬಂದರೆ ತಾಯಿ ಭಾಷೆಗಿರುವ ಅದಮ್ಯ ಶಕ್ತಿ ಬೇರೆ ಯಾವ ಭಾಷೆಗೂ ಇರುವುದಿಲ್ಲ. ನಿಮಗೆ ಬೇರೆ ಭಾಷೆಗಳಲ್ಲಿ ಪಾಂಡಿತ್ಯವಿರಬಹುದು, ಪರೀಕ್ಷೆಗಳಲ್ಲಿ ಆ ವಿಷಯಗಳಲ್ಲಿ 100/100 ಅಂಕಗಳನ್ನು ಪಡೆಯಬಹುದು. ಅದು ಕೇವಲ ನಿಮ್ಮ ನೆನಪಿನ ಶಕ್ತಿಯ ಅಕ್ಷರ ಜ್ಞಾನದ, ವಿದ್ಯಾಭ್ಯಾಸ ಕ್ರಮದ ಅಂಕಗಳೇ ಹೊರತು ಅವು ನಿಮ್ಮ ವ್ಯಕ್ತಿತ್ವದ ಅರಿವಿನ ಅಂಶಗಳಲ್ಲ.
ತಾಯಿ ಭಾಷೆ ನಿಮ್ಮ ನರನಾಡಿಗಳ ಭಾವನೆಯ ಪ್ರತಿಬಿಂಬ ಎಂಬುದನ್ನು ಮರೆಯದಿರಿ. ವಿಶ್ವದ ಯಾವ ಭಾಷೆಗಳನ್ನು ಬೇಕಾದರು ಇಷ್ಟಪಡಿ, ಗೌರವಿಸಿ, ಕಲಿಯಿರಿ. ನಿಮಗೆ ಸಾಮರ್ಥ್ಯವಿದ್ದರೆ ಒಳ್ಳೆಯದು ಕೂಡ.
ಆದರೆ ಅದು ತಾಯಿ ಭಾಷೆಯಾಗಲಾರದು.
ಕನ್ನಡ, ಅಕ್ಷರಗಳನ್ನೂ ಪದಗಳನ್ನೂ ಮೀರಿ ನಮ್ಮನ್ನು ಆವರಿಸುತ್ತದೆ. ನಮ್ಮ ಕನ್ನಡ ಜ್ಙಾನ, ಕನ್ನಡ ಹೋರಾಟ, ನಮ್ಮ ಕನ್ನಡ ಸಾಹಿತ್ಯ, ಸಿನಿಮಾ, ಕಲೆ,ನಮ್ಮ ಕನ್ನಡ ಅಭಿಮಾನ ಅನವಶ್ಯಕ ತೋರಿಕೆಯಾಗಿರದೆ ಅದು ಉಸಿರಾಟದಷ್ಟೇ ಸಹಜ ಜೀವನ ಕ್ರಮವಾಗಿರಲಿ.
ಜೀನ್ಸ್ ಪ್ಯಾಂಟ್, ಪೀಜಾ ಬರ್ಗರ್, ಕಂಪ್ಯೂಟರ್, ವಿದೇಶ ವಾಸ ಏನೇ ಆಗಿರಲಿ ನಿಮ್ಮ ಖುಷಿ ನಿಮ್ಮ ಇಷ್ಡ. ಆದರೆ ನಾಲಗೆಯ ಮೇಲೆ ನಲಿಯುವ ಭಾಷೆ ಕನ್ನಡವೇ ಆಗಿರಲಿ. ಆ ಬಗ್ಗೆ ಯಾವ ಮೇಲರಿಮೆ ಕೀಳರಿಮೆ ಬೇಡವೇ ಬೇಡ.
ಸಿನಿಮಾ, ಧಾರಾವಾಹಿ, ಮಾಡೆಲಿಂಗ್ ನ ಕೆಲವು ನಟನಟಿಯರಂತೆ, ಇಂಗ್ಲಿಷ್ ಕಲಿಕೆಯಂದಾಗಿಯೇ ತಾವೇನೋ ಮಹಾನ್ ಶ್ರೇಷ್ಠರಂತೆ ಆಡುವ ಎಡೆಬಿಡಂಗಿ ವ್ಯಕ್ತಿತ್ವದ ತೋರಿಕೆಯ – ಹಣಗಳಿಸುವ ಕಪಟಿಗಳಂತೆ ನಾವಾಗದೆ, ಕೃತಕ ಅಭಿಮಾನ ತೋರಿಸದೆ ನಮ್ಮೆಲ್ಲರ ಸಹಜ ಸ್ವಾಭಾವಿಕ ಜೀವಭಾಷೆ ಕನ್ನಡವಾಗಲಿ.
ನಮ್ಮ ದಿನನಿತ್ಯದ ಜೀವನಶೈಲಿಯೇ ಕನ್ನಡವಾಗಲಿ.
ಹಾಗೆಯೇ ಕನ್ನಡ ಭಾಷೆಯೂ ಸಹ ನಿಂತ ನೀರಾಗಲು ಬಿಡದೆ ಆಧುನಿಕ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾ ಕನ್ನಡದ ಜೊತೆಗೆ ನಾವೂ ಬೆಳೆಯುತ್ತಾ ವಿಶ್ವ ನಾಗರಿಕರಾಗೋಣ.
ಸಹಜತೆಯತ್ತ ಮರಳುತ್ತಿದೆ ನನ್ನ ತಾಯಿಭಾಷೆ – ಅದೇ ಕನ್ನಡ,
ಮರಳಿ ಪಡೆಯುತ್ತಿದೆ ಮಣ್ಣಿನ ಗುಣ – ಅದೇ ಕನ್ನಡ,
ಹೊಸ ಉತ್ಸಾಹದಲ್ಲಿ ಚಿಗುರುತ್ತಿದೆ, ಚಿಮ್ಮುತ್ತಿದೆ – ಅದೇ ಕನ್ನಡ,
ಜೀನ್ಸ್ ಪ್ಯಾಂಟ್ ಹುಡುಗಿಯರ ತುಟಿಗಳಲ್ಲೂ ನಲಿಯುತ್ತಿದೆ – ಅದೇ ಕನ್ನಡ,
ಟೆಕ್ಕಿಗಳ ಮನದಲ್ಲೂ ನುಡಿಯುತ್ತಿದೆ – ಅದೇ ಕನ್ನಡ,
ಕಾರ್ಮೆಂಟ್ ಶಾಲೆಗಳಲ್ಲೂ ಮತ್ತೆ ಸಿಗುತ್ತಿದೆ ಪ್ರಾಮುಖ್ಯತೆ – ಅದೇ ಕನ್ನಡ,
ಸಿನಿಮಾ ಮಾಲ್ ಗಳಲ್ಲೂ ಮತ್ತೆ ಕೇಳಿ ಬರುತ್ತಿದೆ – ಅದೇ ಕನ್ನಡ ,
ಬ್ಯಾಂಕು, ಅಂಚೆ ಕಚೇರಿಗಳಲ್ಲೂ ಬದಲಾಗುತ್ತಿದೆ ಧ್ವನಿಗಳು – ಅದೇ ಕನ್ನಡ,
ಆಸ್ಪತ್ರೆ, ಹೋಟೆಲ್ ಗಳಲ್ಲಿ ಸರಾಗವಾಗುತ್ತಿದೆ – ಅದೇ ಕನ್ನಡ,
ಮತ್ತೆ ಬೆಳೆಯುತ್ತಿದೆ ಟಿವಿ, ಪತ್ರಿಕೆಗಳಲ್ಲಿ ನನ್ನ ಭಾಷೆ – ಅದೇ ಕನ್ನಡ,
ಫೇಸ್ ಬುಕ್, ಟ್ವಿಟರ್, ವಾಟ್ಸಾಪ್ ಗಳಲ್ಲೂ ಮಿಂಚುತ್ತಿದೆ – ಅದೇ ಕನ್ನಡ,
ಆಶ್ಚರ್ಯವೆಂಬಂತೆ ಯುವ ಜನಾಂಗದಿಂದ ಮುದ್ದಿಸಲ್ಪಡುತ್ತಿದೆ – ಅದೇ ಕನ್ನಡ ,
ಸಾಮಾನ್ಯರಲ್ಲೂ ಠಸ್ ಪುಸ್ ಇಂಗ್ಲಿಷ್ ಬದಲು ಶಾಸ್ತ್ರೀಯವಾಗುತ್ತಿದೆ – ಅದೇ ಕನ್ನಡ,
ಮತ್ತೆ ಮರುಕಳಿಸುತ್ತಿದೆ ನಿತ್ಯೋತ್ಸವ – ಅದೇ ಕನ್ನಡ,
ಸಮೃದ್ಧವಾಗುತ್ತಿದೆ ಕಲೆ, ಸಾಹಿತ್ಯ, ಸಂಗೀತ – ಅದೇ ಕನ್ನಡ,
ಮರೆಯಾಗುತ್ತಿದೆ MUMMY DADDY,
ಹೊಮ್ಮುತ್ತಿದೆ ಅಪ್ಪ ಅಮ್ಮ — ಅದೇ ಕನ್ನಡ,
ಕಡಿಮೆಯಾಗುತ್ತಿದೆ SORRY, THANKS,
ಹೆಚ್ಚಾಗುತ್ತಿದೆ ಕ್ಷಮಿಸಿ, ಧನ್ಯವಾದಗಳು — ಅದೇ ಕನ್ನಡ,
ಕೇಳುತ್ತಿಲ್ಲ IDIOT, BASTARD, SCOUNDREL,
ಬಾಯಿಗೆ ಬರುತ್ತಿದೆ ಅಮ್ಮನ್, ಅಕ್ಕನ್, ಅಯ್ಯನ್ — ಅದೇ ಕನ್ನಡ,
ಹೊಟ್ಟೆ ಕೆಡಿಸುತ್ತಿವೆ PIZZA, BURGER,
ಆರೋಗ್ಯ ಹೆಚ್ಚಿಸುತ್ತಿವೆ ಮುದ್ದೆ, ರೊಟ್ಟಿ — ಅದೇ ಕನ್ನಡ,
ದ್ವೇಷಿಸಲ್ಪಡುತ್ತಿವೆ KFC, McDONALD,
ಪ್ರೀತಿಸಲ್ಪಡುತ್ತಿವೆ ನಾಟಿಕೋಳಿ, ತುಪ್ಪಾ ಹೋಳಿಗೆ — ಅದೇ ಕನ್ನಡ,
ನಮಗಂತೂ ಬರುವುದೂ, ಇರುವುದೂ, ನುಡಿವುದೂ ಒಂದೇ —— ಅದೇ ಕನ್ನಡ ಕನ್ನಡ ಕನ್ನಡ……………
- 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
- ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ
- ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
- ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಅಹಂಕಾರ , ಒಣಜಂಭ ಬೇಡ
ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್