ಗೆಳೆತನವೆಂಬ ಸಂಬಂಧಗಳ ನಡುವೆ ಒಂದು ಸುತ್ತು……..

Team Newsnap
2 Min Read

ಚಡ್ಡಿಯನ್ನೂ ಹಾಕಲು ಬಾರದ ದಿನಗಳಲ್ಲಿ ಕಲ್ಲು ಮಣ್ಣು ಕಡ್ಡಿ ಬೊಂಬೆ ಚಾಕಲೇಟುಗಳಿಗೆ ಜಗಳವಾಡುತ್ತಾ ಸ್ವಲ್ಪ ಮುನಿಸು, ತುಸು ಪ್ರೀತಿಗಳ ತಾತ್ಕಾಲಿಕ ಭಾವನೆಗಳಿಂದ ಸ್ನೇಹದ ಮೊದಲ ಆಟ ಪ್ರಾರಂಭವಾಗುತ್ತದೆ…….

ಅಕ್ಕ ಪಕ್ಕದ ಮನೆಯ ಸಹಪಾಠಿಗಳು, ಶಿಶುವಿಹಾರದಿಂದ ಕಾಲೇಜುಗಳವರೆಗೂ ದಂಡಿಯಾಗಿ ಗೆಳೆಯರ ಗುಂಪುಗಳು ಜೊತೆಯಾಗುತ್ತದೆ……

ಸಮಾರಂಭಗಳಲ್ಲಿ,
ಬಸ್ಸು ರೈಲು ವಿಮಾನಗಳ ಪ್ರಯಾಣದಲ್ಲಿ,
ದೇವಸ್ಥಾನ ಹೋಟೆಲು ಪಾರ್ಕುಗಳಲ್ಲಿ, ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ, ಚಳವಳಿ ಹೋರಾಟದ ಸಮಯದಲ್ಲಿ, ಉದ್ಯೋಗ ವ್ಯವಹಾರಗಳ ಸ್ಥಳಗಳಲ್ಲಿ, ಜೈಲು ಆಸ್ಪತ್ರೆ ಆಶ್ರಮ ಕಚೇರಿಗಳಲ್ಲಿ, ಹೀಗೆ ಎಲ್ಲೆಂದರಲ್ಲಿ ಸ್ನೇಹ ಬೆಳೆಯಬಹುದು.

ಆದರೆ ಸಮೂಹ ಸಂಪರ್ಕ ಮಾಧ್ಯಮಗಳ ಬೆಳವಣಿಗೆಯೊಂದಿಗೆ ಗೆಳೆತನ ಹೊಸ ಅರ್ಥವನ್ನು ಮತ್ತು ಹೊಸ ರೂಪವನ್ನು ಪಡೆದುಕೊಂಡಿತು.

ಸಾಮಾನ್ಯವಾಗಿ ಸ್ನೇಹವೆಂದರೆ ಮುಖಾಮುಖಿ ಮಿಲನದಲ್ಲಿ ಏರ್ಪಡುತ್ತದೆ ಎಂಬ ಮೂಲ ನಂಬಿಕೆಯೇ ಬುಡಮೇಲಾಗಿ ಒಬ್ಬರಿಗೊಬ್ಬರು ಮುಖತಃ ಭೇಟಿಯಾಗದೆಯೂ ಸಹ ಗೆಳೆತನ ಮಾಡಬಹುದು ಎಂಬ ಸಾಧ್ಯತೆಯನ್ನು ಸೋಷಿಯಲ್ ಮೀಡಿಯಾಗಳು ತೋರಿಸಿಕೊಟ್ಟಿವೆ……..

ಹಾಗಾದರೆ ಗೆಳೆತನದ ಆಳ – ಅಗಲ , ಜೊಳ್ಳು – ಗಟ್ಟಿತನ , ಸಹಜ – ಮುಖವಾಡ, ನಿಸ್ವಾರ್ಥ – ಕೃತಕ ಇತ್ಯಾದಿ ಭಾವಗಳನ್ನು ಅಳೆಯುವುದಾದರೂ ಹೇಗೆ ?

ಇದು ಅನುಭವ – ಅರಿವು – ಅಕ್ಷರ – ಭಾವನೆ – ನಂಬಿಕೆ – ವೈಚಾರಿಕತೆಗೂ ನಿಲುಕದಷ್ಟು ವಿಸ್ತಾರವನ್ನು ಹೊಂದಿದೆ. ಇದು ಹೀಗೇ ಎಂದು ನಿರ್ಧರಿಸಲು ಸಾಧ್ಯವೇ ಇಲ್ಲ. ಕೇವಲ ನಮ್ಮ ಜ್ಞಾನದ ಮಿತಿಯಲ್ಲಿ ಒಂದು ಅಭಿಪ್ರಾಯ ಅನಿಸಿಕೆ ವ್ಯಕ್ತಪಡಿಸಬಹುದಷ್ಟೆ.

ಯೌವನದ ದಿನಗಳವರೆಗೂ ಸಾಮಾನ್ಯ ಸ್ಥಿತಿಯಲ್ಲಿ ಸ್ನೇಹ ಉತ್ತಮ ಬಾಂಧವ್ಯವನ್ನು ಹೊಂದಿರುತ್ತದೆ. ಕಷ್ಟ ಸುಖಗಳಿಗೆ ಒಂದಷ್ಟು ಸ್ಪಂದನೆ ಇರುತ್ತದೆ.

ಯೌವ್ವನದ ದಿನಗಳನ್ನು ದಾಟಿ ಉದ್ಯೋಗ ಸಂಘಟನೆ ವಿವಾಹ ವ್ಯವಹಾರ ಮುಂತಾದ ಬದುಕಿನ ಮುಂದಿನ ಪಯಣದಲ್ಲಿ ಸ್ನೇಹ ಬಹಳಷ್ಟು ಶಿಥಿಲಾಗುತ್ತಾ ಸಾಗುತ್ತದೆ.

ನೀನು ಮೊದಲು ಎಂಬ ಭಾವ ಹಿನ್ನೆಲೆಗೆ ಸರಿದು ನಾನು ಮೊದಲು ಎಂಬ ಭಾವ ಮುನ್ನಲೆಗೆ ಬರುತ್ತದೆ.

ಇದು ಭಾರತೀಯ ಸಮಾಜದ ಸಹಜ ನಡವಳಿಕೆ.

ಗೆಳೆತನದ ಗಾಢತೆ ಮತ್ತು ಆಪ್ತತೆಯನ್ನು ಅರಿಯುವುದು ಒಂದು ದೊಡ್ಡ ಸವಾಲು.

ನನ್ನ ವೈಯಕ್ತಿಕ ಅನುಭವದ ಆಧಾರದಲ್ಲಿ……….

ಗೆಳೆತನದ ಅವಧಿ ಕನಿಷ್ಠವೆಂದರೂ ೪/೫ ವರ್ಷಗಳಷ್ಟು ದೀರ್ಘಕಾಲ ತನ್ನ ಸಹಜತೆಯನ್ನು ಕಾಪಾಡಿಕೊಂಡಿರಬೇಕು.

ಗೆಳೆತನ ಪರಿಚಯದ ಹಂತವನ್ನೂ ಮೀರಿ ತನ್ನ ಕೊಡು ಕೊಳ್ಳುವಿಕೆಯಲ್ಲಿ ಆಪ್ತತೆ ಹೊಂದಿರಬೇಕು.

ಗೆಳೆತನ ಪ್ರೀತಿಯಷ್ಟು ಗಾಢವಲ್ಲದಿದ್ದರೂ ನಮ್ಮ ಇಲ್ಲದಿರುವಿಕೆಯ ಸಮಯದಲ್ಲೂ ಸದಾ ನಮ್ಮನ್ನು ಕಾಡುತ್ತಲೇ ಇರಬೇಕು.

ಗೆಳೆತನ ಅನೇಕ ಅಗ್ನಿ ಪರೀಕ್ಷೆಗಳನ್ನು ದಾಟಿಯೂ ಅದೇ ಸ್ಪಂದನೆ ಉಳಿಸಿಕೊಂಡಿರಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಅದು ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಿ ತನ್ನ ಘನತೆಯನ್ನು ಕಾಪಾಡುವಂತೆ ಇರಬೇಕು.

ಸ್ವಾರ್ಥವಿಲ್ಲದ ಯಾವ ಭಾವವೂ ಪರಿಪೂರ್ಣವಲ್ಲ. ಆದ್ದರಿಂದ ಸ್ನೇಹದಲ್ಲಿ ಸ್ವಲ್ಪ ಸ್ವಾರ್ಥವೂ ಬೆರೆತಿರಬೇಕು.

ಹಾಗೆಯೇ ವರ್ಣಿಸಲಾಗದ ಪದಗಳಿಗೆ ನಿಲುಕದ ಒಂದು ಅವರ್ಣನೀಯ ಸೆಳೆತ ಇರುವ ಭಾವವೇ ನಿಜವಾದ ಗೆಳೆತನ.

ಇವುಗಳಿಲ್ಲದ ಸಂಬಂಧಗಳು ಕೇವಲ ಪರಿಚಯದ ಮಟ್ಟದಲ್ಲಿಯೇ ಉಳಿಯುತ್ತದೆ.

ಗೆಳೆತನದ ಭಾವ ಸಂಪೂರ್ಣ ಆವರಿಸುವವರೆಗೂ ನಾವು ಅದಕ್ಕೆ ಕಾಲಾವಕಾಶ ಕೊಡಬೇಕು.

ಅಂತಹ ಸಂಧರ್ಭಗಳಲ್ಲಿ ನಾವು ಸಂಪೂರ್ಣ ಮುಕ್ತವಾಗುವ ಮೊದಲು ಒಂದಷ್ಟು ಎಚ್ಚರಿಕೆಯ ನಡೆ ಇಡಬೇಕಾಗುತ್ತದೆ.ಇದೊಂದು ಸರಳ ನಿರೂಪಣೆ.
ಇದನ್ನು ಮೀರಿಯೂ ಸ್ನೇಹವೆಂಬುದು ಬಹಳಷ್ಟು ಅರ್ಥಗಳನ್ನು ಹೊಂದಿದೆ.

ವಿವೇಕಾನಂದ ಹೆಚ್ ಕೆ

Share This Article
Leave a comment