ಜನಧನ್ ಖಾತೆಗಳಿಂದ 2 ರು ಕದ್ದು 6,000 ಕೋಟಿ ರು ಅಕ್ರಮ ವರ್ಗಾವಣೆ- ಎಚ್‍ಡಿಕೆ ಆರೋಪ

Team Newsnap
1 Min Read

ಜನಧನ್ ಖಾತೆಗಳಿಂದ ತಲಾ 2 ರು ಲೆಕ್ಕದಲ್ಲಿ ಸುಮಾರು 6,000 ಕೋಟಿ ರು ಹಣವನ್ನು ಅಕ್ರವಾಗಿ ವರ್ಗಾವಣೆ ಮಾಡಿಕೊಂಡಿರುವ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು

ಜನತಾ ಪರ್ವ 1.0 ಎರಡನೇ ಹಂತದ ಕಾರ್ಯಗಾರ ಜನತಾ ಸಂಗಮದ ನಾಲ್ಕನೇ ದಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಷ್ಟು ಹಣದ ಅಕ್ರಮ ವರ್ಗಾವಣೆ ಹಿಂದೆ ಯಾರು ಇದ್ದಾರೆ ಎನ್ನುವ ಮಾಹಿತಿ ಜನರಿಗೆ ಗೊತ್ತಾಗಬೇಕಿದೆ. ಬಹುಶಃ ಈ ಎಲ್ಲ ಮಾಹಿತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚೆನ್ನಾಗಿ ಗೊತ್ತಾಗಿದೆ. ಅವರ ಬಳಿ ಎಲ್ಲ ಮಾಹಿತಿ ಇದ್ದು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಬಿಟ್ ಕಾಯಿನ್ ಹಗರಣದ ಮುಖ್ಯ ಆರೋಪಿಗೆ ಜಾಮೀನು ಸಿಕ್ಕಿದ ಬಗ್ಗೆ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿಗಳು, ಆರೋಪಿಗೆ ಜಾಮೀನು ಕೊಡಲು ಖಾತರಿ ಕೊಟ್ಟಿದ್ದು ಯಾರು? ಆತನ ಪರ ವಾದ ಮಂಡಿಸಿದ ವಕೀಲರು ಯಾರು? ಎಂದು ಪ್ರಶ್ನಿಸಿದರು.

ಗಾಜಿನ ಮನೆಯಲ್ಲಿ ಕೂತು ಕಾಂಗ್ರೆಸ್ ಕಲ್ಲು :

ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುತ್ತಿದೆ. ಆ ಕಲ್ಲು ಯಾರಿಗೆ ಬೀಳುತ್ತದೆ? ಈಗಾಗಲೇ ಕಾಂಗ್ರೆಸ್ ನಾಯಕರಿಗೆ ಸಂಬಂಧಿಸಿದ ಕೆಲ ಹೆಸರುಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೆ, ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಮಾರ್ಮಿಕವಾಗಿ ಹೇಳಿದರು. ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಾಕ್ಷಿ ಸಮೇತ ಹೋರಾಟ ಮಾಡಿದ್ದು ಜೆಡಿಎಸ್ ಮಾತ್ರ. ನಮ್ಮ ಹೋರಾಟದ ಫಲವಾಗಿ ಯಾರೆಲ್ಲ ಜೈಲಿಗೆ ಹೋದರು ಎನ್ನುವುದು ಜನತೆಗೆ ಗೊತ್ತಿದೆ ಎಂದರು.

Share This Article
Leave a comment