ಬ್ರಿಟನ್ ದೇಶ ಈಗ ಕೂಡ ಬಲಿಷ್ಠ ರಾಷ್ಟ್ರ, ಮುಂದುವರಿದ ರಾಷ್ಟ್ರ, ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯ. ಹಾಗಾಗಿ ಅಲ್ಲಿಯ ಪ್ರಧಾನ ಮಂತ್ರಿ ಕೂಡ ಮುಖ್ಯವಾಗುತ್ತಾರೆ. ಕಳೆದ ಆರು ತಿಂಗಳಿಂದ ಅಲ್ಲಿಯ ಪ್ರದಾನಮಂತ್ರಿಯವರ ಸುತ್ತ ನಡೆಯುತ್ತಿರುವ ವಿದ್ಯಮಾನಗಳು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕುತೂಹಲ ಮೂಡಿಸಿದೆ. ಕಳೆದ ಮೂರು ತಿಂಗಳಿನಿಂದ ಅಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಪ್ರಕ್ರಿಯೆ ವಿಶ್ವದಲ್ಲಿ ಅನೇಕರಿಗೆ ಅಚ್ಚರಿ ಮೂಡಿಸಿದೆ. ಈಗ ಈ ಪ್ರಕ್ರಿಯೆ ರಿಷಿ ಸುನಾಕ್ ಪ್ರಧಾನಮಂತ್ರಿ ಹುದ್ದೆಗೆ ಎರುವುದರೊಂದಿಗೆ ಹೊಸ ತಿರುವು ಪಡೆದುಕೊಂಡಿದೆ.
ಭಾರತದಲ್ಲೂ ರಿಷಿ ಸುನಾಕ್ ಆಯ್ಕೆಗೆ ಭಾರೀ ಸಂತೋಷ ವ್ಯಕ್ತವಾಗಿದೆ. ಕೆಲವರಂತೂ ಭಾರತೀಯನೊಬ್ಬನು ನಮ್ಮನ್ನು ಒಂದು ಕಾಲದಲ್ಲಿ ಆಳಿದ ಬ್ರಿಟಿಷರನ್ನೇ ಆಳಲು ಹೊರಟಿರುವುದೆಂದು ಭಾವಿಸಿ ಭಾರೀ ಸಂತೋಷ ಪಡುತ್ತಿದ್ದಾರೆ. ಕೆಲವರು ಇದೊಂದು ‘ಸ್ವೀಟ್ ರಿವೆಂಜ್’ ಎಂದುಕೊಂಡಿದ್ದಾರೆ. ಕೆಲವರಿಗೆ ಕಂದು ಬಣ್ಣದ ಹಿಂದುವೊಬ್ಬ ಕಣ್ಣಿಗೆ ಕಾಣಿಸಿದರೆ, ಇನ್ನು ಕೆಲವರಿಗೆ ಆತನ ಶ್ರೀಮಂತಿಕೆ ಕಾಣುತ್ತಿದೆ. ಇದೆಲ್ಲಾ ಅವರವರ ಭಾವವನ್ನು ತೋರಿಸುತ್ತದೆಯೇ ಹೊರತು ನಿಜ ಸ್ಥಿತಿ ಅದಲ್ಲವೆಂದೇ ನನ್ನ ಭಾವನೆ. ದತ್ತಣ್ಣ, ಅವಿನಾಶ್, ಪತ್ರಕರ್ತ ಎಚ್ ಆರ್ ಶ್ರೀಶಾ ಸೇರಿ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ,ನವೆಂಬರ್ 1ರಂದು ಸಾಧಕರಿಗೆ ಸನ್ಮಾನ
ಈಗ ಸ್ವಲ್ಪ ನಾವು ಹೈಸ್ಕೂಲಿನ ಇತಿಹಾಸದ ಪುಸ್ತಕಗಳಲ್ಲಿ ಓದಿದ್ದನ್ನು ನೆನಪು ಮಾಡಿಕೊಳ್ಳೋಣ ಬನ್ನಿ. ಯಾಕೆಂದರೆ ಅದಕ್ಕಿಂತ ಹೆಚ್ಚಿನ ಇತಿಹಾಸ ನಾನು ಓದಿಲ್ಲ! ಭಾರತ ಸ್ವಾತಂತ್ರ್ಯ ಕೊಟ್ಟಾಗ ಬ್ರಿಟನ್ ನಲ್ಲಿ ಅಧಿಕಾರವಿದ್ದ ಪಕ್ಷ ಲೇಬರ್ ಪಾರ್ಟಿ. ಹಾಗಾಗಿ ನಮಗೆ ಗೊತ್ತಿಲ್ಲದಂತೆ ನಮಗೆ ಲೇಬರ್ ಪಕ್ಷದ ಮೇಲೆ ಸ್ವಲ್ಪ ಮಮತೆ ಇರಬಹುದೆಂಬ ಅನುಮಾನ ನನಗಂತೂ ಇದೆ. ಹಾಗಾದರೆ ಕನ್ಸರ್ವೇಟಿವ್ ಪಾರ್ಟಿ ಉಳ್ಳವರ ಪಕ್ಷವೇ ಇರಬೇಕು ಎಂದು ನಮ್ಮ ಊಹೆ ಕೂಡ ಆಗಿತ್ತು. ಕನ್ಜರ್ವೇಟಿವ್ ಪಕ್ಷ ಎರಡನೇಯ ಮಹಾಯುದ್ಧದಲ್ಲಿ ಮಿತ್ರ ಪಕ್ಷಗಳ ಜೊತೆ ಗೂಡಿ ಯುದ್ಧ ಗೆದ್ದರೂ, ಬ್ರಿಟಿಷರು ಯುದ್ಧದ ನಂತರ ಗೆಲ್ಲಿಸಿದ್ದು ಲೇಬರ್ ಪಕ್ಷವನ್ನು. ಇದು ಈಗ ಹಳೆಯ ಇತಿಹಾಸ. ಸ್ನೇಹವೆನಲು ಹಾಸ್ಯವೇ?(ಬ್ಯಾಂಕರ್ಸ್ ಡೈರಿ)
ಈ ಹಿನ್ನಲೆಯಲ್ಲಿ ಹೊಸ ಇತಿಹಾಸ ಬರೆದ ರಿಷಿ ಸುನಾಕ್ ಗೆದ್ದು ಬಂದ ಸಮಯ ನೋಡಬೇಕು. 2019ರ ಕೊನೆಯಲ್ಲಿ ಕಾಣಿಸಿಕೊಂಡ ಕೊರೋನ, 2020ರ ಮಾರ್ಚಿಯ ವೇಳೆಗೆ ಎಲ್ಲ ಕಡೆ ಹಬ್ಬಲು ಪ್ರಾರಂಭ ಮಾಡಿತು. ನಿಜ ಹೇಳಬೇಕೆಂದರೆ ಪ್ರಪಂಚದ ಯಾವ ರಾಷ್ಟ್ರವೂ ಈ ರೀತಿಯ ಒಂದು ಪರಿಸ್ಥಿತಿಯನ್ನು ಎದುರಿಸಿಲು ಯಾವುದೇ ರೀತಿಯ ಸಿದ್ಧತೆ ಮಾಡಿ ಕೊಂಡಿರಲಿಲ್ಲ. ಒಂದುಕಡೆ ಲಕ್ಷಾಂತರ ಜನರು ಕೊರೋನಗೆ ತುತ್ತಾಗಿ ಪ್ರಾಣ ಕಳೆದುಕೊಂಡರು.
ಪ್ರತಿದಿನ ಬರುತ್ತಿದ್ದ ಸಾವಿನ ಅಂಕಿ ಅಂಶಗಳು ಎಷ್ಟೋ ಜನರನ್ನು ಬೆಚ್ಚಿ ಬೀಳಿಸಿತ್ತು. ಇನ್ನೊಂದು ಕಡೆ ಅದಕ್ಕಿಂತ ಹೆಚ್ಚಿನ ಜನರು ಕೆಲಸಗಳನ್ನು ಕಳೆದುಕೊಂಡರು. ಆಗ ನಡೆದದ್ದು ಕೊರೋನ ವಿರುದ್ಧ ಯುದ್ಧವೇ ಸರಿ. ಈ ಯುದ್ಧದಲ್ಲಿ ಸೈನಿಕರು ಬಿಳಿ ಬಣ್ಣದ ಕೋಟ್ ತೊಟ್ಟ ವೈದ್ಯರು, ಸಂಶೋಧನೆಯಲ್ಲಿ ನಿರತರಾದ ವಿಜ್ಞಾನಿಗಳು, ಹಾಗೂ ಇನ್ನಿತರ ಸೇವೆಯಲ್ಲಿ ನಿರತರಾದ ಜನಸಾಮಾನ್ಯರು. ಈ ಯುದ್ಧದಲ್ಲಿ ಎಲ್ಲಾ ಜನರ ಜೊತೆ ಜೊತೆಯಾಗಿ ನಿಂತಿದ್ದು ಸರ್ಕಾರಗಳು. ಬ್ರಿಟನ್ ನಲ್ಲಿ ಕೂಡ ಆಗ ಇದ್ದಿದ್ದು ಕನ್ಸರ್ವೇಟಿವ್ ಪಕ್ಷದ ಬೋರಿಸ್ ಜಾನ್ಸನ್ ಸರ್ಕಾರ. ಮುಕ್ತ ಮಾರುಕಟ್ಟೆ ಒಪ್ಪಿ ಒಂದು ಕಾಲದಲ್ಲಿ ಸಾರ್ವಜನಿಕ ವಲಯದಲ್ಲಿ ಇದ್ದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದ ಪಕ್ಷವಿದೆಂದು ದಿನ ಪತ್ರಿಕೆಯಲ್ಲಿ ಬರುತ್ತಿದ್ದ ಸುದ್ಧಿಗಳ ಮೂಲಕ ತಿಳಿದಿರುವುದೇ ಆಗಿದೆ. ಆ ತರಹದ ಪಕ್ಷ, ಕೊರೋನ ವಿರುದ್ಧದ ಯುದ್ಧದಲ್ಲಿ ಜನಸಾಮಾನ್ಯರ ಪರವಾಗಿ ನಿಂತುಕೊಂಡಿತು.
ಅನೇಕ ದಶ ಲಕ್ಷ ಪೌಂಡುಗಳ ಸಹಾಯ ಹಸ್ತ ಚಾಚಿತು. ಆಗ ಹಣಕಾಸಿನ ಛಾನ್ಸಲರ್ ಆಗಿದ್ದವರೇ ರಿಷಿ ಸುನಾಕ್. ಈ ಕಾರಣದಿಂದ ರಿಷಿಯವರ ಹೆಸರು ಮುಂದೆ ಬಂದಿತು. ಹಾಗೆ ನೋಡಿದರೆ ಆಗ ಪ್ರಧಾನಿ ಆಗಿದ್ದಾಗ ಬೋರಿಸ್ ಜಾನ್ಸನ್ ರಿಷಿಯವರಿಗೆ ಈ ವಿಷಯದಲ್ಲಿ ಒತ್ತಾಸೆಯಾಗಿ ನಿಂತಿದ್ದರು. ಕೊರೋನ ಯುದ್ಧ ಮುಗಿದಂತೆ ಕಂಡು ಬರ ತೊಡಗಿತು. ಕಾಣದ ವೈರಾಣುವಿನ ಜೊತೆ ಯುದ್ಧ ಮಾಡುವಾಗ ರಿಷಿ ಮಾಡಿದ ಹಣಕಾಸಿನ ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕೊರೋನ ವೈರಾಣು ತನ್ನ ತೀವ್ರತೆ ಕಳೆದುಕೊಳ್ಳುತ್ತಾ ಬರುತ್ತಿರುವಂತೆ, ಎಲ್ಲವೂ ಸಹಜ ಸ್ಥಿತಿಗೆ ಮರುಳುವ ಆಶಾಭಾವನೆ ಉದಯಿಸಿತು. ಆ ಸಮಯದಲ್ಲೇ ರಷ್ಯ ಯುಕ್ರೇನ್ ಜೊತೆ ಯುದ್ಧಕ್ಕೆ ನಿಂತಿತು. ಈಗ ಜಾಗತೀಕರಣ ಪ್ರಭಾವ ಎಷ್ಟಿದೆಯೆಂದರೆ ಪ್ರಪಂಚದ ಯಾವ ಭಾಗದಲ್ಲಿ ಎನೇ ಅದರೂ ಅದರ ಪ್ರಭಾವ ಪ್ರಪಂಚದ ಎಲ್ಲ ಭಾಗದಲ್ಲಿ ಆಗುತ್ತದೆ. ಸಾಗಾಣಿಕೆಯ ತೊಂದರೆ, ಆರ್ಥಿಕ ನಿರ್ಬಂಧ, ತೈಲ ಮತ್ತು ನೈಸರ್ಗಿಕ ಅನಿಲಗಳ ಕೊರತೆ ಇತ್ಯಾದಿಗಳಿಂದ ಎಲ್ಲದರ ಬೆಲೆ ಏರಿಕೆಗೊಂಡಿತು. ಇದರ ಪ್ರಭಾವ ಎಲ್ಲ ವಸ್ತಗಳ ಮೇಲೆ ಆಯಿತು. ಇನ್ನೊಂದು ಕಡೆ ಕೊರೋನ ಸಮಯದಲ್ಲಿ ಹೆಚ್ಚಿದ ಹಣದ ಪೂರೈಕೆ ನಂತರದ ಹಣದ್ದುಬ್ಬರಕ್ಕೆ ಕಾರಣವಾಗಿ ಇನ್ನಷ್ಟು ಬೆಲೆ ಎರಿಕೆಗೆ ಕಾರಣವಾಯಿತು. ಇಂಥ ಪರಿಸ್ಥಿತಿಯಲ್ಲಿ ಆರ್ಥಿಕ ನಿರ್ವಹಣೆ ಮಾಡುವುದು ಅತ್ಯಂತ ಸೂಕ್ಷ್ಮ ಮತ್ತು ಕಠಿಣವಾದ ಕೆಲಸ. ಇದು ಬ್ರಿಟನ್ ಮಾತ್ರವಲ್ಲದೇ ಪ್ರಪಂಚದ ಎಲ್ಲಾ ದೇಶಗಳಲ್ಲೂ ಕಂಡು ಬಂದಿರುವ ಅಂಶ.
ಈ ತರಹದ ಸಂಗ್ದಿದ್ಧ ಸಮಯದಲ್ಲಿ ಜಾನ್ಸನ್ ಅವರ ವೈಯುಕ್ತಿಕ ನಡೆವಳಿಕೆಯ ವೈಚಿತ್ರಗಳಿಗಾಗಿ ಪ್ರಧಾನಿ ಪಟ್ಟದಿಂದ ಕೆಳಗಿಳಿಯ ಬೇಕಾಯಿತು. ಆಗ ರಿಷಿ ಪ್ರಥಮವಾಗಿ ರಾಜೀನಾಮೆ ಕೊಟ್ಟು ಹೊರಬಂದು ‘ರೆಬೆಲ್’ ಪಟ್ಟ ಕಟ್ಟಿಕೊಂಡರು. ಒಂದು ಕಡೆ ಮುಂದಿನ ಪ್ರಧಾನಮಂತ್ರಿಯ ಆಯ್ಕೆಗೆ ಕೆಲವು ತಿಂಗಳುಗಳನ್ನೇ ಬ್ರಿಟನ್ ತೆಗೆದುಕೊಂಡಿತು. ಆ ಸಮಯದಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡಿದ ಸರ್ಕಾರ ಆರ್ಥಿಕ ಇಲಾಖೆಗೆ ಹೊಸ ದಿಕ್ಕನ್ನು ತೋರಿಸಲು ಆಗದೇ ಬೆಲೆ ಎರಿಕೆ ಜನ ಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುತ್ತಾ ಹೋಯಿತು.
ಇಬ್ಬರು ಪ್ರಧಾನಮಂತ್ರಿಯ ಅಭ್ಯರ್ಥಿಗಳೂ ತಮ್ಮ ಆರ್ಥಿಕ ನೀತಿಗಳನ್ನು ಅವರ ಪಕ್ಷದ ‘ಡೆಲಿಗೇಟ್’ಗಳ ಮುಂದೆ ಪ್ರಸ್ತುತ ಪಡಿಸಿದರು. ಹಾಗೆ ನೋಡಿದರೆ ಅದರಲ್ಲಿ ಹೊಸತೇನೂ ಇರಲಿಲ್ಲ. ರಿಷಿಯವರು ಕೊರೋನ ಕಾಲದಲ್ಲಿ ಚಾಚಿದ ಸಹಾಯ ಹಸ್ತವನ್ನು ಈಗ ಬೆಲೆ ಎರಿಕೆಯ ಸಮಯದಲ್ಲೂ ಇನ್ನೊಂದು ರೀತಿ ಕೊಡ ಬೇಕಾಗುತ್ತದೆ ಎಂದರು. ಇದಕ್ಕೆ ಬೇಕಾಗುವ ಸಂಪನ್ಮೂಲವನ್ನು ಕ್ರೋಢೀಕರಿಸಿಲು ಇವರು ಆಯ್ದು ಕೊಂಡ ಮಾರ್ಗಗಳಲ್ಲಿ ಒಂದು ಅಂಶವೆಂದರೆ ಆರ್ಥಿಕವಾಗಿ ಧೃಡವಾಗಿರುವವರ ಮೇಲೆ ‘ತೆರಿಗೆ’ ಹೆಚ್ಚಳ ಮಾಡುವುದು. ಲಿಜ್ ಟ್ರಸ್ ಉಳ್ಳವವರ ತೆರಿಗೆ ಕಡಿಮೆ ಮಾಡುವುದಾಗಿ ಹೇಳಿದರು. ಆಗಲೂ ರಿಷಿಯವರ ಬಣ್ಣ, ಶ್ರೀಮಂತಿಕೆ ಎಲ್ಲಾ ಚರ್ಚೆಗೆ ಬಂದಿತ್ತು. ಕಾರಣಗಳು ಏನೇ ಇರಲಿ ಲಿಜ್ ಟ್ರಸ್ ಆಯ್ಕೆಯಾದರು.
ಆಯ್ಕೆಯಾದ ಪ್ರಧಾನಿ ಲಿಜ್ ಟ್ರಸ್ ತಾವು ಹೇಳಿದ ರೀತಿಯಲ್ಲಿ ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭ ಮಾಡಿದರು. ಅದರ ಒಂದು ಭಾಗವಾಗಿ ಉಳ್ಳವರ ಮೇಲಿದ್ದ ತೆರಿಗೆ ಇಳಿಸಿ, ಅದರ ಪರಿಣಾಮಗಳನ್ನು ಎದುರಿಸಲಾಗದೆ ರಾಜೀನಾಮೆ ಕೊಟ್ಟರು. ಬಹುಶಃ ಹೇಳಿದಂತೆ ನಡೆದು ತೆರಿಗೆ ‘ಕಟ್’ ಮಾಡಿ ಅಧಿಕಾರ ಕಳೆದುಕೊಂಡ ಎಕೈಕ ಪ್ರಧಾನಿ ಇವರು ಇರಬಹುದೆನೋ? ನನಗೆ ಗೊತ್ತಿಲ್ಲ. ಈಗ ಮತ್ತೊಮ್ಮೆ ರಿಷಿ ಮುನ್ನಲೆಗೆ ಬಂದು, ಪ್ರಧಾನಿಯಾದರು. ಇವರನ್ನು ಈ ಸಾರಿ ಆಯ್ಕೆ ಮಾಡಿದ್ದು ಅವರ ಪಕ್ಷದ ಸಂಸದೀಯ ಸದಸ್ಯರು. ಹಾಗೆ ನೋಡಿದರೆ ಮೊದಲ ಬಾರಿಯೂ ಬಹುಸಂಖ್ಯಾತ ಸಂಸದೀಯ ಸದಸ್ಯರ ಆಯ್ಕೆ ಇವರೇ ಆಗಿದ್ದರು, ಆದರೆ ಪಕ್ಷದ ಸಾಮಾನ್ಯ ಸದಸ್ಯರ ಬೆಂಬಲ ಸಿಗಲಿಲ್ಲ.
ಪ್ರಪಂಚ ಈಗ ಸಿಲುಕಿರುವ ಆರ್ಥಿಕ ಸಂಕಷ್ಟದ ವಿರುದ್ಧ ಹೋರಾಡುವುದು ಒಂದು ತರಹ ಯುದ್ಧವೇ ಸರಿ. ಇಲ್ಲಿ ಕೂಡ ಸಾಕಷ್ಟು ಜನ ತೊಂದರೆಗೆ ಒಳಗಾಗುತ್ತಾರೆ. ಕೆಲವರಿಗೆ ಬೇಕಾದಷ್ಟು ನಷ್ಟವೂ ಆಗಬಹುದು. ಕಾಣದ ವೈರಾಣುವಿಗೆ ಲಸಿಕೆ ಕಂಡು ಹಿಡಿದು ಹತೋಟಿಗೆ ತರಬಹುದು. ವೈರಾಣು ಕೂಡ ಸ್ವಲ್ಪ ಸಮಯದ ನಂತರ ತನ್ನ ತೀವ್ರತೆ ಕಳೆದು ಕೊಳ್ಳುತ್ತದೆ. ಆದರೆ ಆರ್ಥಿಕ ಸಂಕಷ್ಟ ತನ್ನಿಂದ ತಾನೆ ತಕ್ಷಣ ಹೋಗುವುದಿಲ್ಲ. ಈ ಯುದ್ಧದಲ್ಲಿ ಮತ್ತೊಮ್ಮೆ ರಿಷಿ ಬ್ರಿಟನ್ ನ ಮುಖ್ಯ ಸೈನ್ಯಾದಿಪತಿಯೇ ಆಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಹಿಂದಿನ ಕೊರೋನ ಯುದ್ಧದಲ್ಲಿ ಜನ ಸಾಮಾನ್ಯರ ಮೇಲೆ ವ್ಯಕ್ತ ಪಡಿಸಿದ ಕಾಳಜಿ ಮಾತ್ರ.
ಎನೇ ಆಗಲಿ ರಿಷಿ ಸುನಾಕ್ ಇವರು ಈ ಆರ್ಥಿಕ ಯುದ್ಧದಲ್ಲಿ ಗೆಲ್ಲಬೇಕು ಎಂದು ನನ್ನ ಆಶಯ. ಇದಕ್ಕೆ ಕಾರಣ ಇವರು ಭಾರತೀಯ ಸಂಜಾತರೆಂದು ಮಾತ್ರ ಅಲ್ಲ! ಬ್ರಿಟನ್ ನಂತಹ ರಾಷ್ಟ್ರಗಳು ಆರ್ಥಿಕವಾಗಿ ಚೇತರಿಸಿಕೊಂಡರೆ ಅದು ಜಗತ್ತಿನ ಎಲ್ಲಾ ಕಡೆ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಮುಕ್ತ ಮಾರುಕಟ್ಟೆಯ ಪ್ರತಿಪಾದಿಸುವ ಪಕ್ಷದ ಸಾರಥಿ ಈಗ ಜನಸಾಮಾನ್ಯರ ಜೊತೆ ನಿಲ್ಲುವ ಬಗ್ಗೆ ಮಾತನಾಡುತ್ತಾ ಭರವಸೆ ಮೂಡಿಸಿರುವುದು ಇಲ್ಲಿ ಎದ್ದು ಕಾಣುವ ವಿಶೇಷ. ಹಾಗಾಗಿ ಈ ಪ್ರಯೋಗ ಗೆಲ್ಲಬೇಕು. ಅವರಿಗೆ ಶುಭವಾಗಲಿ ಎಂದು ನಾನಂತು ಆಶಿಸುತ್ತೇನೆ.
ರಿಷಿ ಈ ಆರ್ಥಿಕ ಯುದ್ಧದಲ್ಲಿ ಗೆದ್ದರೆ ಮುಂದಿನ ಬ್ರಿಟನ್ ಚುನಾವಣೆಯ ಹೊತ್ತಿಗೆ ಅವರ ಪಕ್ಷದ ದೊಡ್ಡ ನಾಯಕನಾಗುತ್ತಾರೆ. ಮುಂದಿನ ಬ್ರಿಟನ್ ಚುನಾವಣೆ ಗೆಲ್ಲವವರೆಗೆ ಇವರು ಯುದ್ಧ ಕಾಲದ ಸೇನಾಧಿಪತಿ ಅಷ್ಟೆ. ಮುಂದಿನ ಚುನಾವಣೆ ಗೆದ್ದರಷ್ಟೆ ಅವರು ಸರ್ವ ಋತುಗಳ ರಾಜನಾಗುತ್ತಾರೆ. ಹೊಸ ಇತಿಹಾಸ ಈಗ ಬರೆದಿರುವವರು, ಆಗ ಕೂಡ ಬರೆಯಬಹುದಲ್ಲವೆ? ನೋಡೋಣ. …
ಮುಂದಿನ ಸಾರಿ ರಿಷಿ ಮನೆಗೆ ಪತ್ರಕರ್ತರು ಬಂದಾಗ ಶ್ರೀಮತಿ ಅಕ್ಷತಾ ಮೂರ್ತಿಯವರು ಟೀ ಕೊಟ್ಟ ಪಿಂಗಾಣಿ ಬಟ್ಟಲಿನ ಬೆಲೆ ಒಂದಕ್ಕೆ ಐದು ಸಾವಿರ ರೂಪಾಯಿ ಎಂದು ಬರೆಯುವುದರ ಜೊತೆಗೆ ಅವರು ಕೊಟ್ಟ ಟೀ ನಲ್ಲಿ ಬಣ್ಣವಿತ್ತು, ಸ್ವಾದವಿತ್ತು ಮತ್ತು ಜೊತೆಗೆ ಮಾನವೀಯತೆ ಕೂಡ ಇತ್ತು ಎಂದು ಬರೆದರೆ ರಿಷಿ ಗೆದ್ದಿದ್ದಾರೆ ಎಂದರ್ಥ. ಆ ತರಹ ಬರೆಯುತ್ತಾರೆ ಎಂಬ ನಂಬಿಕೆ ನನಗಿದೆ. ಆದರೆ ನನಗೆನೋ ಶ್ರೀಮತಿ ಅಕ್ಷತಾ ಮೂರ್ತಿಯವರು ಈ ಟೀ ಸಹವಾಸ ಬಿಟ್ಟು ಕಂದು ಬಣ್ಣದ ಫಮ ಫಮ ನಮ್ಮ ಚಿಕ್ಕಮಗಳೂರಿನ ಫಿಲ್ಟರ್ ಕಾಫೀ ಆ ಪತ್ರಕರ್ತರಿಗೆ ಕೊಡಲಿ ಎಂಬ ಆಸೆಯಿದೆ. ಕಾಯ್ದು ನೋಡೋಣ.
ಶುಭವಾಗಲಿ ಎಂದು ಆಶಿಸುತ್ತಾ…..
ರಘುರಾಂ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
- ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ
- ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು
More Stories
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಅಹಂಕಾರ , ಒಣಜಂಭ ಬೇಡ