ಬೆನ್ನಿಗೂ,ಹೃದಯಕ್ಕೂ ಒಟ್ಟಿಗೆ ಚೂರಿ ಹಾಕಿದ ದ್ರೋಹಿ ನೀನು….

Team Newsnap
2 Min Read

ಅಯ್ಯಾ ಮನುಜ, ಎಷ್ಟೊಂದು ಅನ್ಯಾಯ ಮಾಡಿದೆ ನೀನು ನನಗೆ,

ಸೃಷ್ಟಿಸಿದ ನನಗೇ ನೀನು ದ್ರೋಹ ಬಗೆದೆಯಲ್ಲಾ,

ನೀನು ನಿಂತಿರುವ ನೆಲವೇ ನನ್ನದು,

ನೀನು ಉಸಿರಾಡುವ ಗಾಳಿ, ಕುಡಿಯುವ ನೀರು, ಅಷ್ಟೇ ಏಕೆ, ನಿನ್ನ ಇಡೀ ದೇಹ, ಆತ್ಮಗಳೇ ನನ್ನದು,

ನಿನ್ನ ಅನುಕೂಲಕ್ಕಾಗಿಯೇ ಮಳೆ, ಚಳಿ, ಬಿಸಿಲನ್ನು ಸೃಷ್ಟಿಸಿದೆ,

ನಿನ್ನ ಸುಖಕ್ಕಾಗಿ ಗಿಡ ಮರ, ಪ್ರಾಣಿ ಪಕ್ಷಿಗಳನ್ನು ನೀಡಿದೆ,

ನಿನ್ನ ದೇಹದ ಪ್ರತಿ ಅಂಗಗಳನ್ನು ಅತ್ಯಂತ ಜಾಗರೂಕವಾಗಿ ರೂಪಿಸಿದೆ,

ನಿನ್ನ ಸಂತೋಷಕ್ಕಾಗಿ ಗಂಡು ಹೆಣ್ಣುಗಳೆಂಬ ಭಿನ್ನತೆ ಸೃಷ್ಟಿಸಿದ್ದೂ ನಾನೇ

ನಿನ್ನ ಭಾವನೆ, ಆಕಾರ, ರೂಪಗಳನ್ನು ನಾನೇ ಕಷ್ಟಪಟ್ಟು ರಚಿಸಿದೆ,

ಹೋಗಲಿ ಮಜಾ ಮಾಡು ಎಂದು ನೂರು ವರ್ಷಗಳ ಆಯಸ್ಸು ನೀಡಿದೆ,

ಆದರೆ, ಪಾಪಿ ನೀನು ಮಾಡಿದ್ದಾದರೂ ಏನು,…

ನನ್ನನೇ ಬಗೆದು ನಿನಗೆ ಇಷ್ಟ ಬಂದಂತೆ ಬಂಗಲೆ ನಿರ್ಮಿಸಿಕೊಂಡೆ,

ನಡೆದಾಡಲು ಬಲಿಷ್ಠ ಕಾಲುಗಳನ್ನು ಕೊಟ್ಟಿದ್ದರೂ, ಸೋಮಾರಿಯಾಗಿ ಅಲೆದಾಡಲು ವಾಹನಗಳನ್ನು ನಿರ್ಮಿಸಿ ನನ್ನ ಉಸಿರನ್ನೇ ಮಲಿನಗೊಳಿಸಿದೆ,

ನಿನಗೋಸ್ಕರ ಎಷ್ಟೊಂದು ಬಗೆಯ ಹಣ್ಣು, ತರಕಾರಿ, ಸೊಪ್ಪು, ಬೇಳೆಗಳನ್ನು ಕೊಟ್ಟೆ. ಆದರೆ ದುರಾಸೆಯಿಂದ ರಸಾಯನಿಕಗಳೆಂಬ ವಿಷ ಬೆರೆಸಿ ನಿನಗಿಷ್ಟವಾದ ರುಚಿಗಾಗಿ ನನ್ನನ್ನು ಹಾಳು ಮಾಡಿದೆ.

ಸೃಷ್ಟಿಸುವಾಗ ಇತರೆ ಎಲ್ಲಾ ಜೀವಿಗಳನ್ನೂ ನಿರ್ಲಕ್ಷಿಸಿ ನಿನಗೆ ಮಾತ್ರ ಅತಿ ಹೆಚ್ಚು ಬುದ್ದಿ ನೀಡಿದೆ. ಏನೋ ಮನುಷ್ಯ ಪಾಪ ಚೆನ್ನಾಗಿರಲಿ ಎಂದು,

ಅದೇ ದೊಡ್ಡ ಸಮಸ್ಯೆಯಾಗಿ ಮುಂದೆ ಇಷ್ಟೊಂದು ಅನಾಹುತಕಾರಿಯಾಗುತ್ತದೆಂದು ಸೃಷ್ಟಿಸಿದ ನಾನೇ ಊಹಿಸದಾದೆ,

ಮನುಷ್ಯನ ಅಲೋಚನೆ ಇಷ್ಟೊಂದು ಕ್ರೂರವಾಗಿರುತ್ತದೆ ಎಂದು ಅಂದಾಜಿಸಲು ವಿಫಲನಾದೆ,

ಮನುಷ್ಯರನ್ನೆಲ್ಲಾ ಸಮನಾಗಿ ಸೃಷ್ಟಿಸಿದ ನನಗೇ ಮೋಸಮಾಡಿ ಬೇರೆ ಬೇರೆ ಧರ್ಮ ಜಾತಿ ಸೃಷ್ಟಿಸಿ ಮನಸ್ಸುಗಳನ್ನೇ ಹೊಡೆದೆ.

ಇಡೀ ಭೂ ಪ್ರದೇಶವನ್ನೇ ತುಂಡು ತುಂಡಾಗಿ ಬೌಂಡರಿ ನಿರ್ಮಿಸಿ ಇಭ್ಭಾಗ ಮಾಡಿ ನನ್ನ ಮಾನವನ್ನೇ ಹರಾಜಾಕಿದೆ,

ನನ್ನೆಲ್ಲಾ ಅದ್ಭುತ ಕ್ರಿಯೆಗಳನ್ನು ನಿನ್ನ ತೆವಲಿಗಾಗಿ ಉಪಯೋಗಿಸಿಕೊಂಡು ಕೊನೆಗೆ, ನನ್ನನ್ನೇ ಈ ಸೃಷ್ಟಿಕರ್ತನನ್ನೇ ನಾಶಮಾಡಲು ಹೊರಟಿರುವೆ.

ಆದರೆ ಮುಠ್ಠಾಳ, ಅವಿವೇಕಿ ನೆನಪಿಟ್ಟುಕೋ,
ನನ್ನನ್ನು ದುರುಪಯೋಗ ಪಡಿಸಿಕೊಂಡು ನೀನು ನಿರ್ಮಿಸಿದ ಬಂದೂಕು ಬಾಂಬುಗಳೇ ನಿನ್ನನ್ನು ಕೊಲ್ಲುತ್ತವೆ.

ಎಲ್ಲಾ ಸುಖಗಳಿದ್ದರೂ ಅದನ್ನು ಅನುಭವಿಸಲಾಗದೆ ರಕ್ತ ಕಾರುವ ಸ್ಥಿತಿ ನಿನ್ನದಾಗುತ್ತದೆ.

ನಾಶವಾಗುವುದು ನೀನೇ ಹೊರತು ನಾನಲ್ಲ.

ನಾನು ಅಮರ…..ಶಾಶ್ವತ……

ಬೆನ್ನಿಗೂ ….ಹೃದಯಕ್ಕೂ ….ಒಟ್ಟಿಗೆ ಚೂರಿ ಹಾಕಿದದ್ರೋಹನೀನು.

ನಿನಗೆ ಕ್ಷಮೆ ಇಲ್ಲ………..

ವಿವೇಕಾನಂದ ಹೆಚ್ ಕೆ

Share This Article
Leave a comment