ಅರಮನೆ ಆವರಣದಲ್ಲಿ ಅಂತಿಮ ಹಂತದ ಯೋಗ ತಾಲೀಮು ವೀಕ್ಷಿಸಿದ ಸಚಿವ ಸೋಮಶೇಖರ್

Team Newsnap
1 Min Read

ವಿಶ್ವ ಯೋಗ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿರುವ ಯೋಗ ಕಾರ್ಯಕ್ರಮದ ಅಂತಿಮ ಹಂತದ ತಾಲೀಮನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವೀಕ್ಷಿಸಿದರು.

ಅರಮನೆ ಆವರಣದಲ್ಲಿ ಬೆಳಗ್ಗೆ 6.30ಕ್ಕೆ 10 ಸಾವಿರಕ್ಕೂ ಅಧಿಕ ಯೋಗಪಟುಗಳಿಂದ ಯೋಗ ತಾಲೀಮು ನಡೆಸಲಾಯಿತು.

ಯೋಗ ಕಾರ್ಯಕ್ರಮದ ಅಂಗವಾಗಿ ವೇದಿಕೆ ಸಿದ್ಧತೆ, ಯೋಗಪಟುಗಳಿಗೆ ಸ್ಥಳಾವಕಾಶ, ಕುಡಿಯುವ ನೀರಿನ ವ್ಯವಸ್ಥೆ, ಎಲ್ಲೆಲ್ಲಿ ಪ್ರವೇಶ ಕಲ್ಪಿಸಲಾಗಿದೆ ಎಂಬುದನ್ನು ಸಚಿವರು ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜೂನ್ 5 ಮತ್ತು 11ರಂದು ಯೋಗ ತಾಲೀಮು ನಡೆಸಲಾಗಿತ್ತು. ಇಂದು ಅಂತಿಮ ಹಂತದ ತಾಲೀಮು ನಡೆಸಲಾಗಿದೆ ಎಂದು ಹೇಳಿದರು.

51 ವಿವಿಧ ವರ್ಗದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಯೋಗ ಮಾಡಲಿದ್ದಾರೆ. ಪ್ರಧಾನಿ ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ಧತೆ ಪೂರ್ಣಗೊಂಡಿದೆ. ನಾಲ್ಕು ಕಡೆ ಪ್ರವೇಶ ಕಲ್ಪಿಸಲಾಗಿದೆ. ಬೆಳಗ್ಗೆ 5.30ಕ್ಕೆ ಪ್ರವೇಶದ್ವಾರ ಬಂದ್ ಆಗಲಿದೆ.

ಇದನ್ನು ಓದಿ : ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಶಿವಮೊಗ್ಗ ಯುವಕನ ಮೃತದೇಹ ಪತ್ತೆ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅರಮನೆ ಆವರಣಕ್ಕೆ ಭೇಟಿ ನೀಡಿ ಭದ್ರತಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿವೀಕ್ಷಣೆ ನಡೆಸಿದರು.

ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರು ಜೊತೆಯಲ್ಲಿದ್ದರು.

Share This Article
Leave a comment