December 25, 2024

Newsnap Kannada

The World at your finger tips!

ಅಮ್ಮ

ಹೆಣ್ಣೆಂದರೆ

Spread the love
t n s
© ತನಾಶಿ.
ಟಿ.ಎನ್.ಶಿವಕುಮಾರ್
ಸಾಹಿತಿಗಳು ಮಂಡ್ಯ

ಹೆಣ್ಣೆಂದರೆ,
ಅಪ್ಪನ ಆಸೆಗೆ ಅಮ್ಮ ಬಸಿರಾಗಿ ಹೆತ್ತ ಕೂಸು.
ತನ್ನ ಇರುವಿಕೆಯಿಂದಲೇ ಎಲ್ಲರಲೂ ಖುಷಿ ತರುವ ಸೊಗಸು

ಹೆಣ್ಣೆಂದರೆ

ಕಟ್ಟಿದ ಕಾಲ್ಗೆಜ್ಜೆಯ ಹೆಜ್ಜೆನಾದಕ್ಕೆ ತಿಪ್ಪಡಿಯಿಡುತ್ತಾ ನಲಿವ ಮುದ್ದು
ಮನೆಯ ಅಂಗಳದಲ್ಲಿ ಬೀಸಣಿಗೆಯಂತೆ ಮೆಲ್ಲಗೆ ಬೀಸುವ ಸದ್ದು.

ಹೆಣ್ಣೆಂದರೆ

ಅಮ್ಮನ ಕೈಹಿಡಿದೋ ಅಪ್ಪನ ಹೆಗಲೇರಿಯೋ
ಜನಜಾತ್ರೆಗಳ ಕಣ್ತುಂಬಿಕೊಳ್ಳುವ ಬೆರಗು
ಚೋಟುದ್ದ ಬೆಳೆವ ಮುನ್ನವೇ
ಹೊದ್ದುಕೊಳ್ಳುವ ಅಮ್ಮನ ಸೆರಗು

ಹೆಣ್ಣೆಂದರೆ

ಮನೆಯಂಗಳದಲ್ಲೆ ನಿಂತು ಅಪ್ಪನಿಗೆ ಬಂದಾಕ್ಷಣ ವರದಿಯೊಪ್ಪಿಸುವ ಸಿಪಾಯಿ
ಅಮ್ಮನೋ ಅಣ್ಣನೋ ಯಾರಾದರೂ ಆಗಬೇಕು ಬಡಪಾಯಿ.

ಹೆಣ್ಣೆಂದರೆ

ನಾಲ್ಕಡಿ ಬೆಳೆವ ಹೊತ್ತಿಗೆ ನಾಚಿಕೆಯ ಮೊಗ್ಗು
ಬೇರೆಯವರ ಕೊಂಕಿನಿಂದ ಬಲವಂತದ ಸಿಗ್ಗು.

ಹೆಣ್ಣೆಂದರೆ

ಪ್ರೀತಿಯ ಗೂಡು ಕಟ್ಟಿ ಹೃದಯದಾಸೆಗಳ ಬಚ್ಚಿಟ್ಟು ಬಿಚ್ಚಿಡುವ ಸೊಬಗು
ಉತ್ಸಾಹ ಮೇಳದಲಿ ಮಿರುಗುವ ಬುರುಗು

ಹೆಣ್ಣೆಂದರೆ

ಕಣ್ಣಂಚಿನಲ್ಲೇ ನೀರ ತುಳುಕಿಸಿ ಅನ್ಯರ ಮನೆಮನವ ತೊಳೆವ ಗಂಗೆ

ತನ್ನೊಡಲ ನೋವ ತಡೆದು ತೃಷೆಯ ನೀಗಿಸುವ ತುಂಗೆ.

ಹೆಣ್ಣೆಂದರೆ

ತನ್ನ ಹೆತ್ತವರಿಂದ ದೂರಾಗಿ ಇನ್ನಾರೋ ಹೆತ್ತವನ ಕಾಪಿಡುವ ದೇವಿ
ಯಾರಿಗೆ ಹೊಡೆದ ಗುಂಡೋ ; ತಾ ಸುಡುವ ಕೋವಿ.

ಹೆಣ್ಣೆಂದರೆ

ತನ್ನ ಪ್ರಿಯತಮನುಸಿರ ಉಸಿರಾಗಿ ಖುಷಿಯ ಬಸುರನು ಹೊರುವ ಕನ್ನೆ ನೆಲ.
ಆಸೆಕಂಗಳ ಹೊತ್ತು ನೋವಿನರಮನೆಯಲ್ಲಿ ಬೆಳೆವ ಕುಲ

ಹೆಣ್ಣೆಂದರೆ

ತನ್ನಂತೆ ಇನ್ನೊಂದು ಜೀವದಾಧಾರವಾಗಿ ನಿಲ್ಲುವ ಗಿರಿಶಿಖರ
ಮೌನ ಕಣಿವೆಯ ಮಾತುಗಳಲ್ಲಿ ಅಡಗುವ ಮಮಕಾರ.

ಹೆಣ್ಣೆಂದರೆ

ತಾಯ್ತನದ ಸವಿಯ ಉಣಬಡಿಸುವ ಉಣಬಡಿಸುವ ಅಮೃತ
ಸಖಿಯಾಗಿ ಸಂಗಾತಿತನವ ಬೊಗಸೆಯಾಗಿಡುವ ಕಾಂತಾ ಸಮ್ಮಿತ.

ಹೆಣ್ಣೆಂದರೆ

ಎಲ್ಲರಿಗೂ ದುಡಿದುಡಿದು ಹಣ್ಣಾಗುವ ಕಾಯಿ
ಅದಕೆ ಅವಳನೆನ್ನುವರು ಎಲ್ಲರ ತಾಯಿ.

ಹೆಣ್ಣೆಂದರೆ

ವಯಸ್ಸಾದ ಮೇಲೆ ಬೇಡವಾಗುವ ತೊಟ್ಟುಳಿದ ಹಣ್ಣು
ಹರೆಯದ ಮನಕ್ಕೆ ಯೌವನ ಮದಕ್ಕೆ ಬತ್ತಿದ ಕಣ್ಣು.

ಹೆಣ್ಣೆಂದರೆ

ಮಹಿ ಎಂದರೂ ಅವಳೆ
ಇಳೆ ಎಂದರೂ ಅವಳೆ
ಭೂಮಿತೂಕದ ಮಹಿಳೆ.
ಶಾಂತ ಕಹಳೆ

ಹೆಣ್ಣೆಂದರೆ

ಮೇಲೆ ಹೇಳಿದ ಎಲ್ಲವನ್ನೂ ಮೀರಿದವಳು
ಬಾಳ ಕಣ್ಣಾದವಳು.
ಮಗನಂತೆಯೇ ಮಗಳಾದವಳು.

ಅವಳು.
ಅರಳಾದವಳು.

Copyright © All rights reserved Newsnap | Newsever by AF themes.
error: Content is protected !!