ಮಂಡ್ಯ ಎಸ್ಪಿ ನಿವಾಸದ ಮುಂದೆ ಕುಡಿದು ಗಲಾಟೆ ಮಾಡಿದ ವ್ಯಕ್ತಿ ವಿರುದ್ದ ದೂರಿಲ್ಲ ಯಾಕೆ ?

Team Newsnap
2 Min Read

ನಿಖಿಲ್‌ಗೌಡ ಎಂಬ ವ್ಯಕ್ತಿಯೊಬ್ಬ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಮನೆ ಮುಂದೆ ಭಾನುವಾರ ಗಲಾಟೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಅಗಿದೆ.

ಭಾನುವಾರ ಮುಂಜಾನೆ ಹಲ್ಮಿಡಿ ಗ್ರೂಪ್ಸ್ ಮುಖ್ಯಸ್ಥನಾಗಿರುವ ನಿಖಿಲ್‌ಗೌಡ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಎಸ್ಪಿ ಮನೆ ಮುಂದೆ ಆಗಮಿಸಿ ಮನಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೂಗಾಟ, ಕಿರುಚಾಟ ಮಾಡುವ ಮೂಲಕ ರಂಪಾಟ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂದರ್ಭದಲ್ಲಿ ಮನೆಗೆ ಪ್ರವೇಶಿಸಿಲು ನಿಖಿಲ್‌ಗೌಡ ಮುಂದಾಗಿದ್ದಾನೆ. ಆದರೆ ಮನೆ ಮುಂದೆ ಪಹರೆಯಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಆತನನ್ನು ಮನೆಗೆ ಪ್ರವೇಶಿಸದಂತೆ ತಡೆಯೊಡ್ಡಿ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.

ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು:

ನಿಖಿಲ್ ಎಂಬ ವ್ಯಕ್ತಿ ಮನಬಂದಂತೆ ಬೈದರೂ ಎಸ್ಪಿ ಡಾ.ಎಂ.ಅಶ್ವಿನಿ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಯಾವುದೇ ದೂರು ಸಹ ನೀಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ

ಕುಡಿದು ರಂಪಾಟ ಮಾಡಿದವನಿಗೂ, ಎಸ್ಪಿಗೂ ಏನು ಸಂಬಂಧ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಇಲಾಖೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗಿ:
ಸದಾ ಎಸ್ಪಿ ಜತೆ ಇರುತ್ತಿದ್ದ ನಿಖಿಲ್ ಹಲವು ಬಾರಿ ಇಲಾಖೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದನು. ಎಸ್ಪಿ ಹೆಸರಲ್ಲಿ ನಿಖಿಲ್ ವಸೂಲಿ ಮಾಡುತ್ತಿದ್ದ ಆರೋಪವೂ ಕೇಳಿ ಬಂದಿತ್ತು.

ಎಸ್ಪಿ ಅಶ್ವಿನಿ ನಿಖಿಲ್‌ನನ್ನು ದೂರವಿಟ್ಟಿದ್ದರು ಎಂಬ ಮಾಹಿತಿ ಹರಿದಾಡಿತ್ತು. ಇದರಿಂದ ಕುಪಿತಗೊಂಡ ನಿಖಿಲ್ ಭಾನುವಾರ ಬೆಳಿಗ್ಗೆ ಕುಡಿದ ಮತ್ತಿನಲ್ಲಿ ಎಸ್ಪಿ ಮನೆ ಮುಂದೆ ಗಲಾಟೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇದಕ್ಕೂ ಮುನ್ನ ನಿಖಿಲ್ ಕೆಲವು ದಿನಗಳ ಹಿಂದೆ ಎಸ್ಪಿ ಕಚೇರಿ ಮುಂದೆಯೂ ರಂಪಾಟ ನಡೆಸಿದ್ದನು ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ನಿಖಿಲ್ ವಿರುದ್ಧ ಪೊಲೀಸ್ ಪೇದೆ ದೂರು?:

ನಿಖಿಲ್ ಗೂಂಡಾಗಿರಿ ವಿರುದ್ಧ ಪೊಲೀಸ್ ಪೇದೆಯೊಬ್ಬರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕರ್ತವ್ಯನಿರತ ಪೇದೆ ಕೊಟ್ಟಿದ್ದ ದೂರಿಗೆ ಯಾವುದೇ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ.

ಡಿಎಆರ್ ಪೇದೆ ಶಿವಕುಮಾರ್ ಎಸ್ಪಿ ಮನೆ ಮುಂದೆ ಪಹರೆಯಲ್ಲಿದ್ದರು. ಭಾನುವಾರ ಬೆಳಿಗ್ಗೆ ನಿಖಿಲ್ ಕುಡಿದು ಗಲಾಟೆ ಮಾಡುವಾಗ ಆತನನ್ನು ಎಸ್ಪಿ ಮನೆಗೆ ಪ್ರವೇಶಿಸಿದಂತೆ ಹೊರಗೆ ಕಳುಹಿಸಿದ್ದರು. ಮಂಡ್ಯ ಪಶ್ಚಿಮ ಠಾಣೆಗೆ ವಿವರವಾದ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Share This Article
Leave a comment