ಉಪ್ಪಿನಕಾಯಿಯೇ ಊಟವಾಗುತ್ತಿರುವ ಸಂದರ್ಭದಲ್ಲಿ

Team Newsnap
3 Min Read

ಗೋಲ್ಡನ್ ಗ್ಯಾಂಗ್ ಎಂಬ ಕನ್ನಡದ ರಿಯಾಲಿಟಿ ಶೋ ಒಂದರ ಜಾಹೀರಾತು ರಾಜ್ಯದ ಕೆಲವು ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದೆ. ಇದಕ್ಕಾಗಿ ದೊಡ್ಡ ಪ್ರಮಾಣದ ಹಣವೂ ಖರ್ಚಾಗಿರುತ್ತದೆ….

ಬಿಗ್ ಬಾಸ್ – ಸೂಪರ್ ಮದರ್ – ಮಜಾ ಟಾಕೀಸ್ – ಮಜಾ ಭಾರತ – ಕಾಮಿಡಿ ಕಿಲಾಡಿಗಳು – ರಾಜಾ ರಾಣಿ – ಸೂಪರ್ ಜೋಡಿ ……. ಹೀಗೆ ಹತ್ತು ಹಲವಾರು ಮನರಂಜನಾ ಕಾರ್ಯಕ್ರಮಗಳು ಅತಿಹೆಚ್ಚು ಜನಪ್ರಿಯತೆ ಮತ್ತು ಅತ್ಯಂತ ದುಬಾರಿಯಾಗಿ ಸಾಕಷ್ಟು ಹಣ ಮತ್ತು ಹೆಸರು ಗಳಿಸುತ್ತಿವೆ. ಅದೇರೀತಿ ಧಾರವಾಹಿಗಳು ಸಹ ಪ್ರತಿ ಮನೆಯ – ಮನಸ್ಸುಗಳ ಅವಿಭಾಜ್ಯ ಅಂಗವಾಗಿದೆ. ಮಾಧ್ಯಮ ವರ್ಗದ ಜನರಿಂದ ಇದಕ್ಕೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದೆ. ಬೃಹತ್ ಉದ್ಯಮವಾಗಿ ಇದು ಬೆಳೆಯುತ್ತಿದೆ. ಸಾಕಷ್ಟು ಜನರಿಗೆ ಉದ್ಯೋಗಾವಕಾಶಗಳನ್ನು ಸಹ ಸೃಷ್ಡಿಸಿದೆ. ಇದು ಒಳ್ಳೆಯ ಬೆಳವಣಿಗೆ.

ಆದರೆ…….

ಮನರಂಜನೆ ಬದುಕಿನ ಒಂದು ಸಣ್ಣ ಭಾಗ ಮಾತ್ರ. ಅದೇ ಬದುಕಲ್ಲ. ದುಡಿದು ದಣಿವ ದೇಹಕ್ಕೆ ಮನರಂಜನೆ ಅತ್ಯವಶ್ಯಕ. ಆದರೆ ಮನರಂಜನೆ ಸಮಯ ಕೊಲ್ಲುವ ಸೋಮಾರಿಗಳ ವಿಶ್ರಾಂತ ಧಾಮವಾಗುತ್ತಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.

ಟಿವಿ ಮೊಬೈಲುಗಳ‌ ವೀಕ್ಷಕರ ಸಂಖ್ಯೆ ಗಮನಿಸಿದರೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಬಹಳಷ್ಟು ಜನರು ತಮ್ಮ ದೈನಂದಿನ ಸಾಕಷ್ಟು ಸಮಯವನ್ನು ಕಳೆಯುತ್ತಿರುವುದು ಕಂಡುಬರುತ್ತಿದೆ. ಆರ್ಥಿಕ ಅಭದ್ರತೆ ಮಾನಸಿಕ ಗೊಂದಲಗಳಿಗೆ ಈ ಮನರಂಜನಾ ಕಾರ್ಯಕ್ರಮಗಳು ತಾತ್ಕಾಲಿಕ ಪರಿಹಾರದ ರೂಪದಲ್ಲಿ ಜನರಿಗೆ ಕಾಣುತ್ತಿವೆ ಎಂಬುದು ಸ್ವಲ್ಪ ಆತಂಕಕಾರಿ ವಿಷಯ.

ಈ ಕ್ಷಣಕ್ಕೆ ಇದರಿಂದ ಹೆಚ್ಚು ತೊಂದರೆ ಇಲ್ಲದಿರಬಹುದು. ಆದರೆ ದೇಶದ ಒಟ್ಟು ಉತ್ಪಾದನಾ ಸಾಮರ್ಥ್ಯಕ್ಕೆ ಭವಿಷ್ಯದಲ್ಲಿ ಇದರಿಂದ ಬಲವಾದ ಪೆಟ್ಟು ಬೀಳುವ ಸಾಧ್ಯತೆ ಇದೆ. ಕೊರೋನಾ ನಂತರದ ದಿನಗಳಲ್ಲಿ ಮತ್ತೆ ದೇಶದ ಆರ್ಥಿಕ ಭವಿಷ್ಯ ಚಿಗುರೊಡೆಯಬೇಕಾದರೆ ಜನ ಸಮೂಹ ಹೆಚ್ಚು ಹೆಚ್ಚು ಸಮಯವನ್ನು ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಜನರ ಸಮಯದ ಸದುಪಯೋಗ ಅತ್ಯಮೂಲ್ಯ.

ಒಮ್ಮೆ ದಿನದ ಗಂಟೆಗಟ್ಟಲೆ ಒಂದು ಮನರಂಜನಾ ಕಾರ್ಯಕ್ರಮಗಳಲ್ಲಿ ದೀರ್ಘಕಾಲ ಅದಕ್ಕೆ ಅಡಿಕ್ಟ್ ಆಗಿಬಿಟ್ಟರೆ ಮುಂದೆ ಮನಸ್ಸು ದೇಹ ಸ್ವಲ್ಪ ಕಷ್ಟದ ಕೆಲಸ ಮಾಡಲು ಒಪ್ಪುವುದಿಲ್ಲ. ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ ಮೈ ಬಗ್ಗುವುದಿಲ್ಲ.

ಹಗಲುಗನಸಿನಲ್ಲಿಯೇ ವಿಹರಿಸುತ್ತಾ ಅಲ್ಲಿನ ಪಾತ್ರಗಳೊಂದಿಗೆ ಕಷ್ಟ ಸುಖ ಮಾತನಾಡಿಕೊಳ್ಳುತ್ತಾ ವ್ಯಕ್ತಿಗಳು ಕಳೆದು ಹೋಗುವ ಸಾಧ್ಯತೆಯೇ ಹೆಚ್ಚು. ಇದು ದಿನದ ಹೆಚ್ಚು ಹೆಚ್ಚು ಸಮಯ ತೆಗೆದುಕೊಂಡಂತೆ ಸೋಮಾರಿತನವೂ ಹೆಚ್ಚಾಗುತ್ತದೆ. ಇದರ ಲಾಭ ಪಡೆದ ಸಂಸ್ಥೆಗಳು ಮತ್ತಷ್ಟು ಮತ್ತಷ್ಟು ಆಕರ್ಷಕ ಕಾರ್ಯಕ್ರಮಗಳನ್ನು ಮಾಡುತ್ತಾ ಒಂದು ಭಾವನಾತ್ಮಕ ಸುಳಿಯಲ್ಲಿ ವೀಕ್ಷಕರನ್ನು ಬಂಧಿಸುತ್ತಾರೆ.

ಮನರಂಜನಾ ಉದ್ಯಮ ಮತ್ತು ಅದರಲ್ಲಿ ಭಾಗವಹಿಸುವವರಿಗೆ ಇದರಿಂದ ಹೆಚ್ಚು ಅನುಕೂಲವಾಗುವಂತೆ ವೀಕ್ಷಕರಿಗೆ ಪರೋಕ್ಷ ಮತ್ತು ಅರಿವಿಗೆ ಬಾರದ ತೊಂದರೆಯಾಗತೊಡಗುತ್ತದೆ. ಒಟ್ಟು ಶ್ರಮ ಸಂಸ್ಕೃತಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಸಿಯತೊಡಗುತ್ತದೆ.

ಕೇವಲ ಇಷ್ಟು ಮಾತ್ರವಲ್ಲದೇ ಹಳ್ಳಿ ಪಟ್ಟಣಗಳ ಭೇದವಿಲ್ಲದೆ ಕೆಲಸ ಮಾಡಿ ಮನೆಗೆ ಹಿಂದುರಿಗಿದ ತಕ್ಷಣ ಟಿವಿ ಅಥವಾ ಮೊಬೈಲ್‌ ಮನರಂಜನೆಯಲ್ಲಿ ಮುಳುಗಿ ಮನೆ ಮಕ್ಕಳು ತಂದೆ ತಾಯಿಗಳ ಇತರ ಜವಾಬ್ದಾರಿ ಅಥವಾ ರಾತ್ರಿ ಊಟದ ನಂತರದ ಸಣ್ಣ ನಡಿಗೆ ಅಥವಾ ಗೆಳೆಯರು ಮತ್ತು ಅತಿಥಿ ಸತ್ಕಾರದಲ್ಲೂ ಸಾಕಷ್ಟು ಕೊರತೆ ಉಂಟಾಗುತ್ತಿದೆ. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳು ಹೆಚ್ಚು ಜನಪ್ರಿಯವಾದಷ್ಟು ನಮ್ಮ ಕೆಲವು ಮೂಲ ಮತ್ತು ಅತ್ಯವಶ್ಯಕ ಸಂಸ್ಕೃತಿಗೇ ಧಕ್ಕೆಯಾಗುತ್ತಿದೆ.

ಈ ಅಭಿಪ್ರಾಯ ಮನರಂಜನೆಗೆ ವಿರುದ್ಧವಲ್ಲ. ಆದರೆ ಅದಕ್ಕೆ ಉಪಯೋಗಿಸುವ ದಿನದ ಸಮಯದ ಬಗ್ಗೆ ಮಾತ್ರ ಸ್ವಲ್ಪ ಅಸಮಾಧಾನ. ಮನರಂಜನೆ ಹೆಚ್ಚಾಗಿ ಅಧ್ಯಯನ ಚಿಂತನೆ ಚರ್ಚೆ ಸ್ವಾಗತಿಸುವ ಮನೋಭಾವ ಕೌಟುಂಬಿಕ ವಾತಾವರಣ ಕ್ರಿಯಾತ್ಮಕ ಚಟುವಟಿಕೆಗಳು ಎಲ್ಲವೂ ಕುಸಿಯುತ್ತಿರುವ ಸಂದರ್ಭದಲ್ಲಿ ಕೆಲವೇ ಸಂಸ್ಥೆಗಳು ಅದನ್ನು ಮತ್ತಷ್ಟು ಉತ್ತೇಜಿಸಿ ಅದರಲ್ಲಿ ಭಾಗವಹಿಸುವ ನಟನಟಿಯರನ್ನೇ ಸಮಾಜದ ಆದರ್ಶದ ಪ್ರತಿರೂಪವಾಗಿ ಬಿಂಬಿಸುತ್ತಿರುವುದು ಮತ್ತಷ್ಟು ಆತಂಕಕಾರಿ.

ಹೌದು ಬದಲಾವಣೆ ಜಗದ ನಿಯಮ ನಿಜ. ಆದರೆ ಬದಲಾವಣೆ ಉತ್ತಮ ಮತ್ತು ಪ್ರಗತಿಯೆಡೆಗೆ ಇದ್ದರೆ ಮಾತ್ರ ಅದು ಸ್ವಾಗತಾರ್ಹ ಮತ್ತು ಪ್ರಶಂಸನೀಯ. ವಿನಾಶ ಅಥವಾ ಅಪಾಯಕಾರಿಯಾಗಿದ್ದರೆ ಆ ನಿಟ್ಟಿನಲ್ಲಿ ಸಮಾಜ ಮತ್ತೊಮ್ಮೆ ತನ್ನ ನಡವಳಿಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂಬ ಕಳಕಳಿಯಿಂದ ಈ ಬಗ್ಗೆ ಗಮನ ಸೆಳೆಯುವ ಸಣ್ಣ ಪ್ರಯತ್ನ….

ವಿವೇಕಾನಂದ. ಹೆಚ್ . ಕೆ

Share This Article
Leave a comment