ಅವಳೆಂದರೇ…?

Team Newsnap
5 Min Read
WhatsApp Image 2023 08 06 at 12.23.37 PM
ಅರ್ಚನಾ ರವಿ

ಲ್ಯಾಪ್ಟಾಪ್ ಮುಂದೆ ಕುಳಿತವಳಿಗೆ ವಿಪರೀತ ಬೆನ್ನು ನೋವು, ತಿಂಗಳ ಕೊನೆಯ ಮೂರು ದಿನ, ಮನೆಯಲ್ಲೂ ಕೆಲಸ ಆಫೀಸಲ್ಲೂ ಕೆಲಸ.ಒಟ್ಟಿನಲ್ಲಿ ಬೆಳಗ್ಗೆ ತಿಂಡಿ ಕೂಡ ತಿನ್ನಲೂ ಸಮಯವಿರಲಿಲ್ಲ ನಿಹಾರಿಕಾಗೆ..ಖಾಸಗಿ ಶಾಲೆಯಲ್ಲಿ ಅಕೌಂಟೆಂಟ್ ಆಗಿದ್ದಾಳೆ.

ವರ್ಷದಲ್ಲಿ ರಜಾ ಎಲ್ಲರಿಗೂ ಇದೆ ಆದರೆ ಅವಳಿಗಿಲ್ಲ ಅಷ್ಟೇ….!

“ಮನುಗೆ, ಅತ್ತೆಗೆ ನನ್ನ ಪರಿಸ್ಥಿತಿನೇ ಅರ್ಥ ಆಗಲ್ಲ ರಜಾ ಹಾಕಿ ಅವರು ಹೇಳಿದ ಕಾರ್ಯಕ್ರಮಕ್ಕೆ ನಾನು ಗೊಂಬೆಯಂತೆ ರೆಡಿಯಾಗಿ ನಗು ಬಂದಿಲ್ಲ ಅಂದ್ರು ನಾಟಕಿಯ ನಗುನಗುತ್ತಾ ಎಲ್ಲರ ಜೊತೆ ಬೆರೆಯಬೇಕು.

ಅವರುಗಳು ಹೇಳೋ ಕೊಂಕು ಮಾತು ಸಹಿಸಿಕೊಳ್ಳಬೇಕು. ನನಗೂ ಒಂದು ಮನಸ್ಸಿದೆ ಅಂತ ಯಾಕೆ ಅರ್ಥ ಮಾಡ್ಕೊಳ್ಳಲ್ಲ, ನಿಧಿ ಕೂಡ ಅಪ್ಪನ ಹಾದಿ ಹಿಡಿದಿದ್ದಾಳೆ, ಎಲ್ಲರಿಗೂ ನನ್ನ ಕೆಲಸದ ಮೇಲೆ ಕಣ್ಣು. ಬಿಟ್ಟುಬಿಡೋಣ ಅಂದ್ರೆ ಪ್ರತಿಯೊಂದಕ್ಕೂ ಕೈ ಚಾಚಬೇಕು ಬರ್ತಾ ಬರ್ತಾ ಇವರ ಮಾತು ನಡೆ ತುಂಬಾ ಹಿಂಸೆ ಕೊಡುತ್ತಿದೆ….”
ನಿಟ್ಟುಸಿರೊಂದು ಬಿಟ್ಟಿದ್ದಳು ಸಾಕಾಗಿತ್ತು ಅವಳಿಗೂ.ಮನೆ ಮಕ್ಕಳು ದಿನಾ ಹೋರಾಟದ ಬದುಕು. ತನ್ನ ಭಾವನೆಗಳಿಗೆ ಬೆಲೆ ಇಲ್ಲವಾ….? ಹೀಗೆ ಅನ್ನಿಸಲು ಶುರುವಾಗಿತ್ತು.

“ಥ್ಯಾಂಕ್ ಯು ರಾಜ್ ಮನೆತನಕ ಬಿಟ್ಟಿದ್ದಕ್ಕೆ. ಇವತ್ತು ಬಸ್ಸಲ್ಲಿ ಮನೆಗೆ ಬರಲು ಆಗದಷ್ಟು ರಶ್ ಇತ್ತು..”

“ಇರ್ಲಿ ಬಿಡಿ ಅಕ್ಕ ನಾನು ಬಾಯಿ ಮಾತಿಗೆ ಅಕ್ಕ ಅಂತ ಕರೆದಿಲ್ಲ ಮನಸು ಪೂರ್ತಿಯಾಗಿ ಕರೆದಿದ್ದು. ತಮ್ಮನಾಗಿ ಇಷ್ಟು ಸಹಾಯ ಮಾಡಿಲ್ಲ ಅಂದ್ರೆ ಹೇಗೆ ಹೇಳಿ…” ಒಂದು ಮುಗುಳ್ನಗೆ ನೀಡಿ ಅಲ್ಲಿಂದ ಹೊರಟಿದ್ದ ರಾಜ್. ಆದರೆ ಅದನ್ನು ಕೂಡ ತಪ್ಪಾಗಿ ತಿಳಿದುಕೊಂಡರು ನಿಹಾರಿಕಾ ಅತ್ತೆ ಲಾವಣ್ಯ..

ಮೊದಲೇ ನಿಹಾರಿಕಾಳ ಮೇಲೆ ಬೇಸರದ ಛಾಯೆ ಒಂದು ಮೂಡಿತ್ತು ಇಂದು, ಮತ್ತೆ ರಾಜ್ ಬೈಕಲ್ಲಿ ಬಂದಿದ್ದು ಒಂದೊಳ್ಳೆ ಬಾಂಧವ್ಯಕ್ಕೆ ಸಂಬಂಧ ಕಲ್ಪಿಸಲು ತಯಾರಾಗಿ ನಿಂತರು ಲಾವಣ್ಯ…

ಲಾವಣ್ಯ ತಮ್ಮನ ಮಗಳೇ ನಿಹಾರಿಕ.ಸ್ವಂತ ತಮ್ಮ ಅಲ್ಲ ದೂರದಿಂದ ಸಂಬಂಧಿಕರು, ನಿಹಾರಿಕ ಮನೆಯಲ್ಲಿ ಅಂತ ಸಿರಿವಂತಿಕೆ ಏನು ಇರಲಿಲ್ಲ ಹಾಗಂತ ಕಡು ಬಡತನವು ಇರಲಿಲ್ಲ ಇಬ್ಬರು ಅಣ್ಣಂದಿರು ಮುದ್ದಿನ ತಂಗಿ ಅವಳು. ಬೆಂಗಳೂರು ಎಂಬ ಮಹಾನಗರದಲ್ಲಿ ಓದಿ‌‌ ಅಲ್ಲೇ ಖಾಸಗಿ ಶಾಲೆಯಲ್ಲಿ ಕೆಲಸಕ್ಕೆ ಸೇರಿದ್ದು ಕೈ ತುಂಬಾ ಸಂಬಳ, ನೋಡಲು ರೂಪವತಿಯೇ, ಅವಳ ಗುಣ ಅಂದಕ್ಕಿಂತ ಅವಳ ಸಂಬಳ ನೋಡಿ ‌ಮದುವೆಯಾಗಿದ್ದು ಮನೋಹರ್. ಕಾರಣವೂ ಇತ್ತು. ಸ್ವಂತ ಮನೆ ಕಟ್ಟಿ ವಿಪರೀತ ಲೋನ್ ಇಬ್ಬರು ಸೇರಿ ತೀರಿಸಬಹುದೆಂಬ ಆಸೆಯಲ್ಲಿ, ಅಮ್ಮ ತೋರಿಸುತ್ತಿದ್ದ ಹಾಗೆ ಮದುವೆಗೆ ಒಪ್ಪಿಕೊಂಡಿದ್ದು.

ಮೊದಲು ಅವಳು ಹಾಕಿದ ಕಂಡಿಶನ್ ಗೆಲ್ಲ ಒಪ್ಪಿಕೊಂಡು, ಈಗ ಅವನ ಏಕಮುಖ ನಿರ್ಧಾರದ ಬಗ್ಗೆ ಒಂದು ರೀತಿ ರೋಸಿ ಹೋಗಿದ್ದಾಳೆ ನಿಹಾರಿಕ.

ಮದುವೆ ತುಂಬಾ ಸಾಧಾರಣವಾಗಿ ಮಾಡಿಕೊಡುತ್ತಾರೆ ನನ್ನ ಅಣ್ಣಂದಿರು ಅವರಿಗೆ ಸಾಲದ ಹೊರೆ ಮಾಡಲು ಇಷ್ಟವಿಲ್ಲ ಎಂದರೂ ಕೂಡ, ನಾಟಕವಾಡಿ ಅದ್ದೂರಿ ವಿವಾಹ ಆಗಿದ್ದು. ಸಾಲದ ಕೂಪಕ್ಕೆ ನನ್ನ ಮದುವೆ ಕಾರಣವಾಯಿತು ಎಂಬ ನೋವಲ್ಲಿ ತವರು ಮನೆಯಿಂದ ಹೊರಟಿದ್ದು ನಿಹಾರಿಕಾ…

ಅದಕ್ಕೆ ಮದುವೆಯಾದ ಹೊಸದರಲ್ಲೇ ಮನೋಜ್ ಹತ್ತಿರ ಕೇಳಿದಳು. ಆ ಸಾಲ ನಾನು ತೀರಿ ಸುತ್ತೇನೆಂದು. ದೊಡ್ಡ ತಗಾದೆ ತೆಗೆದಿದ್ದರು, ಅಮ್ಮ ಮಗ ಈ ವಿಷಯ ತಿಳಿದ ನಿಹಾರಿಕಾ ಅಣ್ಣಂದಿರು ಅವಳ ಯಾವ ಸಹಾಯವೂ ತೆಗೆದುಕೊಳ್ಳಲು ಒಪ್ಪಲಿಲ್ಲ..

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ, ಹಾಗೆ ಇರುವುದು ಕಲಿ. ಈ ಮಾತು ಮದುವೆಯಾದ 15 ದಿವಸಕ್ಕೆ ಬಂದಿದ್ದು…

ಅವರ ಮಾತಿಗೆ ನಗಬೇಕೋ..? ಅಳಬೇಕೋ…? ತಿಳಿಯದೆ ಹೋದಳು ಬದುಕನ್ನು ಒಂದು ದಡ ಸೇರಿಸಿದ ಮನೆಗೆ, ಮೂರು ಗಂಟು ಬಿಗಿದ ಮರುಕ್ಷಣವೇ…! ತವರಿನ ಹಂಗು ತೊರೆದು, ಅವರ ಕಷ್ಟಕ್ಕೆ ಹೆಗಲಾಗುವುದು ತಪ್ಪು ಎಂಬ ಮಾತು ಮನಸಿಗೆ ನೋವು ನೀಡಿದ್ದು ನಿಜ..

ಆದರೆ ವಿಪರ್ಯಾಸ ಮನೋಹರ್ ತಂಗಿ ಕೂಡ ಮದುವೆಯಾಗಿ ಬೇರೆ ಮನೆ ಹೋದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಪದ್ಧತಿ ಮಾಡಲೇ ಇಲ್ಲ. ಈಗಲೂ ಅವಳು ಮನೆಮಗಳು, ಎಲ್ಲಾ ಹಕ್ಕು ಇದೆ. ಅವಳಿಂದ ತೆಗೆದುಕೊಳ್ಳುತ್ತಾರೆ ,ಕೊಡುತ್ತಾರೆ ನಿಹಾರಿಕ ಮಾತ್ರ ತವರು ಮನೆ ಒಳಿತಿನ ಬಗ್ಗೆ ಯೋಚನೆ ಮಾಡುವುದು ದೊಡ್ಡ ಮಹಾ ಅಪರಾಧ…

ಆ ಮನೆ ಕಟ್ಟಲು 30 ಲಕ್ಷ ಸಾಲ ಮಾಡಿದ್ದರು ಮನೋಹರ್ ಐದರಿಂದ ಆರು ಲಕ್ಷ ಅಷ್ಟೇ ತೀರಿಸಿದ್ದು ಉಳಿದಿದ್ದೆಲ್ಲ ನಿಹಾರಿಕ ಕೊಟ್ಟಿದ್ದು. ಈಗ ಸಾಲವೆಲ್ಲ ತೀರಿ ಒಂದು ರೀತಿ ಸೆಟಲ್ ಆಗಿದ್ದಾರೆ, ಅದಕ್ಕೆ ಅವಳ ಕೆಲಸದ ಮೇಲೆ ಕಣ್ಣು..

ಮಗಳಿಗೆ ಮನೆ ಕಟ್ಟಲು ಸಹಾಯ ಮಾಡಬೇಕೆಂಬ ಆಸೆ, ನಿಹಾರಿಕ ಲೋನ್ ತೆಗೆದು ಅವಳಿಗೆ ದುಡ್ಡು ಕೊಡಲು ಒತ್ತಾಯ ಮಾಡಿದ್ದರು ತಾಯಿ ಮಗ…

ಒಪ್ಪಲಿಲ್ಲ‌ ಈಗಾಗಲೇ ಹಣಕಾಸಿನ ಸಹಾಯ ಸ್ವಲ್ಪ ಜಾಸ್ತಿಯೇ ಮಾಡಿದ್ದಾರೆ, ತನ್ನ ಮಗ ಮಗಳ ಭವಿಷ್ಯ ನೋಡಬೇಕು ಅದಕ್ಕೆ ಖಡಾ ಖಂಡಿತವಾಗಿ ನಿರಾಕರಿಸಿದ್ದು. ಇದೇ ಸಿಟ್ಟು ಈಗ ಲಾವಣ್ಯ ಅವರಿಗೆ…

ಮಗಳಿಗೆ ಸಹಾಯ ಮಾಡಲಿಲ್ಲ, ಮನೆಗೆ ಕೊಡುತ್ತಿದ್ದ ಅರ್ಧದಷ್ಟು ಹಣ ಸೇವಿಂಗ್ಸ್ ಮಾಡಲು ಶುರು ಮಾಡಿದ್ದಾಳೆ, ಇಲ್ಲವೆಂದರೆ ಮನೋಹರ್ ಮನೆಗಾಗಿ ಏನು ಮಾಡುವುದಿಲ್ಲ ಮಕ್ಕಳ ಬಗ್ಗೆ ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲವೆಂದು ಅರ್ಥವಾಗಿ ಹೋಗಿತ್ತು. ಮದುವೆಯಾಗಿ 15 ವರ್ಷಕ್ಕೆ, ತಂಗಿ ,ತಂಗಿ ಮಕ್ಕಳು, ಅದು ಬಿಟ್ಟರೆ ಹೊರಗಡೆ ಸ್ನೇಹ ರಾತ್ರಿ ಆಗಲು ಇಸ್ಪೀಟ್ ಅಡ್ಡ. ಒಂದು ರೂಪಾಯಿ ಉಳಿಸುವುದಿಲ್ಲ ಖರ್ಚು ಮಾತ್ರ ವಿಪರೀತ.

ಮನೋಹರ್ ಗೆ ಬರುವ ಅರವತ್ತು ಸಾವಿರ ಸಂಬಳ, ಮನೆಗೆ ಕೊಡುವುದು ಮಾತ್ರ 5,000 ಉಳಿದಿದ್ದು ಎಲ್ಲಿ ಹೋಗುತ್ತದೆ ತಿಳಿದಿಲ್ಲ ಇದೆಲ್ಲ ನೋಡಿ ಕಠಿಣ ನಿರ್ಧಾರ ಮಾಡಿದ್ದು ನಿಹಾರಿಕ.

ಮನೆ ಒಳಗೆ ಕಾಲು ಇಡುತ್ತಿರುವಾಗಲೇ ಚಾರಿತ್ರ್ಯ ವಧೆ ಶುರುವಾಯಿತು. ಅವಳು ಕಿವಿ ಮುಚ್ಚಿಕೊಂಡು ಬಿಟ್ಟಳು ಅತ್ತೆಯ ಕೀಳು ಮಟ್ಟದ ಮಾತಿಗೆ.ವಿಪರ್ಯಾಸವೆಂದರೆ ಇದಕ್ಕೆ ನನಗೆ ಸಂಬಂಧ ಇಲ್ಲ ಅನ್ನೋ ರೀತಿ ಮನೋಹರ್ ವರ್ತನೆ…

ಕಣ್ಣಂಚಲಿ ನೀರು ಆಕ್ರೋಶ ಮನಸಲ್ಲಿ.ಮಕ್ಕಳ ಮುಖ ನೋಡಿದಳು ಅಮ್ಮನ ಅಸಹಾಯಕತೆ ಗೊತ್ತಾದರೂ ಮಾತನಾಡಲಿಲ್ಲ… ರೂಮಿಗೆ ಹೋದವಳೇ ಶಾಲೆಗೆ ಮೇಲ್ ಕಳಿಸಿ ಬಿಟ್ಟಳು ರಾಜೀನಾಮೆ ಕೊಡುವುದಾಗಿ…

ಗೆದ್ದಂತೆ ಬೀಗಿದರು ಲಾವಣ್ಯ ಮಾರನೇ ದಿವಸ ವಿಷಯ ಗೊತ್ತಾಗಿ. ಮನೋಹರ್ ತಲೆ ಮೇಲೆ ಕೈ ಇಟ್ಟು ಕೂತುಬಿಟ್ಟರು, ಗೊತ್ತಿದೆ ಅವರಿಗೆ ಸಂಬಳ ಎಷ್ಟು ಮುಖ್ಯ ಎಂದು…

ಮನೋಹರ್ ಪರಿಪರಿಯಾಗಿ ಬೇಡಿದರು ಕೆಲಸಕ್ಕೆ ಹೋಗಲಿಲ್ಲ, ಅವನ ಯಾವುದೇ ನಾಟಕಕ್ಕೂ ಬಗ್ಗಲಿಲ್ಲ ಅಮ್ಮನ ಮೇಲೆ ಕೂಗಾಡಿದ ಆದರೆ ಮನಸ್ಸು ಒಡೆದು ಹೋಗಿತ್ತು. ನೀಹಾರಿಕಾಳದು..

ತಿಂಗಳ ಕೊನೆಯಲ್ಲಿ ಗೊತ್ತಾಗಿದ್ದು ಸೊಸೆ ಆ ಮನೆಗಾಗಿ ಎಷ್ಟು ಒದ್ದಾಡುತ್ತಿದ್ದಳು ಎಂದು, ಆದರೆ ಸ್ವಾಭಿಮಾನ ಎಲ್ಲಕ್ಕಿಂತ ಹೆಚ್ಚಾಗಿ. ತಮ್ಮ ಮನಸ್ಸಲ್ಲಿರುವ ಅಸೂಯೆ ಕೆಲಸಕ್ಕೆ ಹೋಗಲಿಲ್ಲ ಎಂದರು ಹೇಗೋ ಆ ಮನೆ ನಡೆಯುತ್ತದೆ ಎಂಬ ಭಾವದಲ್ಲಿ ಉಳಿದುಬಿಟ್ಟರು…

ಆದರೆ ಮುಂದಿನ ದಿನಗಳೆಲ್ಲವೂ ಅವರ ಪಾಲಿಗೆ ಕಷ್ಟವೇ ಆಗಿದ್ದು ನಿಹಾರಿಕ ಖರ್ಚಿಗೆ ಮಾತ್ರ ಯಾವುದೇ ತೊಂದರೆ ಆಗಲಿಲ್ಲ ಅವಳು ದುಡಿದ ಸೇವಿಂಗ್ಸ್ ಕೊನೆತನಕ ಉಳಿದಿತ್ತು ಭವಿಷ್ಯದ ನಿಧಿ ಎಂಬಂತೆ…

ಮನೋಹರ್ ಮಾತ್ರ ಕ್ಷಣ ಕ್ಷಣ ತಪ್ಪಿನ ಅರಿವಾಗಿ ಪರಿತಪಿಸುತ್ತಿದ್ದ, ಅರ್ಥವಾಗಿತ್ತು ಖರ್ಚಿನ ಮೂಟೆ..

ಸಹನೆಗೂ ಒಂದು ಮಿತಿ ಇದೆ… ಅವಳೆಂದರೇ…?

Share This Article
Leave a comment