December 24, 2024

Newsnap Kannada

The World at your finger tips!

BASAVARAJ BOMM

ಶುಭ ತರಲಿ ಶ್ರಾವಣ ಬಸವರಾಜ ಬೊಮ್ಮಾಯಿಗೆ

Spread the love

ರಾಜ್ಯದ ಮಟ್ಟಿಗಾದರೂ ಭಾರತೀಯ ಜನತಾ ಪಾರ್ಟಿಯ ಭೀಷ್ಮರೆಂದು ಹೆಸರು ಗಳಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ಅವರಿಗೆ ನಿಕಟರಾಗಿದ್ದವರು ಬಸವರಾಜಬೊಮ್ಮಾಯಿ. ತಮ್ಮ ತಂದೆಯವರಂತೆ ತಾವೂ ಒಂದು ದಿನ ಮುಖ್ಯಮಂತ್ರಿ ಪದವಿಗೇರಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿರದಿದ್ದ ಬೊಮ್ಮಾಯಿಗೆ ಮುಖ್ಯಮಂತ್ರಿ ಪದವಿ ಬಂದದ್ದು ಬಯಸದೇ ಬಂದ ಭಾಗ್ಯವೇ ಸರಿ.


ಮುಳ್ಳಿನ ಹಾಸಿಗೆಯಂತಿರುವ ಮುಖ್ಯಮಂತ್ರಿಯ ಕುರ್ಚಿಯ ಪಕ್ಕದಲ್ಲಿರುತ್ತಿದ್ದವರು ಈಗ ಅದೇ ಕುರ್ಚಿ ಅಲಂಕರಿಸಿದ್ದಾರೆ. ತಮ್ಮ ರಾಜಕೀಯ ಗುರುಗಳಾದ ಬಿಎಸ್‌ವೈ ಅನುಭವಿಸುತ್ತಿದ್ದ ರಾಜಕೀಯ ಸಂಕಟವನ್ನು ಆರಂಭದಲ್ಲೇ ಅನುಭವಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿರುವುದು ರಾಜ್ಯ ಸಚಿವ ಸಂಪುಟ ರಚನೆ ಫಲವಾಗಿಯೇ.


ತಾವು ಇನ್ನೇನು ಸಚಿವರಾಗುತ್ತೇವೆ ಎಂದು ಮಾನಸಿಕರಾಗಿ ಸಿದ್ಧರಾಗಿದ್ದವರು, ದೇವರ ಆಶೀರ್ವಾದ ಪಡೆದು ಬಂದವರು, ಇನ್ನೇನು ದೂರವಾಣಿ ಕರೆ ಬಂದೇ ಬಿಟ್ಟಿತು ಎಂದು ತುದಿಗಾಲಲ್ಲಿ ನಿಂತವರು, ಕುಟುಂಬದವರೊಂದಿಗೆ ರಾಜಭವನಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದವರು ಹೀಗೆ, ಸಚಿವರಾಗುವುದು ಶೇಕಡ ನೂರರಷ್ಟು ಗ್ಯಾರೆಂಟಿ ಎಂದುಕೊಂಡವರು ಕೊನೆಗೆ ನಿರಾಸೆ ಅನುಭವಿಸಬೇಕಾದರೆ ಅವರಿಗೆ ಹೇಗಾಗಿರಬೇಡ. ಇವರ ಕೆಂಗಣ್ಣಿಗೆ ಗುರಿಯಾಗಿರುವವರು ಸಿಎಂ ಕುರ್ಚಿಯಲ್ಲಿ ಕುಳಿತಿರುವ ಬಸವರಾಜ ಬೊಮ್ಮಾಯಿ. ಎಲ್ಲಿದೆ ನೆಮ್ಮದಿ?


ಇತ್ತ ಸಚಿವ ಸ್ಥಾನ ದೊರೆತರೂ ತಾವು ಬಯಸಿದ್ದ ಖಾತೆ ಸಿಗದಿದ್ದರಿಂದ ಕೊತ ಕೊತ ಕುದಿಯುತ್ತಿರುವವರ ಕೋಪದ ಬಿಸಿಯೂ ತಟ್ಟುತ್ತಿದೆ “ಶಿಗ್ಗಾವಿಯರಾಜ”ನಿಗೆ.
ಕೊರೊನಾ ಹಾವಳಿಗೆ ಬ್ರೇಕ್ ಹಾಕುವತ್ತ ಮತ್ತು ಪ್ರವಾಹ ಸಂತ್ರಸ್ತರ ಬವಣೆಯನ್ನು ನೀಗಿಸುವ ಕಡೆಗೆ ತುರ್ತುಗಮನ ನೀಡಬೇಕಾಗಿರುವ ನೂತನ ಸಿಎಂ, ಅತೃಪ್ತರು, ಅಸಮಾಧಾನಿತರ ವರಸೆಗಳ ಪರಿಣಾಮ “ಇಬ್ಬರು ಹೆಂಡಿರ’ ಕಾಟದಿಂದ ಬಸವಳಿದಿರುವ ಗಂಡನ ಸ್ಥಿತಿಯಲ್ಲಿ ಸಿಲುಕಿದ್ದಾರೆ.


ನಿಲ್ಲದ ದೆಹಲಿ ಯಾತ್ರೆಗಳು, ಮುಂದುವರಿದಿರುವ ಬಿಸಿಬಿಸಿ ಸಭೆಗಳು, ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದ ೧೩ ಜಿಲ್ಲೆಯವರ ಅಸಹನೆಯ ನುಡಿಗಳನ್ನು ಕೇಳುತ್ತಾ, ವಿಪಕ್ಷದವರ ಕುಹಕಗಳನ್ನು ಆಲಿಸುತ್ತಾ ಮುನ್ನಡೆಯುತ್ತಿರುವ “ರಾಜ’ ಶ್ರಾವಣಮಾಸದ ಆರಂಭದ ದಿನವಾದ ಸೋಮವಾರ ನಾಡದೇವತೆ, ಚಾಮುಂಡಿಬೆಟ್ಟದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿ ದೇವಿ ದರ್ಶನಪಡೆದು, ಸಕಲ ಸಂಕಟವನ್ನು ಯಶಸ್ವಿಯಾಗಿ ಎದುರಿಸುವ ಶಕ್ತಿಕೊಡು ತಾಯಿ ಎಂದು ಬೇಡಿಕೊಂಡಿದ್ದಾರೆ. ಈ ದೇವಿಯ “ಬುಡ’ದಲ್ಲೇ ಇದ್ದು ಒಳಗೊಳಗೆ ಬುಸುಗುಡುತ್ತಿರುವ (ರಾಮ) “ದಾಸ’ನ ಅಸಂತೋಷವನ್ನು ಶಮನಮಾಡುವ ಭರವಸೆಯನ್ನೂ ಹೊರಹಾಕಿದ್ದಾರೆ.

ಖಾದಿಗಳನ್ನು ಸಂತೈಸುತ್ತಾ, ಕಾವಿಗಳ ಸಂದರ್ಶಿಸುತ್ತಾ ಸಾತ್ವಿಕತೆಯನ್ನೂ ಮೈಗೂಡಿಸಿಕೊಂಡು ಮನ್ನಡೆಯುತ್ತಿರುವ ಬೊಮ್ಮಾಯಿಯವರ ಮುಂದಿರುವ ರಾಜಕೀಯ ಸವಾಲುಗಳನ್ನು ಸುಸೂತ್ರವಾಗಿ ಎದುರಿಸುವ ಶಕ್ತಿ ಸಿಗಬೇಕು. ಅಂದು ಬೊಮ್ಮಾಯಿ ನೂತನ ಮುಖ್ಯಮಂತ್ರಿ ಎಂದು ಪ್ರಕಟಗೊಂಡ ದಿನದ ರಾತ್ರಿ ಅವರ ಮನೆಯಲ್ಲಿ ಕೇಳಿಬಂದ “ನೀನೆ ರಾಜಕುಮಾರ…’ ಹಾಡು ಭವಿಷ್ಯದ ಅವರ ರಾಜಕೀಯದಲ್ಲಿ “ಶ್ರಾವಣಮಾಸ ಬಂದಾಗ ಆನಂದ ತಂದಾಗ… ಎಂದು ಗುನುಗುವಂತಾಗಲಿ.

kcsp
ಕೆ.ಸಿ.ಸತ್ಯಪ್ರಕಾಶ್
ಹಿರಿಯ ಪತ್ರಕರ್ತರು
Copyright © All rights reserved Newsnap | Newsever by AF themes.
error: Content is protected !!