November 23, 2024

Newsnap Kannada

The World at your finger tips!

b k s

ತಮಿಳುನಾಡಿಗೆ ನೀರು : ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ

Spread the love

ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲದ ಸಂಕಷ್ಟದ ಸಮಯದಲ್ಲಿ ನ್ಯಾಯಾಲಯದ ಮೊರೆ ಹೋಗಿ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡದೆ ಏಕಾಏಕಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಿದರು.

ನಗರದ ಸರ್ ಎಂ ವಿ ಪ್ರತಿಮೆ ಎದುರು ಉಪವಾಸ ನಡೆಸಿದ ಸಂಘದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕೆ ಆರ್ ಎಸ್ ಜಲಾಶಯದಿಂದ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಒತ್ತಾಯಿಸಿದರು.

ಮುಂಗಾರು ಮಳೆಯ ಕೊರತೆಯಿಂದಾಗಿ ಕೃಷ್ಣರಾಜಸಾಗರ ಅಣೆಕಟ್ಟು ಭರ್ತಿಯಾಗದೆ ಸಂಕಷ್ಟದಲ್ಲಿರುವಾಗ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವಿಲ್ಲದಿದ್ದರೂ ಸಹ ನೀರು ಬಿಡುವಂತೆ ಆದೇಶಿಸಲಾಗಿದೆ ಎಂದು ಸುಳ್ಳು ಹೇಳಿ 12,000 ದಿಂದ 15000ದ ವರೆಗಿನ ಕ್ಯೂಸೆಕ್ಸ್‌ ನೀರನ್ನು ಪ್ರತಿನಿತ್ಯ ತಮಿಳುನಾಡಿಗೆ ಹರಿಸಿದ್ದು, ಇದುವರೆಗೆ 20 ಟಿ.ಎಂ.ಸಿ. ನೀರನ್ನು ಹರಿಸಿ ಮಂಡ್ಯ ರೈತರ ಬೆನ್ನಿಗೆ ಚೂರಿ ಹಾಕಿದೆ ಎಂದು ಆಕ್ರೋಶಿಸಿದರು.

ಪ್ರಾಧಿಕಾರದ ಅಧ್ಯಕ್ಷ ಎಸ್, ಮಸೂದ್‌ ಹುಸೇನ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತಮಿಳುನಾಡಿಗೆ ತಕ್ಷಣಕ್ಕೆ ನೀರು ಹರಿಸಲೇಬೇಕು ಎನ್ನುವ ಒತ್ತಡ ಹಾಕಲಿಲ್ಲ. ಕುಡಿಯುವ ನೀರಿನ ಆದ್ಯತೆ ನೋಡಿಕೊಂಡು ಹಾಗೂ ಒಳ ಹರಿವಿನ ಪ್ರಮಾಣ ಗಮನಿಸಿ ಕೆಳಭಾಗದ ರಾಜ್ಯಕ್ಕೆ ನೀರು ಹರಿಸುವ ಬಗ್ಗೆ ಕರ್ನಾಟಕವೇ ನಿರ್ಧರಿಸಲಿ ಎಂದು ಹೇಳಿತ್ತು, ಆದರೆ ಜೂನ್ ಮತ್ತು ಜುಲೈ ಅವಧಿಯ ಬಾಕಿ 28.84 ಟಿ.ಎಂ.ಸಿ. ನೀರನ್ನು ಕೂಡಲೇ ಹರಿಸಲು ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟಿಗೆ ಅರ್ಜಿಸಲ್ಲಿಸಿದೆ, ತಮಿಳುನಾಡಿಗೆ ನೀರು ಹರಿಸಿದ್ದಕ್ಕೆ ಪ್ರಶ್ನಿಸಿದಾಗ ರೈತರು ಬೇಕಿದ್ದರೆ ಕೋರ್ಟ್‌ಗೆ ಹೋಗಲಿ ಎನ್ನುವ ಸಚಿವ ಡಿ.ಕೆ. ಶಿವಕುಮಾರ್‌ ಗೆ ರೈತರ ವಿರುದ್ಧ ಮಾತನಾಡುವುದಕ್ಕೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟಿನ ಅಂತಿಮ ತೀರ್ಪಿನಲ್ಲಿ ತಮಿಳುನಾಡಿನ ಕುರುವೈ ಬೆಳೆ ಪ್ರದೇಶ 1.80 ಲಕ್ಷ ಹೆಕ್ಟೇರ್ ಮೀರಬಾರದು ಎಂಬ ಆದೇಶವಿದ್ದರೂ 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುರವೈ ಬೆಳೆ ಬೆಳೆಯಲಾಗಿದೆ.

ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ಪ್ರಮಾಣ ನೀರು ಇದ್ದರೂ ತಮಿಳುನಾಡು ಸರ್ಕಾರ ಸ್ವಾರ್ಥಕ್ಕಾಗಿ ಸುಪ್ರೀಂ ಮೆಟ್ಟಿಲೇರಿದೆ ಇದರ ಹಿಂದೆ ದುರುದ್ದೇಶ ಅಡಗಿದೆ ಎಂದು ಆರೋಪಿಸಿದರು.

ನೆರೆ ರಾಜ್ಯಕ್ಕೆ ನಿರಂತರ ನೀರು ಹರಿಸಿದ್ದರ ಪರಿಣಾಮವಾಗಿ ಕೆ ಆರ್ ಎಸ್ ನಲ್ಲಿ ನೀರು 104 ಅಡಿಗೆ ಕುಸಿದಿದೆ. ಇದೇ ರೀತಿ ಮುಂದುವರೆದರೆ ಇನ್ನೊಂದು ವಾರದಲ್ಲಿ ಅಣೆಕಟ್ಟಿನಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಕಡಿಮೆಯಾಗುತ್ತದೆ. ಇದರಿಂದ ಮುಂದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಕಷ್ಟವಾಗುತ್ತದೆ. ಈಗಾಗಲೇ ಬೆಳೆದ ಬೆಳೆಗಳು ಹಾಳಾಗುವುದೇ ಹೆಚ್ಚು ಎಂದು ಆತಂಕ ವ್ಯಕ್ತಪಡಿಸಿದರು.

ಕಾವೇರಿ ಕೊಳ್ಳದ ರೈತರಿಗೆ ರಾಜ್ಯ ಸರ್ಕಾರ ಭಾರಿ ಅನ್ಯಾಯಮಾಡಿದೆ. ಮಂಡ್ಯ ರೈತರ ಕಣ್ಣಿಗೆ ಸುಣ್ಣ ಬಳಿದು ತಮಿಳುನಾಡು ರೈತರಿಗೆ ಬೆಣ್ಣೆಸವರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಮುಖಂಡರಾದ ಹಾಡ್ಯ ರಮೇಶ್ ರಾಜು,ಪಣಕನಹಳ್ಳಿ ವೆಂಕಟೇಶ್, ಜೆ,ಕೆ ಬಸವರಾಜ್, ಪುಟ್ಟಮ್ಮ,
ದಿವ್ಯ ನೇತೃತ್ವ ವಹಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!